ಮಂಗಳವಾರ, ಮೇ 17, 2022
27 °C

ರಾಸಾಯನಿಕ ವಿಜ್ಞಾನಿ ಜುಂಜಪ್ಪ ನಿಧನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ರಾಸಾಯನಿಕ ವಿಜ್ಞಾನಿ ಪ್ರೊ. ಹಿರಿಯಕ್ಕನವರ ಜುಂಜಪ್ಪ(85) ಅವರು ನ.16ರಂದು ನಗರದಲ್ಲಿ ನಿಧನರಾದರು. ಪತ್ನಿ ಪ್ರೊ. ಇಲಾ, ಮಗಳು ದೀಪು ಅವರನ್ನು ಅಗಲಿದ್ದು, ಹೆಬ್ಬಾಳದ ಚಿತಾಗಾರದಲ್ಲಿ ಅಂತ್ಯಕ್ರಿಯೆ ನೆರವೇರಿತು.

ಹಾವೇರಿ ಜಿಲ್ಲೆ ಹಿರೇಕೆರೂರು ತಾಲ್ಲೂಕಿನ ಆಲದಗೆರೆಯ ಜುಂಜಪ್ಪ ಅವರು, ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಪ್ರೊ. ಸಿದ್ದಪ್ಪ ಅವರ ಮಾರ್ಗದರ್ಶನದಲ್ಲಿ ಪಿಎಚ್‌ಡಿ ಪದವಿ ಪಡೆದರು. ನಂತರ ಕಾನ್ಪುರದ ಐಐಟಿಯಲ್ಲಿ ಪ್ರೊ. ಎಂ.ವಿ.ಜಾರ್ಜ್ ಅವರ ಮಾರ್ಗದರ್ಶನದಲ್ಲಿ ಸಂಶೋಧನೆ ನಡೆಸಿದರು.‌ ಲಕ್ನೋದಲ್ಲಿ ವಿಜ್ಞಾನಿಯಾಗಿ ವೃತ್ತಿ ಜೀವನ ಆರಂಭಿಸಿದರು. ನಂತರ ಶಿಲ್ಲಾಂಗ್‌ನಲ್ಲಿರುವ ‘ನಾರ್ತ್ ಈಸ್ಟೆರ್ನ್ ಹಿಲ್ ಯೂನಿವರ್ಸಿಟಿ’ಯ ರಸಾಯನ ವಿಜ್ಞಾನ ವಿಭಾಗದ ಸ್ಥಾಪಕ ಮುಖ್ಯಸ್ಥರಾಗಿ ಕಾರ್ಯ ನಿರ್ವಹಿಸಿ ನಿವೃತ್ತರಾದ ಬಳಿಕ ಬೆಂಗಳೂರಿನ ಯಲಹಂಕದಲ್ಲಿ ವಾಸವಿದ್ದರು.

ನಿವೃತ್ತಿಯ ನಂತರವೂ ಇಂಡಿಯನ್ ನ್ಯಾಷನಲ್ ಸೈನ್ಸ್ ಅಕಾಡೆಮಿ(ಐಎನ್‌ಎಸ್‌ಎ) ಫೆಲೋಶಿಪ್ ಅಡಿಯಲ್ಲಿ 82 ವರ್ಷ ವಯಸ್ಸಿನ ತನಕವೂ ಸಂಶೋಧನೆಯಲ್ಲಿ ಸಕ್ರಿಯರಾಗಿದ್ದರು. ಇತ್ತೀಚಿಗೆ ಎರಡು ವರ್ಷಗಳಿಂದ ವಯೋಸಹಜ ಕಾಯಿಲೆಯಿಂದ ಮನೆಯಲ್ಲಿಯೇ ವಿಶ್ರಾಂತಿ ಪಡೆಯುತ್ತಿದ್ದರು.

ದೇಶ– ವಿದೇಶಗಳ ಪ್ರತಿಷ್ಠಿತ ರಾಸಾಯನಿಕ ವಿಜ್ಞಾನಿಗಳ ಜತೆ ನಿಕಟ ಸಂಪರ್ಕ ಹೊಂದಿದ್ದರು. ರಾಸಾಯನಿಕ ವಿಜ್ಞಾನದಲ್ಲಿ 300ಕ್ಕೂ ಹೆಚ್ಚು ಸಂಶೋಧನ ಲೇಖನಗಳನ್ನು ಅಂತರ ರಾಷ್ಟ್ರೀಯ ಪತ್ರಿಕೆಗಳಲ್ಲಿ ಪ್ರಕಟಿಸಿದ್ದರು. ಇವರ ಪತ್ನಿ ಪ್ರೊ.ಇಲಾ ಅವರೂ ರಾಸಾಯನಿಕ ವಿಜ್ಞಾನಿಯಾಗಿದ್ದು, ಇಬ್ಬರು ಜತೆಯಾಗಿ ಸ್ಥಾಪಿಸಿದ ‘ಜುಂಜಪ್ಪ ಇಲಾ ಫೌಂಡೇಷನ್‌’ ಅಂತರ ರಾಷ್ಟ್ರೀಯ ಮಟ್ಟದಲ್ಲಿ ವಿಶೇಷ ಸ್ಥಾನ ಗಳಿಸಿದೆ.

ಶೇ 90ರಷ್ಟು ಆಧುನಿಕ ಔಷಧಿಗಳು ‘ಹೆಟಿರೋ ಸೈಕ್ಲಿಕ್’ ಅಣು ರಚನೆ ಹೊಂದಿದ್ದು, ಇಂತಹ ರಸಾಯನಿಕ ಸಂಸ್ಕರಣೆ ವಿಧಾನ ಅಭಿವೃದ್ಧಿಪಡಿಸಿರುವುದು ರಾಸಾಯನಿಕ ವಿಜ್ಞಾನ ಕ್ಷೇತ್ರಕ್ಕೆ ಅವರು ನೀಡಿದ ಮಹತ್ತರ ಕೊಡುಗೆ. ಅಂತರ ರಾಷ್ಟ್ರೀಯ ಮಟ್ಟದಲ್ಲಿ ‘ಹೆಟೆರೋ ಸೈಕ್ಲಿಕ್’ ಕ್ಷೇತ್ರದಲ್ಲಿ ಸಾಧನೆ ಮಾಡಿದ್ದ ‘ಅಲ್ಲೆನ್ ಕ್ಯಾಟ್ರಿಡ್ಸ್ಕಿ’ ಜತೆಗೂ ಜುಂಜಪ್ಪ ಅವರು ಒಡನಾಡಿಯಾಗಿದ್ದರು.

ರಾಸಾಯನಿಕ ವಿಜ್ಞಾನದ ದಿಗ್ಗಜ ಪ್ರೊ. ನ್ಯೂಮನ್ ಮಾರ್ಗದರ್ಶನದಲ್ಲಿ ಕೂಡ ಸಂಶೋದನೆ ಕೈಗೊಂಡಿದ್ದರು. ಒಟ್ಟು 65 ಸಂಶೋಧನ ವಿದ್ಯಾರ್ಥಿಗಳ ಪಿಎಚ್‌ಡಿ ಪದವಿಗೆ ಮಾರ್ಗದರ್ಶನ ಮಾಡಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು