ಅಪ್ಪ ಅಂಬಾರಿ ಹೊತ್ತ ಎಂದು ಮರಿಯಾನೆಗೆ ಹೊರಿಸಲಾಗದು: ಸಿ.ಪಿ.ಯೋಗೇಶ್ವರ್

ಮೈಸೂರು: ‘ಮುಖ್ಯಮಂತ್ರಿ ಹುದ್ದೆ ಎಂಬುದು ದಸರಾ ಅಂಬಾರಿ ಹೊರುವ ಆನೆ ಇದ್ದಂತೆ. ಆನೆ ತೂಕ ಮುಖ್ಯವಲ್ಲ, ಅಂಬಾರಿಯನ್ನು ಕೊನೆ ತನಕ ತಲುಪಿಸುವ ಸಾಮರ್ಥ್ಯಬೇಕು. ಮುಖ್ಯಮಂತ್ರಿ ಆಗುವವರು ಸಂವೇದನಾಶೀಲರಾಗಿರಬೇಕು’ ಎಂದು ಸಚಿವ ಸಿ.ಪಿ.ಯೋಗೇಶ್ವರ್, ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹಾಗೂ ಅವರ ಪುತ್ರ ಬಿ.ವೈ.ವಿಜಯೇಂದ್ರ ಅವರಿಗೆ ಪರೋಕ್ಷವಾಗಿ ಚಾಟಿ ಬೀಸಿದರು.
ಭಾನುವಾರ ಸುದ್ದಿಗಾರರ ಜತೆ ಮಾತನಾಡಿ, ‘ಅಂಬಾರಿ ಹೊರಲು ಯಾವ ಆನೆ ಸೂಕ್ತವೆಂಬುದು ಮುಖ್ಯ. ಅಪ್ಪ ಅಂಬಾರಿ ಹೊತ್ತ ಎಂದು ಮರಿಯಾನೆಗೆ ಹೊರಿಸಲು ಸಾಧ್ಯವಿಲ್ಲ. ಬದಲಾವಣೆ ಎಂಬುದು ಜಗದ ನಿಯಮ’ ಎಂದು ಸೂಚ್ಯವಾಗಿ ತಿಳಿಸಿದರು.
‘ಮುಖ್ಯಮಂತ್ರಿ ಹುದ್ದೆ ವೈಭವಕ್ಕೆ ಮಾತ್ರ ಇರುವುದಲ್ಲ. ಜನರ ಆಶೋತ್ತರಗಳನ್ನು ಈಡೇರಿಸುವ, ಜನಪರ ಕಾಳಜಿ ಇರುವ ಹುದ್ದೆ. ಆ ಹುದ್ದೆಯಲ್ಲಿರುವವರ ಆಲೋಚನೆಗಳು ಸಮರ್ಥವಾಗಿರಬೇಕು’ ಎಂದು ಹೇಳಿದರು.
ಯಡಿಯೂರಪ್ಪ ಅವರನ್ನು ಬದಲಾಯಿಸುವ ಪ್ರಯತ್ನ ಮುಂದುವರಿದಿದೆಯೇ ಎಂಬ ಪ್ರಶ್ನೆಗೆ, ‘ನಮ್ಮದು ರಾಷ್ಟ್ರೀಯ ಪಕ್ಷ. ಪಕ್ಷದ ಚೌಕಟ್ಟಿನಲ್ಲಿದ್ದುಕೊಂಡು ಆ ರೀತಿ ದೊಡ್ಡ ದೊಡ್ಡ ಮಾತನ್ನಾಡಬಾರದು. ನಾನು ಇನ್ನೂ ಚಿಕ್ಕವನು. ನನ್ನನ್ನು ಯಡಿಯೂರಪ್ಪನವರ ವಿರೋಧಿ ಎಂದು ಬಿಂಬಿಸಬೇಡಿ’ ಎಂದು ಉತ್ತರಿಸಿದರು.
‘ಅವರು ಮುಖ್ಯಮಂತ್ರಿ ಆಗಲಿ ಎಂದು ಬಹಳ ಕಷ್ಟಪಟ್ಟು ಕೆಲಸ ಮಾಡಿದವ ನಾನು. ಆದರೆ, ನಮ್ಮ ಶ್ರಮ ಈಗ ಯಾರಿಗೂ ಕಾಣಿಸುತ್ತಿಲ್ಲ. ದೇವಸ್ಥಾನದ ರಾಜಗೋಪುರದ ಕೆಳಗಿನ ಚಪ್ಪಡಿ ಕಲ್ಲಿನ ಸ್ಥಿತಿ ನಮ್ಮದಾಗಿದೆ. ಜನರು ಚಪ್ಪಡಿ ಕಲ್ಲುಗಳ ಮೇಲೆ ನಿಂತು ರಾಜಗೋಪುರ ನೋಡಿ ಕೈ ಮುಗಿಯುತ್ತಾರೆ’ ಎಂದು ಅಸಮಾಧಾನ ಹೊರಹಾಕಿದರು.
‘ಜಿಲ್ಲಾ ಪಂಚಾಯಿತಿ ಮತ್ತು ತಾಲ್ಲೂಕು ಪಂಚಾಯಿತಿ ಚುನಾವಣೆಗೆ ಮೀಸಲಾತಿ ಪ್ರಕಟವಾಗಿದೆ. ಎಚ್.ಡಿ.ಕುಮಾರಸ್ವಾಮಿ ಅವರಿಗೆ ಅನುಕೂಲವಾಗುವ ರೀತಿಯಲ್ಲಿ ಮೀಸಲಾತಿ ನಿಗದಿ ಮಾಡಲಾಗಿದೆ. ವಿರೋಧ ಪಕ್ಷಗಳ ಕೈ ಮೇಲಾಗುತ್ತಿದೆ. ನಮ್ಮದೇ ಸರ್ಕಾರವಿದ್ದರೂ ಯಾವುದೇ ಪ್ರಯೋಜನವಿಲ್ಲ. ನಮಗೆ ಆಗುವ ಚಿತ್ರಹಿಂಸೆ, ನೋವನ್ನು ಒಮ್ಮೊಮ್ಮೆ ಹೊರಹಾಕುತ್ತೇವೆ’ ಎಂದರು.
ಪ್ರಸಾದ್ ನಿವಾಸಕ್ಕೆ ಭೇಟಿ: ಯೋಗೇಶ್ವರ್ ಅವರು ಸಂಸದ ವಿ.ಶ್ರೀನಿವಾಸಪ್ರಸಾದ್ ಅವರ ಮನೆಗೆ ಭೇಟಿ ನೀಡಿದರು. ಇಬ್ಬರೂ ಕೆಲಹೊತ್ತು ಗೋಪ್ಯವಾಗಿ ಮಾತುಕತೆ ನಡೆಸಿದರು.
‘ಯೋಗೇಶ್ವರ್ ಮೈಸೂರಿಗೆ ಬಂದಾಗಲೆಲ್ಲಾ ನನ್ನನ್ನು ಭೇಟಿ ಮಾಡುವರು. ಅವರ ಜತೆ ಯಾವುದೇ ರಾಜಕೀಯ ಚರ್ಚೆ ನಡೆದಿಲ್ಲ. ಹಿಂದೆ ಸಿದ್ದರಾಮಯ್ಯ ಅವರನ್ನು ಸೋಲಿಸಲು ನನ್ನ ಮನೆಯಲ್ಲೇ ಕಾರ್ಯತಂತ್ರ ನಡೆದದ್ದು ಎಲ್ಲರಿಗೂ ಗೊತ್ತಿರುವ ವಿಚಾರ. ಈಗಲೂ ಎಲ್ಲ ಕಾರ್ಯತಂತ್ರ ನನ್ನ ಮನೆಯಲ್ಲೇ ನಡೆಯುತ್ತದೆ ಎಂಬುದನ್ನು ಒಪ್ಪಲಾರೆ’ ಎಂದು ಶ್ರೀನಿವಾಸಪ್ರಸಾದ್ ಪ್ರತಿಕ್ರಿಯಿಸಿದರು.
ಇದನ್ನೂ ಓದಿ- ಕರ್ನಾಟಕ ರಾಜಕಾರಣ: ಸರ್ಕಾರದ ಕಾರ್ಯವೈಖರಿಗೆ ಯೋಗೇಶ್ವರ್ ಅಪಸ್ವರ; ಯಾರು, ಏನೆಂದರು?
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.