ಗುರುವಾರ , ಜನವರಿ 21, 2021
16 °C

ಜಾತಿ ಪ್ರಾಬಲ್ಯ ಮುಂದಿಟ್ಟುಕೊಂಡು ಲಾಬಿ ಮಾಡುವುದು ಸಲ್ಲ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರಾಜ್ಯ ಸರ್ಕಾರದ ನಾಯಕತ್ವ ಬದಲಾವಣೆ, ಸಚಿವ ಸ್ಥಾನ ನೀಡಿಕೆ ಮತ್ತು ಜಾತಿ ಹೆಸರಿನಲ್ಲಿ ನಿಗಮ ರಚನೆಯ ಬೇಡಿಕೆ ಕುರಿತು ಮಾತನಾಡುತ್ತಿರುವ ಕೆಲವು ಮಠಾಧೀಶರು ‘ಸರ್ಕಾರವನ್ನೇ ನಿಯಂತ್ರಿಸುವ’ ಎಚ್ಚರಿಕೆಯನ್ನೂ 
ನೀಡಿದ್ದಾರೆ. ಈ ಬೆಳವಣಿಗೆಗಳಿಂದಾಗಿ, ಧಾರ್ಮಿಕ ನಾಯಕರ ರಾಜಕೀಯ ಹಸ್ತಕ್ಷೇಪದ ಕುರಿತ ಚರ್ಚೆ ಮತ್ತೆ ಮುನ್ನೆಲೆಗೆ ಬಂದಿದೆ. ಈ ಕುರಿತು ರಾಜಕೀಯ ನಾಯಕರು ಹಾಗೂ ಮಠಾಧೀಶರ ಪ್ರತಿಕ್ರಿಯೆಗಳು ಇಲ್ಲಿವೆ...

***
‘ಅಭಿವೃದ್ಧಿಯತ್ತ ಗಮನವಿರಲಿ‌’

ಮಠಾಧೀಶರು ರಾಜಕೀಯದಲ್ಲಿ ಹಸ್ತಕ್ಷೇಪ ಮಾಡಬಾರದು. ಜಾತಿ ಪ್ರಾಬಲ್ಯವನ್ನು ಮುಂದಿಟ್ಟುಕೊಂಡು ತಮ್ಮವರಿಗೆ ಅಂತಹ ಸ್ಥಾನ, ಇಂತಹ ಸ್ಥಾನ ಕೊಡಬೇಕು ಎಂದು ಲಾಬಿ ನಡೆಸುವುದು ಅಥವಾ ಒತ್ತಡ ಹೇರುವುದು ಇತ್ತೀಚೆಗೆ ಜಾಸ್ತಿಯಾಗಿದೆ. ಇದು ಸರಿಯಲ್ಲ. ಸಮಾಜದ ಅಭಿವೃದ್ಧಿ ಹಾಗೂ ಸ್ಥಳೀಯ ಸಮಸ್ಯೆಗಳ ಪರಿಹಾರಕ್ಕೆ ಬೇಡಿಕೆ ಇಟ್ಟರೆ ತಪ್ಪಿಲ್ಲ.

ಸ್ವಾಮೀಜಿಗಳೆಂದರೆ ನಿರ್ದಿಷ್ಟ ಪಕ್ಷಕ್ಕೆ ಸೀಮಿತರಾದವರಲ್ಲ. ಸರ್ಕಾರಗಳು ಬರುತ್ತವೆ; ಹೋಗುತ್ತವೆ. ಸರ್ವರಿಗೂ ಸುಖ ಭಯಸುವ ಧರ್ಮ ನಮ್ಮದು. ಈ ವಿಷಯದಲ್ಲಿ ಸ್ವಾಮೀಜಿಗಳಾದ ನಾವು ಬಹಳಷ್ಟು ಕೆಲಸ ಮಾಡಬಹುದಾಗಿದೆ.

-ಮಡಿವಾಳ ರಾಜಯೋಗೀಂದ್ರ ಸ್ವಾಮೀಜಿ, ರಾಜಗುರು ಸಂಸ್ಥಾನ ಕಲ್ಮಠ, ಚನ್ನಮ್ಮನ ಕಿತ್ತೂರು, ಬೆಳಗಾವಿ ಜಿಲ್ಲೆ

***

‘ಧರ್ಮಗುರುಗಳ ಬಹಿರಂಗ ಹೇಳಿಕೆ ಒಳ್ಳೆಯದಲ್ಲ’

ತಮ್ಮ ಸಮಾಜದವರನ್ನು ಮಂತ್ರಿ ಮಾಡಿ ಎಂದು ಧರ್ಮಗುರುಗಳು ಬಹಿರಂಗವಾಗಿ ಹೇಳುವುದು ಒಳ್ಳೆಯದಲ್ಲ. ತಮ್ಮ ಇತಿಮಿತಿಯಲ್ಲಿ ಎಲ್ಲಿ ಹೇಳಬೇಕೋ ಅಲ್ಲಿ ಹೇಳಬೇಕು. ಪಕ್ಷದ ಮುಖಂಡರು, ಮುಖ್ಯಮಂತ್ರಿ ಬಳಿ ಸಮಾಜದ ಬೇಡಿಕೆ ಬಗ್ಗೆ ಪ್ರಸ್ತಾಪಿಸಬೇಕೇ ಹೊರತು, ಇಂಥವರನ್ನೇ ಮಂತ್ರಿ ಮಾಡಿ ಎಂದು ಹಟ ಹಿಡಿಯುವುದು ಸರಿಯಲ್ಲ.

ರಾಜಕೀಯ ಪಕ್ಷ ಬೇರೆ, ಧರ್ಮಾಧಿಕಾರಿಗಳ ಕೆಲಸ ಬೇರೆ. ರಾಜಕಾರಣಿಗಳು ಧರ್ಮದ ವಿಷಯದಲ್ಲಿ ಕೈಹಾಕಬಾರದು. ಸುಧರ್ಮ ಸಂದೇಶ ನೀಡಿ, ರಾಜಕಾರಣಿಗಳಿಗೆ ಸ್ವಾಮೀಜಿಗಳು ಬುದ್ದಿವಾದ ಹೇಳಬೇಕು. ಸಾಮಾಜಿಕ ನ್ಯಾಯ ಕೊಡಿ ಎಂದು ಕೇಳಬೇಕು.

ಬರೀ ಜಾತಿ ಆಧಾರದ ಮೇಲೆ ಸಚಿವ ಸಂಪುಟ ಮಾಡಲು ಆಗದು. ಅರ್ಹತೆ, ಸಾಮರ್ಥ್ಯ ನೋಡಿಕೊಂಡು ಮಾಡಬೇಕಾಗುತ್ತದೆ. ಒಂದೊಂದೇ ಜಾತಿಯ ಮೂರು, ನಾಲ್ಕು ಜನರನ್ನು ಮಂತ್ರಿ ಮಾಡಿದರೆ ಸಣ್ಣಪುಟ್ಟ ಜಾತಿಯವರು ಏನು ಮಾಡಬೇಕು? ಆ ಜಾತಿಗಳಲ್ಲೂ ಒಳ್ಳೆಯ ಕೆಲಸ ಮಾಡುವವರು ಇರುತ್ತಾರೆ.  ಕರ್ನಾಟಕ
ದಲ್ಲಿ ಮೊದಲಿನಿಂದಲೂ ಜಾತಿಗೊಬ್ಬರನ್ನು ಮಂತ್ರಿ ಮಾಡುವ ಸಂಪ್ರದಾಯ ನಡೆದುಕೊಂಡು ಬಂದಿದೆ. ಇದು ಒಳ್ಳೆಯದಲ್ಲ. 

-ಬಸನಗೌಡ ಪಾಟೀಲ ಯತ್ನಾಳ, ಶಾಸಕ, ವಿಜಯಪುರ

***

‘ಯಾವುದೇ ಧರ್ಮವು ಸಂವಿಧಾನಕ್ಕಿಂತ ದೊಡ್ಡದಲ್ಲ’

ಸಾಂವಿಧಾನಿಕ ವಿಚಾರಗಳಲ್ಲಿ ದಾರಿ ತಪ್ಪಿದಾಗ, ಪ್ರಜಾಸತ್ತಾತ್ಮಕ ಮೌಲ್ಯಗಳನ್ನು ದುರ್ಬಲಗೊಳಿಸಿ ಸರ್ವಾಧಿಕಾರಿ ಧೋರಣೆ ತೋರಿದಾಗ ಮಠಾಧೀಶರು ಮಧ್ಯ ಪ್ರವೇಶಿಸಿ ಮಾರ್ಗದರ್ಶನ ನೀಡಲಿ. ಅದನ್ನು ಬಿಟ್ಟು ‘ನಮ್ಮ ಜಾತಿ, ನಮ್ಮ ಸಮುದಾಯ’ ಎಂದು ರಾಜಕೀಯ ಮಾಡಬಾರದು; ಬೇಡಿಕೆಗಳನ್ನು ಮುಂದಿಟ್ಟುಕೊಂಡು ಒತ್ತಡ ಹೇರಬಾರದು.

ಸಚಿವ ಸಂಪುಟ ರಚನೆ ವಿಚಾರದಲ್ಲಿ ಮಾತ್ರವಲ್ಲ; ಆಡಳಿತ ವಿಚಾರಗಳಲ್ಲೂ ಹಸ್ತಕ್ಷೇಪ ಮಾಡಬಾರದು. ಯಾವುದೇ ಧರ್ಮವು ಸಂವಿಧಾನಕ್ಕಿಂತ ದೊಡ್ಡದಲ್ಲ. ಹೀಗಾಗಿ, ಧರ್ಮಗುರುಗಳು ತಮ್ಮ ನೈತಿಕ ಹಾಗೂ ಬೌದ್ಧಿಕ ಶಕ್ತಿಯನ್ನು ಸಮಾಜದ ಒಳಿತಿಗೆ ಬಳಸಲಿ. ಸಮುದಾಯಗಳ ಸೌಹಾರ್ದ ಬದುಕಿಗೆ, ಅವರ ಏಳಿಗೆಗೆ ಮಾರ್ಗದರ್ಶನ ಮಾಡಲಿ.

-ಡಾ.ಎಚ್‌.ಸಿ.ಮಹದೇವಪ್ಪ, ಮಾಜಿ ಸಚಿವ

***

‘ಲಕ್ಷ್ಮಣರೇಖೆ ದಾಟುವುದು ಸಲ್ಲ’

ಸ್ವಾಮೀಜಿಗಳು ರಾಜಕಾರಣಕ್ಕೆ ಹೋಗಬಾರದು. ಅವರೇ ನಮ್ಮ ಬಳಿ ಬಂದಾಗ ಮಾರ್ಗದರ್ಶನ, ಆಶೀರ್ವಾದ ಮಾಡುವುದು ಸೂಕ್ತ ಎಂದು ಹಿರಿಯ ಗುರುಗಳಾದ ಮಹಾಂತ ಶ್ರೀಗಳು ಯಾವಾಗಲೂ ಹೇಳುತ್ತಿದ್ದರು. ಅದೇ ನಿಲುವು ನಮ್ಮದು.

ರಾಜರು–ಧರ್ಮಗುರುಗಳ ಸಂಬಂಧ ಅನಾದಿಕಾಲದಿಂದಲೂ ಬೆಳೆದುಬಂದಿದೆ. ಅದು ವಿಪತ್ತು, ಯುದ್ಧವಿರಲಿ, ಆಡಳಿತಾತ್ಮಕ ಸಂಗತಿಗಳು ಇರಲಿ ಆ ವೇಳೆ ಮಹತ್ವದ ನಿರ್ಣಯಗಳ ಕೈಗೊಳ್ಳುವಾಗ ರಾಜರು ಧರ್ಮಗುರುಗಳ ಮಾರ್ಗದರ್ಶನ ಪಡೆಯುತ್ತಿದ್ದರು. ಅವರಿಬ್ಬರ ಸಂವಾದದ ನಡುವೆ ಜನಕಲ್ಯಾಣವೇ ಪ್ರಧಾನವಾಗಿರುತ್ತಿತ್ತು. ಯಾರೂ ತಮ್ಮ ಲಕ್ಷ್ಮಣ ರೇಖೆ ದಾಟುತ್ತಿರಲಿಲ್ಲ. ಅದನ್ನು ನಾವು ಮನಗಾಣಬೇಕು.

-ಗುರುಮಹಾಂತ ಸ್ವಾಮೀಜಿ, ಪೀಠಾಧ್ಯಕ್ಷರು, ಚಿತ್ತರಗಿ ಸಂಸ್ಥಾನಮಠ, ಇಳಕಲ್, ಬಾಗಲಕೋಟೆ ಜಿಲ್ಲೆ

***

‘ಮೂಲ ಆಶಯಗಳಿಗೆ ಧಕ್ಕೆ’

ಧಾರ್ಮಿಕ ಕೇಂದ್ರಗಳ ಸ್ಥಾಪನೆಯ ಮೂಲ ಆಶಯ ಮತ್ತು ಉದ್ದೇಶಗಳಿಗೆ ಧಕ್ಕೆ ಬಾರದಂತೆ ಮಠಾಧೀಶರು ನಡೆದುಕೊಳ್ಳಬೇಕು. ಅನೇಕ ಸಂದರ್ಭಗಳಲ್ಲಿ ಕೆಲವು ಮಠಾಧೀಶರ ಹೇಳಿಕೆಗಳು ಸಾರ್ವಜನಿಕವಾಗಿ ಗೊಂದಲ ಮತ್ತು ಟೀಕೆಗಳಿಗೆ ಗುರಿಯಾಗುತ್ತಿವೆ. ಧರ್ಮಗುರುಗಳು ಇಂತಹ ಟೀಕೆ ಮತ್ತು ಗೊಂದಲಗಳಿಗೆ ಖಂಡಿತ ಅವಕಾಶ ಮಾಡಿಕೊಡಬಾರದು. ಇದು ಜನರ ಅಪೇಕ್ಷೆಯೂ ಆಗಿದೆ.

ಜನರಲ್ಲಿ ಧಾರ್ಮಿಕ ಚಿಂತನೆ ಮತ್ತು ಸದ್ವಿಚಾರಗಳ ಬಗ್ಗೆ ಜ್ಞಾನ ಹೆಚ್ಚಿಸುವ ನಿಟ್ಟಿನಲ್ಲಿ ಮಠಾಧೀಶರು, ಧರ್ಮಗುರುಗಳು ಮತ್ತು ಧಾರ್ಮಿಕ ಕೇಂದ್ರಗಳು ಕೆಲಸ ಮಾಡಬೇಕು. ಮಠಾಧೀಶರ ನಿಲುವು, ನಡತೆ ಮತ್ತು ವರ್ತನೆಗಳನ್ನು ನೋಡಿದರೆ ಮುಂದಿನ ದಿನಗಳಲ್ಲಿ ಜ್ಞಾನ ಪ್ರಸರಣದ ವಿಚಾರದಲ್ಲಿ ಮಠಗಳ ನಡೆಗಳಿಗೆ ಪೆಟ್ಟು ಬೀಳಬಹುದೇನೋ ಎನ್ನುವ ಆತಂಕ ನನ್ನನ್ನೂ ಸೇರಿದಂತೆ ಅನೇಕರನ್ನು ಕಾಡುತ್ತಿದೆ.

–ಎಸ್‌.ಪಿ. ಮುದ್ದಹನುಮೇಗೌಡ, ಮಾಜಿ ಸಂಸದ

***

‘ಆತ್ಮಾವಲೋಕನ ಮಾಡಿಕೊಳ್ಳುವ ವಿಚಾರ’

ರಾಜಕೀಯವಾಗಿ ಬೆಳವಣಿಗೆ ಹೊಂದದ ಸಮುದಾಯದ ಮಠ–ಪೀಠಗಳಿಗೆ ಬೆಲೆ ಇಲ್ಲದಂತಹ ಸ್ಥಿತಿ ನಿರ್ಮಾಣವಾಗಿದೆ. ಮಠದ ಅಸ್ತಿತ್ವ, ಸಮುದಾಯದ ಹಿತ ಕಾಪಾಡುವ ಜತೆಗೆ ರಾಜಕೀಯ ಬೆಳವಣಿಗೆಯ ಆಲೋಚನೆ ಹುಟ್ಟಿಕೊಂಡಿದೆ. ಈ ಭರಾಟೆಯಲ್ಲಿ ಮಠಗಳು ದಾರಿಬಿಟ್ಟು ಸಾಗುತ್ತಿರುವುದು ಆತ್ಮಾವಲೋಕನ ಮಾಡಿಕೊಳ್ಳುವ ವಿಚಾರ.

ಈವರೆಗೆ ರಾಜ್ಯ ಆಳಿದವರು ತಮ್ಮ ಸಮುದಾಯ ವಿಜೃಂಭಿಸುವಂತೆ ಮಾಡಿದ್ದಾರೆ. ಹಿಂದುಳಿದ ಸಮುದಾಯಗಳಲ್ಲಿ ರಾಜಕೀಯ ಪ್ರಜ್ಞಾವಂತಿಕೆ ಬೆಳೆಯಲು ಇದು ಪ್ರೇರಣೆಯಾಗಿದೆ. ಜಾತಿ ರಾಜಕಾರಣ ಖಂಡಿತ ಒಳ್ಳೆಯದಲ್ಲ. ಇದನ್ನು ಪ್ರಜ್ಞಾವಂತ ಸಮುದಾಯ ಒಪ್ಪಲು ಸಾಧ್ಯವಿಲ್ಲ. ಇದು ಆತಂಕದ ವಿಚಾರವಾಗಿದ್ದು, ಶೀಘ್ರ ಕೊನೆಯಾಗಬೇಕು.

-ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ ಮಾದಾರ ಚನ್ನಯ್ಯ ಗುರುಪೀಠ, ಚಿತ್ರದುರ್ಗ

***

 

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು