ಮಂಗಳವಾರ, ಮಾರ್ಚ್ 28, 2023
33 °C

ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್‌ ಸಿಂಗ್‌, ಶಾಸಕ ಯತ್ನಾಳ ಭೇಟಿ: ಗೌಪ್ಯ ಚರ್ಚೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವಿಜಯಪುರ: ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್‌ ಸಿಂಗ್‌ ಮತ್ತು ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರು ಮಂಗಳವಾರ ರಾತ್ರಿ ನಗರದ ಹೈಪರ್‌ ಮಾರ್ಟ್‌ನಲ್ಲಿ ಪರಸ್ಪರ ಭೇಟಿಯಾಗಿ, ಗೌಪ್ಯ ಮಾತುಕತೆ ನಡೆಸಿದ್ದು, ರಾಜಕೀಯವಾಗಿ ಕುತೂಹಲ ಕೆರಳಿಸಿದೆ.

ಇಂಡಿ ಮತ್ತು ಸಿಂದಗಿಯಲ್ಲಿ ಬಿಜೆಪಿ ಆಯೋಜಿಸಿದ್ದ ‘ಸಂಕಲ್ಪ ಯಾತ್ರೆ’ಯಲ್ಲಿ ಪಾಲ್ಗೊಂಡಿದ್ದ ಅರುಣ್‌ ಸಿಂಗ್‌ ಅವರೊಂದಿಗೆ ಶಾಸಕ ಯತ್ನಾಳ ಪಾಲ್ಗೊಳ್ಳದೇ ದಿನವಿಡೀ ಅಂತರ ಕಾಯ್ದುಕೊಂಡಿದ್ದರು. ಆದರೆ, ಯಾತ್ರೆ ಮುಗಿದ ಬಳಿಕ ಇಬ್ಬರೂ ಒಟ್ಟಿಗೆ ಸೇರಿರುವುದು ರಾಜಕೀಯ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ.

ಈ ಕುರಿತು ’ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಆರ್‌.ಎಸ್‌.ಪಾಟೀಲ ಕೂಚಬಾಳ, ಇತ್ತೀಚೆಗೆ ನಡೆದ ವಿಜಯಪುರ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಬಿಜೆಪಿ ಜಯ ಗಳಿಸಿರುವ ಹಿನ್ನೆಲೆಯಲ್ಲಿ ಅರುಣ್‌ ಸಿಂಗ್‌ ಅವರು ಶಾಸಕ ಯತ್ನಾಳ ಅವರನ್ನು ಭೇಟಿಯಾಗಿ ಅಭಿನಂದನೆ ಸಲ್ಲಿಸಿದರು. ಬಳಿಕ ಇಬ್ಬರು ನಾಯಕರು ಕೆಲ ಹೊತ್ತು ಗೌಪ್ಯ ಮಾತುಕತೆ ನಡೆಸಿದರು. ಮಾತುಕತೆ ವಿವರ ತಿಳಿದಿಲ್ಲ‘ ಎಂದು ತಿಳಿಸಿದರು.

ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ವಿರುದ್ಧ ಹೇಳಿಕೆ ನೀಡುವ ಮೂಲಕ ಹಾಗೂ ರಾಜ್ಯ ಬಿಜೆಪಿ ಸರ್ಕಾರದ ಭ್ರಷ್ಟಾಚಾರದ ಬಗ್ಗೆ ಆಗಾಗ ಹೇಳಿಕೆ ನೀಡುವ ಮೂಲಕ ಶಾಸಕ ಯತ್ನಾಳ ಅವರು ಪಕ್ಷಕ್ಕೆ ಮುಜುಗರ ಉಂಟು ಮಾಡಿದ್ದರು.

ಈ ಹಿನ್ನೆಲೆಯಲ್ಲಿ ಇತ್ತೀಚೆಗೆ ಹುಬ್ಬಳ್ಳಿಯಲ್ಲಿ ಮಾಧ್ಯಮದವರ ಪ್ರಶ್ನೆಗೆ ಖಾರವಾಗಿ ಪ್ರತಿಕ್ರಿಯಿಸಿದ ಅರುಣ್‌ ಸಿಂಗ್‌, ‘ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರು ಬಿಜೆಪಿ ನಾಯಕರಲ್ಲ, ಅವರಿಗೆ ಪಕ್ಷದ ಸಿದ್ಧಾಂತ ಗೊತ್ತಿಲ್ಲ ಎಂದಿದ್ದರು. ಯತ್ನಾಳ ಕೂಡ ಅರುಣ್‌ ಸಿಂಗ್‌ ವಿರುದ್ದ ಗರಂ ಆಗಿದ್ದರು. ಚುನಾವಣೆ ಹೊಸ್ತಿಲಿನಲ್ಲಿ ಇಬ್ಬರು ನಾಯಕರು ಒಟ್ಟಿಗೆ ಸೇರಿ ಚರ್ಚಿಸಿರುವುದು ಮಹತ್ವ ಪಡೆದುಕೊಂಡಿದೆ.

ಸಿಂದಗಿ ಶಾಸಕ ರಮೇಶ ಭೂಸನೂರ ಹಾಗೂ ಬಿಜೆಪಿ ಮುಖಂಡರು ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು