ಬುಧವಾರ, ಅಕ್ಟೋಬರ್ 28, 2020
28 °C
ಪುನರ್‌ರಚನೆಗೆ ವರಿಷ್ಠರ ಸಹಮತ ಇಲ್ಲ

ಸಂಪುಟ ವಿಸ್ತರಣೆ | ಸಿಗದ ಸಮ್ಮತಿ: ಬರಿಗೈಯಲ್ಲಿ ವಾಪಸ್ಸಾದ ಸಿ.ಎಂ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಸಚಿವ ಸಂಪುಟದಿಂದ ಕೆಲವರನ್ನು ಕೈಬಿಟ್ಟು ಪುನರ್‌ರಚನೆ ಮಾಡಬೇಕು ಎಂಬ ಪ್ರಸ್ತಾವ ಮುಂದಿಟ್ಟುಕೊಂಡು ನವದೆಹಲಿಗೆ ಹೋಗಿದ್ದ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರ ಪ್ರಯತ್ನಕ್ಕೆ ಆ ಪಕ್ಷದ ವರಿಷ್ಠರು ಸಮ್ಮತಿ ಸೂಚಿಸಿಲ್ಲ.

ಸಂಪುಟ ಪುನರ್‌ರಚನೆಯ ಪ್ರಸ್ತಾಪ ಬೇಡ. ಸಂಪುಟ ವಿಸ್ತರಣೆ ಮಾಡುವುದೇ ಸೂಕ್ತ. ಅದಕ್ಕೆ ಆತುರ ಬೇಡ. ಪಕ್ಷದ ಎಲ್ಲ ಹಂತಗಳಲ್ಲಿ ಸಮಾಲೋಚನೆ ನಡೆಸಿ ನಿರ್ಧಾರ ತೆಗೆದುಕೊಳ್ಳುವುದು ಸಮಂಜಸ ಎಂದು ವರಿಷ್ಠರು ಸಲಹೆ ನೀಡಿದ್ದಾರೆ. ಹೀಗಾಗಿ, ವಿಧಾನಮಂಡಲ ಅಧಿವೇಶನ ಮುಗಿಯುವವರೆಗೆ ಯಾವುದೇ ಪ್ರಕ್ರಿಯೆ ನಡೆಯುವುದಿಲ್ಲ ಎಂದು ಪಕ್ಷದ ಮೂಲಗಳು ತಿಳಿಸಿವೆ. 

ಅಧಿವೇಶನ ಮುಗಿದ ಬಳಿಕ, ವರಿಷ್ಠರು ಒಪ್ಪಿಗೆ ಸೂಚಿಸಿದರೆ ಖಾಲಿ ಇರುವ ಆರು ಸ್ಥಾನಗಳ ಪೈಕಿ ಎರಡನ್ನು ಹಾಗೆ ಉಳಿಸಿಕೊಂಡು ವಿಧಾನಪರಿಷತ್‌ ಸದಸ್ಯರಾದ ಎಂ.ಟಿ.ಬಿ.ನಾಗರಾಜ್, ಆರ್‌.ಶಂಕರ್‌, ಎಚ್‌.ವಿಶ್ವನಾಥ್‌ ಸೇರಿದಂತೆ ನಾಲ್ವರನ್ನು ಸಂಪುಟಕ್ಕೆ ಸೇರಿಸಿಕೊಳ್ಳುವ ಸಾಧ್ಯತೆ ಇದೆ. ಮತ್ತೊಂದು ಸ್ಥಾನವನ್ನು ಪಕ್ಷ ಸೂಚಿಸುವವರಿಗೆ ನೀಡಲಾಗುವುದು ಎಂದು ಹೇಳಲಾಗುತ್ತಿದೆ.

‘ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರನ್ನು ಶುಕ್ರವಾರ ಸಂಜೆ ಭೇಟಿ ಮಾಡಿದ  ಯಡಿಯೂರಪ್ಪ, ಪುನರ್‌ರಚನೆ ಅಥವಾ ವಿಸ್ತರಣೆಗೆ ಅನುಮತಿ ನೀಡಬೇಕು ಎಂಬ ಪ್ರಸ್ತಾವ ಮುಂದಿಟ್ಟರು. ‘ಈ ಬಗ್ಗೆ ಪ್ರಧಾನಿ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಅವರ ಜತೆ ಚರ್ಚಿಸಿ ನಾವೇ ತೀರ್ಮಾನ ಹೇಳುತ್ತೇವೆ. ಸಂಪುಟ ಪುನರ್‌ರಚನೆಗಿಂತ ವಿಸ್ತರಣೆ ಸೂಕ್ತ ಅಲ್ಲವೇ ‌’ ಎಂದು ನಡ್ಡಾ ಅವರು ಮುಖ್ಯಮಂತ್ರಿ ಅವರನ್ನು ಪ್ರಶ್ನಿಸಿದರು’ ಎಂದು ಮೂಲಗಳು ತಿಳಿಸಿವೆ.

ಅಂತಿಮವಾಗಿ ಪುನರ್‌ರಚನೆ ಅಥವಾ ವಿಸ್ತರಣೆ ಇವೆರಡರಲ್ಲಿ ಯಾವುದು ಸೂಕ್ತ ಎಂಬ ಬಗ್ಗೆ ನಡ್ಡಾ ಅವರು ಪಕ್ಷದ ಸಂಘಟನಾ ಕಾರ್ಯದರ್ಶಿ ಬಿ.ಎಲ್‌.ಸಂತೋಷ್ ಮತ್ತು ಕೇಂದ್ರ ಸಚಿವ ಪ್ರಲ್ಹಾದ ಜೋಷಿ ಅವರ ಜತೆ ಚರ್ಚಿಸಿ ತೀರ್ಮಾನ ತೆಗೆದುಕೊಳ್ಳಬಹುದು.

‘ಪ್ರಧಾನಿ ಮೋದಿ ಅವರನ್ನು ಭೇಟಿಯಾದ ಯಡಿಯೂರಪ್ಪ, ಸಂಪುಟ ವಿಸ್ತರಣೆಯ ಬಗ್ಗೆ ಪ್ರಸ್ತಾಪಿಸಿದರು. ‘ಈ ವಿಷಯವನ್ನು ನಡ್ಡಾ ಜತೆ ಮಾತನಾಡಿ. ಕೋವಿಡ್‌ ಇರುವುದರಿಂದ ಹೆಚ್ಚು ಓಡಾಟ ಮಾಡಬೇಡಿ. ಆರೋಗ್ಯದ ಕಡೆಗೆ ಗಮನ ಕೊಡಿ’ ಎಂದು ಮೋದಿ ಕಿವಿ ಮಾತು ಹೇಳಿದ್ದಾಗಿ’ ಮೂಲಗಳು ತಿಳಿಸಿವೆ.

ವರಿಷ್ಠರ ಸೂಚನೆ ಪಾಲನೆ

‘ಸಂಪುಟ ವಿಸ್ತರಣೆ ಸಂಬಂಧ ನಡ್ಡಾ ಅವರಿಗೆ  ಮಾಹಿತಿ ನೀಡಿದ್ದೇನೆ. ಅವರು ಪ್ರಧಾನಿ ಮೋದಿ ಮತ್ತು ಇತರರ ಜತೆ ಚರ್ಚಿಸಿ ನಿರ್ಣಯ ತಿಳಿಸುವುದಾಗಿ ಹೇಳಿದ್ದಾರೆ. ತೀರ್ಮಾನ ನಾಳೆ ತಿಳಿಸಬಹುದು ನೋಡೋಣ. ಅವರ ಸೂಚನೆ ಪ್ರಕಾರವೇ ನಡೆದುಕೊಳ್ಳುತ್ತೇನೆ’ ಎಂದು ಯಡಿಯೂರಪ್ಪ ಅವರು ನವದೆಹಲಿಯಲ್ಲಿ ಸುದ್ದಿಗಾರರಿಗೆ ತಿಳಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು