ಶುಕ್ರವಾರ, ಡಿಸೆಂಬರ್ 3, 2021
25 °C
ವಚನದ ಉದಾಹರಣೆ ನೀಡಿ, ಬದಲಾಗಲು ಸಲಹೆ ನೀಡಿದ ಚಾಮರಾಜಪೇಟೆ ಶಾಸಕ

ನನ್ನ ಫ್ಲ್ಯಾಟ್‌ನಲ್ಲಿ ನೀವು ಮಾಡಿದ್ದ ಡೀಲ್‌ ಏನು? ಎಚ್ಡಿಕೆಗೆ ಜಮೀರ್‌ ಪ್ರಶ್ನೆ

ಪ್ರಜಾವಾಣಿ ವೆಬ್‌ಡೆಸ್ಕ್‌ Updated:

ಅಕ್ಷರ ಗಾತ್ರ : | |

ಬೆಂಗಳೂರು: ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್‌.ಡಿ ಕುಮಾರಸ್ವಾಮಿ ವಿರುದ್ಧ ಶಾಸಕ ಜಮೀರ್‌ ಅಹಮದ್‌ ಖಾನ್‌ ವಾಗ್ದಾಳಿ ಮುಂದುವರಿಸಿದ್ದಾರೆ. ವಿಧಾನ ಪರಿಷತ್‌ ಚುನಾವಣೆಯಲ್ಲಿ ಬೈರತಿ ಸುರೇಶ್‌ ಮತ್ತು ಎಚ್‌.ಡಿ ಕುಮಾರಸ್ವಾಮಿ ಅವರ ನಡುವೆ ಡೀಲ್‌ ನಡೆದಿತ್ತು ಎಂದೂ ಅವರು ಆರೋಪಿಸಿದ್ದಾರೆ.

ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರನ್ನು ‘ಅಲ್ಪಸಂಖ್ಯಾತರ ಟರ್ಮಿನೇಟರ್‌’ ಎಂದು ಎಚ್‌.ಡಿ ಕುಮಾರಸ್ವಾಮಿ ಅವರು ಶನಿವಾರ ಟೀಕಿಸಿದ್ದರು. ಈ ಬಗ್ಗೆ ಭಾನುವಾರ ಸರಣಿ ಟ್ವೀಟ್‌ ಮಾಡಿರುವ ಜಮೀರ್‌ ಅಹಮದ್‌ ನಿದರ್ಶನಗಳ ಸಹಿತ ಕುಮಾರಸ್ವಾಮಿ ಅವರನ್ನು ಟೀಕಿಸಿದ್ದಾರೆ.

‘ಕರ್ನಾಟಕದಲ್ಲಿ ಕಾಂಗ್ರೆಸ್ ಸೇರಿದಂತೆ ಹಲವು ಮಂದಿ ಮುಖ್ಯಮಂತ್ರಿಗಳು ಬಂದು ಹೋಗಿದ್ದಾರೆ. ಇವರಲ್ಲಿ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿ ಅಲ್ಪಸಂಖ್ಯಾತರ ಕಲ್ಯಾಣಕ್ಕಾಗಿ ಮಾಡಿದಷ್ಟು ಕೆಲಸವನ್ನು ಯಾರೂ ಮಾಡಿಲ್ಲ. ಕುಮಾರಸ್ವಾಮಿ ‌ ಅವರೇ ಬಹಿರಂಗ ಚರ್ಚೆಗೆ ಬಂದರೆ ನಾನು ಈ ಬಗ್ಗೆ ಮಾತನಾಡಲು ಸಿದ್ಧನಿದ್ದೇನೆ. ಇದು ನನ್ನ ಸವಾಲು,‘ ಎಂದು ಅವರು ಹೇಳಿದ್ದಾರೆ.

‘ನಮ್ಮ ನಾಯಕರಾದ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾದಾಗ ಅಲ್ಪಸಂಖ್ಯಾತರ ಇಲಾಖೆಯ ಬಜೆಟ್ ಕೇವಲ ರೂ.280 ಕೋಟಿ ಇತ್ತು. ಸಿದ್ದರಾಮಯ್ಯನವರು ಅದನ್ನು ರೂ.3150 ಕೋಟಿಗೆ ಹೆಚ್ಚಿಸಿದ್ದರು. ಸಮ್ಮಿಶ್ರ ಸರ್ಕಾರದಲ್ಲಿ ಕುಮಾರಸ್ವಾಮಿ ಈ ಬಜೆಟ್ ಅನುದಾನವನ್ನು ₹1800 ಕೋಟಿಗೆ ಇಳಿಸಿದ್ದರು. ಇದೇನಾ ಅಲ್ಪಸಂಖ್ಯಾತರ ಬಗೆಗಿನ ಕಾಳಜಿ? ಎಂದು ಪ್ರಶ್ನಿಸಿದ್ದಾರೆ.

‘ಇಕ್ಬಾಲ್ ಸರಡಗಿ ಅವರನ್ನು ಸೋಲಿಸಿದ್ದು ಸಿದ್ದರಾಮಯ್ಯ ಅವರಲ್ಲ, ಕುಮಾರಸ್ವಾಮಿ ‌. ಆ ವಿಧಾನಪರಿಷತ್ ಚುನಾವಣೆಯಲ್ಲಿ ಭೈರತಿ ಸುರೇಶ್ ಪಕ್ಷೇತರ ಅಭ್ಯರ್ಥಿಯಾಗಿದ್ದರು. ಜೆಡಿಎಸ್ ಪಕ್ಷದಲ್ಲಿ ಆಗ ಏಳೆಂಟು ಹೆಚ್ಚುವರಿ ಮತಗಳಿದ್ದವು. ಅದನ್ನು ಭೈರತಿ ಸುರೇಶ್ ಅವರಿಗೆ ಮಾರಾಟ ಮಾಡಿದ್ದು ಯಾರೆಂದು ನೆನಪಿದೆಯಾ? ಎಂದು ಮನವರಿಕೆ ಮಾಡಿದ್ದಾರೆ.

‘ಯುಬಿ ಸಿಟಿಯ ನನ್ನ ಫ್ಲಾಟ್ ನಲ್ಲಿ ನೀವಿದ್ದಾಗ ಆಗಿನ ಶಾಸಕ ಸುರೇಶ್ ಬಾಬು ಅವರು ಭೈರತಿ ಸುರೇಶ್ ಅವರನ್ನು ಕರೆದುಕೊಂಡು ಬಂದಿಲ್ಲವೇ? ಅಲ್ಲಿ ನಡೆದಿದ್ದ ಡೀಲ್ ಏನು? ಭೈರತಿ ಸುರೇಶ್ ಗೆಲ್ಲಿಸಿದರೆ ಅಲ್ಪಸಂಖ್ಯಾತ ಕೋಮಿಗೆ ಸೇರಿರುವ ಸರಡಗಿ ಸೋಲುತ್ತಾರೆ ಎಂದು ನಿಮಗೆ ಗೊತ್ತಿರಲಿಲ್ಲವೇ ಕುಮಾರಸ್ವಾಮಿ ಅವರೇ? ಎಂದು ಪ್ರಶ್ನೆ ಮಾಡಿದ್ದಾರೆ.

 

‘ಹೆಬ್ಬಾಳ ವಿಧಾನಸಭಾ ಕ್ಷೇತ್ರದಲ್ಲಿ ಜಾಫರ್ ಷರೀಫ್ ಮೊಮ್ಮಗ ಚುನಾವಣೆಗೆ ನಿಂತಾಗ ಕುಮಾರಸ್ವಾಮಿ ಅವರು ತಮ್ಮ ಪಕ್ಷದಿಂದ ಅಬ್ದುಲ್ ಅಜೀಂ ಅವರನ್ನು ಅಭ್ಯರ್ಥಿಯಾಗಿ ನಿಲ್ಲಿಸಿಲ್ಲವೇ? ರೆಹಮಾನ್ ಷರೀಫ್ ಮೇಲೆ ಅಷ್ಟೊಂದು ಪ್ರೀತಿ ಇದ್ದಿದ್ದರೆ ಮುಸ್ಲಿಂ ಅಭ್ಯರ್ಥಿಯನ್ನು ಎದುರಾಳಿಯಾಗಿ ಯಾಕೆ ನಿಲ್ಲಿಸಿದ್ದು? ಎಂದು ಅವರು ಕೇಳಿದ್ದಾರೆ.

’ಸಿದ್ದರಾಮಯ್ಯನವರು ಟಿಪ್ಪು ಜಯಂತಿಯನ್ನು ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ ನಲ್ಲಿ ಆಚರಿಸಿದ್ದರು. ಸಮ್ಮಿಶ್ರ ಸರ್ಕಾರದಲ್ಲಿ ಮುಖ್ಯಮಂತ್ರಿಯಾಗಿದ್ದ ಕುಮಾರಸ್ವಾಮಿ ಅವರು ಬ್ಯಾಂಕ್ವೆಟ್ ಹಾಲ್ ನಲ್ಲಿ ಟಿಪ್ಪು ಜಯಂತಿ ಆಚರಣೆಗೆ ಅವಕಾಶ ನಿರಾಕರಿಸಿದ್ದರು. ನಾನು ಗಲಾಟೆ ಮಾಡಿ ಅಲ್ಲಿಯೇ ಸಮಾರಂಭ ನಡೆಸಿದಾಗ ಅವರು ಸಮಾರಂಭಕ್ಕೂ ಬರಲಿಲ್ಲ,‘ ಎಂದು ಜಮೀರ್‌ ಹೇಳಿದ್ದಾರೆ.

‘ಹಜ್ ಯಾತ್ರೆ ಆರಂಭವಾದ ವರ್ಷದಿಂದ ಇಲ್ಲಿಯ ವರೆಗೆ ‌ಯಡಿಯೂರಪ್ಪ , ಜಗದೀಶ್ ಶೆಟ್ಟರ್, ಸದಾನಂದಗೌಡ ಸೇರಿದಂತೆ ಉಳಿದೆಲ್ಲ ಪಕ್ಷಗಳ ಮುಖ್ಯಮಂತ್ರಿಗಳು ಬಂದಿದ್ದರು. ಆದರೆ ಕುಮಾರಸ್ವಾಮಿ ಅವರು ಎಂದೂ ಬಂದಿಲ್ಲ. ಇದು ಅವರ ಅಲ್ಪಸಂಖ್ಯಾತರ ಬಗೆಗಿನ ನೈಜ ಪ್ರೀತಿ,‘ ಎಂದಿದ್ದಾರೆ.

‘ನಮ್ಮ ನಾಯಕರಾದ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿದ್ದ ಐದು ವರ್ಷವೂ ಹಜ್ ಯಾತ್ರೆಯ ಉದ್ಘಾಟನೆಗೆ ಬಂದಿದ್ದರು. ತಾಜ್ ವೆಸ್ಟಂಡ್ ಹೊಟೇಲ್ ನಲ್ಲಿದ್ದ ಕುಮಾರಸ್ವಾಮಿ ಅವರಿಗೆ ಒಂದು ಗಳಿಗೆ ಬಂದು ಹೋಗಿ ಎಂದು ಬೇಡಿಕೊಂಡಿದ್ದೆ, ಆದರೂ ಕಾರ್ಯಕ್ರಮಕ್ಕೆ ಬಂದಿಲ್ಲ. ಈಗ ಯಾಕೆ ಅಲ್ಪಸಂಖ್ಯಾತರ ಮೇಲೆ ಪ್ರೀತಿ ಬಂದಿದೆ? ‌ಓಟಿಗಾಗಿಯೇ?’ ಎಂದು ಪ್ರಶ್ನೆ ಎಸೆದಿದ್ದಾರೆ.

‘ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ‌ಒಬ್ಬ ಡೀಲ್ ಮಾಸ್ಟರ್. ದಿನದ 16 ಗಂಟೆ ಅವರ ಜೊತೆಗಿದ್ದವನು ನಾನು. ಅವರು ಲಾಭ ಇಲ್ಲದೆ ಏನೂ ಮಾಡುವುದಿಲ್ಲ. ಈಗ ಹಾನಗಲ್, ಸಿಂದಗಿಯಲ್ಲಿ ಬಿಜೆಪಿಗೆ ನೆರವಾಗುವ ಉದ್ದೇಶದಿಂದಲೇ ಮುಸ್ಲಿಂ ಅಭ್ಯರ್ಥಿಗಳನ್ನು ನಿಲ್ಲಿಸಿದ್ದು. ಇದೂ ಕೂಡ ಒಂದು ಡೀಲ್,‘ ಎಂದು ಆರೋಪಿಸಿದ್ದಾರೆ/

‘ಬಸವಕಲ್ಯಾಣದಲ್ಲಿಯೂ ಕುಮಾರಸ್ವಾಮಿ ಅವರು ಮುಸ್ಲಿಂ ಅಭ್ಯರ್ಥಿಯನ್ನು ಚುನಾವಣೆಗೆ ನಿಲ್ಲಿಸಿದ್ದರು. ಆ ಅಭ್ಯರ್ಥಿ ದರ್ಗಾದ ಗುರುಗಳಾಗಿದ್ದ ಕಾರಣ 12,000 ಮತಗಳು ಬಂದಿದ್ದವು. ಅದರಿಂದ ಗೆದ್ದವರು ಯಾರು? ಬಿಜೆಪಿ ಅಭ್ಯರ್ಥಿ ಅಲ್ಲವೇ? ಇವರು ಬಿಜೆಪಿಯ (ಬಿ)ಟೀಮ್ ಎಂದು ಹೇಳಲು ಬೇರೆ ಪುರಾವೆ ಯಾಕೆ ಬೇಕು?’ ಎಂದು ಮೂದಲಿಸಿದ್ದಾರೆ.

ಇತ್ತೀಚೆಗೆ ಜೆಡಿಎಸ್‌ ಜೊತೆಗೆ ಗುರುತಿಸಿಕೊಂಡಿರುವ ವಿಧಾನಪರಿಷತ್‌ ಸದಸ್ಯ ಸಿ.ಎಂ ಇಬ್ರಾಹಿಂ ಅವರ ವಿರುದ್ಧವೂ ಜಮೀರ್‌ ಕಿಡಿಕಾರಿದ್ದಾರೆ. ’ಸಿ.ಎಂ.ಇಬ್ರಾಹಿಂ ಅವರು ಈಗಲೂ ಕಾಂಗ್ರೆಸ್‌ನ ವಿಧಾನ ಪರಿಷತ್ ಸದಸ್ಯ. ಮೊನ್ನೆ ಮೊನ್ನೆಯವರೆಗೆ ಅವರು ಸಿದ್ದರಾಮಯ್ಯ ಅವರನ್ನು ಹೊಗಳುತ್ತಾ, ದೇವೇಗೌಡ ‌ ಮತ್ತು ಕುಮಾರಸ್ವಾಮಿ ಅವರನ್ನು ಬೈಯ್ಯುತ್ತಿದ್ದರು. ಈಗ ಪೂರ್ತಿ ಉಲ್ಟಾ ಹೊಡೆದಿದ್ದಾರೆ.‌ ಆತ್ಮಾಭಿಮಾನ ಇದ್ದರೆ ಇಬ್ರಾಹಿಂ ಮೊದಲು ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆ ನೀಡಲಿ,‘ ಎಂದಿದ್ದಾರೆ.

’2004 ರಲ್ಲಿ ಸಿ.ಎಂ ಇಬ್ರಾಹಿಂ ಅವರು ತನ್ನನ್ನು ರಾಜ್ಯಸಭಾ ಸದಸ್ಯನಾಗಿ ಮಾಡುವಂತೆ ದೇವೇಗೌಡ ಅವರನ್ನು ಬೇಡಿಕೊಂಡಿದ್ದರು. ಯಾಕೆ ಅವರನ್ನು ರಾಜ್ಯಸಭೆಗೆ ಕಳಿಸಿಲ್ಲ? ಅವರ ಅವಕಾಶಕ್ಕೆ ಅಡ್ಡಗಾಲು ಹಾಕಿದವರು ಯಾರು? ಕಾಂಗ್ರೆಸ್ ಪಕ್ಷವೇ? ಸಿದ್ದರಾಮಯ್ಯನವರಾ? ಇಲ್ಲವೇ ಕುಮಾರಸ್ವಾಮಿ ಅವರಾ? ಎಂದು ಪ್ರಶ್ನೆ ಕೇಳಿದ್ದಾರೆ.

‘2013ರ ವಿಧಾನಸಭಾ ಚುನಾವಣೆಯಲ್ಲಿ ಸಿ.ಎಂ.ಇಬ್ರಾಹಿಂ ಅವರಿಗೆ ಭದ್ರಾವತಿಯಲ್ಲಿ ಗೆಲ್ಲುವ ಅವಕಾಶವೇ ಇರಲಿಲ್ಲ. ಹಾಗಿದ್ದರೂ ಅವರ ಒತ್ತಡಕ್ಕೆ ಮಣಿದು ಸಿದ್ದರಾಮಯ್ಯ ಅವರು ಭದ್ರಾವತಿ ಕ್ಷೇತ್ರದ ಟಿಕೆಟ್ ನೀಡಿದರು. ಅಲ್ಲಿ ಸೋತು ಮೂರನೇ ಸ್ಥಾನಕ್ಕೆ ಹೋಗಿದ್ದರು,‘ ಎಂದು ತಿಳಿಸಿದ್ದಾರೆ.

‘ಸೋತು ಹೋಗಿದ್ದ ಇಬ್ರಾಹಿಂ ಅವರನ್ನು ಸಿದ್ದರಾಮಯ್ಯ ಅವರು ವಿಧಾನಪರಿಷತ್ ಸದಸ್ಯರನ್ನಾಗಿ ಮಾಡಿದ್ದರು. ಜೊತೆಯಲ್ಲಿ ಯೋಜನಾ ಆಯೋಗದ ಉಪಾಧ್ಯಕ್ಷರನ್ನಾಗಿ ನೇಮಿಸಿದರು. ಇಬ್ರಾಹಿಂ ಅವರಿಗೆ ಪಕ್ಷ ಮತ್ತು ಸಿದ್ದರಾಮಯ್ಯ ಇನ್ನೇನು ಮಾಡಬೇಕಾಗಿತ್ತು? ಎಂದು ಪ್ರಶ್ನೆ ಮಾಡಿದ್ದಾರೆ.

‘ಜೆಡಿಎಸ್ ಪಕ್ಷದ ಹೆಚ್ಚಿನ ಶಾಸಕರು ಹಾಸನ, ಮಂಡ್ಯ, ಮೈಸೂರು, ರಾಮನಗರ ಜಿಲ್ಲೆಗಳಿಗೆ ಸೇರಿದವರು. ಮುಸ್ಲಿಮರ ರಾಜಕೀಯ ಪ್ರಾತಿನಿಧ್ಯದ ಬಗ್ಗೆ ಇಷ್ಟೊಂದು ಕಾಳಜಿ ತೋರಿಸುವ ಕುಮಾರಸ್ವಾಮಿ ಅವರು ಆ ಜಿಲ್ಲೆಗಳ ಯಾವುದಾದರೂ ಒಂದೆರಡು ಕ್ಷೇತ್ರಗಳಲ್ಲಿ ಮುಸ್ಲಿಮರಿಗೆ ಯಾಕೆ ಟಿಕೆಟ್ ನೀಡಿ ಗೆಲ್ಲಿಸಬಾರದು? ಎಂದು ಸವಾಲು ಹಾಕಿದ್ದಾರೆ.

‘ನಾನು ಮುಖ್ಯಮಂತ್ರಿಯಾದರೆ ಬಿ.ಎಂ. ಫಾರೂಕ್ ಅವರನ್ನು ಉಪಮುಖ್ಯಮಂತ್ರಿ ಮಾಡಿ, ಗೃಹ ಖಾತೆ ನೀಡುತ್ತೇನೆ ಎಂದು ಕುಮಾರಸ್ವಾಮಿ 2018ರಲ್ಲಿ ಪ್ರಚಾರ ಭಾಷಣದಲ್ಲಿ ಭರವಸೆ ನೀಡಿದ್ದರು. ಕುಮಾರಸ್ವಾಮಿ ಮುಖ್ಯಮಂತ್ರಿಯಾದ ನಂತರ ಫಾರೂಕ್ ಅವರನ್ನು ಉಪಮುಖ್ಯಮಂತ್ರಿ ಬಿಡಿ ಕೊನೆಗೆ ಮಂತ್ರಿಯೂ ಮಾಡಲಿಲ್ಲ. ಬಳಸಿಕೊಂಡು ಬಿಸಾಡಿ ಬಿಟ್ಟರು’ ಎಂದಿದ್ದಾರೆ.

‘ರಾಜ್ಯ ಸಭಾ ಚುನಾವಣೆಯಲ್ಲಿ ಗೆಲ್ಲುವ ಅವಕಾಶ ಇದ್ದಾಗ ದೇವೇಗೌಡ‌ ಮತ್ತು ಕುಮಾರಸ್ವಾಮಿ ಸೇರಿಕೊಂಡು ರಾಮಸ್ವಾಮಿ, ವಿಜಯ್ ಮಲ್ಯ ಮತ್ತು ಕುಪೇಂದ್ರ ರೆಡ್ಡಿಯವರನ್ನು ಕಣಕ್ಕಿಳಿಸಿ ಗೆಲ್ಲಿಸಿದರು. ಸೋಲುವಾಗ ಫಾರುಕ್ ಅವರನ್ನು ನಿಲ್ಲಿಸಿ ಬಲಿಕೊಟ್ಟರು. ಇದಾ ನೀವು ಮುಸ್ಲಿಂ ನಾಯಕರನ್ನು ಬೆಳೆಸಿದ್ದು’ ಎಂದು ಜೆಡಿಎಸ್‌ ನಾಯಕರನ್ನು ಜಮೀರ್‌ ಕೇಳಿದ್ದಾರೆ.

‘ರಾಜ್ಯಸಭಾ ಚುನಾವಣೆಯಲ್ಲಿ ಸೋತು ನನಗೆ ಅವಮಾನ ಆಗುತ್ತಿದೆ, ಮಂತ್ರಿಯನ್ನಾದರೂ ಮಾಡಿ ಎಂದು ಫಾರೂಕ್ ನಿಮ್ಮ ಬಳಿ ದಮ್ಮಯ್ಯ ಎಂದು ಕೇಳಿಕೊಂಡರು, ಹೋಗಲಿ ಅವರನ್ನು ಮಂತ್ರಿಯಾದ್ರೂ ಮಾಡಿದ್ರಾ ಕುಮಾರಸ್ವಾಮಿ ಅವರೇ? ನೀವು ಮುಸ್ಲಿಂ ಸಮುದಾಯದ ಬಗ್ಗೆ ಕಾಳಜಿ ಇಟ್ಟುಕೊಂಡಿರುವವರಾ? ಎಂದು ಜಮೀರ್‌ ಅವರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

‘ಮಾಜಿ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಅವರು ಮುಸ್ಲಿಮರ ರಾಜಕೀಯ ನರಮೇಧ ನಡೆಸಿದ್ದಾರೆ ಎಂದು ಸನ್ಮಾನ್ಯ ಕುಮಾರಸ್ವಾಮಿ ಹೇಳಿದ್ದಾರೆ. ನರಮೇಧದಂತಹ ಶಬ್ದ ಬಳಸುವಾಗ ಅವರು ಎಚ್ಚರಿಕೆಯಿಂದ ಇರಬೇಕಾಗಿತ್ತು. ಅವರಿಗೆ ಅವರ ನಡೆ-ನುಡಿಯ ಮೇಲೆ ಯಾವ ನಿಯಂತ್ರಣವೂ ಇಲ್ಲ. ಅಂತಹ ಶಬ್ದ ಬಳಕೆಯನ್ನು ನಾನು ಖಂಡಿಸುತ್ತೇನೆ,’ ಎಂದು ತಿಳಿಸಿದ್ದಾರೆ.

‘ನಿಜ, ಚಕ್ರ ತಿರುಗುತ್ತಿದೆ. ನಿಮ್ಮ ಒಂದೊಂದೇ ಬಣ್ಣ ಬಯಲಾಗಲು ಆರಂಭವಾಗಿದೆ. ಸಿದ್ದರಾಮಯ್ಯ ಅವರ ಬಗೆಗಿನ ನಿಮ್ಮ ಹೊಟ್ಟೆಕಿಚ್ಚಿನಿಂದ ಹಾಳಾಗುತ್ತಿರೋದು ನೀವೇ ಹೊರತು ಸಿದ್ದರಾಮಯ್ಯ ಅವರಲ್ಲ. "ಮನೆಯೊಳಗಣ ಕಿಚ್ಚು ಮನೆಯ ಸುಟ್ಟಲ್ಲದೆ ನೆರೆಮನೆಯ ಸುಡದು ಕೂಡಲ ಸಂಗಮ ದೇವ" ಆಗಾಗ ಇದನ್ನು ಓದಿ ಕುಮಾರಸ್ವಾಮಿ , ಸಾಧ್ಯವಾದರೆ ಬದಲಾಗಿ’ ಎಂದು ಜಮೀರ್‌ ಅವರು ಕುಮಾರಸ್ವಾಮಿ ಅವರಿಗೆ ಸಲಹೆ ನೀಡಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು