ಮಂಗಳವಾರ, ಜೂನ್ 28, 2022
27 °C

ಸಿಡಿ ಯುವತಿಯ ವಕೀಲರು ಕೆಂಡ ಕಾರಿದ ಬಿಜೆಪಿ ಮುಖಂಡ, ಪೊಲೀಸ್ ಯಾರು ಗೊತ್ತೇ? ‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಸಿ.ಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ವಿರೋಧಿಗಳಿಂದ ನನ್ನ ವಿರುದ್ಧ ದಾಳಿ ಶುರುವಾಗಿದೆ. ಜಗದೀಶ್ ಕುಮಾರ್ ಒಬ್ಬ ರೌಡಿ ಶೀಟರ್, ಅವರ ಜೀವನವೇ ಸರಿ ಇಲ್ಲ ಎಂದು ಕೆಲ ಭ್ರಷ್ಟ ಪೊಲೀಸರು, ರಾಜಕಾರಣಿಗಳು ಆರೋಪ ಮಾಡುತ್ತಿದ್ದಾರೆ ಎಂದು ಸಿಡಿ ಸಂತ್ರಸ್ತೆ ಪರ ವಕೀಲ ಜಗದೀಶ್, ಫೇಸ್‌ಬುಕ್ ಲೈವ್ ವಿಡಿಯೊದಲ್ಲಿ ಕಿಡಿ ಕಾರಿದ್ದಾರೆ. 

11 ವರ್ಷಗಳ ಹಿಂದಿನ ಸಂಗತಿಗಳನ್ನು ಬಿಚ್ಚಿಟ್ಟಿರುವ ಅವರು ಬಿಜೆಪಿ ಮುಖಂಡ, ಪೊಲೀಸ್ ಅಧಿಕಾರಿಗಳ ವಿರುದ್ಧ ಕಿಡಿ ಕಾರಿದ್ದಾರೆ. ಪದೇ ಪದೇ 'ನಂದಿ ಅಲ್ಲ, ಜಗದೀಶ. ಯೂನಿಫಾರ್ಮ್ ಹಾಕಿಕೊಂಡ ಕೇಡಿಯ ದಾಖಲೆ ಎಲ್ಲ ನಮ್ಮ ಬಳಿ ಇದೆ, ಭ್ರಷ್ಟ ಪಿಸಿ, ಭ್ರಷ್ಟ ಐಪಿಎಸ್, ಭ್ರಷ್ಟ ಮಂತ್ರಿಯಾದ್ರೂ ಬಿಡಲ್ಲ' ಎಂದಿದ್ದಾರೆ ವಕೀಲ ಜಗದೀಶ್.

'2010ರಲ್ಲಿ ನಾನು ಒಬ್ಬ ಹೋರಾಟಗಾರನಾಗಿದ್ದೆ. ಕೊಡಿಗೇಹಳ್ಳಿಯಲ್ಲಿ ಅಂಗವಿಕಲರಿಗೆ ಮೀಸಲಾಗಿದ್ದ ಬಡಬಗ್ಗರ ಜಮೀನನ್ನು ಕಂದಾಯ ಸಚಿವ ಆರ್. ಅಶೋಕ್ ಸಂಬಂಧಿಕರು ಖರೀದಿ ಮಾಡಿದ್ದರು. ಈ ಬಗ್ಗೆ ನಾನು ಅವರ ವಿರುದ್ಧ ಲೋಕಾಯುಕ್ತಕ್ಕೆ ದೂರು ನೀಡಿದ್ದಕ್ಕೆ ಅಲ್ಲಿನ ಇನ್ಸ್‌ಪೆಕ್ಟರ್ ಪುನೀತ್ ಮತ್ತು ಡಿಸಿಪಿ ರವಿಕಾಂತೇಗೌಡ ನನ್ನ ವಿರುದ್ಧ ಒಂದೇ ರಾತ್ರಿ 11 ಕ್ರಿಮಿನಲ್ ಕೇಸ್ ದಾಖಲಿಸಿದರು' ಎಂದು ಫೇಸ್‌ಬುಕ್ ವಿಡಿಯೊದಲ್ಲಿ ಪ್ರಕರಣಗಳ ಕುರಿತಂತೆ ವಿವರಣೆ ಕೊಟ್ಟಿದ್ದಾರೆ.

'ಇಷ್ಟೇ ಅಲ್ಲ, ಇದರಿಂದ ನನ್ನ ಕುಟುಂಬವನ್ನು ಒಡೆಯುತ್ತಾರೆ. ಎಲ್‌ಎಲ್‌ಬಿ ಓದುವಾಗಲೇ ನಾನೇ ಎಲ್ಲ ಪ್ರಕರಣಗಳನ್ನು ಖುಲಾಸೆ ಮಾಡಿಕೊಂಡೆ. ಅಂದು ನಾನು ದಾಖಲಿಸಿದ್ದ ಪ್ರಕರಣಗಳನ್ನು ದುರ್ಬಲಗೊಳಿಸಲು ಯತ್ನಿಸಿದ ಪೊಲೀಸ್ ಅಧಿಕಾರಿಗಳ ಕಂತೆ ಕಂತೆ ಅಕ್ರಮಗಳ ದಾಖಲೆ ತೆಗೆದಿಟ್ಟಿದ್ದೀನಿ. ಭ್ರಷ್ಟ ಐಪಿಎಸ್ ಅಧಿಕಾರಿಗಳ ದಾಖಲೆ ನನ್ನ ಬಳಿ ಇವೆ. ನಿಮ್ಮ ಯೋಗ್ಯತೆಗಳನ್ನು ಈ ಪೆನ್ನಿನ ಮೂಲಕ ತೋರಿಸುತ್ತೇನೆ' ಎಂದು ಸವಾಲು ಹಾಕಿದ್ದಾರೆ.

'ಕೊಡಿಗೇಹಳ್ಳಿ ಮಾಜಿ ಕಾರ್ಪೊರೇಟರ್ ನನ್ನ ವಿರುದ್ಧ 13 ಕೇಸ್ ಹಾಕಿದ್ದರು. ಅವರು ಬಿಜೆಪಿಯ ಮಾಜಿ ಕಾರ್ಪೊರೇಟರ್ ಈ ಬಗ್ಗೆ ಬಿಜೆಪಿ ಉತ್ತರಿಸುತ್ತಾ ಎಂದು ಪ್ರಶ್ನಿಸಿದರು. ಕೆ.ಎನ್. ಚಕ್ರಪಾಣಿ ಮನೆಯ ಪಕ್ಕದ ಲೋಕ ಕಲ್ಯಾಣ ಟ್ರಸ್ಟ್ ಭೂಮಿಯನ್ನು ನುಂಗಿ ಹಾಕಿದರು. ಸರ್ಕಾರಿ ಭೂಮಿ ಬಿಡಿ. ಅಂಗವಿಕಲರ ಜಾಗವನ್ನೂ ಬಿಡಲಿಲ್ಲ. ಇಂತಹವರ ಅನ್ಯಾಯದ ವಿರುದ್ಧ ಹೋರಾಡಿದ್ದೇನೆ. ಒಬ್ಬ ಐಪಿಎಸ್ ಅಧಿಕಾರಿಯೂ ಇದ್ದಾನೆ. ಅವನ ಹೆಸರು ಹೇಳುವುದಕ್ಕೆ ನನಗೆ ನಾಚಿಕೆ ಆಗುತ್ತೆ. ಅವರೆಲ್ಲ ಭ್ರಷ್ಟ ವ್ಯವಸ್ಥೆಯಲ್ಲಿ ಭ್ರಷ್ಟ ಸಚಿವರಿಗೆ ಬಕೆಟ್ ಹಿಡಿದುಕೊಂಡು ನಮ್ಮಂಥ ಹೋರಾಟಗಾರರ ವಿರುದ್ಧ ಕ್ರಿಮಿನಲ್ ಕೇಸ್ ಹಾಕಿದ್ದರು ಎಂದು ಜಗದೀಶ್ ಕಿಡಿ ಕಾರಿದರು. ಮಾಜಿ ಕಾರ್ಪೊರೇಟರ್ ಅಶ್ವತ್ಥನಾರಾಯಣಗೌಡ ಈ ಎಲ್ಲ ಪ್ರಕರಣಗಳ ರೂವಾರಿ. ನನ್ನ ಮೇಲೆ ಯಾವುದೇ ಕೊಲೆ, ವಂಚನೆ ಪ್ರಕರಣ ಇಲ್ಲ. ಅವರ ವಿರುದ್ಧ ಬರೆದೆ ಎಂದು ಐಟಿ ಕಾಯ್ದೆಯಡಿ ಪ್ರಕರಣ, ಮಾನಹಾನಿ ಮತ್ತು ದೌರ್ಜನ್ಯ ಪ್ರಕರಣಗಳನ್ನು ದಾಖಲಿಸಿದರು'.

'ನನ್ನ ವಿರುದ್ದ ಎರಡು ಮೂರು ದಿನಗಳಲ್ಲಿ ರೌಡಿ ಶೀಟರ್ ಓಪನ್ ಮಾಡಿದ ಆ ಮಹಾನ್ ಭ್ರಷ್ಟ ನಾಯಕ ಈಗ ಸಂತ್ರಸ್ತ ಯುವತಿಯ ವಕೀಲರು ರೌಡಿ ಶೀಟರ್ ಅಂತಾ ಹೇಳುತ್ತಿದ್ದಾನೆ' ಎಂದು ವಾಗ್ದಾಳಿ ನಡೆಸಿದ್ದಾರೆ.

ಗೌರಿ ಲಂಕೇಶ್ ಹಂತಕನನ್ನು ಬಂಧಿಸಿದ್ದ ಪೊಲೀಸ್ ಅಧಿಕಾರಿ ಪುನೀತ್, ನಾನು ಹಂತಕನನ್ನು ಬಂಧಿಸಿದೆ ಎಂದು ಸೆಲ್ಫಿ ತೆಗೆದು ಫೇಸ್‌ಬುಕ್‌ಗೆ ಹಾಕುತ್ತಾನೆ. ಪೊಲೀಸ್ ಅಧಿಕಾರಿ ಎಂಬ ಸೂಕ್ಷ್ಮತೆ ಇಲ್ಲದೆ ವರ್ತಿಸಿದ್ದ. ಅವರ ವಿರುದ್ಧ ಒಂದು ಪುಟದ ಆರ್ಟಿಕಲ್ ಬಂದಿತ್ತು. ಅದೇ ಪೊಲೀಸ್ ಇನ್ಸ್‌ಪೆಕ್ಟರ್, ಕೊಡಿಗೇಹಳ್ಳಿಯಲ್ಲಿ, ಆರ್. ಅಶೋಕ್ ಭಾಮೈದರು ಟ್ರಸ್ಟ್ ಭೂಮಿ ಪರಭಾರೆ ಮಾಡಿದಾಗ ಅವರ ವಿರುದ್ಧ ನಾನು ಲೋಕಾಯುಕ್ತಕ್ಕೆ ದೂರು ಕೊಟ್ಟಾಗ, ನನ್ನ ಮೇಲೆ ಸುಳ್ಳು ಕೇಸ್ ಹಾಕಿದ್ದರು’ ಎಂದು ಕಿಡಿ ಕಾರಿದ್ದಾರೆ.

ಮಾಧ್ಯಮಗಳಿಗೆ ಸಂತ್ರಸ್ತೆ ವಿಡಿಯೊ: ಎಸ್ಐಟಿ ‌ವಿರುದ್ಧ ವಕೀಲ‌ ಜಗದೀಶ ಗರಂ

ಕೆಪಿಸಿಸಿ ಕಚೇರಿಯಿಂದಲೇ ಸಿ.ಡಿ.ಪ್ರಕರಣದ ನಿರ್ವಹಣೆ: ಬಿಜೆಪಿ ಆರೋಪ

ಸಂತ್ರಸ್ತೆ ವಿಡಿಯೊ ಹರಿಬಿಟ್ಟ ವಿಚಾರ: ಎಸಿಪಿ ಧರ್ಮೇಂದ್ರ, ಕವಿತಾ ವಿರುದ್ಧ ದೂರು

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು