ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೀರಾವರಿ ಯೋಜನೆ | ಸಚಿವ ಸಂಪುಟ ಸಭೆ ಅನುಮೋದನೆ; ₹3,500 ಕೋಟಿ ವೆಚ್ಚಕ್ಕೆ ಅಸ್ತು

Last Updated 12 ನವೆಂಬರ್ 2020, 19:30 IST
ಅಕ್ಷರ ಗಾತ್ರ

ಬೆಂಗಳೂರು: ಚಿಕ್ಕಮಗಳೂರು ಮತ್ತು ಹಾಸನ ಜಿಲ್ಲೆಯ ಬಯಲುಸೀಮೆ ತಾಲ್ಲೂಕುಗಳ 197 ಕೆರೆಗಳಿಗೆ ನೀರು ತುಂಬಿಸುವ₹1,281.80 ಕೋಟಿ ಯೋಜನೆಗೆ ಸಚಿವ ಸಂಪುಟ ಸಭೆ ಆಡಳಿತಾತ್ಮಕ ಅನುಮೋದನೆ ನೀಡಿದೆ.

ಸಚಿವ ಸಂಪುಟ ಸಭೆಯಲ್ಲಿ ಒಟ್ಟು ₹3,500 ಮೊತ್ತದ ವಿವಿಧ ನೀರಾವರಿ ಯೋಜನೆಗಳಿಗೆ ಅನುಮೋದನೆ ನೀಡಿದಂತಾಗಿದೆ.

ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ.ಮಾಧುಸ್ವಾಮಿ ಅವರು ಸಂಪುಟ ಸಭೆಯ ಬಳಿಕ ಸುದ್ದಿಗಾರರಿಗೆ ಈ ವಿಷಯ ತಿಳಿಸಿದರು.

ಈ ಕೆರೆಗಳಿಗೆ ಚಿಕ್ಕಮಗಳೂರು ಜಿಲ್ಲೆಯ ಭದ್ರಾ ಜಲಾಶಯದಿಂದ ನೀರು ತುಂಬಿಸಲಾಗುವುದು. ತರೀಕೆರೆ ತಾಲ್ಲೂಕಿನ 31, ಕಡೂರಿನ 114, ಚಿಕ್ಕಮಗಳೂರಿನ 48 ಮತ್ತು ಅರಸೀಕೆರೆಯ 4 ಕೆರೆಗಳು ಸೇರಿವೆ. ಇದಕ್ಕಾಗಿ ಭದ್ರಾ ಜಲಾಶಯದಿಂದ 1.45 ಟಿಎಂಸಿ ಅಡಿ ನೀರು ಹರಿಸಲಾಗುವುದು. ಈ ಯೋಜನೆಯನ್ನು ಮೂರು ಹಂತಗಳಲ್ಲಿ ಕಾರ್ಯಗತಗೊಳಿಸಲು ಉದ್ದೇಶಿಸಲಾಗಿದೆ. ಮೊದಲನೇ ಹಂತದಲ್ಲಿ ₹406.50 ಕೋಟಿ, ಎರಡನೇ ಹಂತದಲ್ಲಿ ₹298.60 ಕೋಟಿ ಮತ್ತು ಮೂರನೇ ಹಂತದಲ್ಲಿ ₹476.07 ಕೋಟಿ ವೆಚ್ಚ ಮಾಡಲಾಗುವುದು ಎಂದರು.

ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗಿರುವ ಸಿ.ಟಿ.ರವಿ, ಕಳೆದ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಮತದಾರರಿಗೆ ಕೆರೆ ತುಂಬಿಸುವ ಯೋಜನೆಯ ಭರವಸೆ ನೀಡಿದ್ದರು.

ಇತರ ನೀರಾವರಿ ಯೋಜನೆಗಳಿಗೆ ಒಪ್ಪಿಗೆ:

* ಮಾರ್ಕಾಂಡೇಯ ನದಿಗೆ ಅಡ್ಡಲಾಗಿ ಅಣೆಕಟ್ಟು ನಿರ್ಮಿಸಿ ಗೋಕಾಕ್‌ ತಾಲ್ಲೂಕಿಗೆ ಕುಡಿಯುವ ನೀರು ಒದಗಿಸಲು ₹995 ಕೋಟಿ ಯೋಜನೆಗೆ ಒಪ್ಪಿಗೆ

* ಹಾರಂಗಿ ಜಲಾನಯನ ಪ್ರದೇಶ ಮತ್ತು ನದಿ ಪಾತ್ರದ ಪುನಶ್ಚೇತನ ಹಾಗೂ ರಕ್ಷಣಾ ಕಾಮಗಾರಿಯ ₹130 ಕೋಟಿ ಅಂದಾಜಿಗೆ ಆಡಳಿತಾತ್ಮಕ ಅನುಮೋದನೆ

*ಉತ್ತರಕನ್ನಡ ಜಿಲ್ಲೆಯ ಮುಂಡಗೋಡು ತಾಲ್ಲೂಕಿನ 5 ಗ್ರಾಮಪಂಚಾಯಿತಿಗಳಲ್ಲಿ ಬರುವ 84 ಸಣ್ಣ ನೀರಾವರಿ, ಜಿಲ್ಲಾ ಪಂಚಾಯತ್‌ ಕೆರೆಗಳನ್ನು ಬೇಡ್ತಿ ನದಿಯ ಉಪ ನದಿಯಾದ ಕವಳಗಿಹಳ್ಳದಿಂದ ತುಂಬಿಸುವ ₹225 ಕೋಟಿ ಮೊತ್ತದ ಯೋಜನೆಗೆ ಘಟನೋತ್ತರ ಅನುಮೋದನೆ

*ಪಶ್ಚಿಮ ವಾಹಿನಿ ಯೋಜನೆಯಡಿ ಉಡುಪಿ ಜಿಲ್ಲೆ, ಬ್ರಹ್ಮಾವರ ತಾಲ್ಲೂಕು ಕೊಕ್ಕರ್ಣೆ ಗ್ರಾಮ ಪಂಚಾಯತ್‌ ವ್ಯಾಪ್ತಿಯ ಮೊಗವೀರಪೇಟೆಯಲ್ಲಿ ಕಿಂಡಿ ಅಣೆಕಟ್ಟು ನಿರ್ಮಾಣಕ್ಕೆ ₹35 ಕೋಟಿ

*ಉಡುಪಿ ಜಿಲ್ಲೆ ಬ್ರಹ್ಮಾವರ ತಾಲ್ಲೂಕು ಹೆರೂರು ಗ್ರಾಮದ ಬಳಿ ಮಡಿಸಾಲು ಹೊಳೆಗೆ ಉಪ್ಪು ನೀರು ತಡೆ ಅಣೆಕಟ್ಟು ನಿರ್ಮಾಣಕ್ಕೆ ₹35 ಕೋಟಿ

*ಬೂದಿಹಾಳ್ ವೀರಾಪುರ ಏತ ನೀರಾವರಿ ಯೋಜನೆಗೆ ₹549 ಕೋಟಿ ಅಂದಾಜಿಗೆ ಆಡಳಿತಾತ್ಮಕ ಅನುಮೋದನೆ ನೀಡಿದ್ದು, ಈ ವರ್ಷಕ್ಕೆ ₹244 ಕೋಟಿ ಅನುದಾನ ನಿಗದಿ ಮಾಡಲಾಗಿದೆ

* ಬೆಳಗಾವಿ ಜಿಲ್ಲೆ ಹುಕ್ಕೇರಿಯ 1200 ಹೆಕ್ಟೇರ್ ಪ್ರದೇಶಕ್ಕೆ ನೀರು ಒದಗಿಸಲು ಅಡವಿ ಸಿದ್ದೇಶ್ವರ ಏತ ನೀರಾವರಿ ಯೋಜನೆಗೆ ₹66.13 ಕೋಟಿ ರೂ

*ಶಿರಸಿ ನಗರಕ್ಕೆ ನೀರು ಪೂರೈಕೆ ಯೋಜನೆಗೆ ₹38.12 ಕೋಟಿ

‘ಶಾಲೆಗಳ ಆರಂಭ ಸದ್ಯಕ್ಕೆ ಇಲ್ಲ’

ಶಾಲೆಗಳನ್ನು ತೆರೆಯುವ ತೀರ್ಮಾನ ಸದ್ಯಕ್ಕೆ ಬೇಡ ಎಂಬ ಅಭಿಪ್ರಾಯ ಸಂಪುಟ ಸಭೆಯಲ್ಲಿ ವ್ಯಕ್ತವಾಯಿತು.

ಈಗ ಕೊರೊನಾ ನಿಯಂತ್ರಣಕ್ಕೆ ಬರುತ್ತಿದೆ. ಈ ಹಂತದಲ್ಲಿ ಶಾಲೆಗಳನ್ನು ತೆರೆಯುವುದರಿಂದ ಸಮಸ್ಯೆ ಆಗಬಹುದು ಎಂದು ಕೆಲವು ಸಚಿವರು ಹೇಳಿದರು. ಅದಕ್ಕೆ ಮುಖ್ಯಮಂತ್ರಿ ಯಡಿಯೂರಪ್ಪ ಸಮ್ಮತಿಸಿದರು ಎಂದು ಮೂಲಗಳು ಹೇಳಿವೆ.

ಉಪಚುನಾವಣೆ ಮತ್ತು ವಿಧಾನಪರಿಷತ್‌ 4 ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಪಕ್ಷದ ಗೆಲುವಿಗೆ ಯಡಿಯೂರಪ್ಪ ಎಲ್ಲ ಸಚಿವರನ್ನೂ ಅಭಿನಂದಿಸಿದರು. ಮುಂಬರುವ ಉಪಚುನಾವಣೆಗಳಲ್ಲೂ ಇದೇ ಸಾಧನೆ ಮಾಡಬೇಕಾಗಿದೆ ಎಂದು ಹೇಳಿದರು.

ಪ್ರಮುಖ ನಿರ್ಣಯಗಳು

* ದೇವದುರ್ಗ (₹13.95 ಕೋಟಿ), ಲಿಂಗಸಗೂರು (₹15.82 ಕೋಟಿ ), ಮತ್ತು ಕುಶಾಲನಗರದಲ್ಲಿ (₹12.50 ಕೋಟಿ ರೂ.) ಹೊಸ ನ್ಯಾಯಾಲಯ ಕಟ್ಟಡ ನಿರ್ಮಾಣಕ್ಕೆ ಅನುಮೋದನೆ

*ಸಂಸದೀಯ ಕಾರ್ಯದರ್ಶಿ ಸ್ಥಾನಕ್ಕೆ ಅವಕಾಶವಿಲ್ಲ ಎಂಬ ಸುಪ್ರೀಂಕೋರ್ಟ್‌ ತಿಳಿಸಿರುವ ಕಾರಣ ಆ ಹುದ್ದೆಗೆ ಸಂಬಂಧಿಸಿದ ಕಾನೂನುಗಳನ್ನು ನಿರಸನಗೊಳಿಸಲಾಗಿದೆ

*ಮಂಡ್ಯ ಸಕ್ಕರೆ ಕಾರ್ಖಾನೆಯನ್ನು ಹೊರಗುತ್ತಿಗೆ ನೀಡಲು ನಿರ್ಧರಿಸಲಾಗಿದೆ

* ಭಾರತೀಯ ವಿಜ್ಞಾನ ಸಂಸ್ಥೆಯಲ್ಲಿ ಆರ್ಟಿಫಿಶಿಯಲ್‌ ಇಂಟಲಿಜೆನ್ಸ್‌ ಮತ್ತು ರೋಬಾಟಿಕ್‌ ಪಾರ್ಕ್‌ ಸ್ಥಾಪನೆಗೆ ಅನುಮತಿ

* ಬೆಳಗಾವಿಯಲ್ಲಿ ಬಿಜೆಪಿ ಕಚೇರಿ ನಿರ್ಮಾಣಕ್ಕಾಗಿ 30 ಗುಂಟೆ ಜಮೀನು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT