ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಾತಿಗಣತಿ: ಏಕಕಾಲಕ್ಕೆ ಹೈಕೋರ್ಟ್‌ ವಿಚಾರಣೆ

Last Updated 18 ನವೆಂಬರ್ 2021, 16:36 IST
ಅಕ್ಷರ ಗಾತ್ರ

ಬೆಂಗಳೂರು: ‘ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರದಲ್ಲಿ ಸಿದ್ಧಪಡಿಸಲಾದ ಜಾತಿಗಣತಿ ವರದಿಯನ್ನು ಅನುಷ್ಠಾನಗೊಳಿಸಲು ನಿರ್ದೇಶಿಸಬೇಕು’ ಎಂದು ಕೋರಲಾದ ಮತ್ತು ‘ಈ ಜಾತಿಗಣತಿ ವರದಿ ಅಸಾಂವಿಧಾನಿಕ’ ಎಂದು ಆಕ್ಷೇಪಿಸಲಾದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಹಾಗೂ ಈ ಪ್ರಕರಣಕ್ಕೆ ಸಂಬಂಧಿಸಿದ ಎಲ್ಲ ಮಧ್ಯಂತರ ಅರ್ಜಿಗಳನ್ನು, ಹೈಕೋರ್ಟ್‌ ಏಕಕಾಲಕ್ಕೆ ವಿಚಾರಣೆಗೆ ನಿಗದಿಪಡಿಸಿದೆ.

‘ವರದಿ ಅನುಷ್ಠಾನ ಕೋರಿ ಮುಖ್ಯಮಂತ್ರಿ ಚಂದ್ರು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯಲ್ಲಿ ನಮ್ಮನ್ನೂಪ್ರತಿವಾದಿಗಳನ್ನಾಗಿ ಸೇರ್ಪಡೆ ಮಾಡಿಕೊಳ್ಳಬೇಕು’ ಎಂದು ಅಖಿಲ ಭಾರತ ವೀರಶೈವ ಮಹಾಸಭಾದ ಕೇಂದ್ರ ಕಾರ್ಯಕಾರಿ ಸಮಿತಿ ಸದಸ್ಯ ಬಿ.ಎಸ್.ನಟರಾಜ್ ಹಾಗೂ ಒಕ್ಕಲಿಗರ ಮುಖಂಡ ಹಾಸನದ ಉದ್ಯಮಿ ಕೃಷ್ಣೇಗೌಡ ಸಲ್ಲಿಸಿರುವ ಮಧ್ಯಂತರ ಅರ್ಜಿಗಳ ವಿಚಾರಣೆ ಗುರುವಾರ ಮುಖ್ಯ ನ್ಯಾಯಮೂರ್ತಿ ಋತುರಾಜ್‌ ಅವಸ್ಥಿ ನೇತೃತ್ವದ ವಿಭಾಗೀಯ ನ್ಯಾಯಪೀಠದ ಮುಂದೆ ನಿಗದಿಯಾಗಿತ್ತು.

ಏತನ್ಮಧ್ಯೆ, 2015ರಲ್ಲಿಜಾತಿ ಗಣತಿಯನ್ನು ಪ್ರಶ್ನಿಸಿ ಬೀದರ್‌ನ ಶಿವರಾಜ ಕಣಶೆಟ್ಟಿ ಹಾಗೂ ಇತರರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯೂ ಇದೇ ಪ್ರಕರಣಕ್ಕೆ ಸಂಬಂಧಿಸಿದ್ದಾಗಿದೆ ಎಂಬ ಕಾರಣದಿಂದ ಎಲ್ಲ ಅರ್ಜಿಗಳನ್ನೂ ಒಟ್ಟಿಗೇ ವಿಚಾರಣೆ ನಡೆಸುವುದಾಗಿ ನ್ಯಾಯಪೀಠ ತಿಳಿಸಿತು.

ಮಧ್ಯಂತರ ಅರ್ಜಿದಾರರ ಪರ ಹಾಜರಾಗಿದ್ದ ಹಿರಿಯ ವಕೀಲ ಗಂಗಾಧರ ಗುರುಮಠ ಹಾಗೂ ಅಭಿಷೇಕ ಕುಮಾರ್ ಅವರನ್ನು ನ್ಯಾಯಪೀಠ, ‘ಆಯೋಗದ ಪರ ಯಾರು ಹಾಜರಾಗುತ್ತಿದ್ದಾರೆ’ ಎಂದು ಪ್ರಶ್ನಿಸಿತು. ಇದಕ್ಕೆ ಉತ್ತರಿಸಿದ ವಕೀಲರು, ’ವಿಜಯಸಿಂಹ ರೆಡ್ಡಿ ಹಾಜರಾಗುತ್ತಿದ್ದಾರೆ’ ಎಂದರು.

ಆಕ್ಷೇಪಗಳೇನು?: ‘ಸಂವಿಧಾನದ 7ನೇ ಪರಿಚ್ಛೇದದ ಸೂಚಿತಪಟ್ಟಿ 1ರ 69ನೇ ಪ್ರವೇಶದ ಅನುಸಾರ ರಾಜ್ಯ ಸರ್ಕಾರಕ್ಕೆ ಜಾತಿ ಗಣತಿ ನಡೆಸುವ ಅಧಿಕಾರವಿಲ್ಲ. ಇದರ ಅಧಿಕಾರ ಏನಿದ್ದರೂ ಕೇಂದ್ರ ವ್ಯಾಪ್ತಿಗೆ ಒಳಪಟ್ಟಿದೆ’ ಎಂಬುದು ಮಧ್ಯಂತರ ಅರ್ಜಿದಾರರ ಪ್ರಮುಖ ಆಕ್ಷೇಪ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT