ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ನಿಧನ:- ಗಣ್ಯರಿಂದ ನುಡಿನಮನ

Last Updated 23 ಮಾರ್ಚ್ 2023, 8:46 IST
ಅಕ್ಷರ ಗಾತ್ರ

ಬೆಂಗಳೂರು: ಶ್ರವಣಬೆಳಗೊಳದ ಜೈನ ಮಠದ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ತಮ್ಮ 75 ನೇ ವಯಸ್ಸಿನಲ್ಲಿ ನಿಧನರಾಗಿದ್ದಾರೆ.

ಅಪಾರ ಭಕ್ತರನ್ನು ಹೊಂದಿದ್ದ ಶ್ರೀಗಳಿಗೆ ಸಿಎಂ ಬಸವರಾಜ ಬೊಮ್ಮಾಯಿ ಸೇರಿದಂತೆ ಅನೇಕ ಗಣ್ಯರು ನುಡಿನಮನ ಸಲ್ಲಿಸಿದ್ದಾರೆ.

‘ಶ್ರೀಕ್ಷೇತ್ರ ಶ್ರವಣಬೆಳಗೊಳದ ಪರಮ ಪೂಜ್ಯ ಜಗದ್ಗುರು ಕರ್ಮಯೋಗಿ ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಪಟ್ಟಾಚಾರ್ಯ ಮಹಾಸ್ವಾಮಿಗಳು ನಮ್ಮನ್ನಗಲಿದ ಸುದ್ದಿ ತಿಳಿದು ಅತ್ಯಂತ ದುಃಖವಾಯಿತು. ಪೂಜ್ಯರ ಅಗಲಿಕೆ ನಾಡಿಗೆ ತುಂಬಲಾರದ ನಷ್ಟವಾಗಿದ್ದು, ಅವರ ಆತ್ಮಕ್ಕೆ ಸದ್ಗತಿ ಕೋರುತ್ತೇನೆ’ ಎಂದಿದ್ದಾರೆ.

‘ಚಾರುಕೀರ್ತಿ ಭಟ್ಟಾರಕ ಪಟ್ಟಾಚಾರ್ಯ ಮಹಾಸ್ವಾಮಿಗಳ ಅಂತ್ಯಸಂಸ್ಕಾರವನ್ನು ಜೈನ ಸಂಪ್ರದಾಯದಂತೆ ಸಕಲ ಸರ್ಕಾರಿ ಗೌರವಗಳೊಂದಿಗೆ ನೆರವೇರಿಸಲಾಗುವುದು’ ಎಂದು ಸಿಎಂ ಟ್ವೀಟ್ ಮೂಲಕ ತಿಳಿಸಿದ್ದಾರೆ.

‘ಶ್ರವಣಬೆಳಗೊಳದ ಜೈನಮಠದ ಶ್ರೀ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿಯವರು ವಿಧಿವಶರಾದ ಸುದ್ದಿ ತಿಳಿದು ಅತೀವ ನೋವಾಯಿತು. ಧಾರ್ಮಿಕ ಚಟುವಟಿಕೆಗಳ ಜೊತೆ ಶಿಕ್ಷಣ, ಸಮಾಜ ಸುಧಾರಣೆಗಾಗಿ ದುಡಿಯುತ್ತಿದ್ದ ಶ್ರೀಗಳ ಅಗಲಿಕೆಯಿಂದ ಸಮಾಜ ಬಡವಾಗಿದೆ. ಶ್ರೀಗಳ ಅಗಲಿಕೆಯ ದುಃಖ ಭರಿಸುವ ಶಕ್ತಿಯನ್ನು ಮಠದ ಅನುಯಾಯಿಗಳಿಗೆ ದೇವರು ಕರುಣಿಸಲಿ’ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.

‘ಶ್ರವಣಬೆಳಗೊಳದ ಜೈನಪೀಠದ ಜಗದ್ಗುರುಗಳಾದ ಶ್ರೀ ಶ್ರೀ ಶ್ರೀ ಚಾರುಕೀರ್ತಿ ಭಟ್ಟಾರಕ ಮಹಾಸ್ವಾಮೀಜಿ ಅವರು ಅಗಲಿದ ವಿಷಯ ಕೇಳಿ ನನಗೆ ತೀವ್ರ ಆಘಾತ ಉಂಟಾಗಿದೆ. ಶ್ರೀ ಭಗವಾನ್ ಬಾಹುಬಲಿ ಅವರ ಶಾಂತಿ, ಅಹಿಂಸೆ, ಸಹನೆ ತತ್ವಗಳನ್ನು ಪಸರಿಸುತ್ತಾ ಜನರಲ್ಲಿ ಅರಿವಿನ ಬೆಳಕು ಮೂಡಿಸಿದ್ದ ಪರಮಪೂಜ್ಯರು ನಾಡಿಗೆ ಅಪಾರ ಸೇವೆ ಸಲ್ಲಿಸಿದ್ದರು’ ಎಂದು ಜೆಡಿಎಸ್ ನಾಯಕ ಎಚ್‌ಡಿ ಕುಮಾರಸ್ವಾಮಿ ನುಡಿನಮನ ಸಲ್ಲಿಸಿದ್ದಾರೆ.

ಶ್ರೀಗಳ ಆರೋಗ್ಯದಲ್ಲಿ ಏರುಪೇರಾದ ಹಿನ್ನೆಲೆ ಬೆಳ್ಳೂರು ಆದಿಚುಂಚನಗಿರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ, ಚಿಕಿತ್ಸೆಗೆ ಸ್ಪಂದಿಸದೇ ವಿಧಿವಶರಾಗಿದ್ದಾರೆ. ಅನಾರೋಗ್ಯದ ಹಿನ್ನೆಲೆ ಅವರನ್ನು ಆಂಬುಲೆನ್ಸ್ ಮೂಲಕ ಬೆಳ್ಳೂರಿನ ಆದಿಚುಂಚನಗಿರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಸ್ವಸ್ಥಿಶ್ರೀ ಚಾರುಕೀರ್ತಿ ಅನ್ನುವ ಬಿರುದಾಂಕಿತ ಜೈನಭಟ್ಟಾರಕ ಸ್ವಾಮೀಜಿ ದೇಶದಾದ್ಯಂತ ಅಪಾರ ಭಕ್ತ ವರ್ಗವನ್ನು ಹೊಂದಿದ್ದಾರೆ. ಮಧ್ಯಾಹ್ನ 12 ಗಂಟೆಯ ಹೊತ್ತಿಗೆ ಶ್ರೀಗಳ ಪಾರ್ಥಿವ ಶರೀರವನ್ನು ಮಠಕ್ಕೆ ತರಲಾಗುತ್ತಿದ್ದು, ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗುತ್ತಿದೆ.

ಅವರ ಶಿಷ್ಯರಾದ ಹೊಂಬುಜ ಮಠ, ಕನಕಗಿರಿ ಕ್ಷೇತ್ರ, ಸೋಂದಾ ಕ್ಷೇತ್ರ, ಕಂಬದಹಳ್ಳಿ ಕ್ಷೇತ್ರ, ತಮಿಳುನಾಡಿನ ಅರಹಂತಗಿರಿ, ಮೂಡುಬಿದಿರೆಯ ಜೈನ ಮಠ, ಕಾರ್ಕಳದ ಜೈನ ಮಠ ಪೀಠಾಧಿಪತಿಗಳು ಕ್ಷೇತ್ರಕ್ಕೆ ಬರಲಿದ್ದಾರೆ. ನಂತರ ಮುಂದಿನ ವಿಧಿವಿಧಾನಗಳ ಬಗ್ಗೆ ಶ್ರೀಗಳು ಚರ್ಚಿಸಲಿದ್ದು, ಅಂತಿಮ ವಿಧಿವಿಧಾನದ ಸಮಯ ನಿಗದಿಪಡಿಸಲಾಗುವುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT