ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಎಸ್‌ವೈ ರಾಜೀನಾಮೆ ಹೇಳಿಕೆ | ಸಹಿ ಸಂಗ್ರಹ; ಪರ–ವಿರೋಧ

ಮತ್ತೊಂದು ರಾಜಕೀಯ ಪರ್ವ
Last Updated 7 ಜೂನ್ 2021, 20:55 IST
ಅಕ್ಷರ ಗಾತ್ರ

ಬೆಂಗಳೂರು: ‘ಮುಖ್ಯಮಂತ್ರಿಯಾಗಿಬಿ.ಎಸ್‌.ಯಡಿಯೂರಪ್ಪ ಅವರೇ ಮುಂದುವರಿಯಬೇಕು’ ಎಂದು ಪಕ್ಷದ ವರಿಷ್ಠರನ್ನು ಒತ್ತಾಯಿಸಲು ಸಹಿ ಸಂಗ್ರಹ ಆರಂಭಿಸಿರುವುದಾಗಿ ಶಾಸಕ ಎಂ.ಪಿ.ರೇಣುಕಾಚಾರ್ಯ ಹೇಳಿರುವ ಬೆನ್ನಲ್ಲೇ, ಹಿರಿಯ ಸಚಿವರಾದ ಆರ್‌.ಅಶೋಕ ಮತ್ತುಕೆ.ಎಸ್‌.ಈಶ್ವರಪ್ಪ ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

‘ವರಿಷ್ಠರು ಹೇಳಿದರೆ ರಾಜೀನಾಮೆ ಕೊಡಲು ಸಿದ್ಧ’ ಎಂಬ ಯಡಿಯೂರಪ್ಪ ಹೇಳಿಕೆ ರಾಜಕೀಯ ವಲಯದಲ್ಲಿ ಸಂಚಲನಕ್ಕೆ ಕಾರಣವಾಗಿತ್ತು. ಸಂಪುಟದ ಬಹುತೇಕ ಸಚಿವರು ಮತ್ತು ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ನಳಿನ್‌ ಕುಮಾರ್ ಕಟೀಲ್ ಅವರು ಯಡಿಯೂರಪ್ಪ ಅವರೇ ಮುಖ್ಯಮಂತ್ರಿಯಾಗಿ ಮುಂದುವರಿಯುತ್ತಾರೆ ಎಂದು ಸಮಜಾಯಿಷಿ ನೀಡಿದ್ದರು. ‘ಯಡಿಯೂರಪ್ಪ ಅವರ ನಾಯಕತ್ವದಲ್ಲೇ ಸರ್ಕಾರ ರಚಿಸಿದ್ದೇವೆ, ಹೈಕಮಾಂಡ್‌ ವಿಶ್ವಾಸ ಅವರ ಮೇಲಿದೆ’ ಎಂದು ಸಚಿವರು ಪ್ರತಿಪಾದಿಸಿದ್ದರು.

ಇಷ್ಟೆಲ್ಲ ಆದ ಮೇಲೂ ಸಹಿ ಸಂಗ್ರಹ ಆರಂಭಿಸುವುದಾಗಿ ರೇಣುಕಾಚಾರ್ಯ ನೀಡಿದ ಹೇಳಿಕೆಗೆ ಮುಖ್ಯಮಂತ್ರಿಯಾದಿಯಾಗಿ ಹಲವು ನಾಯಕರು ಪ್ರತಿಕ್ರಿಯಿಸಿದ್ದಾರೆ.

‘ಬಿಜೆಪಿಯಲ್ಲಿ ಅಂತಹ ಚಟುವಟಿಕೆಗೆ ಅವಕಾಶವೇ ಇಲ್ಲ, ಅದನ್ನು ಒಪ್ಪಲಾಗದು’ ಎಂದು ಸಚಿವರು ಪ್ರತಿಪಾದಿಸಿದ್ದಾರೆ.

ರೇಣುಕಾಚಾರ್ಯ ಹೇಳಿದ್ದೇನು: ‘ನನ್ನ ಬಳಿ 65 ಕ್ಕೂ ಹೆಚ್ಚು ಶಾಸಕರ ಸಹಿ ಸಂಗ್ರಹದ ಪತ್ರವಿದೆ. ಕೋವಿಡ್‌ ಸಂಕಷ್ಟ ಮುಗಿದ ಬಳಿಕ ಆ ಪತ್ರವನ್ನು ವರಿಷ್ಠರಿಗೆ ನೀಡಲಾಗುವುದು’ ಎಂದು ರೇಣುಕಾಚಾರ್ಯ ಹೇಳಿದರು.

‘ಯಡಿಯೂರಪ್ಪ ಅವರ ವಿರುದ್ಧ ಮಾತನಾಡುವವರಿಂದ ಪಕ್ಷ ಮತ್ತು ಸರ್ಕಾರದ ವರ್ಚಸ್ಸಿಗೆ ಧಕ್ಕೆ ಆಗುತ್ತಿದೆ. ಆ ರೀತಿ ಹಾನಿ ಮಾಡುವವರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು ಎಂಬುದು ನಮ್ಮ ಆಗ್ರಹ. ಯಡಿಯೂರಪ್ಪ ನಾಯಕತ್ವದ ಪರ ಸಹಿ ಹಾಕಿರುವ ಪತ್ರದಲ್ಲಿ ಈ ಬೇಡಿಕೆಯೂ ಇದೆ. ಈ ಸಹಿ ಸಂಗ್ರಹದ ಹಿಂದೆ ವಿಜಯೇಂದ್ರ ಅವರು ಇದ್ದಾರೆ ಎಂಬ ಮಾತುಗಳಲ್ಲಿ ಹುರುಳಿಲ್ಲ. ವಿಜಯೇಂದ್ರ ಮಾತು ಕೇಳಿ ಮಾಡುವಂತಹದ್ದು ನನಗೇನಿದೆ’ ಎಂದು ಅವರು ಪ್ರಶ್ನಿಸಿದರು.

‘ಶಾಸಕ ಬಸನಗೌಡ ಪಾಟೀಲ ಯತ್ನಾಳ ನಿತ್ಯವೂ ಹುಚ್ಚು ಹುಚ್ಚಾಗಿ ಮಾತನಾಡುತ್ತಾರೆ. ಪ್ರತಿಪಕ್ಷಗಳು ಇದನ್ನು ಅಸ್ತ್ರವಾಗಿ ಬಳಸಿಕೊಳ್ಳುತ್ತಿವೆ. ಕೆಲವು ನಾಯಕರು ಪಕ್ಕದ ಕ್ಷೇತ್ರವನ್ನು ಗೆಲ್ಲಿಸಿಕೊಳ್ಳುವ ಸಾಮರ್ಥ್ಯ ಇಲ್ಲದೇ ಇದ್ದರೂ, ಯಡಿಯೂರಪ್ಪ ಬಗ್ಗೆ ಮಾತನಾಡುತ್ತಾರೆ. ನಾವು ಯಡಿಯೂರಪ್ಪ ಅವರ ಜತೆಗಿದ್ದೇವೆ. ಅವರು ರಾಜೀನಾಮೆ ನೀಡಬೇಕಾಗಿಲ್ಲ’ ಎಂದು ರೇಣುಕಾಚಾರ್ಯ ತಿಳಿಸಿದರು.

ಸಹಿ ಸಂಗ್ರಹ ಬೇಡ: ಮುಖ್ಯಮಂತ್ರಿ:

ಪ್ರತಿಯೊಬ್ಬ ಬಿಜೆಪಿ ಶಾಸಕರು ತಮ್ಮ ತಮ್ಮ ವಿಧಾನಸಭಾ ಕ್ಷೇತ್ರಗಳಲ್ಲಿ ಕೋವಿಡ್‌ ನಿಯಂತ್ರಣ ಕಾರ್ಯಗಳಿಗೆ ಆದ್ಯತೆ ನೀಡಬೇಕು. ಯಾರೂ ಸಹಿ ಸಂಗ್ರಹಿಸಬಾರದು ಮತ್ತು ರಾಜಕೀಯ ಹೇಳಿಕೆ ನೀಡಬಾರದು. ಸಂಕಷ್ಟದಲ್ಲಿರುವ ಜನರಿಗೆ ನೆರವಾಗಬೇಕು ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಟ್ವೀಟ್‌ ಮಾಡಿದ್ದಾರೆ.

ಸಹಿ ಸಂಗ್ರಹ ಸಲ್ಲದು: ಅಶೋಕ

ಪಕ್ಷದಲ್ಲಿ ಯಾರೂ ಪರ– ವಿರೋಧದ ಹೇಳಿಕೆಗಳನ್ನು ನೀಡಬಾರದು. ಸಹಿ ಸಂಗ್ರಹವನ್ನೂ ಮಾಡಬಾರದು. ಮುಖ್ಯಮಂತ್ರಿಯವರ ಬಗ್ಗೆ ಹೇಳಿಕೆ ನೀಡುವುದರಿಂದ ಅನಗತ್ಯ ಗೊಂದಲ ಸೃಷ್ಟಿಯಾಗುತ್ತದೆ ಎಂದು ಕಂದಾಯ ಸಚಿವ ಆರ್‌.ಅಶೋಕ ಹೇಳಿದರು.

ಸಹಿ ಸಂಗ್ರಹಿಸುವ ವ್ಯವಸ್ಥೆ ಇಲ್ಲ: ಈಶ್ವರಪ್ಪ

‘ನಾಯಕತ್ವದ ಬಗ್ಗೆ ಶಾಸಕರಿಂದ ಸಹಿ ಸಂಗ್ರಹಿಸುವ ವ್ಯವಸ್ಥೆ ಬಿಜೆಪಿಯೊಳಗೆ ಇಲ್ಲ. ಶಾಸಕ ರೇಣುಕಾಚಾರ್ಯ ಅವರಿಗೆ ಸಹಿ ಸಂಗ್ರಹದ ಕುರಿತು ಯಾರೂ ಹೇಳಿಲ್ಲ. ಅವರು ಹೇಳಿದ್ದನ್ನೇ ಮತ್ತೆ ಮತ್ತೆ ಹೇಳುತ್ತಾರೆ’ ಎಂದು ಪಂಚಾಯತ್‌ ರಾಜ್ ಸಚಿವ ಕೆ.ಎಸ್‌. ಈಶ್ವರಪ್ಪ ತಿಳಿಸಿದರು.

ಹಳೇ ಪತ್ರ ಬಳಕೆ: ಬೆಲ್ಲದ್

‘ಮುಖ್ಯಮಂತ್ರಿ ಪರ ಅಥವಾ ವಿರುದ್ಧ ಸಹಿ ಸಂಗ್ರಹ ನಡೆದಿಲ್ಲ. ಹಿಂದೊಮ್ಮೆ ವಿಧಾನಮಂಡಲ ಅಧಿವೇಶನ ನಡೆಯುವಾಗ ಗ್ರಾಮೀಣಾಭಿವೃದ್ಧಿ ಇಲಾಖೆಯಿಂದ ಅನುದಾನ ಬಿಡುಗಡೆ ಮಾಡುವಂತೆ ಕೋರಿ 65 ಶಾಸಕರು ಸಹಿ ಹಾಕಿದ್ದ ಪತ್ರವನ್ನು ಸಚಿವರಿಗೆ ನೀಡಲಾಗಿತ್ತು. ಅದನ್ನೇ ಬಳಸಿರಬಹುದು’ ಎಂದು ಶಾಸಕ ಅರವಿಂದ ಬೆಲ್ಲದ್ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT