ಶುಕ್ರವಾರ, ಜೂನ್ 18, 2021
24 °C

ಲಾಕ್‌ಡೌನ್‌: ₹ 1,250 ಕೋಟಿ ಪರಿಹಾರ ಪ್ಯಾಕೇಜ್ ಘೋಷಿಸಿದ ಸಿಎಂ ಯಡಿಯೂರಪ್ಪ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಕೋವಿಡ್ ಲಾಕ್‌ಡೌನ್  ಹಿನ್ನೆಲೆಯಲ್ಲಿ ಸಂಕಷ್ಟದಲ್ಲಿರುವ ಅಸಂಘಟಿತ ಕಾರ್ಮಿಕರು ಮತ್ತು ರೈತರಿಗೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ₹ 1,250 ಕೋಟಿ ಪರಿಹಾರ ಪ್ಯಾಕೇಜ್ ಘೋಷಿಸಿದ್ದಾರೆ. 

ಪ್ಯಾಕೇಜ್‌ನ ಪ್ರಮುಖ ಅಂಶಗಳು:

*ಹೂವು ಬೆಳೆಯುವ ರೈತರಿಗೆ ಹಾನಿ ಆಗಿದ್ದರೆ ಹೆಕ್ಟೇರ್‌ಗೆ ₹10,000 ನೀಡಲಾಗುವುದು. ಇದರಿಂದ 20 ಸಾವಿರ ರೈತರಿಗೆ ಅನುಕೂಲವಾಗಲಿದ್ದು, ₹12.73 ಕೋಟಿ ಖರ್ಚಾಗುತ್ತದೆ.

*ಹಣ್ಣು–ತರಕಾರಿ ಬೆಳೆಯುವ ರೈತರು ಹಾನಿಗೆ ಒಳಗಾಗಿದ್ದರೆ ಹೆಕ್ಟೇರ್‌ಗೆ ₹10,000 ಪರಿಹಾರ ನೀಡಲಾಗುವುದು. ಸುಮಾರು 69 ಸಾವಿರ ರೈತರಿಗೆ ಪ್ರಯೋಜನ ಆಗಲಿದ್ದು, ಇದಕ್ಕೆ ₹69 ಕೋಟಿ ಖರ್ಚಾಗಲಿದೆ.

*ಆಟೋ, ಟ್ಯಾಕ್ಸಿ, ಮ್ಯಾಕ್ಷಿಕ್ಯಾಬ್‌ಗಳ ಚಾಲಕರಿಗೆ ತಲಾ ₹3,000. ಇದಕ್ಕೆ ₹63 ಕೋಟಿ ಖರ್ಚಾಗಲಿದೆ.

*ಕಟ್ಟಡ ಕಾರ್ಮಿಕರಿಗೆ ತಲಾ ₹3,000 ನೀಡಲಾಗುವುದು. ಇದಕ್ಕೆ ₹494 ಕೋಟಿ ಖರ್ಚಾಗುತ್ತದೆ.

*ಅಸಂಘಟಿತ ವಲಯದ ಕಾರ್ಮಿಕರಿಗೆ ತಲಾ ₹2,000 ನೀಡಲಾಗುವುದು. ಇದರಲ್ಲಿ ಅಗಸರು, ಕ್ಷೌರಿಕರು ಸೇರಿ ಹಲವು ಕಸುಬುಗಳನ್ನು ಗುರುತಿಸಲಾಗಿದೆ. ಸುಮಾರು 3.04 ಲಕ್ಷ ಜನರಿಗೆ ಇದರ ಪ್ರಯೋಜನ ಸಿಗಲಿದ್ದು, ₹60.89 ಕೋಟಿ ಖರ್ಚಾಗಲಿದೆ

* ಬೀದಿ ವ್ಯಾಪಾರಿಗಳಿಗೆ ₹ 2,000 ನೀಡಲಾಗುವುದು. 2.20 ಲಕ್ಷ ಇದರ ಪ್ರಯೋಜನ ಸಿಗಲಿದ್ದು, ₹44 ಕೋಟಿ ನೀಡಲಾಗುವುದು.

*ಕಲಾವಿದರು ಮತ್ತು ಕಲಾತಂಡಗಳಿಗೆ ₹3,000 ನೀಡಲಾಗುವುದು. 16,100 ಜನರಿಗೆ ಇದರ ಪ್ರಯೋಜನ ಸಿಗಲಿದೆ. ₹4.82 ಕೋಟಿ ಖರ್ಚಾಗಲಿದೆ.

ಸಾಲದ ಕಂತು ಪಾವತಿ ಅವಧಿ ವಿಸ್ತರಣೆ:

ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳಲ್ಲಿ ಪಡೆದಿರುವ ಅಲ್ಪಾವಧಿ ಮತ್ತು ದೀರ್ಘಾವಧಿ ಸಾಲ ಕಂತಿನ ಮರುಪಾವತಿಯನ್ನು 31.07.21 ರವರೆಗೆ ಅಂದರೆ ಮೂರು ತಿಂಗಳು ವಿಸ್ತರಿಸಲಾಗಿದೆ. ಈ ಅವಧಿಯಲ್ಲಿನ ಬಡ್ಡಿ ಮೊತ್ತವನ್ನು ಸರ್ಕಾರವೇ ಪಾವತಿಸಲಿದೆ. ಇದಕ್ಕೆ ₹134.38 ಕೋಟಿ ಖರ್ಚಾಗಲಿದೆ.

*ಪಿಎಂ ಗರೀಬ್ ಕಲ್ಯಾಣ್‌ ಅನ್ನ ಯೋಜನೆ ಅಡಿ ಬಿಪಿಎಲ್‌ ಪಡಿತರ ಚೀಟಿ ಹೊಂದಿರುವವರಿಗೆ ಮೇ ಮತ್ತು ಜೂನ್‌ ತಿಂಗಳು ತಲಾ 5 ಕೆ.ಜಿ ಅಕ್ಕಿಯನ್ನು ಉಚಿತವಾಗಿ ನೀಡಲಾಗುವುದು.

*ರಾಜ್ಯ ಸರ್ಕಾರದ ವತಿಯಿಂದ ಬಿಪಿಎಲ್‌ ಪಡಿತರ ಚೀಟಿ ಹೊಂದಿರುವವರಿಗೆ ತಲಾ 10 ಕೆ.ಜಿ ಧಾನ್ಯ ಮತ್ತು ಎಪಿಎಲ್‌ ಕಾರ್ಡ್‌ದಾರರಿಗೆ ₹15 ರ ದರದಲ್ಲಿ 10 ಕೆ.ಜಿ ಆಹಾರಧಾನ್ಯವನ್ನು ನೀಡಲಾಗುವುದು.

* ಬಿಬಿಎಂಪಿ ವ್ಯಾಪ್ತಿಯಲ್ಲಿ ಇಂದಿರಾ ಕ್ಯಾಂಟೀನ್‌ನಲ್ಲಿ ಬಡವರಿಗೆ ಉಚಿತ ಆಹಾರ ವಿತರಿಸಲಾಗುವುದು. ಪ್ರತಿ ದಿನ 6 ಲಕ್ಷ ಜನರಿಗೆ ಇದರ ಪ್ರಯೋಜನ ಸಿಗಲಿದೆ. ಇದಕ್ಕೆ ₹25 ಕೋಟಿ ಖರ್ಚಾಗಲಿದೆ

* ಕೋವಿಡ್‌ ಮೊದಲ ಮತ್ತು ಎರಡನೇ ಅಲೆಯ ಸಂದರ್ಭದಲ್ಲಿ ರಾಜ್ಯ ಸರ್ಕಾರ 2.06 ಲಕ್ಷ ಕೋವಿಡ್‌ ರೋಗಿಗಳಿಗೆ ಉಚಿತ ಚಿಕಿತ್ಸೆ ನೀಡಲಾಗಿದ್ದು, ಸರ್ಕಾರ ₹956 ಕೋಟಿ ಭರಿಸಿದೆ.

*18 ರಿಂದ 44 ವರ್ಷದವರಿಗೆ ಲಸಿಕೆ ಉಚಿತವಾಗಿ ನೀಡಲಿದ್ದು, ಇದಕ್ಕಾಗಿ 3 ಕೋಟಿ ಡೋಸ್‌ ಲಸಿಕೆಗೆ ಬೇಡಿಕೆ ಸಲ್ಲಿಸಲಾಗಿದ್ದು, ₹1000 ಕೋಟಿ ಖರ್ಚು ಮಾಡಲಾಗುತ್ತಿದೆ. 45 ವರ್ಷ ಮೇಲ್ಪಟ್ಟವರಿಗೆ ಕೇಂದ್ರ ಸರ್ಕಾರವೇ ಉಚಿತವಾಗಿ ಲಸಿಕೆ ನೀಡುತ್ತದೆ.

*ಎಸ್‌ಡಿಆರ್‌ಎಫ್‌ ಹಣದಲ್ಲಿ ಪ್ರತಿ ಗ್ರಾಮ ಪಂಚಾಯತಿಗೆ ₹50 ಸಾವಿರ ನೀಡಲಾಗುತ್ತಿದ್ದು, ಒಟ್ಟು 6000 ಗ್ರಾಮ ಪಂಚಾಯತಿಗಳಿಗೆ ಇದರ ಲಾಭ ಸಿಗಲಿದೆ.

3 ದಿನಗಳಲ್ಲಿ 2150 ವೈದ್ಯರ ನೇಮಕ:

ಇನ್ನು ಮೂರು ದಿನಗಳಲ್ಲಿ 2150 ವೈದ್ಯರನ್ನು ನೇಮಕ ಮಾಡಲು ತೀರ್ಮಾನಿಸಲಾಗಿದೆ ಎಂದು ಯಡಿಯೂರಪ್ಪ ತಿಳಿಸಿದರು.

ಲೈನ್‌ಮನ್‌ಗಳು, ಗ್ಯಾಸ್‌ ಸಿಲಿಂಡರ್‌ ಮನೆಗಳಿಗೆ ಸಾಗಿಸುವವರು ಮತ್ತು ಶಿಕ್ಷಕರನ್ನು ಕೊರೊನಾ ಮುಂಚೂಣಿ ಕಾರ್ಯಕರ್ತರು ಎಂದು ಪರಿಗಣಿಸಿ ಅವರಿಗೆ ಆದ್ಯತೆ ಮೇರೆಗೆ ಲಸಿಕೆ ನೀಡಲಾಗುವುದು ಎಂದು ಹೇಳಿದರು.

ರಾಜ್ಯದಲ್ಲಿ ಆರ್ಥಿಕ ಪರಿಸ್ಥಿತಿ ಸರಿ ಇಲ್ಲದೇ ಇದ್ದರೂ ಸಂಕಷ್ಟದಲ್ಲಿ ಇರುವವರ ನೆರವಿಗೆ ಬಂದಿದ್ದೇವೆ. ನಿಮ್ಮ ಜತೆ ನಾವಿದ್ದೇವೆ. ಯಾರೂ ಧೈರ್ಯಗೆಡಬೇಕಿಲ್ಲ. ಫಲಾನುಭವಿಗಳ ಬ್ಯಾಂಕ್‌ ಖಾತೆಗಳಿಗೆ ಹಣವನ್ನು ನೇರವಾಗಿ ಪಾವತಿ ಮಾಡಲಾಗುವುದು ಎಂದರು.

ಮೇ 24 ರ ನಂತರ ಲಾಕ್‌ಡೌನ್ ಮುಂದುವರಿಸುವ ಬಗ್ಗೆ ಮೇ 23 ರಂದು ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದೂ ಅವರು ಹೇಳಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು