ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಂಧತ್ವ ಮೀರಿದ ಸಾಧಕ ಶಿವರಾಜ ಶಾಸ್ತ್ರಿ

Last Updated 3 ಡಿಸೆಂಬರ್ 2020, 7:09 IST
ಅಕ್ಷರ ಗಾತ್ರ

ಕಲಬುರ್ಗಿ: ಅಂಧತ್ವವನ್ನು ಶಾಪ ಎಂದು ಭಾವಿಸುವವರೇ ಹೆಚ್ಚು. ಆದರೆ, ಅದನ್ನು ಮೀರಿ ಶೈಕ್ಷಣಿಕ, ಸಾಹಿತ್ಯಿಕ ಕ್ಷೇತ್ರದಲ್ಲಿ ಸಾಧನೆ ಮಾಡಿದ್ದಾರೆ ಕಲಬುರ್ಗಿ ಜಿಲ್ಲೆಯ ಡಾ.ಶಿವರಾಜ ಶಾಸ್ತ್ರಿ ಹೇರೂರ.

ಕಮಲಾಪುರ ತಾಲ್ಲೂಕಿನ ವಿ.ಕೆ.ಸಲಗರ ಗ್ರಾಮದ ಶಿವರಾಜ ಶಾಸ್ತ್ರಿ ಅವರು ಸದ್ಯ ಕಲಬುರ್ಗಿಯ ಶರಣಬಸವೇಶ್ವರ ಕಲಾ ಮಹಾವಿದ್ಯಾಲಯದಲ್ಲಿ ಕನ್ನಡ ಪ್ರಾಧ್ಯಾಪಕರಾಗಿದ್ದಾರೆ. ಅಲ್ಲದೆ, ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಸಮುದಾಯ ರೇಡಿಯೊ ಕೇಂದ್ರ ‘ಅಂತರ್‌ ವಾಣಿ’ಯ ನಿರ್ದೇಶಕರಾಗಿಯೂ ಸೇವೆ ಸಲ್ಲಿಸುತ್ತಿದ್ದಾರೆ.

ಬೆಂಗಳೂರು ವಿಶ್ವವಿದ್ಯಾಲಯದಿಂದ ಬಿ.ಎ, ಎಂ.ಎ ಮತ್ತು ಗುಲಬರ್ಗಾ ವಿಶ್ವವಿದ್ಯಾಲಯದಿಂದ ಎಂ.ಫಿಲ್, ಪಿಎಚ್‌.ಡಿ ಪದವಿ ಪಡೆದಿರುವ ಅವರು ಪ್ರಜ್ಞೆ, ದಿವ್ಯಾಂಗ ದೀಪ್ತಿ ಕವನ ಸಂಕಲನಗಳು, ಶರಣಬಸವ ಮಹಾದಾಸೋಹ ದರ್ಶನಂ ಎಂಬ ಮಹಾಕಾವ್ಯ ಬರೆದಿದ್ದಾರೆ.

‘ಕಲಬುರ್ಗಿಯ ಅಂಧ ಬಾಲಕರ ಶಾಲೆಯಲ್ಲಿ 1 ರಿಂದ 7ನೇ ತರಗತಿವರೆಗೆ ಓದಿದೆ. ನಂತರ ಶಿಕ್ಷಣ ಮುಂದುವರಿಸಬೇಕು ಎಂಬ ಆಸೆ ಮೂಡಿತು. ಆಗ ರಾಜ್ಯದಲ್ಲಿ ಮೈಸೂರಿನಲ್ಲಿ ಮಾತ್ರ ಅಂಧ ಬಾಲಕರ ಪ್ರೌಢಶಾಲೆ ಇತ್ತು. ಅಲ್ಲಿ ಪ್ರೌಢಶಿಕ್ಷಣ ಪೂರೈಸಿದೆ. ನಂತರ ಬೆಂಗಳೂರಿನ ಸರ್ಪಭೂಷಣ ಮಠದಲ್ಲಿ ಆಶ್ರಯ ಪಡೆದು ಓದಿದೆ’ ಎನ್ನುತ್ತಾರೆ ಶಿವರಾಜ ಶಾಸ್ತ್ರಿ.

‘ಎಂ.ಎ ಓದುತ್ತಿದ್ದಾಗ ಡಾ.ಕೆ.ವಿ.ನಾರಾಯಣ, ಡಾ.ಎಂ.ಚಿದಾನಂದ ಮೂರ್ತಿ, ಬರಗೂರು ರಾಮಂದ್ರಪ್ಪ, ಹಂಪ ನಾಗರಾಜಯ್ಯ, ಡಿ.ಆರ್‌.ನಾಗರಾಜ, ಕೀ.ರಂ.ನಾಗರಾಜ ರಂತಹ ಗುರು ಗಳ ಮಾರ್ಗದರ್ಶನ ದೊರೆಯಿತು. ಇದರಿಂದ ಸಾಹಿತ್ಯದಲ್ಲಿ ಆಸಕ್ತಿ ಮೂಡಿತು’.

‘ಬೆಂಗಳೂರು ವಿಶ್ವವಿದ್ಯಾಲಯದ ಕನ್ನಡ ವಿಭಾಗದಲ್ಲಿ ಮೊದಲ ಅಂಧ ವಿದ್ಯಾರ್ಥಿ ನಾನು. ಅಲ್ಲದೆ, ಕನ್ನಡದಲ್ಲಿ ಪಿಎಚ್‌.ಡಿ ಪಡೆದ ಮೊದಲ ಅಂಧ ಎಂಬ ಹೆಮ್ಮೆಯೂ ನನಗೆ ಇದೆ. ನಮ್ಮದು ಬಡ ಮಧ್ಯಮ ವರ್ಗದ ಕುಟುಂಬ. ಬಡತನದ ನಡುವೆಯೂ ನನ್ನ ತಂದೆ ಓದಿಸಿದರು. ಕಠಿಣ ಪರಿಶ್ರಮ, ಛಲ ಮತ್ತು ಆತ್ಮವಿಶ್ವಾಸದಿಂದ ಸಾಧನೆ ಮಾಡಬಹುದು ಎಂಬುದಕ್ಕೆ ನಾನೇ ಸಾಕ್ಷಿ’ಎನ್ನುತ್ತಾರೆ ಅವರು.

‘ಪ್ರಸ್ತುತ ಅಂಧರು ಸಾಕಷ್ಟು ನೋವು, ಅವಮಾನ ಎದುರಿಸುತ್ತಿದ್ದಾರೆ. ನಾನೂ ಹಲವು ಕಷ್ಟಗಳನ್ನು ಎದುರಿಸಿಯೇ ಈ ಹಂತಕ್ಕೆ ಬಂದಿದ್ದೇನೆ. ಎಲ್ಲ ಅನುಭವಗಳ ಕುರಿತು ‘ಆತ್ಮಕಥೆ’ ಬರೆಯಬೇಕೆಂದಿದ್ದೇನೆ. ಅದರ ಸಿದ್ಧತೆ ನಡೆಯುತ್ತಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT