ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾರ್ಚ್‌ನಲ್ಲಿ 4 ರಥಯಾತ್ರೆ: ಬಿಜೆಪಿ ಸಿದ್ಧತೆ

Last Updated 12 ಫೆಬ್ರುವರಿ 2023, 21:20 IST
ಅಕ್ಷರ ಗಾತ್ರ

ಬೆಂಗಳೂರು: ವಿಧಾನಸಭೆ ಚುನಾವಣೆ ಮೇಲೆ ಕಣ್ಣಿಟ್ಟು ರಾಜ್ಯದ ನಾಲ್ಕು ದಿಕ್ಕುಗಳಿಂದ ಮಾರ್ಚ್‌ ಮೊದಲ ವಾರ ಏಕಕಾಲಕ್ಕೆ ರಥಯಾತ್ರೆ ಕೈಗೊಳ್ಳಲು ಬಿಜೆಪಿ ನಿರ್ಧರಿಸಿದೆ. ಇದಕ್ಕಾಗಿ ಸಿದ್ಧತೆ ಆರಂಭವಾಗಿದ್ದು, ಯಾತ್ರೆ ನಾಲ್ಕು ತಂಡಗಳಲ್ಲಿ 20–25 ದಿನ ಕಾಲ ನಡೆಯಲಿದೆ.

ಈ ರಥಯಾತ್ರೆಗಳಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ನಳಿನ್‌ಕುಮಾರ್‌ ಕಟೀಲ್‌, ಅರುಣ್‌ಸಿಂಗ್‌, ಬಿ.ಎಸ್‌.ಯಡಿಯೂರಪ್ಪ, ಜಗದೀಶ ಶೆಟ್ಟರ್‌, ಕೆ.ಎಸ್‌.ಈಶ್ವರಪ್ಪ ಇರಲಿದ್ದು, ಅವರ ಜತೆ ರಾಜ್ಯ ಮತ್ತು ಕೇಂದ್ರದ ಸಚಿವರು ಭಾಗವಹಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

‘ಯಾತ್ರೆಯ ವಿವರ ಎರಡು ದಿನಗಳಲ್ಲಿ ಹೊರಬೀಳಲಿದೆ. 224 ವಿಧಾನಸಭಾ ಕ್ಷೇತ್ರಗಳಿಗೂ ರಥಯಾತ್ರೆ ಪ್ರವೇಶಿಸಲಿದೆ. ಅಂತಿಮವಾಗಿ ನಾಲ್ಕು ಯಾತ್ರೆಗಳ ಮಹಾಸಂಗಮ ಮಧ್ಯ ಕರ್ನಾಟಕದ ದಾವಣಗೆರೆಯಲ್ಲಿ ನಡೆಯಲಿದೆ. ಪಕ್ಷವನ್ನು ಮತ್ತೆ ಅಧಿಕಾರಕ್ಕೆ ತರುವಲ್ಲಿ ಈ ಯಾತ್ರೆಗಳು ನಿರ್ಣಾಯಕವಾಗಲಿವೆ. ಈ ಯಾತ್ರೆಯ ಮೂಲಕ ಬಿಜೆಪಿ ಪರವಾದ ಅಲೆ ಎಬ್ಬಿಸಲಾಗುವುದು. ವಿಜಯ ಸಂಕಲ್ಪದ ಹೆಸರಿನಲ್ಲೇ ಯಾತ್ರೆ ನಡೆಯಲಿದೆ’ ಎಂದು ಬಿಜೆಪಿಯ ಮುಖಂಡರೊಬ್ಬರು ಹೇಳಿದರು.

ಅಲ್ಲದೇ ಬಿಜೆಪಿಯ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್‌.ಸಂತೋಷ್ ಅವರು ರಾಜ್ಯವ್ಯಾಪಿ ಕಾರ್ಯಕರ್ತರ ಸಭೆಗಳನ್ನು ಆರಂಭಿಸಿದ್ದಾರೆ. ಕಾರ್ಯಕರ್ತರನ್ನು ಚುನಾವಣೆಗೆ ಅಣಿಗೊಳಿಸುವುದು ಇದರ ಉದ್ದೇಶ. ಇದು ಕೂಡಾ ಮುಂದುವರೆಯಲಿದೆ. ಬೂತ್‌ಮಟ್ಟದಲ್ಲಿ ಪರಿಣಾಮಕಾರಿಯಾಗಿ ಕಾರ್ಯಕರ್ತರು ಮತ್ತು ಮತದಾರರನ್ನು ತಲುಪಲು ಮಾರ್ಗದರ್ಶನ ನೀಡಲಿದ್ದಾರೆ ಎಂದು ಅವರು ತಿಳಿಸಿದರು.

ಬಳ್ಳಾರಿ ವಿಭಾಗದಲ್ಲಿ ಕಟೀಲ್ ಪ್ರವಾಸ: ನಳಿನ್‌ಕುಮಾರ್ ಕಟೀಲ್ ಅವರು ಇದೇ 13 ಮತ್ತು 14ರಂದು ಬಳ್ಳಾರಿ ವಿಭಾಗದಲ್ಲಿ ವಿಜಯಸಂಕಲ್ಪ ಯಾತ್ರೆ ನಡೆಸಲಿದ್ದು, ಆ ಬಳಿಕ ಅವರು ಪೇಜ್‌ ಪ್ರಮುಖರ ಸಮಾವೇಶದಲ್ಲಿ ಪಾಲ್ಗೊಳ್ಳುವರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT