ಶನಿವಾರ, ಮಾರ್ಚ್ 25, 2023
23 °C

ನಮ್ಮಲ್ಲಿ ಮುಖ್ಯಮಂತ್ರಿಯಾಗಲಿ ಬೇರೆ ಯಾವುದೇ ಹುದ್ದೆಯಾಗಲಿ ಮಾರಾಟಕ್ಕಿಲ್ಲ: ಬಿಜೆಪಿ

ಪ್ರಜಾವಾಣಿ ವೆಬ್ ಡೆಸ್ಕ್ Updated:

ಅಕ್ಷರ ಗಾತ್ರ : | |

ಬೆಂಗಳೂರು: 'ಗೃಹ ಸಚಿವ ಅಮಿತ್‌ ಶಾ ಅವರು ಮುಖ್ಯಮಂತ್ರಿ ಹುದ್ದೆಯನ್ನೇ ₹ 2000 ಕೋಟಿಗೆ ಮಾರಾಟಕ್ಕೆ ಇಟ್ಟಿರುವ ರಾಜಕೀಯ ವ್ಯಾಪಾರಿ' ಎಂಬ ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಟೀಕೆಗೆ ಪ್ರತಿಯಾಗಿ ಸರಣಿ ಟ್ವೀಟ್‌ ಮೂಲಕ ಬಿಜೆಪಿ ವಾಗ್ದಾಳಿ ನಡೆಸಿದೆ. ಸುಳ್ಳನ್ನು ಎಷ್ಟು ಬಾರಿ ಕೂಗಿ ಹೇಳಿದರೂ ಸತ್ಯವಾಗುವುದಿಲ್ಲ ಎಂದಿದೆ.

'ನಮ್ಮಲ್ಲಿ ಮುಖ್ಯಮಂತ್ರಿಯಾಗಲಿ ಯಾವುದೇ ಹುದ್ದೆ ಮಾರಾಟಕ್ಕಿಲ್ಲ. ಆದರೆ ಕಳ್ಳನ ಮನಸ್ಸು ಹುಳ್ಳುಳ್ಳಗೆ ಎಂಬಂತೆ ಟಿಕೆಟ್‌ಅನ್ನೇ ಮಾರಾಟಕ್ಕಿಟ್ಟ ನಿಮಗೆ ಹಾಗೆ ಕಾಣುವುದು ಸಹಜ' ಎಂದು ಸಿದ್ದರಾಮಯ್ಯ ಅವರಿಗೆ ಬಿಜೆಪಿ ತಿರುಗೇಟು ನೀಡಿದೆ.

'ನಿಮ್ಮ ಸರ್ಕಾರ ಖರ್ಚು ಮಾಡಿದ ₹ 35,000 ಕೋಟಿಗೆ ಲೆಕ್ಕವೇ ಇಲ್ಲ ಎಂಬುದು ಸಿಎಜಿ ವರದಿಯಲ್ಲಿ ಉಲ್ಲೇಖವಾಗಿದೆ. ಅದಕ್ಕೆ ಸಿದ್ದರಾಮಯ್ಯ ಅವರು ಇಂದಿಗೂ ಉತ್ತರಿಸಿಲ್ಲ' ಎಂದು ಬಿಜೆಪಿ ಆರೋಪಿಸಿದೆ. 

'ನಿಮ್ಮ ಟೂಲ್‌ಕಿಟ್‌ ಭಾಗವಾದ ಕಮಿಷನ್ ಎಂಬ ಸುಳ್ಳನ್ನು ಎಷ್ಟು ಬಾರಿ ಕೂಗಿ ಹೇಳಿದರೂ ಅದು ಸತ್ಯವಾಗುವುದಿಲ್ಲ. ಸಾಕ್ಷ್ಯ ಕೊಡಿ ಎಂದು ಪ್ರಧಾನಿ ಕಚೇರಿ ಕೇಳಿದಾಗ ಇರಲಿಲ್ಲ. ನ್ಯಾಯಾಲಯಕ್ಕೂ ಕೊಡಲು ಸಾಕ್ಷ್ಯವಿಲ್ಲದೆ ತಪ್ಪಿಸಿಕೊಂಡು ಓಡಾಡಿದ ಮೇಲೂ ಸುಳ್ಳಿನ ಚಲಾವಣೆಗಿಳಿದ ತಮ್ಮ ಧೈರ್ಯ ಅಪ್ರತಿಮ' ಎಂದು ಬಿಜೆಪಿ ಟೀಕಿಸಿದೆ.

'ಪೊಲೀಸ್‌ ಇಲಾಖೆಯ ಆಧುನೀಕರಣದ ಹೆಸರಲ್ಲೇ 68.8 ಕೋಟಿ ರೂ. ಕಳ್ಳತನ ಮಾಡಿದ ತಾವು ಅಮಿತ್‌ ಶಾ ಭೇಟಿಯಿಂದ ಧೃತಿಗೆಟ್ಟು ಕಮಿಷನ್ ತುತ್ತೂರಿಯನ್ನೇ ಮತ್ತೆ ಊದುತ್ತಿದ್ದೀರಿ. ಅದೇ ಹಳೆ ರಾಗ ಹಾಡುತ್ತಾ ಜನರ ಕಣ್ಣಿಗೆ ಮಣ್ಣೆರಚಲು ಆಗುವುದಿಲ್ಲ ಮಿಸ್ಟರ್ ಸಿದ್ದರಾಮಯ್ಯ' ಎಂದಿದೆ.

'ಕೆರೆಗಳ ನೀರು ತುಂಬಿಸುತ್ತೇವೆ ಎಂದು ನಿಮ್ಮ ಸರಕಾರ ₹ 1,43,341 ಕೋಟಿ ಬಿಡುಗಡೆ ಮಾಡಿ ಜಾಣ ನಿದ್ರೆಗೆ ಜಾರಿತು. ನಿಮ್ಮ ಸರಕಾರದ ಅವಧಿ ಮುಗಿಯುವ ಕಾಲಕ್ಕೂ ನೀರು ತುಂಬಿಸಲು ಯಾವುದೇ ಕಾಮಗಾರಿ ಆರಂಭ ಮಾಡಲಿಲ್ಲ. ಯೋಜನೆ ಹೆಸರಲ್ಲಿ ನಿಮ್ಮ ಸಹೋದ್ಯೋಗಿಗಳ ಜೇಬು ತುಂಬಿದವು. ಕೊನೆಗೆ ಕೆರೆಗಳು ತುಂಬಿದ್ದು ಮಳೆಯಿಂದ' ಎಂದಿದೆ.

'ನಿಮ್ಮವರ ಗ್ರಾನೈಟ್‌ ಗಣಿಗಾರಿಕೆಗೆ 7,785 ಹೆಕ್ಟೇರ್‌ ಅರಣ್ಯ ಕೊಟ್ಟು, ಇಂದಿರಾ ಕ್ಯಾಂಟೀನ್‌ ಹೆಸರಲ್ಲಿ ಭ್ರಷ್ಟಾಚಾರ ಬೇಯಿಸಿ ನುಂಗಿದ್ದಕ್ಕೇ ಜನ ಸಿದ್ದರಾಮಯ್ಯರ ಸರ್ಕಾರ ತಿರಸ್ಕರಿಸಿದ್ದು. ಆದರೂ ಅಧಿಕಾರಕ್ಕೆ ಬರಲು ಬೇರೆ ದಾರಿ ಕಂಡುಕೊಂಡಾಗ ಉಪಚುನಾವಣೆಯಲ್ಲೂ ಜನ ನಿಮಗೆ ಪಾಠ ಕಲಿಸಿದ್ದರು ಎಂಬುದು ನೆನಪಿರಲಿ' ಎಂದು ಹೇಳಿದೆ.


ಬಿಜೆಪಿ ಸರಣಿ ಟ್ವೀಟ್‌

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು