ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಫೈಜಲ್ ಜತೆಗಿನ ಜಮೀರ್‌ ಸಂಬಂಧ ತನಿಖೆಯಾಗಲಿ: ಸಂಬರಗಿ

Last Updated 12 ಸೆಪ್ಟೆಂಬರ್ 2020, 16:24 IST
ಅಕ್ಷರ ಗಾತ್ರ

ಬೆಂಗಳೂರು: ‘ಡ್ರಗ್ಸ್‌ ಜಾಲದಲ್ಲಿ ಶಾಸಕ ಜಮೀರ್ ಅಹಮ್ಮದ್ ಖಾನ್ ಭಾಗಿಯಾಗಿದ್ದಾರೆಂದು ನಾನು ಎಲ್ಲಿಯೂ ಹೇಳಿಲ್ಲ. ಆದರೆ, ಶೇಖ್ ಫೈಜಲ್ ಎಂಬಾತನಿಗಾಗಿಸಿಸಿಬಿ ಹುಡುಕುತ್ತಿದೆ.‌ ಆತನಿಗೂ ಶಾಸಕರಿಗೂ ಇರುವ ಸಂಬಂಧವೇನು ಎಂಬುದರ ತನಿಖೆ ಮಾಡುವಂತೆ ಹೇಳಿದ್ದೇನೆ’ ಎಂದು ಪ್ರಶಾಂತ್ ಸಂಬರಗಿ ಹೇಳಿದರು.

ಸಿಸಿಬಿ ಅಧಿಕಾರಿಗಳ ಎದುರು ಶನಿವಾರ ಹಾಜರಾದ ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಅವರು, ‘ನನಗೆ ಗೊತ್ತಿರುವ ಮಾಹಿತಿ ತಿಳಿಸಿದ್ದೇನೆ. ಶುಕ್ರವಾರ ಪುನಃ ಮತ್ತಷ್ಟು ದಾಖಲೆಗಳೊಂದಿಗೆ ಕಚೇರಿಗೆ ಬರುವಂತೆ ಅಧಿಕಾರಿಗಳು ತಿಳಿಸಿದ್ದಾರೆ’ ಎಂದರು.

‘ದಾಖಲೆಗಳ ಕೊರತೆ ಇದ್ದು, ಮತ್ತಷ್ಟು ದಾಖಲೆ ಬೇಕೆಂದು ಅಧಿಕಾರಿಗಳು ಕೇಳಿದ್ದಾರೆ. ಸಿಸಿಬಿ ಪೊಲೀಸರು ಉತ್ತಮ ತನಿಖೆ ಮಾಡುತ್ತಿದ್ದು, ನನಗಿಂತಲೂ ದುಪ್ಪಟ್ಟು ದಾಖಲೆಗಳು ಅವರ ಬಳಿ ಇವೆ. ಮುಂದಿನ ದಿನಗಳಲ್ಲಿ ಕರ್ನಾಟಕಕ್ಕೆ ಒಳ್ಳೆಯದು ಆಗಲಿದೆ’ ಎಂದೂ ತಿಳಿಸಿದರು.

ಯಾವ ಪಕ್ಷದ ವಕ್ತಾರ ನಾನಲ್ಲ: ‘ನಾನು ಬಿಜೆಪಿ ವಕ್ತಾರನೆಂದು ಯಾರೊಬ್ಬರೂ ಮಾತನಾಡಬೇಡಿ. ಯಾವ ಪಕ್ಷದ ಪ್ರಾಥಮಿಕ ಸದಸ್ಯನೂ ನಾನಲ್ಲ. ರಾಜ್ಯದ ಯುವಕರ ಬಗ್ಗೆ ಕಾಳಜಿ ವಹಿಸಿ ಹೋರಾಟ ಮಾಡುತ್ತಿದ್ದೇನೆ’ ಎಂದರು.

ತಮ್ಮ ವಿರುದ್ಧ ದಾಖಲಾಗಿರುವ ಎಫ್‌ಐಆರ್ ಬಗ್ಗೆ ಪ್ರತಿಕ್ರಿಯಿಸಿದ ಅವರು, ‘ದೂರಿನಲ್ಲಿ ಯಾವುದೇ ಹುರುಳಿಲ್ಲ. ಎಫ್‌ಐಆರ್‌ಗೆ ನಮ್ಮ ವಕೀಲರು ಕಾನೂನಿನಡಿ ಉತ್ತರ ನೀಡಲಿದ್ದಾರೆ’ ಎಂದು ಹೇಳಿದರು.

‘ನನ್ನ ಮಗ ಅಮಾಯಕ’

‘ನನ್ನ ಮಗ ಅಮಾಯಕ. ಯಾವುದೇ ತಪ್ಪು ಮಾಡಿಲ್ಲ. ಕಾರ್ಯಕ್ರಮ ಸಂಘಟನೆ ಕೆಲಸ ಮಾಡುತ್ತಿದ್ದ ಆತ, ಪೊಲೀಸರ ಅನುಮತಿ ಪಡೆದು ಪಾರ್ಟಿ ಆಯೋಜಿಸುತ್ತಿದ್ದ. ಡ್ರಗ್ಸ್‌ ಪ್ರಕರಣಕ್ಕೂ ಆತನಿಗೂ ಯಾವುದೇ ಸಂಬಂಧವಿಲ್ಲ’ ಎಂದು ಪ್ರಕರಣದಡಿ ಬಂಧಿಸಲಾಗಿರುವ ಆರೋಪಿ ವಿರೇನ್ ಖನ್ನಾನ ಪೋಷಕರು ಅಳಲು ತೋಡಿಕೊಂಡರು.

ಸಿಸಿಬಿ ಕಚೇರಿಗೆ ಶನಿವಾರ ಬಂದಿದ್ದ ಖನ್ನಾ ತಂದೆ ಶ್ರೀರಾಮ್, ‘ನನ್ನ ಮಗನನ್ನು ಪ್ರಕರಣದಲ್ಲಿ ಬಲಿಪಶು ಮಾಡಲಾಗುತ್ತಿದೆ’ ಎಂದು ದೂರಿದರು.

‘ಮಗ ಆಯೋಜಿಸುತ್ತಿದ್ದ ಪಾರ್ಟಿಯಲ್ಲಿ ಮದ್ಯ ಬಿಟ್ಟರೆ ಬೇರೆ ಏನು ಇರುತ್ತಿರಲಿಲ್ಲ. ಒಂದೇ ದೃಷ್ಟಿಯಿಂದ ನಿರ್ಧಾರಕ್ಕೆ ಬರದೇ ಎಲ್ಲ ಆಯಾಮದಲ್ಲೂ ಪರಿಶೀಲಿಸುವಂತೆ ಅಧಿಕಾರಿಗಳನ್ನು ಕೋರಿದ್ದೇವೆ’ ಎಂದೂ ಹೇಳಿದರು.

ದಾಳಿ ವೇಳೆ ಮನೆಯಲ್ಲಿ ಪೊಲೀಸ್ ಸಮವಸ್ತ್ರ ಸಿಕ್ಕ ಬಗ್ಗೆ ಮಾತನಾಡಿದ ಅವರು, ‘ದೀಪಾವಳಿ, ಹೋಳಿ ಹಾಗೂ ಹೊಸ ವರ್ಷದ ಪಾರ್ಟಿಗಳಿಗೆ ತಕ್ಕಂತೆ ಮಗ ಬಟ್ಟೆಗಳನ್ನು ಹಾಕಿಕೊಳ್ಳುತ್ತಿದ್ದ. ವಿಶೇಷ ದಿನಗಳಲ್ಲಿ ಪೊಲೀಸ್ ಸಮವಸ್ತ್ರವನ್ನೂ ಧರಿಸಿದ್ದ. ಇದು ತಪ್ಪಾ’ ಎಂದು ಪ್ರಶ್ನಿಸಿದರು.

‘ವಿರೇನ್ ಎರಡು ಬ್ಯಾಂಕ್ ಖಾತೆ ಹೊಂದಿದ್ದಾನೆ. ತೆರಿಗೆ ಪಾವತಿ ಸಂಬಂಧ ಎಲ್ಲ ದಾಖಲಾತಿಗಳು ನನ್ನ ಬಳಿ ಇವೆ. ಮಗನ ವಿಚಾರವಾಗಿ ಬರುತ್ತಿರುವ ಸುದ್ದಿಗಳು ಸುಳ್ಳು’ ಎಂದೂ ಶ್ರೀರಾಮ್ ಹೇಳಿದರು.

ಕೊಲಂಬೊಗೆ ಹೋಗಿದ್ದು ನಿಜ: ಜಮೀರ್

‘ನಾನು ಕೊಲಂಬೊಗೆ ಹೋಗಿದ್ದು ನಿಜ. ಯಾಕೆ ಹೋಗಬಾರದು’ ಎಂದು ಕಾಂಗ್ರೆಸ್‌ ಶಾಸಕ ಜಮೀರ್‌ ಅಹ್ಮದ್‌ ಪ್ರಶ್ನಿಸಿದ್ದಾರೆ.

‘ಕೊಲಂಬೊಗೆ ಭೇಟಿ ನೀಡಿದ್ದೆ. ಮಾಜಿ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಜೊತೆಗೆ ಹೋಗಿದ್ದೆ. ಒಂದೂವರೆ ವರ್ಷಕ್ಕೊಮ್ಮೆ ಕೊಲಂಬೊಗೆ ಹೋಗುತ್ತಾ ಇರುತ್ತೇನೆ’ ಎಂದಿದ್ದಾರೆ.

ಕೊಲಂಬೊಗೆ ಹೋಗಿದ್ದರು ಎಂದು ವಕೀಲ ಪ್ರಶಾಂತ್ ಸಂಬರಗಿ ಹೇಳಿಕೆಗೆ ಪ್ರತಿಕ್ರಿಯಿಸಿ ಜಮೀರ್, ‘ನಟಿ ಸಂಜನಾ ಜೊತೆ ನಾನು ಕೊಲಂಬೊಗೆ ಹೋಗಿದ್ದೆ ಎನ್ನುವುದನ್ನು ಸಾಬೀತುಪಡಿಸಿದರೆ ನನ್ನ ಇಡೀ ಆಸ್ತಿಯನ್ನು ಸರ್ಕಾರಕ್ಕೆ ಬರೆದುಕೊಡುತ್ತೇನೆ’ ಎಂದು ಸವಾಲು ಹಾಕಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT