ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪರಿಷತ್‌ನಲ್ಲಿ ಗದ್ದಲ ಸೃಷ್ಟಿಸಿದ ‘ಭಯೋತ್ಪಾದಕ’ ಎಂಬ ಹೇಳಿಕೆ

ಪೊಲೀಸ್ ಭ್ರಷ್ಟಾಚಾರದ ಹಣ ‘ಪರಿವಾರ’ಕ್ಕೆ ರವಾನೆ– ಹರಿಪ್ರಸಾದ್‌ ಆರೋಪ
Last Updated 30 ಮಾರ್ಚ್ 2022, 17:37 IST
ಅಕ್ಷರ ಗಾತ್ರ

ಬೆಂಗಳೂರು: ‘ಪೊಲೀಸ್ ಅಧಿಕಾರಿಗಳ ವರ್ಗಾವಣೆಯಲ್ಲಿ ನಡೆಯುತ್ತಿರುವ ಭ್ರಷ್ಟಾಚಾರದ ಹಣ ಕೇಶವಕೃಪಾ ಮೂಲಕ ಸಂಘ ಪರಿವಾರದ ಸಂಸ್ಥೆಗಳಿಗೆ ರವಾನೆಯಾಗುತ್ತಿದೆ. ಕಲ್ಲಡ್ಕದ ಭಯೋತ್ಪಾದಕರೊಬ್ಬರ ಸೂಚನೆಯಂತೆ ಪೊಲೀಸರ ವರ್ಗಾವಣೆಯಾಗುತ್ತಿದೆ’ ಎಂದು ವಿರೋಧ ಪಕ್ಷದ ನಾಯಕಬಿ.ಕೆ. ಹರಿಪ್ರಸಾದ್ ‌ನೀಡಿದ ಹೇಳಿಕೆ ವಿಧಾನಪರಿಷತ್‌ನಲ್ಲಿ ಆಡಳಿತ– ವಿರೋಧ ಪಕ್ಷದ ಸದಸ್ಯರ ಮಧ್ಯೆ ಭಾರಿ ವಾಗ್ವಾದಕ್ಕೆ ಕಾರಣವಾಯಿತು.

ಹರಿಪ್ರಸಾದ್ ಹೇಳಿಕೆಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ ಬಿಜೆಪಿಯ ಭಾರತಿ ಶೆಟ್ಟಿ, ಸಭಾ ನಾಯಕ ಕೋಟ ಶ್ರೀನಿವಾಸ ಪೂಜಾರಿ, ‘ಕಲ್ಲಡ್ಕದ ಭಯೋತ್ಪಾದಕ ಎಂದರೆ ಯಾರು? ಹಾಲಿ ಶಾಸಕರಾ, ಮಾಜಿ ಶಾಸಕರಾ ಎಂದು ಸ್ಪಷ್ಟಪಡಿಸಬೇಕು. ಅದರ ಹೊರತಾಗಿ ಇಂಥ ಹೇಳಿಕೆ ನೀಡುವುದು ಸರಿಯಲ್ಲ’ ಎಂದು ಏರಿದ ಧ್ವನಿಯಲ್ಲಿ ಆಗ್ರಹಿಸಿದರು.

ಮಾತು ಮುಂದುವರೆಸಿದ ಹರಿಪ್ರಸಾದ್, ‘ಕುಂಬಳಕಾಯಿ ಕಳ್ಳ ಎಂದರೆ ಬಿಜೆಪಿ ಸದಸ್ಯರು ಏಕೆ ಹೆಗಲು ಮುಟ್ಟಿಕೊಂಡು ನೋಡುತ್ತಾರೆ? ಪೊಲೀಸರ ವರ್ಗಾವಣೆಯಲ್ಲಿ ಭಾಗಿಯಾ
ಗಿರುವ ಭಯೋತ್ಪಾದಕರ ಬಗ್ಗೆ ಮಾತನಾಡುತ್ತಿದ್ದೇನೆ. ಅದೇ ವಿಚಾರವನ್ನು ನೂರು ಬಾರಿ ಬೇಕಾದರೂ ಹೇಳಲು ಸಿದ್ಧನಿದ್ದೇನೆ’ ಎಂದು ಎದೆ ತಟ್ಟಿಕೊಂಡು ಮತ್ತಷ್ಟು ಜೋರಾಗಿ ಹೇಳಿದರು.

ಈ ವೇಳೆ ‘ಪಾಯಿಂಟ್‌ ಆಫ್‌ ಆರ್ಡರ್‌’ ಎತ್ತಿದ ಬಿಜೆಪಿಯ ಆಯನೂರು ಮಂಜುನಾಥ್, ‘ಪೊಲೀ
ಸರ ಭ್ರಷ್ಟಾಚಾರದ ಬಗ್ಗೆ ‌ಮಾತ್ರಚರ್ಚೆ ನಡೆಸಬೇಕು. ಅದರ ಹೊರತು ಬೇರೆ ವಿಚಾರ ಪ್ರಸ್ತಾಪ ಮಾಡುವುದಕ್ಕೆ ಅವಕಾಶ ಇಲ್ಲ’ ಎಂದರು. ಅದಕ್ಕೆ ದನಿಗೂಡಿಸಿದ ಸಭಾಪತಿ ಬಸವರಾಜ ಹೊರಟ್ಟಿ, ಪೊಲೀಸ್ ಅಧಿಕಾರಿಗಳ ಭ್ರಷ್ಟಾಚಾರದ ಕುರಿತು ಚರ್ಚೆ ನಡೆಸುವಂತೆ ಸೂಚಿಸಿದರು.

‘ಪೊಲೀಸ್ ಇಲಾಖೆಯ ಹೆಚ್ಚುವರಿ ಮಹಾನಿರ್ದೇಶಕರೊಬ್ಬರು ಕೇಶವ ಕೃಪಾಗೆ ಭೇಟಿ ನೀಡಿ ವರ್ಗಾವಣೆ ಮಾಡಿಸಿಕೊಳ್ಳುತ್ತಾರೆ. ವರ್ಗಾವಣೆಯ ಹಣ ಕೇಶವಾಕೃಪಾಗೆ ತಲುಪುತ್ತಿದೆ’ ಎಂದು ಹರಿಪ್ರಸಾದ್‌, ಮತ್ತೆ ಆರೋಪಿಸಿದರು. ‘ಸಂಘ ಪರಿವಾರದ ಹೆಸರು ಹೇಳುವ ಅಗತ್ಯವಿಲ್ಲ. ಕಾಂಗ್ರೆಸ್ ಸದಸ್ಯರಿಗೆ ಆ ಯೋಗ್ಯತೆ ಇಲ್ಲ’ ಎಂದುಕೋಟ ಶ್ರೀನಿವಾಸ ಪೂಜಾರಿ ಹೇಳಿದರು. ಮತ್ತೆ ಗದ್ದಲ ಉಂಟಾಯಿತು.

‘ಪೊಲೀಸ್ ವ್ಯವಸ್ಥೆ ಸಂಘ ಪರಿವಾರದ ಪರ ಕೆಲಸ ಮಾಡುತ್ತಿದೆ. ಶಿವಮೊಗ್ಗದಲ್ಲಿ ನಿಷೇದಾಜ್ಞೆ ಜಾರಿಯಲ್ಲಿದ್ದರೂ ಜನ ಗುಂಪುಗೂಡುತ್ತಾರೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಾನೂನುಬಾಹಿರ ಚಟುವಟಿಕೆ ನಡೆಯುತ್ತಿದೆ. ಆದರೂ ಪೊಲೀಸರು ಯಾವುದೇ ಕ್ರಮಕ್ಕೆ ಮುಂದಾಗುತ್ತಿಲ್ಲ’ ಎಂದು ಅವರು ದೂರಿ ದರು.

ಜೆಡಿಎಸ್‌ನ ಮರಿತಿಬ್ಬೇಗೌಡ, ‘ಶಿಕ್ಷಕರಿಗೆ ಕೌನ್ಸೆಲಿಂಗ್ ನಡೆಸುವ ಮಾದರಿಯಲ್ಲಿ ಪೊಲೀಸ್ ಇಲಾಖೆ ಸಿಬ್ಬಂದಿ ವರ್ಗಾವಣೆಗೂ ಕೌನ್ಸೆಲಿಂಗ್ ಪದ್ದತಿ ಜಾರಿ ಮಾಡಬೇಕು’ ಎಂದು ಸಲಹೆ ನೀಡಿದರು.

ಕಾಂಗ್ರೆಸ್‌ನ ಆರ್.ಬಿ. ತಿಮ್ಮಾಪುರ, ಪಿ.ಆರ್‌. ರಮೇಶ್‌, ನಸೀರ್‌ ಅಹ್ಮದ್‌, ಪ್ರಕಾಶ ರಾಥೋಡ್‌, ಯು.ಬಿ. ವೆಂಕಟೇಶ್, ಜೆಡಿಎಸ್‌ನ ಎಚ್‌.ಎಂ. ರಮೇಶ ಗೌಡ ಕೂಡಾ ಮಾತನಾಡಿದರು.

ಕೆಂಪಯ್ಯ ಕೈಗೆ ಪೊಲೀಸ್‌ ಇಲಾಖೆ ಕೊಟ್ಟಿದ್ದ್ಯಾಕೆ?

‘ನಿಮ್ಮ (ಕಾಂಗ್ರೆಸ್‌) ಅವಧಿಯ ಕೆ.ಜೆ. ಜಾರ್ಜ್,‌ ಜಿ. ಪರಮೇಶ್ವರ ಅತ್ಯುತ್ತಮ ಗೃಹ ಸಚಿವರು. ಆದರೆ, ನಿವೃತ್ತ ಅಧಿಕಾರಿ ಕೆಂಪಯ್ಯ ಅವರನ್ನು ನೇಮಿಸಿ ಈ ಸಚಿವ ರನ್ನು ಡಮ್ಮಿ ಮಾಡಿದಿರಿ. ನಿವೃತ್ತ ಅಧಿಕಾರಿ ಕೈಗೆ ಇಡೀ ಪೊಲೀಸ್ ಇಲಾಖೆಯನ್ನು ಕೊಟ್ಡಿದ್ದೀರಲ್ಲ. ಇತಿಹಾಸಲ್ಲಿಯೇ ಮೊದಲ ಬಾರಿ ಪೊಲೀಸರೇ ಪ್ರತಿಭಟನೆಗಿಳಿಯುವಂತಾ ಗಿತ್ತು’ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದರು.

ಪೊಲೀಸರು ಭ್ರಷ್ಟಾಚಾರದಲ್ಲಿ ತೊಡಗಿದ್ದಾರೆಂಬ ವಿರೋಧ ಪಕ್ಷದ ಆರೋಪಗಳನ್ನು ತಳ್ಳಿಹಾಕಿದ ಅವರು, ‘ಇಂಥ ಆರೋಪಗಳಲ್ಲಿ ಸತ್ಯಾಂಶಗಳಿಲ್ಲ. ಸರ್ಕಾರ ಬದಲಾದಾಗ ಇಲಾಖೆ ಬದಲಾಗುವುದಿಲ್ಲ. ಸಚಿವರು ಮಾತ್ರ ಬದಲಾಗುತ್ತಾರೆ. ನನ್ನ ಇಲಾಖೆಯಲ್ಲಿಯೂ ಹಾಗೆಯೇ ಆಗಿರುವುದು. ಅದೇ ಟೋಪಿ, ಲಾಠಿ’ ಎಂದು ಅವರು ಹೇಳಿದರು.

‘ಪೊಲೀಸರ ವರ್ಗಾವಣೆ ವಿಚಾರದಲ್ಲಿ ಎರಡು ವರ್ಷವಿದ್ದ ನಿಯಮವನ್ನು ಒಂದು ವರ್ಷಕ್ಕೆ ಯಾಕೆ ಮಾಡಿದಿರಿ? ನಿಮ್ಮ ಅವಧಿಯಲ್ಲಿ ಯಾಕೆ ಹೆಚ್ಚು ಮಾಡಲಿಲ್ಲ. ಇಂಥ ಸ್ಥಿತಿಗೆ ನೀವೆ ಹೊಣೆ’ ಎಂದರು.

‘ಪತ್ರಿಕಾ ಸ್ವಾತಂತ್ರ್ಯ ಹರಣ ಮಾಡಿದ್ದೀರಿ, ನೀವು (ಕಾಂಗ್ರೆಸ್‌) ಪತ್ರಿಕಾ ಕಚೇರಿಗೆ ಬೀಗ ಹಾಕಿದ್ದಿರಲ್ಲ’ ಎಂದು ಹಳೆಯ ಪ್ರಕರಣವನ್ನು ಗೃಹ ಸಚಿವರು ಉಲ್ಲೇಖಿಸಿದಾಗ ಆಕ್ಷೇಪ ವ್ಯಕ್ತಪಡಿಸಿದ ಹರಿಪ್ರಸಾದ್, ‘ನೀವು ಎಷ್ಟು ಜನ ಪತ್ರಕರ್ತರನ್ನು ಜೈಲಿಗೆ ಹಾಕಿದ್ದೀರಿ ಎಂದು ಗೊತ್ತಿದೆ. ನಿಮ್ಮಂತೆ ಪತ್ರಿಕೆ ಮಾಧ್ಯಮಗಳನ್ನು ನಾವು ಖರೀದಿ ಮಾಡಿಲ್ಲ. ಪತ್ರಿಕೆಗಳ ಮೇಲೆ ಇಡಿ, ಐಟಿ ದಾಳಿ ಮಾಡಿಸಲಿಲ್ಲ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT