ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೆಚ್ಚಿನ ಪರಿಹಾರಕ್ಕೆ ಸಿ.ಎಂ ಮನವಿ

ರಾಜ್ಯದಲ್ಲಿ ಪ್ರವಾಹ ಅಧ್ಯಯನಕ್ಕೆ ಕೇಂದ್ರದಿಂದ ಆರು ಅಧಿಕಾರಿಗಳ ತಂಡ
Last Updated 14 ಡಿಸೆಂಬರ್ 2020, 6:37 IST
ಅಕ್ಷರ ಗಾತ್ರ

ಬೆಂಗಳೂರು: ‘ರಾಜ್ಯದಲ್ಲಿ ಸೆಪ್ಟೆಂಬರ್‌, ಅಕ್ಟೋಬರ್‌ ತಿಂಗಳಲ್ಲಿ ಸಂಭವಿಸಿದ ಭಾರಿ ಮಳೆ ಮತ್ತು ಪ್ರವಾಹದಿಂದ ಅಂದಾಜು ₹ 15,410 ಕೋಟಿಯ ನಷ್ಟ ಉಂಟಾಗಿದ್ದು, ಸಂತ್ರಸ್ತರಿಗೆ ನೆರವು ನೀಡಲು ಮತ್ತು ಮೂಲಸೌಲಭ್ಯಗಳ ದುರಸ್ತಿಗೆ ಕೇಂದ್ರದಿಂದ ಹೆಚ್ಚಿನ ಪ್ರಮಾಣದಲ್ಲಿ ಪರಿಹಾರ ಒದಗಿಸಿಕೊಡಬೇಕು’ ಎಂದು ಪ್ರವಾಹ ಅಧ್ಯಯನಕ್ಕೆ ಬಂದ ಕೇಂದ್ರ ತಂಡದ ಬಳಿ ಮುಖ್ಯಮಂತ್ರಿ ಬಿ. ಎಸ್‌. ಯಡಿಯೂರಪ್ಪ ಮನವಿ ಮಾಡಿದರು.

ಮೊದಲ ಹಂತದಲ್ಲಿ ಉಂಟಾದ ನಷ್ಟಕ್ಕೆ ಈಗಾಗಲೇ ಪ್ರವಾಹ ಪರಿಹಾರವಾಗಿ ರಾಷ್ಟ್ರೀಯ ವಿಪತ್ತು ಪರಿಹಾರ ನಿಧಿಯಿಂದ (ಎನ್‌ಡಿಆರ್‌ಎಫ್‌) ಕೇಂದ್ರ ಸರ್ಕಾರ
₹ 577.84 ಕೋಟಿ ಬಿಡುಗಡೆ ಮಾಡಿದೆ. ಇದೀಗ ಎರಡನೇ ಬಾರಿಗೆ ಕೇಂದ್ರದ ತಂಡ ರಾಜ್ಯಕ್ಕೆ ಬಂದಿದೆ.

ಸೆಪ್ಟೆಂಬರ್ ಕೊನೆಯಲ್ಲಿ ಮತ್ತು ಅಕ್ಟೋಬರ್‌ ಆರಂಭದಲ್ಲಿ ಕೃಷ್ಣಾ ಮತ್ತು ಭೀಮಾ ನದಿಯಲ್ಲಿ ಉಂಟಾದ ಪ್ರವಾಹದಿಂದ ಆಗಿರುವ ಹಾನಿಯ ಬಗ್ಗೆ ತಂಡಕ್ಕೆ ಮಾಹಿತಿ ನೀಡಿದ ಮುಖ್ಯಮಂತ್ರಿ, ‘ಭೂ ಕುಸಿತ ಮತ್ತು ನೆರೆಯಿಂದ 16 ಲಕ್ಷ ಹೆಕ್ಟೆರ್‌ಗೂ ಹೆಚ್ಚು ಕೃಷಿ ಭೂಮಿ ಹಾನಿಗೊಳಗಾಗಿದೆ. ಸುಮಾರು 34,794 ಮನೆಗಳಿಗೆ ಹಾನಿಯಾಗಿದೆ. ಅಲ್ಲದೆ, ರಸ್ತೆ,
ಸೇತುವೆ ಸೇರಿದಂತೆ ಮೂಲಸೌಲಭ್ಯಗಳೂ ಕೊಚ್ಚಿಕೊಂಡು ಹೋಗಿವೆ’ ಎಂದರು.

‘ಈಗಾಗಲೇ ರಾಜ್ಯ ಸರ್ಕಾರ 7.12 ಲಕ್ಷ ರೈತರಿಗೆ ಇನ್‌ಪುಟ್‌ ಸಬ್ಸಿಡಿಯಾಗಿ ₹551.14 ಕೋಟಿ ವಿತರಿಸಿದೆ. ತೀವ್ರ ಆರ್ಥಿಕ ಸಂಕಷ್ಟದ ಮಧ್ಯೆಯೂ ₹1,320.48 ಕೋಟಿಯನ್ನು ನೆರೆ ಪರಿಹಾರ ನೀಡಲು ಬಿಡುಗಡೆ ಮಾಡಲಾಗಿದೆ. ಸಂಪೂರ್ಣ ಹಾನಿ
ಗೊಳಗಾದ ಮನೆಗಳಿಗೆ ₹5 ಲಕ್ಷ, ಹೆಚ್ಚಿನ ಪ್ರಮಾಣದಲ್ಲಿ ಹಾನಿಯಾದವುಗಳಿಗೆ ₹ 3 ಲಕ್ಷ, ಅಲ್ಪಸ್ವಲ್ಪ ಹಾನಿಯಾದ ಮನೆಗಳಿಗೆ ₹ 50 ಸಾವಿರ ಪರಿಹಾರ ನೀಡಲಾಗಿದೆ. ಈ ಮೊತ್ತ ರಾಜ್ಯ ವಿಪತ್ತು ಪರಿಹಾರ ನಿಧಿ (ಎಸ್‌ಡಿಆರ್‌ಎಫ್‌) ಮಾರ್ಗಸೂಚಿಯಲ್ಲಿರುವ ನಿಯಮಾವಳಿಗಿಂತ ಹೆಚ್ಚು’ ಎಂದರು.

ಕೇಂದ್ರ ಗೃಹ ಸಚಿವಾಲಯದಲ್ಲಿ ಜಂಟಿ ಕಾರ್ಯದರ್ಶಿಯಾಗಿರುವ ರಮೇಶ್‌ಕುಮಾರ್‌ ಗಂಟ ನೇತೃತ್ವದಲ್ಲಿ ಅಂತರ್‌ ಸಚಿವಾಲಯಗಳ ಆರು ಅಧಿಕಾರಿಗಳ ಕೇಂದ್ರ ತಂಡ (ಐಎಂಸಿಟಿ) ರಾಜ್ಯಕ್ಕೆ ಬಂದಿದ್ದು, ತಲಾ ಇಬ್ಬರಂತೆ, ಕಲಬುರ್ಗಿ, ವಿಜಯಪುರ ಮತ್ತು ಉಡುಪಿ ಜಿಲ್ಲೆಗಳಿಗೆ ಸೋಮವಾರ ಮತ್ತು ಮಂಗಳವಾರ ಭೇಟಿ ನೀಡಿ ಅಧ್ಯಯನ ನಡೆಸಲಿದ್ದಾರೆ. ಮಂಗಳವಾರ ಸಂಜೆ ಮುಖ್ಯ ಕಾರ್ಯದರ್ಶಿ ಜೊತೆ ಚರ್ಚಿಸಿದ ಬಳಿಕ ತಂಡ ದೆಹಲಿಗೆ ತೆರಳಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT