ಮಂಗಳವಾರ, ಅಕ್ಟೋಬರ್ 19, 2021
24 °C
ಕಾಂಗ್ರೆಸ್ ವಿರೋಧದ ಮಧ್ಯೆ ‘ಚಾಣಕ್ಯ ವಿ.ವಿ’ ಮಸೂದೆಗೆ ಒಪ್ಪಿಗೆ

ಖಾಸಗಿ ವಿ.ವಿ ಭೂ ಹಂಚಿಕೆಯಲ್ಲಿ ಭಾರೀ ಹಗರಣ: ಸಿದ್ದರಾಮಯ್ಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಉದ್ದೇಶಿತ ‘ಚಾಣಕ್ಯ’ ಖಾಸಗಿ ವಿಶ್ವವಿದ್ಯಾಲಯಕ್ಕೆ ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ(ಕೆಐಎಡಿಬಿ) ಅಭಿವೃದ್ಧಿಪಡಿಸಿದ ₹300 ಕೋಟಿ ಬೆಲೆ ಬಾಳುವ 116.16 ಎಕರೆ ಭೂಮಿಯನ್ನು ಕೇವಲ ₹50 ಕೋಟಿಗೆ ನೀಡಿದ್ದು, ಇದೊಂದು ದೊಡ್ಡ ಹಗರಣ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಆರೋಪಿಸಿದರು.

ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್‌.ಅಶ್ವತ್ಥನಾರಾಯಣ ಮಂಗಳವಾರ ರಾತ್ರಿ ಮಂಡಿಸಿದ ‘ಚಾಣಕ್ಯ ವಿಶ್ವವಿದ್ಯಾಲಯ ಮಸೂದೆ 2021’ ಕ್ಕೆ ಕಾಂಗ್ರೆಸ್‌ ಸದಸ್ಯರು ತೀವ್ರ ಆಕ್ರೋಶ ವ್ಯಕ್ತಪಡಿಸಿ ಸಭಾತ್ಯಾಗ ನಡೆಸಿದರು. ‘ಇಲ್ಲಿ ಕೇವಲ ಖಾಸಗಿ ವಿಶ್ವವಿದ್ಯಾಲಯ ಸ್ಥಾಪನೆ ಸಂಬಂಧ ಮಸೂದೆ ಮಂಡಿಸಲಾಗಿದ್ದು, ಮಸೂದೆಯಲ್ಲಿ ಭೂಮಿ ಹಂಚಿಕೆ ವಿಚಾರ ಇಲ್ಲ’ ಎಂದು ಅಶ್ವತ್ಥನಾರಾಯಣ ಹೇಳಿದರು.

ಅಶ್ವತ್ಥನಾರಾಯಣ ಮಸೂದೆಯನ್ನು ಮಂಡಿಸುತ್ತಿದ್ದಂತೆ ಸಿದ್ದರಾಮಯ್ಯ ಅವರು ತಕರಾರು ಎತ್ತಿದ್ದರು. ‘ಖಾಸಗಿ ವಿಶ್ವವಿದ್ಯಾಲಯಕ್ಕೆ ಕೆಐಎಡಿಬಿ ಭೂಮಿಯನ್ನು ಅತಿ ಕಡಿಮೆ ದರಕ್ಕೆ ನೀಡಿದ್ದೀರಿ. ಏರೋಸ್ಪೇಸ್‌ ಪಾರ್ಕ್‌ನಲ್ಲಿ ಅಭಿವೃದ್ಧಿಪಡಿಸಿರುವ ಭೂಮಿ ಕೇವಲ ಉದ್ಯಮದ ಉದ್ದೇಶಕ್ಕಾಗಿ ಮಾತ್ರ ಹಂಚಿಕೆ ಮಾಡಬೇಕು. ಆದರೆ, ಅಲ್ಲಿ ವಿಶ್ವವಿದ್ಯಾಲಯ ಸ್ಥಾಪನೆಗೆ ಅವಕಾಶ ನೀಡುತ್ತಿದ್ದೀರಿ. ಇದು ಕೆಐಎಡಿಬಿ ಉದ್ದೇಶಕ್ಕೆ ವಿರುದ್ಧವಾಗಿದೆ’ ಎಂದು ಹರಿಹಾಯ್ದರು.

‘ಅಲ್ಲಿ ಒಂದು ಎಕರೆಗೆ ₹1.50 ಕೋಟಿ ಇದೆ. 116 ಎಕರೆ 16 ಗುಂಟೆಗೆ ಸುಮಾರು ₹300 ಕೋಟಿ ಆಗಬಹುದು. ಕೈಗಾರಿಕಾ ಪ್ರದೇಶದಲ್ಲಿ ಖಾಸಗಿ ವಿಶ್ವವಿದ್ಯಾಲಯಕ್ಕೆ ಕೊಡಲು ಬರುವುದಿಲ್ಲ. ಯಾವ ಆಧಾರದಲ್ಲಿ ಭೂಮಿ ಕೊಟ್ಟಿದ್ದೀರಿ? ರಾಜ್ಯದಲ್ಲಿ ಅಭಿವೃದ್ಧಿ ಕಾರ್ಯಕ್ಕೆ ಹಣ ಇಲ್ಲ ಎನ್ನುತ್ತೀರಿ. ಆದರೆ, ಸರ್ಕಾರದ ಬೊಕ್ಕಸಕ್ಕೆ ನಷ್ಟ ಮಾಡಿಕೊಂಡು ಹೇಗೆ ಕೊಟ್ಟಿದ್ದೀರಿ’ ಎಂದು ಗುಡುಗಿದರು.

ಇದಕ್ಕೆ ಧ್ವನಿಗೂಡಿಸಿದ ಕಾಂಗ್ರೆಸ್‌ನ ಕೆ.ಆರ್‌.ರಮೇಶ್‌ಕುಮಾರ್‌, ‘ಈ ಚಾಣಕ್ಯ ವಿಶ್ವವಿದ್ಯಾಲಯದ ಹಿಂದೆ ಚಾಣಕ್ಯರು ಇದ್ದಾರೆ’ ಎಂದು ವಂಗ್ಯವಾಡಿದರು.

ಇದು ಖಾಸಗಿ ವಿಶ್ವವಿದ್ಯಾಲಯ ಸ್ಥಾಪನೆಗೆ ಸಂಬಂಧಿಸಿದ ಮಸೂದೆಯಾಗಿದ್ದು, ಇಲ್ಲಿ ಜಮೀನಿನ ಬಗ್ಗೆ ಪ್ರಸ್ತಾಪ ಇಲ್ಲ. ವಿಶ್ವವಿದ್ಯಾಲಯಕ್ಕೆ ಸಂಬಂಧಿಸಿದ ವಿಷಯ ಇದ್ದರೆ ಪ್ರಸ್ತಾಪಿಸಿ ಎಂದು ಡಾ.ಅಶ್ವತ್ಥನಾರಾಯಣ ಹೇಳಿದರು.

‘ಹಾಗಿದ್ದರೆ, ಆ ವಿಶ್ವವಿದ್ಯಾಲಯಕ್ಕೆ ಕೊಟ್ಟಿರುವ ಭೂಮಿ ಯಾವುದು? ಅದು ಕೆಐಎಡಿಬಿ ಜಮೀನು ಅಲ್ವಾ’ ಎಂದು ಸಿದ್ದರಾಮಯ್ಯ ತಿರುಗೇಟು ನೀಡಿದರು.

ಮಧ್ಯ ಪ್ರವೇಶಿಸಿ ಮಾತನಾಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ‘ಭಾರತೀಯ ಜ್ಞಾನ ಮತ್ತು ಸಂಸ್ಕೃತಿಗೆ ಒತ್ತು ನೀಡುವ ಅಂತರ ರಾಷ್ಟ್ರೀಯ ಮಟ್ಟದ ಚಾಣಕ್ಯ ವಿಶ್ವವಿದ್ಯಾಲಯಕ್ಕೆ ಸರ್ಕಾರ ಎಲ್ಲ ರೀತಿಯ ರಿಯಾಯಿತಿಗಳನ್ನು ನೀಡಲು ಸಿದ್ಧವಿದೆ. ಯಾವುದೇ ಲಾಭಪೇಕ್ಷೆ ಇಲ್ಲದ ಇಂತಹ ವಿಶ್ವವಿದ್ಯಾಲಯಗಳಿಗೆ ಸರ್ಕಾರ ಇನ್ನಷ್ಟು ಪ್ರೋತ್ಸಾಹ ನೀಡಲು ಸಿದ್ಧವಿದೆ’ ಎಂದು ಸಮರ್ಥಿಸಿಕೊಂಡರು.

‘ಈ ಹಿಂದೆ ಹಲವು ಸರ್ಕಾರಗಳು ಸಮಾಜ ಉತ್ತಮ ಕಾರ್ಯಗಳಿಗಾಗಿ ಹಲವು ರಿಯಾಯ್ತಿಗಳನ್ನು ನೀಡಿ ಭೂಮಿಯನ್ನು ನೀಡಿವೆ. ಚಾಣಕ್ಯ ವಿಶ್ವವಿದ್ಯಾಲಯದ ಉದ್ದೇಶ ಆದರ್ಶಪ್ರಾಯವಾಗಿದೆ.  ಜ್ಞಾನದ ಪ್ರಸರಣಕ್ಕಾಗಿ ಇರುವ ವಿಶ್ವವಿದ್ಯಾಲಯ, ವಿಶ್ವದ ಗುಣಮಟ್ಟಕ್ಕೆ ಸರಿಸಮಾನ ಎನಿಸುವ ಶಿಕ್ಷಣ ನೀಡಲಾಗುತ್ತದೆ. ಹಿಂದೆ ಟೊಯೋಟ ಕಂಪನಿಗೆ ಅತ್ಯಂತ ಕನಿಷ್ಠ ದರದಲ್ಲಿ ನೀಡಲು ವಿಶೇಷ ಕಾನೂನು ಮಾಡಲಾಗಿತ್ತು. ಕೆಲವು ಬಗೆಯ ತೆರಿಗೆ ರಿಯಾಯ್ತಿ ನೀಡಲಾಗಿತ್ತು’ ಎಂದರು.

ಒಂದು ಹಂತದಲ್ಲಿ ಸಿದ್ದರಾಮಯ್ಯ, ರಮೇಶ್‌ ಕುಮಾರ್‌ ಮತ್ತು ಆಡಳಿತ ಪಕ್ಷದ ಸದಸ್ಯರ ಮಧ್ಯೆ ಕಾವೇರಿದ ಚರ್ಚೆ ನಡೆಯಿತು. ಸಭಾಧ್ಯಕ್ಷರು ಮಸೂದೆಯನ್ನು ಅಂಗೀಕಾರಕ್ಕೆ ಮಂಡಿಸಿದಾಗ, ‘ಇದೊಂದು ದೊಡ್ಡ ಹಗರಣ, ಸರ್ಕಾರವೇ ಇದರಲ್ಲಿ ಭಾಗಿಯಾಗಿದೆ. ರಾಜ್ಯದ ಸಂಪತ್ತು ಲೂಟಿ ಹೊಡೆಯಲು ಹೊರಟಿದ್ದಾರೆ’ ಎಂದು ಕಾಂಗ್ರೆಸ್‌ ಸದಸ್ಯರು ದೂರಿದರು. ಬಿಜೆಪಿ ಸದಸ್ಯರೂ ತಿರುಗೇಟು ನೀಡಿದರು.

*
ಉನ್ನತ ಉದ್ದೇಶದಿಂದ ಸ್ಥಾಪಿಸಲಾಗುವ ಶಿಕ್ಷಣ ಸಂಸ್ಥೆಗಳಿಗೆ ಸರ್ಕಾರ ಭೂಮಿಯೂ ಸೇರಿದಂತೆ ಎಲ್ಲ ರೀತಿಯ ಪ್ರೋತ್ಸಾಹ ನೀಡಬೇಕು.
-ವಿಶ್ವೇಶ್ವರ ಹೆಗಡೆ ಕಾಗೇರಿ, ಸಭಾಧ್ಯಕ್ಷ

*

ನಮ್ಮ ಹಳ್ಳಿ ವಿದ್ಯಾರ್ಥಿಗಳು ವಿಶ್ವ ಮಟ್ಟದಲ್ಲಿ ಸ್ಪರ್ಧಿಸಲು ಇಂತಹ ವಿಶ್ವವಿದ್ಯಾಲಯಗಳ ಅವಶ್ಯಕತೆ ಇದೆ. ಅವುಗಳಿಗೆ ಎಲ್ಲ ರೀತಿ ರಿಯಾಯ್ತಿ ನೀಡುತ್ತೇವೆ.
-ಬಸವರಾಜ ಬೊಮ್ಮಾಯಿ, ಮುಖ್ಯಮಂತ್ರಿ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು