ಗುರುವಾರ , ಅಕ್ಟೋಬರ್ 22, 2020
27 °C
ವಸ್ತ್ರ ವಿಚಾರದಲ್ಲಿ ಎರಡು ಸಮುದಾಯಗಳ ನಡುವೆ ಆರೋಪ, ಪ್ರತ್ಯಾರೋಪ

ಕಾವೇರಿಯ ವಾರ್ಷಿಕ ‘ತೀರ್ಥೋದ್ಭವ’ಕ್ಕೆ ಕಟ್ಟೆಚ್ಚರ

ಆದಿತ್ಯ ಕೆ.ಎ. Updated:

ಅಕ್ಷರ ಗಾತ್ರ : | |

Prajavani

ಮಡಿಕೇರಿ: ಕೊಡಗು ಜಿಲ್ಲೆಯು ಜೀವನನದಿ ಕಾವೇರಿಯ ವಾರ್ಷಿಕ ತೀರ್ಥೋದ್ಭವಕ್ಕೆ ಸಜ್ಜಾಗಿದೆ. ಅ. 17ರ (ಶನಿವಾರ) ಬೆಳಿಗ್ಗೆ 7.03ಕ್ಕೆ ಕಾವೇರಿ ತೀರ್ಥ ರೂಪಿಣಿಯಾಗಿ ಭಕ್ತರಿಗೆ ಒಲಿಯಲಿದ್ದಾಳೆ. ಈ ಸಂಭ್ರಮದ ವೇಳೆ ಎರಡು ಸಮುದಾಯಗಳಾದ ಕೊಡವ ಹಾಗೂ ಅರೆಭಾಷೆ ಗೌಡರ ನಡುವೆ ವಸ್ತ್ರದ ವಿಚಾರವಾಗಿ ಭಿನ್ನಾಭಿಪ್ರಾಯ ಮೂಡಿದ್ದು ಕೋವಿಡ್‌–19 ಕಾಲಘಟ್ಟದಲ್ಲಿ ನಡೆಯುತ್ತಿರುವ ತೀರ್ಥೋದ್ಭವಕ್ಕೆ ಕಟ್ಟೆಚ್ಚರ ವಹಿಸಲಾಗಿದೆ. ಹೆಚ್ಚಿನ ಪೊಲೀಸ್‌ ಬಂದೋಬಸ್ತ್‌ ಕಲ್ಪಿಸಲಾಗಿದೆ.

ವಿವಾದದ ಬೆನ್ನಲ್ಲೇ ‘ತೀರ್ಥೋದ್ಭವದ ವೇಳೆ ಸೀಮಿತ ಜನರಿಗೆ ಮಾತ್ರ ಅವಕಾಶ ಕಲ್ಪಿಸಲಾಗುವುದು’ ಎಂದು ಜಿಲ್ಲಾಡಳಿತ ಹೇಳಿದ್ದು ಒಂದು ಸಮುದಾಯದಿಂದ ವಿರೋಧ ವ್ಯಕ್ತವಾಗಿದೆ. ‘ಕೊಡಗಿನ ಮೂಲ ನಿವಾಸಿಗಳಿಗೆ ತೀರ್ಥೋದ್ಭವದ ವೇಳೆ ಮುಕ್ತ ಅವಕಾಶ ಕಲ್ಪಿಸಬೇಕು’ ಎಂಬ ಒತ್ತಾಯಗಳು ಕೇಳಿಬರುತ್ತಿವೆ.

‘ಕೋವಿಡ್ ಕಾರಣ ನೀಡಿ ನಮಗೆ ತಡೆ ಮಾಡಲಾಗುತ್ತಿದೆ. ಸಾಂಪ್ರದಾಯಿಕ ಉಡುಪಿನಲ್ಲಿ ಭಕ್ತರು ಬರುತ್ತಾರೆಂದು ಕ್ಷೇತ್ರಕ್ಕೆ ಪ್ರವೇಶವಿಲ್ಲ ಎಂಬ ಆದೇಶ ಸರಿಯಲ್ಲ’ ಎಂದು ಅಖಿಲ ಕೊಡವ ಸಮಾಜ ಯುವ ಘಟಕದ ಚಮ್ಮಟೀರ ಪ್ರವೀಣ್‌ ಉತ್ತಪ್ಪ ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಏನಿದು ವಿವಾದ?: ಭಾಗಮಂಡಲದ ಗೌಡ ಸಮಾಜದಲ್ಲಿ ಈಚೆಗೆ ನಡೆದಿದ್ದ ಸಭೆಯಲ್ಲಿ ಕುಪ್ಯ ಚಾಲೆ ಧರಿಸಿ ತೀರ್ಥೋದ್ಭವಕ್ಕೆ ಬರುವುದಕ್ಕೆ ವಿರೋಧ ವ್ಯಕ್ತವಾಗಿತ್ತು. ‘ಹಿಂದೆ ದೇವತಾ ಕಾರ್ಯಕ್ಕೆ ಯಾರೂ ಸಮವಸ್ತ್ರ ಧರಿಸಿ ಬರುತ್ತಿರಲಿಲ್ಲ. ಕಳೆದ ಎರಡು ವರ್ಷಗಳಿಂದ ಕುಪ್ಪಸ ದಟ್ಟಿ ಹಾಕಿ ಸಮವಸ್ತ್ರದಲ್ಲಿ ಬರುತ್ತಿದ್ದು ಇದಕ್ಕೆ ಅವಕಾಶ ಕೊಡಬಾರದು’ ಎಂದು ಮುಖಂಡರೊಬ್ಬರು ಹೇಳಿದ್ದರು. ಈ ಹೇಳಿಕೆಯು ವಿವಾದಕ್ಕೆ ಕಾರಣವಾಗಿದೆ.

ಶಾಸಕ ಕೆ.ಜಿ.ಬೋಪಯ್ಯ, ವಿಧಾನ ಪರಿಷತ್‌ ಸದಸ್ಯೆ ವೀಣಾ ಅಚ್ಚಯ್ಯ ನೇತೃತ್ವದಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲೂ ವಿವಾದ ತಣ್ಣಗಾಗಿಸುವ ಪ್ರಯತ್ನ ನಡೆಸಲಾಗಿತ್ತು. ಆದರೂ, ಪರಿಸ್ಥಿತಿ ತಿಳಿಯಾಗಿಲ್ಲ.

ಯಾವೆಲ್ಲ ನಿರ್ಬಂಧ?: ಕೋವಿಡ್‌ ಕಾಲದಲ್ಲಿ ನಡೆಯುತ್ತಿರುವ ಕಾವೇರಿ ದರ್ಶನಕ್ಕೆ ಜಿಲ್ಲಾಡಳಿತ, ಭಾಗಮಂಡಲ– ತಲಕಾವೇರಿ ವ್ಯವಸ್ಥಾಪನಾ ಸಮಿತಿ ಸಾಕಷ್ಟು ನಿರ್ಬಂಧ ಹಾಕಿದೆ. ತೀರ್ಥೋದ್ಭವದ ವೇಳೆ ದೇವಸ್ಥಾನ ಸಮಿತಿ ಸದಸ್ಯರು, ಅರ್ಚಕರು, ಗಣ್ಯರಿಗೆ ಮಾತ್ರ ಅವಕಾಶವಿದೆ. ದೇವಸ್ಥಾನ, ಛತ್ರಗಳಲ್ಲಿ ತೀರ್ಥೋದ್ಭವ ಹಿಂದಿನ ದಿನದ ರಾತ್ರಿ ವಾಸ್ತವ್ಯಕ್ಕೂ ಅವಕಾಶವಿಲ್ಲ. 17ರಂದು ಬೆಳಿಗ್ಗೆ 6 ಗಂಟೆಯ ನಂತರವಷ್ಟೇ ಭಾಗಮಂಡಲದಿಂದ ತಲಕಾವೇರಿಗೆ ವಾಹನ ಸಂಚಾರಕ್ಕೆ ಅನುಮತಿ ನೀಡಲಾಗಿದೆ. ಗುಂಪು ಗುಂಪಾಗಿ ಜನರು ಸೇರಿ ಹೋಗಲು ಅವಕಾಶ ಇಲ್ಲ ಎಂದೂ ಜಿಲ್ಲಾಡಳಿತ ಆದೇಶಿಸಿದೆ.

ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಅವರು ಶುಕ್ರವಾರ ಸಂಜೆಯೇ ಭಾಗಮಂಡಲಕ್ಕೆ ಆಗಮಿಸಿ ವಾಸ್ತವ್ಯ ಮಾಡಲಿದ್ದಾರೆ. ಅವರು ಸ್ಥಳೀಯ ಮುಖಂಡರೊಂದಿಗೆ ಚರ್ಚಿಸುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.