ಗುರುವಾರ , ಮೇ 26, 2022
24 °C
ಹಿರಿಯ ಪೊಲೀಸ್ ಅಧಿಕಾರಿಗಳಿಂದ ಮಾಹಿತಿ ಪಡೆದ ತಂಡ

ಬಿಟ್ ಕಾಯಿನ್‌: ‘ಅಮಿತ’ ತನಿಖೆ, ಕೇಂದ್ರ ಗೃಹ ಸಚಿವಾಲಯದಿಂದ ರಹಸ್ಯ ಕಾರ್ಯಾಚರಣೆ

ವಿ.ಎಸ್‌. ಸುಬ್ರಹ್ಮಣ್ಯ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ತಲ್ಲಣ ಸೃಷ್ಟಿಸುತ್ತಿರುವ ಬಿಟ್‌ ಕಾಯಿನ್‌ ಮತ್ತು ಹಣಕಾಸು ಸಂಸ್ಥೆಗಳ ಸರ್ವರ್‌ ಹ್ಯಾಕಿಂಗ್‌ ಹಗರಣದ ಕುರಿತು ಕೇಂದ್ರ ಗೃಹ ಸಚಿವಾಲಯ ಪ್ರಾಥಮಿಕ ತನಿಖೆ ಆರಂಭಿಸಿದೆ.

ಕೇಂದ್ರದ ವಿವಿಧ ತನಿಖಾ ಸಂಸ್ಥೆಗಳ ಹಿರಿಯ ಅಧಿಕಾರಿಗಳನ್ನು ಒಳಗೊಂಡ ಜಂಟಿ ತಂಡವೊಂದನ್ನು ರಾಜ್ಯಕ್ಕೆ ಕಳುಹಿಸಿದ್ದ ಕೇಂದ್ರ ಗೃಹ ಸಚಿವಾಲಯ, ಹಗರಣಕ್ಕೆ ಸಂಬಂಧಿಸಿದ ಮಹತ್ವದ ಮಾಹಿತಿಗಳನ್ನು ಸಂಗ್ರಹಿಸಿದೆ ಎಂಬ ಖಚಿತ ಮಾಹಿತಿ ‘ಪ್ರಜಾವಾಣಿ’ಗೆ ಲಭ್ಯವಾಗಿದೆ.

ಸಿಬಿಐ, ಜಾರಿ ನಿರ್ದೇಶನಾಲಯ, ಕೇಂದ್ರ ಗುಪ್ತಚರ ಇಲಾಖೆ ಸೇರಿದಂತೆ ವಿವಿಧ ತನಿಖಾ ಸಂಸ್ಥೆಗಳ ಹಿರಿಯ ಅಧಿಕಾರಿಗಳನ್ನು ಒಳಗೊಂಡ ತಂಡ ನವೆಂಬರ್‌ 2ರಂದು ಬೆಂಗಳೂರಿಗೆ ಬಂದಿತ್ತು. ಮಹಿಳಾ ಅಧಿಕಾರಿಯೊಬ್ಬರ ನೇತೃತ್ವದ ಉನ್ನತಮಟ್ಟದ ತಂಡ, ನಗರ ಪೊಲೀಸ್‌ ಕಮಿಷನರ್‌ ಕಚೇರಿಯಲ್ಲೇ ಮೊಕ್ಕಾಂ ಹೂಡಿ ಕಾರ್ಯಾಚರಣೆ ನಡೆಸಿತ್ತು. ರಾಜ್ಯದ ಪೊಲೀಸ್‌ ಇಲಾಖೆಯ ಹಿರಿಯ ಅಧಿಕಾರಿಗಳೂ ಸೇರಿದಂತೆ ಹಲವರ ಹೇಳಿಕೆ ಪಡೆದು ದೆಹಲಿಗೆ ವಾಪಸಾಗಿದ್ದ ಈ ತಂಡ ಕೇಂದ್ರ ಗೃಹ ಸಚಿವಾಲಯಕ್ಕೆ ವಿಸ್ತೃತವಾದ ವರದಿಯೊಂದನ್ನು ಸಲ್ಲಿಸಿದೆ ಎಂದು ಮೂಲಗಳು ತಿಳಿಸಿವೆ.

ಹಲವು ಅಧಿಕಾರಿಗಳ ವಿಚಾರಣೆ: ಕೇಂದ್ರ ತಂಡವು, ರಾಜ್ಯದ ಹಲವರನ್ನು ಕರೆಸಿಕೊಂಡು ಅನೌಪಚಾರಿಕವಾಗಿ ಹೇಳಿಕೆ ಪಡೆದುಕೊಂಡಿದೆ. ಪ್ರಕರಣಕ್ಕೆ ಸಂಬಂಧಿಸಿದ ಕೆಲವು ದಾಖಲೆಗಳನ್ನೂ ಸಂಗ್ರಹಿಸಿದೆ. ಪ್ರಧಾನಿ ಸಚಿವಾಲಯದ ನಿರ್ದೇಶನದಂತೆ ಮಾಹಿತಿ ಸಂಗ್ರಹ ನಡೆದಿದೆ ಎಂದು ಗೊತ್ತಾಗಿದೆ.

ರಾಜ್ಯ ಪೊಲೀಸ್‌ ಮಹಾನಿರ್ದೇಶಕ ಪ್ರವೀಣ್‌ ಸೂದ್‌, ಮಹತ್ವದ ಹುದ್ದೆಯಲ್ಲಿರುವ ಎಡಿಜಿಪಿಗಳು, ನಗರ ಪೊಲೀಸ್ ಕಮಿಷನರ್‌ ಕಮಲ್‌ ಪಂತ್ ಸೇರಿದಂತೆ ಹಲವು ಅಧಿಕಾರಿಗಳಿಂದ ಕೇಂದ್ರದ ತಂಡ ಮಾಹಿತಿ ಸಂಗ್ರಹಿಸಿದೆ. ಸಿಸಿಬಿ ಮತ್ತು ಸಿಐಡಿಯಲ್ಲಿ ಶ್ರೀಕೃಷ್ಣನಿಗೆ ಸಂಬಂಧಿಸಿದ ಪ್ರಕರಣಗಳ ತನಿಖೆ ನಡೆಸಿದ್ದ ತಂಡಗಳಲ್ಲಿದ್ದ ಅಧಿಕಾರಿಗಳ ಹೇಳಿಕೆಯನ್ನೂ ಪಡೆಯಲಾಗಿದೆ. ಈ ಪ್ರಕರಣಗಳ ತನಿಖೆಯಲ್ಲಿ ನೆರವಾಗಿದ್ದ ಸೈಬರ್‌ ತಂತ್ರಜ್ಞರ ಹೇಳಿಕೆಯನ್ನೂ ಕೇಂದ್ರ ತಂಡ ಪಡೆದಿದೆ. ಹಲವು ಪ್ರತ್ಯೇಕ ತಂಡಗಳಲ್ಲಿ ಮಾಹಿತಿ ಸಂಗ್ರಹಿಸುವ ಕೆಲಸ ನಡೆದಿತ್ತು ಎಂದು ಮೂಲಗಳು ಹೇಳಿವೆ.

ಕೇಂದ್ರ ಗೃಹ ಸಚಿವಾಲಯದ ಸೂಚನೆಯಂತೆ ಈ ತಂಡಕ್ಕೆ ಪೊಲೀಸ್‌ ಕಮಿಷನರ್‌ ಕಚೇರಿಯಲ್ಲಿ ಪ್ರತ್ಯೇಕವಾಗಿ ಸ್ಥಳಾವಕಾಶ ಕಲ್ಪಿಸಲಾಗಿತ್ತು. ರಾಜ್ಯದ ಅಧಿಕಾರಿಗಳಿಂದ ಮಾಹಿತಿ ಸಂಗ್ರಹಿಸುವ ಸಂದರ್ಭದಲ್ಲಿ ಇತರ ಯಾವುದೇ ವ್ಯಕ್ತಿಗಳು ಅಲ್ಲಿಗೆ ಪ್ರವೇಶಿಸದಂತೆ ನಿರ್ಬಂಧಿಸಲಾಗಿತ್ತು.

ಬಿಟ್‌ ಕಾಯಿನ್‌, ಹಣಕಾಸು ಸಂಸ್ಥೆಗಳ ಸರ್ವರ್‌ ಹ್ಯಾಕ್‌ ಮಾಡಿ ಸಾವಿರಾರು ಕೋಟಿ ರೂಪಾಯಿಗಳನ್ನು ದೋಚಿದ ಆರೋಪ ಶ್ರೀಕೃಷ್ಣನ ಮೇಲಿದೆ. ಸರ್ಕಾರದ ಇಲಾಖೆಗಳು ಮತ್ತು ಸಂಸ್ಥೆಗಳ ಸರ್ವರ್‌ಗಳಿಗೂ ಕನ್ನಹಾಕಿ ಹಣ ಲಪಟಾಯಿಸಿದ್ದ. ಈ ಕೃತ್ಯಗಳಲ್ಲಿ ರಾಜ್ಯದ ಪ್ರಭಾವಿ ರಾಜಕಾರಣಿಗಳು ಮತ್ತು ಕೆಲವು ಹಿರಿಯ ಅಧಿಕಾರಿಗಳೂ ಪಾಲು ಪಡೆದಿದ್ದಾರೆ ಎಂಬ ಆಪಾದನೆಯೂ ಇದೆ. ಈ ಕುರಿತು ಮಾಹಿತಿ ಸಂಗ್ರಹಿಸುವುದಕ್ಕಾಗಿಯೇ ತಂಡವೊಂದನ್ನು ಕೇಂದ್ರ ಗೃಹ ಸಚಿವಾಲಯ ಕಳುಹಿಸಿತ್ತು ಎಂಬ ಮಾಹಿತಿಯೂ ಲಭಿಸಿದೆ.

2020ರ ನವೆಂಬರ್‌ 7ರಂದು ಶ್ರೀಕೃಷ್ಣನನ್ನು ಮಾದಕ ವಸ್ತು ‍ಪ್ರಕರಣವೊಂದರಲ್ಲಿ ಕೆಂಪೇಗೌಡ ನಗರ ಠಾಣೆ ಪೊಲೀಸರು ಬಂಧಿಸಿದ್ದರು. ಬಳಿಕ ಆತನ ಹ್ಯಾಕಿಂಗ್‌ ಕೈಚಳಕದ ಕೃತ್ಯಗಳು ಹೊರಬಂದಿದ್ದವು. ಹಗರಣದ ಕುರಿತು ಸಿಸಿಬಿ ಮತ್ತು ಸಿಐಡಿ ಪೊಲೀಸರು ಪ್ರತ್ಯೇಕವಾದ  ತನಿಖೆ ನಡೆಸಿದ್ದರು. ಆರೋಪಿಯ ಬಂಧನ ಮತ್ತು ತನಿಖೆಯ ಅವಧಿಯಲ್ಲಿ ನಡೆದಿದ್ದ ಬೆಳವಣಿಗೆಗಳ ಬಗ್ಗೆಯೂ ಕೇಂದ್ರದ ಅಧಿಕಾರಿಗಳು ಮಾಹಿತಿ ಸಂಗ್ರಹಿಸಿದ್ದಾರೆ.

ಇ.ಡಿಯಿಂದಲೂ ಕೇಂದ್ರಕ್ಕೆ ವರದಿ

ಅಕ್ಟೋಬರ್‌ 25ರಿಂದ ನಾಲ್ಕು ದಿನಗಳ ಕಾಲ ಶ್ರೀಕೃಷ್ಣನನ್ನು ಸತತ ವಿಚಾರಣೆ ನಡೆಸಿದ್ದ ಜಾರಿ ನಿರ್ದೇಶನಾಲಯದ (ಇ.ಡಿ) ಅಧಿಕಾರಿಗಳು ಕೇಂದ್ರ ಗೃಹ ಸಚಿವಾಲಯಕ್ಕೆ ಪ್ರತ್ಯೇಕ ವರದಿ ಸಲ್ಲಿಸಿದ್ದಾರೆ.

ಬಿಟ್‌ ಕಾಯಿನ್‌ ಮತ್ತು ಸರ್ವರ್‌ ಹ್ಯಾಕಿಂಗ್‌ ಹಗರಣದಲ್ಲಿ ಇ.ಡಿ ಅಧಿಕಾರಿಗಳು ಶ್ರೀಕೃಷ್ಣನ ವಿರುದ್ಧ ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ ಅಡಿ ಪ್ರಕರಣ ದಾಖಲಿಸಿದ್ದರು. ಆಗಸ್ಟ್‌ ತಿಂಗಳಲ್ಲೇ ಆತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದರು. ತಾನು ಭಾಗಿಯಾಗಿರುವ ಹ್ಯಾಕಿಂಗ್‌ ಪ್ರಕರಣಗಳಲ್ಲಿ ದೋಚಿರುವ ಹಣವನ್ನು ರಾಜ್ಯದ ಕೆಲವು ಪ್ರಭಾವಿ ರಾಜಕಾರಣಿಗಳು, ಅಧಿಕಾರಿಗಳು ಮತ್ತು ಉದ್ಯಮಿಗಳಿಗೆ ನೀಡಿರುವುದಾಗಿ ಇ.ಡಿ ಎದುರು ಆಗಲೇ ಹೇಳಿಕೆ ನೀಡಿದ್ದ. ಮತ್ತೆ ವಿಚಾರಣೆ ನಡೆಸಿದ ಇ.ಡಿ ಅಧಿಕಾರಿಗಳು ಸಾಕಷ್ಟು ಮಾಹಿತಿ ಕಲೆ ಹಾಕಿ, ವರದಿಯಲ್ಲಿ ಉಲ್ಲೇಖಿಸಿದ್ದಾರೆ ಎಂದು ಮೂಲಗಳು ಹೇಳಿವೆ.

ಸಚಿನ್‌ ಮಾಮನಿ ಪತ್ರದ ಸದ್ದು

ಬಿಟ್‌ ಕಾಯಿನ್‌ ಹ್ಯಾಕಿಂಗ್‌ ಹಗರಣಕ್ಕೆ ಸಂಬಂಧಿಸಿದಂತೆ ಸಚಿನ್‌ ಮಾಮನಿ ಎಂಬುವವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ನೀಡಿದ್ದಾರೆ ಎನ್ನಲಾದ ದೂರಿನ ಪ್ರತಿಯೊಂದು ಸಾಮಾಜಿಕ ಮಾಧ್ಯಮಗಳಲ್ಲಿ ಜೋರಾಗಿ ಸದ್ದು ಮಾಡುತ್ತಿದೆ.

ರಾಜ್ಯದ ಅಧಿಕಾರಸ್ಥ ರಾಜಕಾರಣಿಗಳು, ಅವರ ಮಕ್ಕಳು, ಆಯಕಟ್ಟಿನ ಹುದ್ದೆಗಳಲ್ಲಿರುವ ಕೆಲವು ಹಿರಿಯ ಅಧಿಕಾರಿಗಳು ಹಗರಣದಲ್ಲಿ ಭಾಗಿಯಾಗಿದ್ದಾರೆ ಎಂಬ ಆರೋಪ ದೂರಿನಲ್ಲಿದೆ.

ಬೊಮ್ಮಾಯಿ ದೆಹಲಿಗೆ ಹೋಗಿದ್ದೇಕೆ?

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಬುಧವಾರ ದಿಢೀರ್‌ ದೆಹಲಿಗೆ ತೆರಳಿರುವುದು ಮತ್ತು ಗುರುವಾರ ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್‌ ಶಾ ಹಾಗೂ ಪಕ್ಷದ ಅಧ್ಯಕ್ಷ ಜೆ.ಪಿ.ನಡ್ಡಾ ಅವರನ್ನು ಭೇಟಿ ಮಾಡುತ್ತಿರುವುದು ರಾಜಕೀಯ ವಲಯದಲ್ಲಿ ಗಂಭೀರ ಚರ್ಚೆಗೆ ಕಾರಣವಾಗಿದೆ.

ಬಿಟ್‌ಕಾಯಿನ್ ಪ್ರಕರಣದಲ್ಲಿ ರಾಜಕೀಯ ವ್ಯಕ್ತಿಗಳೂ ಇದ್ದಾರೆ ಎಂಬ ವದಂತಿ ಬಗ್ಗೆ ಮೋದಿ, ಅಮಿತ್‌ ಶಾ ಮತ್ತು ನಡ್ಡಾ ಅವರಿಗೆ ಸಮಜಾಯಿಷಿ ನೀಡಲು ಬೊಮ್ಮಾಯಿ ಹೋಗಿದ್ದಾರೆ ಎಂಬ ಚರ್ಚೆ ಬಿಜೆಪಿಯಲ್ಲಿ ನಡೆಯುತ್ತಿದೆ.

ದೆಹಲಿಯಲ್ಲಿ ಈ ಬಗ್ಗೆ ಪ್ರತಿಕ್ರಿಯಿಸಿದ ಬೊಮ್ಮಾಯಿ, ‘ಬಿಟ್ ಕಾಯಿನ್ ಹಗರಣಕ್ಕೆ‌ ಸಂಬಂಧಿಸಿದಂತೆ‌ ಬಿಜೆಪಿ ಹೈಕಮಾಂಡ್ ಯಾವುದೇ ರೀತಿಯ ವಿವರಣೆ ಅಥವಾ ಮಾಹಿತಿ ಕೇಳಿಲ್ಲ’ ಎಂದು ಹೇಳಿದರು.

‘ಪ್ರಧಾನಿ ಭೇಟಿಗೆ ಗುರುವಾರ ಸಮಯ ನಿಗದಿಯಾಗಿದೆ. ಗೃಹ ಸಚಿವರು ಮತ್ತು ಪಕ್ಷದ ಅಧ್ಯಕ್ಷರ ಭೇಟಿಯೂ ನಿಗದಿ ಆಗಲಿದೆ’ ಎಂದು ಬೊಮ್ಮಾಯಿ ಬೆಂಗಳೂರಿನಲ್ಲಿ ಸುದ್ದಿಗಾರರಿಗೆ ಹೇಳಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು