ಮಂಗಳವಾರ, ಮೇ 18, 2021
30 °C

ಪಂಚ ರಾಜ್ಯಗಳ ಚುನಾವಣೆ ಫಲಿತಾಂಶ ಬಿಜೆಪಿ ನಿರೀಕ್ಷೆ ಹುಸಿಯಾಗಿಸಿದೆ: ಸಿದ್ದರಾಮಯ್ಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ‘ಐದು ರಾಜ್ಯಗಳ ಚುನಾವಣೆ ಫಲಿತಾಂಶ ಬಿಜೆಪಿಯ ನಿರೀಕ್ಷೆಯನ್ನು ಹುಸಿ ಮಾಡಿದೆ. ದಕ್ಷಿಣ ಭಾರತದಲ್ಲಿ ಕೋಮುವಾದಿ ಪಕ್ಷ (ಬಿಜೆಪಿ) ಅಧಿಕಾರ ಪಡೆಯಲು ಜನ ಬಿಟ್ಟಿಲ್ಲ. ಕರ್ನಾಟಕದಲ್ಲೂ ಬಿಜೆಪಿಗೆ ಬಹುಮತ ಇರಲಿಲ್ಲ. ವಾಮಮಾರ್ಗದ ಮೂಲಕ ಆ ಪಕ್ಷ ಅಧಿಕಾರಕ್ಕೆ ಬಂದಿದೆ’ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದರು.

ಸುದ್ದಿಗಾರರ ಜೊತೆ ಭಾನುವಾರ ಮಾತನಾಡಿದ ಅವರು, ‘ಜನರ ವಿಶ್ವಾಸ ಗಳಿಸಲು ಬಿಜೆಪಿ ವಿಫಲವಾಗಿದೆ. ಪಶ್ಚಿಮ ಬಂಗಾಳದಲ್ಲಿ ಎಂಟು ಹಂತದ ಚುನಾವಣೆ ಮಾಡಿ, ಮಮತಾ ಬ್ಯಾನರ್ಜಿ ಅವರನ್ನು  ಸೋಲಿಸಲು ಬಿಜೆಪಿಯವರು ತಂತ್ರಗಾರಿಕೆ ಮಾಡಿದ್ದರು. ಮತದಾರರು ಈ ತಂತ್ರಗಾರಿಕೆಯನ್ನು ವಿಫಲ ಮಾಡಿದ್ದಾರೆ’ ಎಂದರು.

‘ಮಮತಾ ವಿರುದ್ದ ದೊಡ್ಡ ಯುದ್ದ ಸಾರಿದ್ದರು. ಹಣ, ತೋಲ್ಬಲ, ಆಪರೇಷನ್ ಕಮಲದ ಮೂಲಕ ಹಲವರನ್ನು ಸೆಳೆದಿದ್ದರು. ಬಿಜೆಪಿ ಕುತಂತ್ರವನ್ನು ಧಿಕ್ಕರಿಸಿ, ಮೂರನೇ ಬಾರಿಗೆ ಬಂಗಾಳದ ಮತದಾರರು ಅವರಿಗೆ ಆಶೀರ್ವಾದ ಮಾಡಿದ್ದಾರೆ’ ಎಂದರು.

‘ಮಮತಾ ತಮ್ಮ ಕ್ಷೇತ್ರ ಬಿಟ್ಟು ನಂದಿ ಗ್ರಾಮದಲ್ಲಿ ಬಿಜೆಪಿಯ ಸುವೇಂದು ಅಧಿಕಾರಿ ವಿರುದ್ದ ಸ್ಪರ್ಧೆ ಮಾಡಿದ್ದರು. ಮಮತಾ ಸ್ಪರ್ಧೆ ಐತಿಹಾಸಿಕ ನಿರ್ಣಯ. ಕಳೆದ ಬಾರಿಗಿಂತಲೂ ಹೆಚ್ಚು ಸ್ಥಾನ ಪಡೆದುಕೊಂಡಿದ್ದು, ಮಮತಾ ಜನಪ್ರಿಯತೆ ಹೆಚ್ಚಾಗಿದೆ. ಅಧಿಕಾರ ಹಿಡಿಯುವ ಅಮಿತ್ ಶಾ ಕನಸು ನುಚ್ಚುನೂರಾಗಿದೆ’ ಎಂದರು.

‘ಕೇರಳದಲ್ಲಿ ಯುಡಿಎಫ್‌ ಅಧಿಕಾರಕ್ಕೆ ಬರುವ ವಿಶ್ವಾಸ ಇತ್ತು. ಆದರೆ, ಎರಡಂಗದ ಪಿಣರಾಯಿ ವಿಜಯನ್‌ಗೆ ಕೇರಳ ಮತದಾರರು ಮತ್ತೆ ಬೆಂಬಲ ನೀಡಿದ್ದಾರೆ. ಕೇರಳದಲ್ಲಿ ಕಾಂಗ್ರೆಸ್‌‌ಗೆ ಹಿನ್ನಡೆ ಆಗಿದೆ. ಅದನ್ನು ಒಪ್ಪಿಕೊಳ್ಳಲೇಬೇಕು’ ಎಂದರು.

‘ರಾಜ್ಯದ ಮೂರು 3 ಕ್ಷೇತ್ರಗಳ ಪೈಕಿ ಮಸ್ಕಿಯಲ್ಲಿ ಪಕ್ಷಕ್ಕೆ ದೊಡ್ಡ ಅಂತರದ ಗೆಲುವಾಗಿದೆ. ಬಸವಕಲ್ಯಾಣದಲ್ಲಿ ಜೆಡಿಎಸ್‌ನ ಅಲ್ಪಸಂಖ್ಯಾತ ಅಭ್ಯರ್ಥಿಯಿಂದ ನಮಗೆ ಸೋಲಾಗಿದೆ. ಬೆಳಗಾವಿಯಲ್ಲಿ ಕಳೆದ ಚುನಾವಣೆಯಲ್ಲಿ 4 ಲಕ್ಷ ಅಂತರದಿಂದ ಸೋತಿದ್ದೆವು. ಈ ಬಾರಿ ಒಳ್ಳೆಯ ಪೈಪೋಟಿ ನೀಡಿದ್ದೇವೆ’ ಎಂದರು.

‘ವಿಜಯೇಂದ್ರ ಅವರನ್ನು ಚುನಾವಣಾ ಚಾಣಕ್ಯ ಅಂತಿದ್ದರು. ಗೆಲ್ಲಲು ಬಿಜೆಪಿ ಹಣ ಖರ್ಚು ಮಾಡುತ್ತದೆ ಎಂದು ನಾನು ಹೇಳಿದ್ದೆ. ಹಣ ಕೊಡಲು ಹೋದವರನ್ನು ಜನರೇ ಮಸ್ಕಿಯಲ್ಲಿ ಓಡಿಸಿದ್ದಾರೆ. ಪ್ರತಾಪ್ ಗೌಡ ಪಾಟೀಲ ಅವರ ಆಪರೇಷನ್ ಕಮಲವನ್ನು ಜನರು ತೀವ್ರವಾಗಿ ವಿರೋಧಿಸಿದ್ದಾರೆ. ತುರ್ವಿಹಾಳ್ ಬಗ್ಗೆ ಅನುಕಂಪ ಇತ್ತು. ಯುವಕರು ಗೆಲ್ಲಿಸಲು ತೀರ್ಮಾನ ಮಾಡಿದ್ದರು’ ಎಂದರು.

‘ಅಸ್ಸಾಂನಲ್ಲಿ ಸರಳ ಬಹುಮತ ಬಿಜೆಪಿಗೆ ಬಂದಿದೆ. ಪುದುಚೇರಿಯಲ್ಲಿ ಏನು ಬೇಕಾದರೂ ಆಗಬಹುದು’ ಎಂದೂ ಸಿದ್ದರಾಮಯ್ಯ ಹೇಳಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು