ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವರಿಷ್ಠರೊಂದಿಗೆ ಭೇಟಿ: ಕೊನೆ ಕ್ಷಣದವರೆಗೆ ವಿಜಯೇಂದ್ರ ವಿಫಲ ಯತ್ನ!

ನಿರಾಣಿಗೆ ದೊರೆಯದ ಅವಕಾಶ
Last Updated 26 ಜುಲೈ 2021, 20:11 IST
ಅಕ್ಷರ ಗಾತ್ರ

ನವದೆಹಲಿ: ವರಿಷ್ಠರ ಭೇಟಿಗಾಗಿ ಜುಲೈ 16ರಂದು ದೆಹಲಿಗೆ ಬಂದಿದ್ದ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರ ಜೊತೆಗೇ ಇದ್ದ ಪುತ್ರ ಬಿ.ವೈ. ವಿಜಯೇಂದ್ರ, ತಂದೆಯ ಅಧಿಕಾರ ರಕ್ಷಣೆಗಾಗಿ ಕೊನೆಯ ಕ್ಷಣದವರೆಗೂ ಪ್ರಯತ್ನ ನಡೆಸಿ ವಿಫಲರಾದರು.

ಕಳೆದ ಶುಕ್ರವಾರ ಮತ್ತೆ ದೆಹಲಿಗೆ ಬಂದು, ನಾಲ್ಕು ದಿನ ದೆಹಲಿಯಲ್ಲೇ ಬೀಡುಬಿಟ್ಟಿದ್ದ ಅವರು, ಪಕ್ಷದ ವರಿಷ್ಠರನ್ನು ಭೇಟಿಯಾಗಿ ಕೊನೆ ಹಂತದ ಮಾತುಕತೆ ನಡೆಸಿ ಸಫಲವಾಗದ್ದರಿಂದ, ವರಿಷ್ಠರಿಗೆ ಅತ್ಯಂತ ಆಪ್ತರಾದವರನ್ನೂ ಭೇಟಿ ಮಾಡಿ ತಂದೆಯ ಪರ ವಕಾಲತ್ತು ವಹಿಸುವಂತೆಯೂ ಯತ್ನಿಸಿದ್ದರು ಎಂದು ತಿಳಿದುಬಂದಿದೆ.

ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಸ್ಥಾನದಲ್ಲೇ ಮುಂದುವರಿಸುವಂತೆ ಭಾನುವಾರ ತಡ ರಾತ್ರಿಯವರೆಗೂ ನಡೆಸಿದ ಯತ್ನ ಫಲಿಸದ್ದರಿಂದ ಸೋಮವಾರ ನಸುಕಿನಲ್ಲಿ ಅವರು ಬೆಂಗಳೂರಿಗೆ ಮರಳಿದ್ದಾರೆ.

ಗುಜರಾತ್‌ ಮೂಲದ ಕೆಲವು ಉದ್ಯಮಿಗಳು ಹಾಗೂ ಪಕ್ಷದ ಪ್ರಮುಖರ ನೆರವಿನೊಂದಿಗೆ ವರಿಷ್ಠರ ಮನವೊಲಿಸುವ ಅವರ ಪ್ರಯತ್ನಕ್ಕೆ ಫಲ ದೊರೆಯಲಿಲ್ಲ. ಆದರೆ, ಒಂದೊಮ್ಮೆ ಯಡಿಯೂರಪ್ಪ ಅವರ ರಾಜೀನಾಮೆ ಪಡೆದಲ್ಲಿ, ಹೊಸಬರ ನೇತೃತ್ವದಲ್ಲಿನ ಸರ್ಕಾರದಲ್ಲಿ ಸೂಕ್ತ ಸ್ಥಾನಮಾನವನ್ನು ನೀಡುವಂತೆಯೂ ವಿಜಯೇಂದ್ರ ಮನವಿ ಮಾಡಿಕೊಂಡಿದ್ದಾರೆ. ಅದಕ್ಕೆ, ವರಿಷ್ಠರಿಂದ ‘ನೋಡೋಣ’ ಎಂಬ ಪ್ರತಿಕ್ರಿಯೆ ದೊರೆತಿದೆ ಎನ್ನಲಾಗಿದೆ.

ಯಡಿಯೂರಪ್ಪ ಅವರಿಗೆ ಒಂದು ವರ್ಷದ ಅವಧಿಗೆ ಮಾತ್ರ ಪಕ್ಷದ ಹೈಕಮಾಂಡ್‌ ಅವಕಾಶ ನೀಡಿತ್ತು. ಕೊರೊನಾ ಮತ್ತು ಲಾಕ್‌ಡೌನ್‌ ಹಿನ್ನೆಲೆಯಲ್ಲಿ ಅದನ್ನು ಎರಡು ವರ್ಷಕ್ಕೆ ವಿಸ್ತರಿಸಲಾಗಿತ್ತು. ಸರ್ಕಾರವು ಪ್ರವಾಹ, ಕೊರೊನಾ ಸಂಕಷ್ಟದ ಸ್ಥಿತಿಯನ್ನು ಸಮರ್ಪಕವಾಗಿ ನಿರ್ವಹಿಸಿದೆ ಎಂದೂ ಅವರು ಮನವರಿಕೆ ಮಾಡಿದರು. ಆದರೆ, ವರಿಷ್ಠರು ಒಪ್ಪಲಿಲ್ಲ ಎಂದು ಪಕ್ಷದ ಮೂಲಗಳು ಹೇಳಿವೆ.

ನಿರಾಣಿ ಯತ್ನ:ಭಾನುವಾರ ಸಂಜೆ ದೆಹಲಿಗೆ ಬಂದು ವರಿಷ್ಠರ ಭೇಟಿಗಾಗಿ ಪ್ರಯತ್ನ ನಡೆಸಿದ್ದ ಮುಖ್ಯಮಂತ್ರಿ ಸ್ಥಾನದ ಪ್ರಬಲ ಆಕಾಂಕ್ಷಿ ಮುರುಗೇಶ ನಿರಾಣಿ ಸೋಮವಾರ ಬೆಂಗಳೂರಿಗೆ ಮರಳಿದ್ದಾರೆ.

ಕೆಲವು ಆಪ್ತರ ಸಹಾಯದೊಂದಿಗೆ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಹಾಗೂ ಕೇಂದ್ರದ ಗೃಹ ಸಚಿವ ಅಮಿತ್ ಶಾ ಅವರ ಭೇಟಿಗೆ ನಿರಾಣಿ ಸಮಯ ಕೇಳಿದ್ದರು. ಆದರೆ, ವರಿಷ್ಠರು ಅವರ ಮನವಿಗೆ ಸ್ಪಂದಿಸಲಿಲ್ಲ ಎಂದು ತಿಳಿದುಬಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT