ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿಎಂ ಸ್ಥಾನಕ್ಕೆ ಮಧ್ಯಾಹ್ನ ರಾಜೀನಾಮೆ ಸಲ್ಲಿಕೆ: ಬಿ.ಎಸ್. ಯಡಿಯೂರಪ್ಪ ಘೋಷಣೆ

Last Updated 26 ಜುಲೈ 2021, 7:05 IST
ಅಕ್ಷರ ಗಾತ್ರ

ಬೆಂಗಳೂರು: ಮಧ್ಯಾಹ್ನ ರಾಜಭವನಕ್ಕೆ ತೆರಳಿ ರಾಜ್ಯಪಾಲರನ್ನು ಭೇಟಿ ಮಾಡಿ ರಾಜೀನಾಮೆ ಸಲ್ಲಿಸುವುದಾಗಿ ಸಿಎಂ ಯಡಿಯೂರಪ್ಪ ಘೋಷಿಸಿದ್ದಾರೆ.

ಮಧ್ಯಾಹ್ನ ಊಟದ ಬಳಿಕ ರಾಜ್ಯಪಾಲ ಥಾವರಚಂದ್ ಗೆಹಲೋತ್ ಅವರನ್ನು ಭೇಟಿ ಮಾಡಿ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡುವೆ ಎಂದು ಯಡಿಯೂರಪ್ಪ ಗದ್ಗದಿತರಾಗಿ ಹೇಳಿದರು.

ಸರ್ಕಾರಕ್ಕೆ ಎರಡು ವರ್ಷ ತುಂಬಿದ ಹಿನ್ನೆಲೆಯಲ್ಲಿ ಆಯೋಜಿಸಿದ್ದ ಸಾಧನಾ ಸಮಾವೇಶದಲ್ಲಿಆರಂಭದಿಂದಲೂ ಭಾವನಾತ್ಮಕವಾಗಿ ಮಾತನಾಡಿದ ಅವರು, ಯಾರೂ ಇಲ್ಲದ ಕಾಲದಿಂದಲೂ ಪಕ್ಷಕ್ಕಾಗಿ ದುಡಿದಿರುವೆ. ಎಲ್ಲ ಸಂದರ್ಭದಲ್ಲೂ ಅಗ್ನಿ ಪರೀಕ್ಷೆ ಎದುರಿಸಿರುವೆ. 75 ವರ್ಷ ವಯಸ್ಸಾದರೂ ಎರಡುವರ್ಷ ಅಧಿಕಾರ ನಡೆಸಲು ಅವಕಾಶ ಕಲ್ಪಿಸಿದ ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿ ವರಿಷ್ಠರಿಗೆ ನಾನು ಚಿರ ಋಣಿ ಎಂದು ಕಣ್ಣೀರು ಹಾಕುತ್ತಾ ಹೇಳಿದರು.

ಎರಡು ವರ್ಷಗಳ ಹಿಂದೆ ಅಧಿಕಾರ ಸ್ವೀಕರಿಸಿದಾಗ ಎರಡು ತಿಂಗಳ ಕಾಲ ಸಂಪುಟ ರಚಿಸದಂತೆ ಕೇಂದ್ರ ನಾಯಕರು ತಡೆದಿದ್ದರು. ನಂತರ ಸಂಪುಟ ರಚಿಸಿ ಸರ್ಕಾರ ಮುನ್ನಡೆಸಿದೆ ಎಂದು ಯಡಿಯೂರಪ್ಪ ಹೇಳಿದರು

ಅಟಲ್ ಬಿಹಾರಿ ವಾಜಪೇಯಿ ಅವರು ಕೇಂದ್ರ ಸಂಪುಟದಲ್ಲಿ ಸಚಿವನಾಗುವಂತೆ ಆಹ್ವಾನ ನೀಡಿದ್ದರು. ರಾಜ್ಯದಲ್ಲಿ ಪಕ್ಷ ಕಟ್ಟದೇ ಕೇಂದ್ರಕ್ಕೆ ಬರುವುದಿಲ್ಲ ಎಂದು ಇಲ್ಲಿಯೇ ಉಳಿದಿದ್ದೆ ಎಂದು ನೋವಿನಿಂದ ಹೇಳಿದರು.

ಹಿಂದೆ ಬಿಜೆಪಿ ಜತೆ ಯಾರೂ ಇರಲಿಲ್ಲ. ಸಭೆ ನಡೆಸಿದರೆ 300-400 ಜನ ಸೇರುತ್ತಿರಲಿಲ್ಲ. ಆದರೂ ಎದೆಗುಂದದೆ ಪಕ್ಷ ಕಟ್ಟಿದೆ. ಇಬ್ಬರು ಶಾಸಕರು ಗೆದ್ದಾಗ ವಸಂತ ಬಂಗೇರ ಪಕ್ಷ ತೊರೆದರು. ಆಗಲೂ ಧೈರ್ಯಗೆಡದೆ ಪಕ್ಷ ಕಟ್ಟಿದ್ದೆ ಎಂದು ನೆನಪಿಸಿಕೊಂಡರು.

ಮಂಡ್ಯ ಜಿಲ್ಲೆಯ ಬೂಕನಕೆರೆಯಲ್ಲಿ ಹುಟ್ಟಿ ಶಿಕಾರಿಪುರಕ್ಕೆ ಬಂದೆ. ಶಿವಮೊಗ್ಗದಲ್ಲಿ ಆರ್ ಎಸ್ ಎಸ್ ಕಾರ್ಯಕರ್ತನಾಗಿ, ಪ್ರಚಾರಕನಾಗಿ ದುಡಿದೆ. ಓಡಾಡಲು ಕಾರು ಇಲ್ಲದ ಕಾಲದಿಂದಲೂ ಪಕ್ಷ ಕಟ್ಟಿದ್ದೇನೆ. ಮತ್ತೆ ಪಕ್ಷವನ್ನುಅಧಿಕಾರಕ್ಕೆ ತರುವುದೇ ನನ್ನ ಆಸೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT