ಶನಿವಾರ, ಮೇ 28, 2022
22 °C
* ನಾಲ್ಕು ಸ್ಥಾನಗಳಿಗೆ ತಲಾ ಐವರ ಹೆಸರು * ರಾಜ್ಯಸಭೆ ಟಿಕೆಟ್‌ಗೂ ಐದು ಮಂದಿಯ ಶಿಫಾರಸು

ಬಿ.ವೈ.ವಿಜಯೇಂದ್ರ ಪರಿಷತ್‌ ಪ್ರವೇಶಕ್ಕೆ ಸಮ್ಮತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ವಿಧಾನಸಭೆಯಿಂದ ವಿಧಾನ ಪರಿಷತ್‌ನ ಏಳು ಸ್ಥಾನಗಳಿಗೆ ಜೂನ್‌ 3ರಂದು ನಡೆಯುವ ಚುನಾವಣೆಯ ಅಭ್ಯರ್ಥಿಗಳ ಆಯ್ಕೆಗೆ 20 ಮಂದಿಯ ಹೆಸರನ್ನು ಶಿಫಾರಸು ಮಾಡಲು ತೀರ್ಮಾನ ಕೈಗೊಂಡಿರುವ ಬಿಜೆಪಿ ರಾಜ್ಯ ಘಟಕದ ಪ್ರಮುಖರ ಸಮಿತಿ, ಪಕ್ಷದ ರಾಜ್ಯ ಘಟಕದ ಉಪಾಧ್ಯಕ್ಷ ಬಿ.ವೈ. ವಿಜಯೇಂದ್ರ ಹೆಸರನ್ನೂ ಸಂಭಾವ್ಯರ ಪಟ್ಟಿಯಲ್ಲಿ ಸೇರಿಸಿದೆ.

ಏಳು ಸ್ಥಾನಗಳ ಪೈಕಿ ನಾಲ್ಕು ಸ್ಥಾನಗಳಿಗೆ ಅಭ್ಯರ್ಥಿಗಳನ್ನು ಕಣಕ್ಕಿಳಿಸಲು ಬಿಜೆಪಿ ನಿರ್ಧರಿಸಿದೆ. ಎಲ್ಲ ಸ್ಥಾನಗಳಿಗೂ ತಲಾ ಐವರ ಹೆಸರುಗಳನ್ನು ಶಿಫಾರಸು ಮಾಡಲಾಗಿದೆ. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ, ಸಾಮಾನ್ಯ, ಹಿಂದುಳಿದ ವರ್ಗ ಮತ್ತು ಮಹಿಳೆಯರಿಗೆ ತಲಾ ಒಂದು ಸ್ಥಾನಗಳನ್ನು ನೀಡುವ ಕುರಿತು ಚರ್ಚಿಸಿದ್ದು, ಎಲ್ಲ ವಿಭಾಗಗಳಲ್ಲೂ ಐವರ ಹೆಸರುಗಳನ್ನು ಶಿಫಾರಸು ತೀರ್ಮಾನ ಕೈಗೊಂಡಿದೆ.

ಬಿಜೆಪಿ ರಾಜ್ಯ ಘಟಕದ ಕಚೇರಿ ಜಗನ್ನಾಥ ಭವನದಲ್ಲಿ ಶನಿವಾರ ಮಧ್ಯಾಹ್ನ ಪ್ರಮುಖರ ಸಮಿತಿ ಸಭೆ ನಡೆಯಿತು. ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್‌ ಸಿಂಗ್‌, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್‌ ಕುಮಾರ್‌ ಕಟೀಲ್‌, ಶಾಸಕರಾದ ಬಿ.ಎಸ್‌. ಯಡಿಯೂರಪ್ಪ, ಜಗದೀಶ ಶೆಟ್ಟರ್‌, ಕೇಂದ್ರ ಸಚಿವ ಪ್ರಲ್ಹಾದ ಜೋಶಿ, ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ,  ಸಚಿವರಾದ ಆರ್‌. ಅಶೋಕ, ಗೋವಿಂದ ಕಾರಜೋಳ, ಡಾ.ಸಿ.ಎನ್‌. ಅಶ್ವತ್ಥ ನಾರಾಯಣ, ಬಿ. ಶ್ರೀರಾಮುಲು, ಶಾಸಕ ಕೆ.ಎಸ್‌. ಈಶ್ವರಪ್ಪ, ವಿಧಾನ ಪರಿಷತ್‌ ಸದಸ್ಯ ಲಕ್ಷ್ಮಣ ಸವದಿ, ಪಕ್ಷದ ರಾಜ್ಯ ಘಟಕದ ಉಪಾಧ್ಯಕ್ಷ ನಿರ್ಮಲ್ ಕುಮಾರ್ ಸುರಾನಾ ಮತ್ತು ಸಂಘಟನಾ ಕಾರ್ಯದರ್ಶಿ ಅರುಣ್‌ ಕುಮಾರ್‌ ಸಭೆಯಲ್ಲಿ ಪಾಲ್ಗೊಂಡಿದ್ದರು.

ವಿಜಯೇಂದ್ರ ಅವರೊಂದಿಗೆ ಪರಿಷತ್‌ನ ಹಾಲಿ ಸದಸ್ಯ ಲಕ್ಷ್ಮಣ ಸವದಿ, ಪಕ್ಷದ ರಾಜ್ಯ ಘಟಕದ ಉಪಾಧ್ಯಕ್ಷರಾದ ನಿರ್ಮಲ್‌ ಕುಮಾರ್‌ ಸುರಾನಾ, ಎಂ. ರಾಜೇಂದ್ರ, ಪ್ರಧಾನ ಕಾರ್ಯದರ್ಶಿಗಳಾದ ಸಿದ್ದರಾಜು, ಮಹೇಶ್‌ ಟೆಂಗಿನಕಾಯಿ, ಪರಿಷತ್‌ನ ಮಾಜಿ ಸದಸ್ಯ ಎಂ.ಬಿ. ಭಾನುಪ್ರಕಾಶ್‌, ಶಿವಮೊಗ್ಗದ ಮುಖಂಡ ಗಿರೀಶ್‌ ಪಟೇಲ್‌, ಬಿಜೆಪಿ ಪರಿಶಿಷ್ಟ ಜಾತಿ ಮೋರ್ಚಾ ರಾಜ್ಯ ಘಟಕದ ಅಧ್ಯಕ್ಷ ಛಲವಾದಿ ನಾರಾಯಣಸ್ವಾಮಿ, ಮಹಿಳಾ ಮೋರ್ಚಾ ಮುಖಂಡರಾದ ಗೀತಾ ವಿವೇಕಾನಂದ ಹೆಸರುಗಳು ಪಟ್ಟಿಯಲ್ಲಿವೆ ಎಂಬ ಮಾಹಿತಿ ಲಭ್ಯವಾಗಿದೆ.

‘ಯಡಿಯೂರಪ್ಪ, ಅಶೋಕ ಸೇರಿದಂತೆ ಕೆಲವರು ವಿಜಯೇಂದ್ರ ಅವರಿಗೆ ವಿಧಾನ ಪರಿಷತ್‌ ಟಿಕೆಟ್‌ ನೀಡುವ ಕುರಿತು ಪ್ರಸ್ತಾಪಿಸಿದರು. ಸಭೆಯಲ್ಲಿದ್ದ ಎಲ್ಲರೂ ಅದಕ್ಕೆ ಒಪ್ಪಿಗೆ ಸೂಚಿಸಿದರು’ ಎಂದು ಬಿಜೆಪಿ ಮೂಲಗಳು ತಿಳಿಸಿವೆ.

‘ಪ್ರಮುಖರ ಸಮಿತಿಯು ಅಂತಿಮಗೊಳಿಸಿರುವ ಸಂಭಾವ್ಯರ ಪಟ್ಟಿಯನ್ನು ಪಕ್ಷದ ಕೇಂದ್ರೀಯ ಚುನಾವಣಾ ಸಮಿತಿಗೆ ಕಳುಹಿಸಲಾಗುವುದು. ಸಮಿತಿಯು ಅಂತಿಮವಾಗಿ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಿದೆ’ ಎಂದು ಅರುಣ್‌ ಸಿಂಗ್‌ ತಿಳಿಸಿದರು.

ಕೇಶವಶಿಲ್ಪಕ್ಕೆ ಭೇಟಿ: ಪ್ರಮುಖರ ಸಮಿತಿ ಸಭೆ ಬಳಿಕ ಚಾಮರಾಜಪೇಟೆಯಲ್ಲಿರುವ ಆರ್‌ಎಸ್‌ಎಸ್‌ ಕಚೇರಿ ಕೇಶವ ಶಿಲ್ಪಕ್ಕೆ ತೆರಳಿದ ಬಸವರಾಜ ಬೊಮ್ಮಾಯಿ, ಅರುಣ್‌ ಸಿಂಗ್‌, ನಳಿನ್‌ ಕುಮಾರ್‌ ಕಟೀಲ್‌ ಮತ್ತಿತರರು ಅಲ್ಲಿನ ಪ್ರಮುಖರ ಜತೆ ಕೆಲ ಕಾಲ ಚರ್ಚಿಸಿದರು. ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್‌. ಸಂತೋಷ್‌ ಕೂಡ ಈ ಸಭೆಯಲ್ಲಿದ್ದರು.

ರಾಜ್ಯಸಭೆ: ಎರಡನೇ ಅಭ್ಯರ್ಥಿ ಯಾರು?

ರಾಜ್ಯಸಭೆಯ ಎರಡು ಸ್ಥಾನಗಳಿಗೆ ಬಿಜೆಪಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಿದೆ. ಮೊದಲನೇ ಅಭ್ಯರ್ಥಿಯನ್ನಾಗಿ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ ಅವರನ್ನೇ ಆಯ್ಕೆ ಮಾಡುವುದು ಖಚಿತ.

ಎರಡನೇ ಅಭ್ಯರ್ಥಿಯ ಆಯ್ಕೆಗೆ ಹಾಲಿ ಸದಸ್ಯ ಕೆ.ಸಿ. ರಾಮಮೂರ್ತಿ, ವಿಧಾನ ಪರಿಷತ್‌ ಮಾಜಿ ಸದಸ್ಯ ಲೆಹರ್‌ ಸಿಂಗ್‌ ಸಿರೋಯ, ಪಕ್ಷದ ರಾಜ್ಯ ಘಟಕದ ಉಪಾಧ್ಯಕ್ಷ ನಿರ್ಮಲ್‌ ಕುಮಾರ್‌ ಸುರಾನಾ ಮತ್ತು ಉದ್ಯಮಿ ಪ್ರಕಾಶ್‌ ಶೆಟ್ಟಿ ಹೆಸರುಗಳನ್ನು ಶಿಫಾರಸು ಮಾಡಲಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು