ಗುರುವಾರ , ಆಗಸ್ಟ್ 18, 2022
25 °C
ಉಸ್ತುವಾರಿ ಸಮಿತಿ ಅಭಿಪ್ರಾಯ

ಕೋವಿಡ್‌ | 'ನಿರ್ಲಕ್ಷ್ಯದಿಂದ ಚಾಮರಾಜನಗರ ದುರಂತ', ಸಿಂಧೂರಿಗೆ ಕ್ಲೀನ್‌ ಚಿಟ್‌

ಬಿ.ಎಸ್.ಷಣ್ಮುಖಪ್ಪ Updated:

ಅಕ್ಷರ ಗಾತ್ರ : | |

ಬೆಂಗಳೂರು: ‘ಚಾಮರಾಜನಗರದಲ್ಲಿ 2021ರ ಮೇ2ರಂದು ಮಧ್ಯರಾತ್ರಿ ಹಾಗೂ 3ರ ಬೆಳಗಿನ ಜಾವದಲ್ಲಿ ಕೋವಿಡ್‌ ಸಾಂಕ್ರಾಮಿಕದಿಂದ ಬಳಲುತ್ತಿದ್ದ 24 ಒಳರೋಗಿಗಳಿಗೆ ಸಕಾಲದಲ್ಲಿ ಆಮ್ಲಜನಕ ಒದಗಿಸುವಲ್ಲಿ ದಿವ್ಯ ನಿರ್ಲಕ್ಷ್ಯ ತೋರಲಾಗಿದೆ. ಈ ಅಂಶವೇ ಅವರೆಲ್ಲರ ಸಾವಿಗೆ ಮುಖ್ಯ ಕಾರಣ ಎಂಬುದು ದೃಗ್ಗೋಚರವಾಗಿದೆ’ ಎಂದು ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ ರೂಪಿಸಿದ್ದ ಉಸ್ತುವಾರಿ ಸಮಿತಿ ಅಭಿಪ್ರಾಯಪಟ್ಟಿದೆ.

ಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಎ.ಎನ್‌.ವೇಣು ಗೋಪಾಲಗೌಡ ಅವರ ಅಧ್ಯಕ್ಷತೆಯಲ್ಲಿ ರೂಪಿಸಲಾಗಿದ್ದ ಈ ಸಮಿತಿಯು ತನ್ನ ವರದಿಯಲ್ಲಿ, ‘ಮೈಸೂರು ಜಿಲ್ಲೆಯ ಅಗತ್ಯ ಪೂರೈಸಿದ ನಂತರ ಉಳಿದ ಜಿಲ್ಲೆಗಳಿಗೆ ಆಮ್ಲಜನಕದ ಸಿಲಿಂಡರ್‌ ನೀಡಬೇಕು ಎಂದು ರೋಹಿಣಿ ಸಿಂಧೂರಿ ಆಮ್ಲಜನಕ ಭರ್ತಿ ಘಟಕಗಳಿಗೆ ನಿರ್ದೇಶಿಸಿದ್ದರು ಎಂಬ ಆರೋಪಗಳಲ್ಲಿ ಯಾವುದೇ ಹುರುಳಿಲ್ಲ ಮತ್ತು ಅಂದಿನ ಸಮಯಕ್ಕೆ ಅವರು ಸೂಕ್ತವಾಗಿ ಸ್ಪಂದಿಸಲಿಲ್ಲ ಎಂಬ ಆರೋಪಗಳಲ್ಲಿ ಯಾವುದೇ ಹುರುಳಿಲ್ಲ’ ಎಂದು ಸ್ಪಷ್ಟಪಡಿಸಿದೆ.

ಇದೇ ವೇಳೆ ಸಮಿತಿಯು ಹಲವು ಶಿಫಾರಸುಗಳನ್ನು ವರದಿಯಲ್ಲಿ ಉಲ್ಲೇಖಿಸಿದ್ದು,ಈ ಘಟನೆಯಲ್ಲಿ ಸಾವನ್ನಪ್ಪಿದವರ ಹತ್ತಿರದ ಸಂಬಂಧಿ ಗಳಿಗೆ ಸೂಕ್ತ ಪರಿಹಾರವನ್ನು ಕೋರ್ಟ್‌ ನಿಗದಿಪಡಿಸುತ್ತದೆ’ ಎಂದು ಹೇಳಿದೆ.

‘ಘಟನೆ ನಡೆದ ದಿನ, ಸ್ಥಳದಲ್ಲಿನ ವಿವರ ದಾಖಲೆಯಾಗಿರುವ ಸಿಸಿಟಿವಿ ಅಥವಾ ಡಿವಿಆರ್‌ ದೃಶ್ಯಗಳನ್ನು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ತಮ್ಮ ವಶದಲ್ಲಿಯೇ ಇರಿಸಿಕೊಂಡಿರ ಬೇಕು’ ಎಂದು ಸೂಚಿಸಿರುವ ಸಮಿತಿಯು, ‘ಆಮ್ಲಜನಕ ನೀಡಿಕೆ ಮತ್ತು ವಿತರಣೆಯಲ್ಲಿ ಸಮನ್ವಯ ಸಾಧಿಸಲು ವಿವಿಧ ಜಿಲ್ಲಾ ಆಸ್ಪತ್ರೆಗಳಲ್ಲಿ ಆಯಾ ಜಿಲ್ಲಾಧಿಕಾರಿ ಅಥವಾ ಅವರ ಅವರಿಗಿಂತಲೂ ಉನ್ನತ ಹುದ್ದೆಯ ಅಧಿಕಾರಿಯನ್ನು ನೇಮಕ ಮಾಡಬೇಕು’ ಎಂದೂ ಸಲಹೆ ನೀಡಿದೆ.

ಮೈಸೂರಿನಲ್ಲಿರುವ ಆಮ್ಲಜನಕ ಬಾಟ್ಲಿಂಗ್‌ ಹಾಗೂ ಪುನರ್‌ ಭರ್ತಿ ಘಟಕಗಳಿಂದ ಅಗತ್ಯಕ್ಕನುಗುಣವಾಗಿ ರವಾನೆ ಮಾಡುವ ನಿಟ್ಟಿನಲ್ಲಿ ಮೈಸೂರು ಪ್ರಾದೇಶಿಕ ಆಯುಕ್ತರು, ಕೇವಲ ಮೈಸೂರಿಗೆ ಮಾತ್ರವಲ್ಲದೆ, ಮಂಡ್ಯ, ಚಾಮರಾಜನಗರ, ಕೊಡಗು ಹಾಗೂ ಹಾಸನ ಜಿಲ್ಲೆಗಳ ಜೊತೆಗೂ ಸಮನ್ವಯ ಸಾಧಿಸಬೇಕು’ ಎಂದು ಹೇಳಿದೆ.

ಸಮಿತಿಯ ಹೆಚ್ಚುವರಿ ಸದಸ್ಯರಾಗಿ ಕೆ.ಎನ್‌.ಕೇಶವನಾರಾಯಣ, ಹೆಚ್ಚುವರಿ ಸದಸ್ಯರಾಗಿ ನಿವೃತ್ತ ಐಪಿಎಸ್‌ ಅಧಿಕಾರಿ ಎಸ್‌.ಟಿ.ರಮೇಶ್‌, ನಿವೃತ್ತ ಐಎಎಸ್‌ ಅಧಿಕಾರಿ ವಿ.ಪಿ.ಬಳಿಗಾರ ಇದ್ದರು.

ಶಿಫಾರಸಿನ ಮುಖ್ಯಾಂಶಗಳು
* ಎಲ್ಲಾ ಆಸ್ಪತ್ರೆಗಳಲ್ಲಿ ಆಮ್ಲಜನಕವನ್ನು 24 ಗಂಟೆಗಳಿಗಿಂತಲೂ ಮುಂಚೆಯೇ ಕನಿಷ್ಠ ತುರ್ತು ಸಂಗ್ರಹ ಮಾಡಿ ಅದು ಸಿಗುವಂತಾಗುವ ಭರವಸೆ ನೀಡಬೇಕು.
* ದಾಖಲೆಗಳ ನಿರ್ವಹಣೆ, ಆಮ್ಲಜನಕದ ದಾಸ್ತಾನು ಹಾಗೂ ಅದರ ಬಳಕೆ ಹಾಗೂ ಉಳಿಕೆಯ ಪ್ರಕ್ರಿಯೆಗಳು ರಾಜ್ಯದಾದ್ಯಂತ ಏಕರೂಪ ಹೊಂದಿರಬೇಕು. ಆಮ್ಲಜನಕದ ಉಳಿಕೆ, ದಾಸ್ತಾನುಗಳ ವಿವರಗಳು ಆಸ್ಪತ್ರೆಗಳ ಡಿಜಿಟಲ್‌ ಮಾಧ್ಯಮದಲ್ಲಿ ಪ್ರದರ್ಶಿಸುವಂತಾಗಬೇಕು.
* ವೈದ್ಯಕೀಯ ಉದ್ದೇಶಗಳಿಗೆ ಅನುಗುಣವಾಗಿ ಆಮ್ಲಜನಕ ಸಿಲಿಂಡರ್‌ಗಳನ್ನು ಹೊತ್ತೊಯ್ಯುವ ವಾಹನಗಳಿಗೆ ಜಿಪಿಎಸ್‌ ಅಳವಡಿಸಿರಬೇಕು. ಅಂತಹ ಟ್ರಕ್ಕುಗಳು ಸಂಪೂರ್ಣ ಹೊದಿಕೆ ಹೊದ್ದಿರಬೇಕು. ಟ್ರಕ್ಕುಗಳು ಹೊರಡುವ ಸ್ಥಳದಿಂದಲೇ ಸಂಪೂರ್ಣ ಸೀಲ್‌ ಆಗಿ ತೆರಳಬೇಕು. ರವಾನೆದಾರ ಮಾತ್ರವೇ ಅದನ್ನು ತೆರೆಯಲು ಅವಕಾಶವಿರಬೇಕು.
* ಮೈಸೂರಿನಲ್ಲಿರುವ ಮೆಸರ್ಸ್‌ ತ್ರಿನೇತ್ರ ಬಾಟ್ಲಿಂಗ್‌ ಘಟಕ ಕಾರ್ಯನಿರ್ವಹಿಸುತ್ತಿಲ್ಲ. ಹೀಗಾಗಿ ವಿಪತ್ತಿನ ಸಮಯದಲ್ಲಿ ಸರ್ಕಾರ ಇದನ್ನು ವಶಕ್ಕೆ ಪಡೆದು ಪುನರುಜ್ಜೀವನಗೊಳಿಸುವ ಬಗ್ಗೆ ಪರಿಣಾಮಕಾರಿ ಹೆಜ್ಜೆ ಇರಿಸಬಹುದು.
* ಪ್ರತಿ ಆಸ್ಪತ್ರೆಯಲ್ಲೂ ಮಾನವ ಸಂಪನ್ಮೂಲದ ಜೊತೆಗೆ ಮೂಲಸೌಕರ್ಯ ಹೆಚ್ಚಿಸುವ ಬಗ್ಗೆ ನಿಗಾ ವಹಿಸಬೇಕು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು