ಶುಕ್ರವಾರ, ಅಕ್ಟೋಬರ್ 2, 2020
21 °C
ಮಳೆಯ ಜೊತೆಗೆ ಬೀಸಿದ ಗಾಳಿಗೆ ಧರೆಗುರುಳಿದ ವಿದ್ಯುತ್‌ ಕಂಬಗಳು

ಕೊಡಗು | ಕತ್ತಲೆಯಲ್ಲಿ ಗ್ರಾಮೀಣ ಪ್ರದೇಶ; ‘ಬೆಳಕು’ ಮೂಡಿಸಲು ಸೆಸ್ಕ್‌ ಸಾಹಸ

ಆದಿತ್ಯ ಕೆ.ಎ. Updated:

ಅಕ್ಷರ ಗಾತ್ರ : | |

Prajavani

ಮಡಿಕೇರಿ: ಕೊಡಗು ಜಿಲ್ಲೆಯ ನದಿ ಪಾತ್ರಗಳಲ್ಲಿ ಪ್ರವಾಹದಿಂದ ದ್ವೀಪದಂತಾಗಿರುವ ಗ್ರಾಮಗಳ ಜನರು ಈಗ ಕತ್ತಲೆಯಲ್ಲಿ ಕಾಲ ಕಳೆಯುತ್ತಿದ್ದಾರೆ.

ಭೂಕುಸಿತ, ಪ್ರವಾಹದಿಂದ ತೊಂದರೆಗೆ ಒಳಗಾಗಿರುವ ಜಿಲ್ಲೆಯಲ್ಲಿ, ವಿದ್ಯುತ್‌ ಸಂಪರ್ಕವಿಲ್ಲದೇ ಎಷ್ಟೋ ಗ್ರಾಮಗಳ ಜನರು ತೊಂದರೆಗೆ ಸಿಲುಕಿದ್ದಾರೆ.

ಪ್ರವಾಹದಿಂದ ಸಂಕಷ್ಟಕ್ಕೆ ಸಿಲುಕಿದ್ದ 550 ಜನರಿಗೆ 9 ಪರಿಹಾರ ಕೇಂದ್ರಗಳಲ್ಲಿ ವಾಸ್ತವ್ಯ ಕಲ್ಪಿಸಲಾಗಿದೆ. ಆದರೆ, ಸುರಕ್ಷಿತ ಪ್ರದೇಶದಲ್ಲಿ ಮನೆಗಳಿದ್ದು ರಸ್ತೆ ಸಂಪರ್ಕ ಕಡಿತಗೊಂಡಿರುವ ಕಡೆಗಳಲ್ಲಿ ಜನರು ವಾರದಿಂದ ಕತ್ತಲೆಯಲ್ಲಿದ್ದಾರೆ. ಅವರಿಗೆ ಶುದ್ಧ ಕುಡಿಯುವ ನೀರೂ ಲಭಿಸುತ್ತಿಲ್ಲ. ಇನ್ನು ಅಕ್ಕಪಕ್ಕದ ಬಾವಿ, ಹೊಳೆಯ ನೀರು ಬಣ್ಣ ಬದಲಾಯಿಸಿದೆ. ಸುತ್ತಲೂ ಅಗಾಧ ಪ್ರಮಾಣದ ನೀರಿದ್ದರೂ ಬಳಸಲು ಸಾಧ್ಯವಾಗುತ್ತಿಲ್ಲ.

ದ್ವೀಪದಂತಾಗಿರುವ ನಾಪೋಕ್ಲು, ಅಯ್ಯಂಗೇರಿ, ಕಕ್ಕಬ್ಬೆ, ಪಾರಾಣೆ ಗ್ರಾಮಗಳಲ್ಲಿ ಸೇರಿದಂತೆ ಹಲವು ಗ್ರಾಮಗಳಿಗೆ ವಾರದಿಂದ ವಿದ್ಯುತ್‌ ಇಲ್ಲ.

ಮಳೆಯೊಂದಿಗೆ ಬೀಸಿದ ಗಾಳಿಗೆ ಜಿಲ್ಲೆಯಲ್ಲಿ ಮರಗಳು ವಿದ್ಯುತ್‌ ಕಂಬಗಳ ಮೇಲೆ ಬಿದ್ದು ಕಂಬಗಳು ನೆಲದ ಪಾಲಾಗಿವೆ. ಅಲ್ಲಲ್ಲಿ ವಿದ್ಯುತ್‌ ತಂತಿಗಳು ತುಂಡಾಗಿವೆ. ಅಂತಹ ಪ್ರದೇಶದಲ್ಲಿ ಮತ್ತೆ ಬೆಳಕು ಮೂಡಿಸಲು ಚಾಮುಂಡೇಶ್ವರಿ ವಿದ್ಯುತ್‌ ಸರಬರಾಜು ನಿಗಮದ (ಸೆಸ್ಕ್‌) ಸಿಬ್ಬಂದಿ ಸಾಹಸ ಪಡುತ್ತಿದ್ದಾರೆ. ಸೆಸ್ಕ್‌ನಿಂದ ಮೂರು ತಾಲ್ಲೂಕಿಗೂ ಪ್ರತ್ಯೇಕ ತಂಡ ರಚಿಸಲಾಗಿದೆ.

ನಗರ ಪ್ರದೇಶದಲ್ಲಿ ವಿದ್ಯುತ್‌ ಮಾರ್ಗಗಳನ್ನು ಎರಡೇ ದಿನದಲ್ಲಿ ದುರಸ್ತಿ ಪಡಿಸಲು ಯಶಸ್ವಿಯಾಗಿರುವ ಸೆಸ್ಕ್‌ ಸಿಬ್ಬಂದಿ, ‘ಗ್ರಾಮೀಣ ಜನರಿಗೆ ಕರೆಂಟ್‌ ಕೊಟ್ಟೇ ಕೊಡುತ್ತೇವೆ’ ಎಂದು ಪಣತೊಟ್ಟು ಕಾಯಕದಲ್ಲಿ ತೊಡಗಿದ್ದಾರೆ. ಜಿಲ್ಲೆಯ ಕೆಲವೆಡೆ ದುರಸ್ತಿ ಕಾರ್ಯ ನಡೆಯುತ್ತಿರುವ ದೃಶ್ಯ ಕಾಣಿಸುತ್ತಿದೆ.

‘ಮಳೆ ಬಿಡುವು ಕೊಟ್ಟರೆ ಇನ್ನೆರಡು ದಿನದಲ್ಲಿ ವಿದ್ಯುತ್‌ ಮಾರ್ಗ ಸರಿ ಪಡಿಸುತ್ತೇವೆ. ಪ್ರವಾಹ ಇಲ್ಲದ ಪ್ರದೇಶದಲ್ಲಿ ದುರಸ್ತಿ ಆರಂಭವಾಗಿದೆ. ಕಳೆದ ಎರಡು ವರ್ಷಗಳೂ ಇದೇ ಪರಿಸ್ಥಿತಿಯಿತ್ತು. ನಾವೆಲ್ಲರೂ ತಂಡವಾಗಿ ಕೆಲಸ ಮಾಡಿದ್ದರ ಪರಿಣಾಮ ಕಷ್ಟಕರ ಸನ್ನಿವೇಶವನ್ನು ಸುಲಭವಾಗಿ ಎದುರಿಸಿದ್ದೆವು’ ಎಂಬುದು ಸೆಸ್ಕ್‌ ಸಿಬ್ಬಂದಿಯ ನುಡಿ.

‘ರಸ್ತೆ ಸಂಪರ್ಕ ಕಡಿತವಾಗಿರುವ ಗಡಿ ಗ್ರಾಮಗಳಿಗೆ ವಿದ್ಯುತ್‌ ಮಾರ್ಗ ದುರಸ್ತಿ ಸಾಧ್ಯವಾಗಿಲ್ಲ. 1,900 ವಿದ್ಯುತ್‌ ಕಂಬಗಳು, 25 ವಿದ್ಯುತ್‌ ಪರಿವರ್ತಕ, ಅಂದಾಜು 20 ಕಿ.ಮೀ ವಿದ್ಯುತ್‌ ತಂತಿಗೆ ಹಾನಿಯಾಗಿದೆ’ ಎಂದು ಸೆಸ್ಕ್‌ನ ಕಾರ್ಯನಿರ್ವಾಹಕ ಎಂಜಿನಿಯರ್‌ ಸೋಮಶೇಖರ್‌ ‘ಪ್ರಜಾವಾಣಿ’ಗೆ ತಿಳಿಸಿದರು.

‘ಆಹಾರ ಸಾಮಗ್ರಿ ಅಗತ್ಯ ಇಲ್ಲ’: ‘ದಾನಿಗಳು ಕೊಡಗಿಗೆ ಆಹಾರ ಸಾಮಗ್ರಿ ಕಳುಹಿಸುವ ಅಗತ್ಯವಿಲ್ಲ. ಜಿಲ್ಲಾಡಳಿತವೇ ಎಲ್ಲವನ್ನೂ ಮುಂಜಾಗ್ರತೆಯಿಂದ ದಾಸ್ತಾನು ಇರಿಸಿಕೊಂಡಿದೆ. ಆರ್ಥಿಕ ನೆರವು ನೀಡುವುದಿದ್ದರೆ ಮುಖ್ಯಮಂತ್ರಿ ಪರಿಹಾರ ನಿಧಿಗೆ ಕೊಡಬಹುದು’ ಎಂದು ಸಚಿವ ವಿ.ಸೋಮಣ್ಣ ಹೇಳಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು