ಬೆಂಗಳೂರು: ತೆರಿಗೆಗೆ ಸಂಬಂಧಿಸಿದ ಪ್ರಕರಣವೊಂದನ್ನು ಕೈಬಿಡಲು ವ್ಯಕ್ತಿಯೊಬ್ಬರಿಂದ ₹ 2.5 ಲಕ್ಷ ಲಂಚ ಪಡೆದಿದ್ದ ಪ್ರಕರಣದಲ್ಲಿ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳಾದ ಅಭಿಷೇಕ್ ತ್ರಿಪಾಠಿ ಮತ್ತು ಅಲೋಕ್ ತಿವಾರಿ ಎಂಬುವವರಿಗೆ ಧಾರವಾಡದ ಸಿಬಿಐ ವಿಶೇಷ ನ್ಯಾಯಾಲಯ ತಲಾ ನಾಲ್ಕು ವರ್ಷಗಳ ಕಠಿಣ ಜೈಲು ಶಿಕ್ಷೆ ಹಾಗೂ ತಲಾ ₹ 1.10 ಲಕ್ಷ ದಂಡ ವಿಧಿಸಿದೆ.
ಬೆಳಗಾವಿ ಮತ್ತು ವಿಜಯಪುರದಲ್ಲಿ ಕರ್ತವ್ಯಕ್ಕೆ ನಿಯೋಜಿತರಾಗಿದ್ದ ಅಭಿಷೇಕ್ ಹಾಗೂ ಅಲೋಕ್ ಮೂಲದಲ್ಲಿ ಕಡಿತ ಮಾಡಿದ ತೆರಿಗೆಯ (ಟಿಡಿಎಸ್) ಪಾವತಿ ವಿಳಂಬ ಮಾಡಿದ ಆರೋಪದ ಮೇಲೆ ಈ ಅಧಿಕಾರಿಗಳು ಉದ್ದಿಮೆಯೊಂದರ ಮಾಲೀಕರಿಗೆ ನೋಟಿಸ್ ಜಾರಿ ಮಾಡಿದ್ದರು. ಈ ಸಂಬಂಧ ಅಧಿಕಾರಿಗಳನ್ನು ಭೇಟಿಮಾಡಿದಾಗ ಪ್ರಕರಣ ಕೈಬಿಡಲು ₹ 4 ಲಕ್ಷ ಲಂಚ ನೀಡುವಂತೆ ಬೇಡಿಕೆ ಇಟ್ಟಿದ್ದರು. ನಂತರ ಚೌಕಾಸಿ ಮಾಡಿದಾಗ ₹ 2.5 ಲಕ್ಷ ನೀಡಿದರೆ ಪ್ರಕರಣ ಕೈಬಿಡುವ ಭರವಸೆ ನೀಡಿದ್ದರು. ಲಂಚದ ಬೇಡಿಕೆ ಕುರಿತು ಉದ್ಯಮಿ ಸಿಬಿಐಗೆ ದೂರು ನೀಡಿದ್ದರು.
2016ರ ಏಪ್ರಿಲ್‌ನಲ್ಲಿ ಲಂಚ ಪಡೆಯುತ್ತಿದ್ದಾಗ ಇಬ್ಬರೂ ಅಧಿಕಾರಿಗಳನ್ನು ಸಿಬಿಐ ಅಧಿಕಾರಿಗಳು ಬಂಧಿಸಿದ್ದರು. ಆರೋಪಿಗಳ ಪರವಾಗಿ ಲಂಚದ ಹಣ ಪಡೆದಿದ್ದ ವಾಹನ ಚಾಲಕ ಸುನಿಲ್ ಜಾಧವ್ ಎಂಬುವವರನ್ನೂ ಬಂಧಿಸಲಾಗಿತ್ತು. ಪ್ರಕರಣದ ತನಿಖೆ ನಡೆಸಿದ್ದ ಸಿಬಿಐ ಅಧಿಕಾರಿಗಳು, ನ್ಯಾಯಾಲಯಕ್ಕೆ ಆರೋಪಪಟ್ಟಿ ಸಲ್ಲಿಸಿದ್ದರು.
ಪ್ರಕರಣದ ವಿಚಾರಣೆ ಪೂರ್ಣಗೊಳಿಸಿ ಗುರುವಾರ ತೀರ್ಮಾನ ಪ್ರಕಟಿಸಿದ ಧಾರವಾಡದ ಸಿಬಿಐ ಪ್ರಕರಣಗಳ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಎನ್. ಸುಬ್ರಮಣ್ಯ, ‘ಲಂಚ ಪ್ರಕರಣದಲ್ಲಿ ಅಭಿಷೇಕ್ ತ್ರಿಪಾಠಿ ಮತ್ತು ಅಲೋಕ್ ತಿವಾರಿ ವಿರುದ್ಧದ ಆರೋಪಗಳು ಸಾಬೀತಾಗಿವೆ’ ಎಂದರು. ವಾಹನ ಚಾಲಕ ಸುನಿಲ್ ಜಾಧವ್ ಅವರನ್ನು ಆರೋಪ ಮುಕ್ತಗೊಳಿಸಿ ಆದೇಶ ಹೊರಡಿಸಿದರು.
ಭ್ರಷ್ಟಾಚಾರ ನಿಯಂತ್ರಣ ಕಾಯ್ದೆಯ ಅಡಿಯಲ್ಲಿ ಇಬ್ಬರೂ ಅಪರಾಧಿಗಳಿಗೆ ತಲಾ ನಾಲ್ಕು ವರ್ಷಗಳ ಕಠಿಣ ಜೈಲು ಶಿಕ್ಷೆ ಮತ್ತು ತಲಾ ₹ 1.10 ಲಕ್ಷ ದಂಡ ವಿಧಿಸಿದರು. ದಂಡ ಪಾವತಿಗೆ ತಪ್ಪಿದಲ್ಲಿ ಇಬ್ಬರಿಗೂ ಹೆಚ್ಚುವರಿಯಾಗಿ ತಲಾ ನಾಲ್ಕು ತಿಂಗಳ ಕಠಿಣ ಜೈಲು ಶಿಕ್ಷೆ ವಿಧಿಸುವಂತೆ ಆದೇಶಿಸಿದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.