ಶುಕ್ರವಾರ, ಸೆಪ್ಟೆಂಬರ್ 17, 2021
22 °C

ಪ್ರವಾಹ ಸಂತ್ರಸ್ತರ ನೋವಿಗೆ ತಕ್ಷಣ ಸ್ಪಂದಿಸುವಂತೆ ಮುಖ್ಯಮಂತ್ರಿ ಸೂಚನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಪ್ರವಾಹದಿಂದ ಹಾನಿಗೊಳಗಾದ 12 ಜಿಲ್ಲೆಗಳ ಜಿಲ್ಲಾಧಿಕಾರಿಗಳು ಮತ್ತು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳೊಂದಿಗೆ ಇಂದು ಗೃಹ ಕಚೇರಿ ಕೃಷ್ಣಾದಲ್ಲಿ ಮುಖ್ಯಮಂತ್ರಿಗಳು ವಿಡಿಯೊ ಸಂವಾದ ನಡೆಸಿದರು.
 
ರಾಜ್ಯದ ಪ್ರವಾಹ ಪೀಡಿತ ಜಿಲ್ಲೆಗಳಿಗೆ  ₹85.49 ಕೋಟಿ ರೂ.ಗಳನ್ನು ತುರ್ತು ಪರಿಹಾರಕ್ಕಾಗಿ ಈಗಾಗಲೇ ಬಿಡುಗಡೆ ಮಾಡಲಾಗಿದ್ದು,  ರಕ್ಷಣಾ ಕಾರ್ಯಗಳಿಗೆ ಅಗತ್ಯವಿರುವ ಸಂಪನ್ಮೂಲಗಳನ್ನು ಈಗಾಗಲೇ  ಜಿಲ್ಲಾಡಳಿತಗಳಿಗೆ ಒದಗಿಸಲಾಗಿದೆ.  ಪ್ರವಾಹ ಪರಿಸ್ಥಿತಿ ಸಮರ್ಥವಾಗಿ ಎದುರಿಸಲು ಸಮರೋಪಾದಿಯಲ್ಲಿ ಸನ್ನದ್ಧರಾಗುವಂತೆ ಈ ಸಂದರ್ಭದಲ್ಲಿ  ಜಿಲ್ಲಾಧಿಕಾರಿಗಳಿಗೆ ಮುಖ್ಯಮಂತ್ರಿಗಳು ಸೂಚನೆ ನೀಡಿದರು.  

ಜಿಲ್ಲಾಧಿಕಾರಿ ಗಳೊಂದಿಗೆ ಮಾತನಾಡುತ್ತಾ ವಾಡಿಕೆ ಮಳೆಗಿಂತ ಹೆಚ್ಚು ಮಳೆಯಾಗಿದ್ದು, ನನಗೆ ವಾಸ್ತವ ಸ್ಥಿತಿಯ  ಚಿತ್ರಣ ನೀಡಿ ಎಂದು  ಡಿ.ಸಿ ಗಳಿಗೆ ಸೂಚಿಸಿದರು.

ಬಂಗಾಲ ಕೊಲ್ಲಿಯಲ್ಲಿ ವಾಯುಭಾರ ಕುಸಿತದಿಂದ ಅಕ್ಟೋಬರ್ 10 ರಿಂದ 15 ರವರೆಗೆ ಕಲಬುರಗಿ, ಬೀದರ್, ಯಾದಗಿರಿ, ಬಳ್ಳಾರಿ, ರಾಯಚೂರು, ಬಾಗಲಕೋಟೆ, ದಾವಣಗೆರೆ, ಕೊಪ್ಪಳ, ದಕ್ಷಿಣ ಕನ್ನಡ, ಶಿವಮೊಗ್ಗ, ಉಡುಪಿ,  ವಿಜಯಪುರ ಹಾಗೂ ಬೆಳಗಾವಿ ಜಿಲ್ಲೆಗಳಲ್ಲಿ ವ್ಯಾಪಕ ಮಳೆಯಿಂದ ಭೀಮಾ ಮತು ್ತ ಇದರ ಉಪನದಿಗಳಲ್ಲಿ ದಾಖಲೆ ಪ್ರಮಾಣದ ಒಳಹರಿವು ಕಂಡುಬಂದಿದೆ.

ಪ್ರವಾಹಕ್ಕೆ ತುತ್ತಾಗಬಹುದಾದ  ಗ್ರಾಮಗಳ ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರ ಮಾಡಲು ಕ್ರಮ ವಹಿಸಿ ಎಂದು  ಸೂಚಿಸಿದ ಮುಖ್ಯಮಂತ್ರಿಗಳು, ಸಂತ್ರಸ್ತರಿಗೆ ಉತ್ತಮ ಆಹಾರ ಪೂರೈಕೆಯಾಗಬೇಕು; ಕೋವಿಡ್ ಪರಿಸ್ಥಿತಿಯಲ್ಲಿ  ಕಾಳಜಿ ಕೇಂದ್ರ ಗಳಲ್ಲಿ ಎಸ್.ಒ.ಪಿ ಪಾಲನೆ ಮಾಡಿ ಎಂದರು.  ಯಾವ ದೂರುಗಳು ಈ ಬಗ್ಗೆ ಬರಬಾರದು. ಜಾನುವಾರುಗಳಿಗೂ ರಕ್ಷಣೆ ನೀಡಿ  ಮೇವು ಪೂರೈಕೆಯಾಗಬೇಕು ಎಂದು ಮುಖ್ಯಮಂತ್ರಿಗಳು ತಿಳಿಸಿದರು.

ಕೋವಿಡ್ 19 ಹಿನ್ನೆಲೆಯಲ್ಲಿ  ಕಾಳಜಿ ಕೇಂದ್ರಗಳಲ್ಲಿ ಸಾಮಾಜಿಕ ಅಂತರ, ಮಾಸ್ಕ್ ಗಳ ಪೂರೈಕೆ ಸೇರಿದಂತೆ ವೈದ್ಯರು ಭೇಟಿ ನೀಡಿ ತಪಾಸಣೆ ಮಾಡುವಂತೆ ವ್ಯವಸ್ಥೆ ಕೈಗೊಳ್ಳಲು ಹಾಗೂ ಕೋವಿಡ್ ಲಕ್ಷಣಗಳಿರುವವರು ಕಂಡುಬಂದಲ್ಲಿ ಆಸ್ಪತ್ರೆಗಳಿಗೆ ತಕ್ಷಣ ಸ್ಥಳಾಂತರಿಸಲು ಮುಖ್ಯಮಂತ್ರಿಗಳು ಸೂಚಿಸಿದರು.  

ನೆರೆ ಸಂತ್ರಸ್ತರ ರಕ್ಷಣೆಗಾಗಿ ಪುಣೆ ಮತ್ತು ಚನ್ನೈ ರಾಜ್ಯಗಳಿಂದ ಎನ್‍ಡಿಆರ್‍ಎಫ್ ನ ಆರು ಹೆಚ್ಚುವರಿ ತಂಡಗಳು ಸೇರಿದಂತೆ ಒಟ್ಟು 12 ಎನ್.ಡಿ.ಆರ್.ಎಫ್  ತಂಡಗಳನ್ನು ನಿಯೋಜಿಸಲಾಗಿದೆ. ಕಲಬುರಗಿಗೆ  ಮೂರು ತಂಡಗಳು, ಯಾದಗಿರಿಗೆ ಎರಡು ಹಾಗೂ ರಾಯಚೂರಿಗೆ ಒಂದು  ತಂಡವನ್ನು ನಿಯೋಜಿಸಲಾಗಿದೆ.  ಇದರೊಂದಿಗೆ ಎಸ್.ಡಿ.ಆರ್.ಎಫ್ ತಂಡಗಳನ್ನು ರಕ್ಷಣಾ ಕಾರ್ಯಗಳಿಗೆ ನಿಯೋಜಿಸಲಾಗಿದೆ.

ಉಡುಪಿ, ದಕ್ಷಿಣ ಕನ್ನಡ, ಬಾಗಲಕೋಟೆ ಹಾಗೂ ಬಳ್ಳಾರಿ ಜಿಲ್ಲೆಗಳಿಂದ 14 ದೋಣಿಗಳನ್ನು ಕಲಬುರಗಿ ಮತ್ತು ಯಾದಗಿರಿ ಜಿಲ್ಲೆಗಳಿಗೆ ಕಳುಹಿಸಲಾಗಿದೆ. ನೆರೆ ಸಂತ್ರಸ್ತರ ರಕ್ಷಣೆಗಾಗಿ ರಕ್ಷಣಾ ಹೆಲಿಕಾಪ್ಟರ್‍ಗಳನ್ನು ಕಳುಹಿಸಲಾಗಿದೆ ಎಂದ ಮುಖ್ಯಮಂತ್ರಿಗಳು ಸಂಘ ಸಂಸ್ಥೆಗಳನ್ನು, ಸಾರ್ವಜನಿಕರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕೆಲಸ ನಿರ್ವಹಿಸಿ.  ಜನರ ನೋವಿಗೆ ತಕ್ಷಣ ಸ್ಪಂದಿಸಿ ಎಂದು ಅಧಿಕಾರಿಗಳಿಗೆ ಕರೆ ನೀಡಿದರು.  

ಇದೇ ಸಂದರ್ಭದಲ್ಲಿ ಪ್ರವಾಹದಿಂದ ಬೆಳೆ ಹಾನಿಯಾದ 51,810 ಸಂತ್ರಸ್ತ ರೈತರ ಬ್ಯಾಂಕ್ ಖಾತೆಗೆ 36.57  ಕೋಟಿ ರೂ.ಗಳ ಇನ್‍ಪುಟ್ ಸಬ್ಸಿಡಿಯನ್ನು ನೇರವಾಗಿ  ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಇಂದು ಆನ್ ಲೈನ್ ಮೂಲಕ ಜಮೆ ಮಾಡಿದರು.

ಸಭೆಯಲ್ಲಿ ಮುಖ್ಯ ಕಾರ್ಯದರ್ಶಿ ಟಿ.ಎಂ.ವಿಜಯಭಾಸ್ಕರ್, ಮುಖ್ಯಮಂತ್ರಿಗಳ ಅಪರ ಮುಖ್ಯ ಕಾರ್ಯದರ್ಶಿ ಡಾ: ಇ.ವಿ.ರಮಣರೆಡ್ಡಿ,  ಆರ್ಥಿಕ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಐ.ಎಸ್.ಎನ್. ಪ್ರಸಾದ್ ಹಾಗೂ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು