ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಸ್ಲಿಂ ಮತ  ವಿಭಜಿಸಲು ಎಚ್‌ಡಿಕೆಗೆ ಬಿಜೆಪಿ ಸುಪಾರಿ: ಕಾಂಗ್ರೆಸ್ ಆರೋಪ

Last Updated 4 ಏಪ್ರಿಲ್ 2022, 7:23 IST
ಅಕ್ಷರ ಗಾತ್ರ

ಮೈಸೂರು: ‘ಮುಸ್ಲಿಂ ಸಮುದಾಯದ ಮತಗಳನ್ನು ವಿಭಜಿಸಲು ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಎಚ್‌.ಡಿ. ಕುಮಾರಸ್ವಾಮಿ ಅವರಿಗೆ ಬಿಜೆಪಿ ಸುಪಾರಿ ನೀಡಿದೆ’ ಎಂದು ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ ಆರೋಪಿಸಿದರು.

‘ಸಿಂದಗಿ ಹಾಗೂ ಹಾನಗಲ್‌ ಉಪಚುನಾವಣೆ ವೇಳೆ ಕೂಡ ಕುಮಾರಸ್ವಾಮಿ ಒಂದು ವಾರ ನಿರಂತರವಾಗಿ‌ ಆರ್‌ಎಸ್‌ಎಸ್‌ನವರನ್ನು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿದ್ದರು. ಆದರೆ, ಅವರ ಕಾರ್ಯತಂತ್ರ ಫಲಿಸಲಿಲ್ಲ. ಚುನಾವಣೆ ಬಳಿಕ ಸುಮ್ಮನಾದರು. ಅವರು ಯಾವಾಗ ಯಾರನ್ನು ಬಯ್ಯುತ್ತಾರೆ ಎಂಬುದೇ ಗೊತ್ತಾಗಲ್ಲ’ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

‘ಅಗತ್ಯ ವಸ್ತುಗಳ ದರ ಏರಿಕೆ ಹಾಗೂ ನಿರುದ್ಯೋಗ ಸೇರಿದಂತೆ ತನ್ನ ವೈಫಲ್ಯ ಮುಚ್ಚಿ ಹಾಕಿಕೊಳ್ಳಲು ಬಿಜೆಪಿ ಎರಡು ತಿಂಗಳಿನಿಂದ ಜನರ ದಾರಿ ತಪ್ಪಿಸುತ್ತಿದೆ. ಹಿಜಾಬ್‌ ಧರಿಸಬಾರದು, ಧಾರ್ಮಿಕ ಸ್ಥಳಗಳಲ್ಲಿ ಮುಸ್ಲಿಮರಿಗೆ ಮಾರಾಟ ಮಾಡಲು ಅವಕಾಶ ನೀಡಬಾರದು, ಟಿಪ್ಪು ಸುಲ್ತಾನ್‌ ಚರಿತ್ರೆಯನ್ನು ಪಠ್ಯದಿಂದ ತೆಗೆಯಬೇಕು, ಭಗವದ್ಗೀತೆ ಅಳವಡಿಸಬೇಕು, ಹಲಾಲ್‌ ಕಟ್‌ ಬೇಡ ಜಟ್ಕಾ ಕಟ್‌ ಬೇಕು ಎಂಬಂಥ ವಿಚಾರ ಮುಂದಿಟ್ಟುಕೊಂಡಿದೆ. ಇದರಿಂದ ರಾಜ್ಯದ ಮಾನ ಅಂತರರಾಷ್ಟ್ರೀಯ ಮಟ್ಟದಲ್ಲಿ ಹರಾಜಾಗುತ್ತಿದೆ. ಬೆಂಗಳೂರು ನಗರವನ್ನು ಕೆಟ್ಟದಾಗಿ ನೋಡಲಾಗುತ್ತಿದೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘ಅರಬ್‌ ದೇಶಗಳಿಗೆ ಭಾರತದಿಂದ ರಫ್ತಾಗುವ ಪ‍್ರಮಾಣದಲ್ಲಿ ಕುಸಿತ ಕಂಡಿದೆ. ಮಾಂಸ, ಸಾಫ್ಟ್‌ವೇರ್‌ ಉತ್ಪನ್ನ ಸೇರಿದಂತೆ ಭಾರತದಿಂದ ಆಮದು ಮಾಡಿಕೊಳ್ಳುವುದನ್ನು ನಿಲ್ಲಿಸಿ ಬೇರೆ ದೇಶಗಳ ಮೊರೆ ಹೋಗುತ್ತಿವೆ. ಆದರೆ, ಬಿಜೆಪಿಗೆ ಅಧಿಕಾರವೇ ಮುಖ್ಯವಾಗಿದೆ. ಬೇರೆಯವರ ಸಮಾಧಿ ಮೇಲೆ ಅಧಿಕಾರ ಹಿಡಿಯಲು ಪ್ರಯತ್ನಿಸುತ್ತಿದೆ’ ಎಂದು ಟೀಕಿಸಿದರು.

‘ಬಿಜೆಪಿ ಪ್ರಾಯೋಜಿತ ಕೆಲ ಸಂಘಟನೆಗಳು ಹಿಂದೂಗಳನ್ನು ಗುತ್ತಿಗೆ ಪಡೆದವರ ರೀತಿ ವರ್ತಿಸುತ್ತಿವೆ. ಇದನ್ನು ನೋಡಿಯೂ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸುಮ್ಮನಿದ್ದಾರೆ. ಇಂಥ ಅಸಮರ್ಥ ಮುಖ್ಯಮಂತ್ರಿಯನ್ನು ರಾಜ್ಯ ಹಿಂದೆಂದೂ ಕಂಡಿಲ್ಲ’ ಎಂದು ತರಾಟೆಗೆ ತೆಗೆದುಕೊಂಡರು.

‘ಹಲಾಲ್‌ ಮಾಂಸವನ್ನು ಆರ್ಥಿಕ ಜಿಹಾದ್‌ ಎಂಬುದಾಗಿ ಸಿ.ಟಿ.ರವಿ ಕರೆದಿದ್ದಾರೆ. ಆದರೆ, ದನದ ಹಲಾಲ್ ಮಾಂಸವನ್ನು ದೇಶದಿಂದ ರಫ್ತು ಮಾಡುತ್ತಿರುವ ಅಗ್ರ 10ರ ಪಟ್ಟಿಯಲ್ಲಿ ಬಿಜೆಪಿ ಬೆಂಬಲಿಗರೇ ಇದ್ದಾರೆ’ ಎಂದು ಹೇಳಿದರು.

‘ತಾಕತ್ತಿದ್ದರೆ ಶೂದ್ರ ಅಥವಾ ದಲಿತ ಸಮುದಾಯದವರಿಗೆ ಆರ್‌ಎಸ್‌ಎಸ್‌ನಲ್ಲಿ ಮುಖ್ಯಸ್ಥಾನ ನೀಡಿ’ ಎಂದು ಸವಾಲು ಹಾಕಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT