ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಿಎಸ್ಐ ಅಕ್ರಮ: ಗಣಪತಿ ಭಟ್ ವಿಚಾರಣೆ

Last Updated 12 ಜುಲೈ 2022, 19:31 IST
ಅಕ್ಷರ ಗಾತ್ರ

ಬೆಂಗಳೂರು/ಶಿರಸಿ: ಪಿಎಸ್‌ಐ ನೇಮಕಾತಿ ಅಕ್ರಮ ಪ್ರಕರಣದಲ್ಲಿ ಭಾಗಿಯಾದ ಆರೋಪದಡಿ ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲ್ಲೂಕು ಹೇರೂರಿನ ಗಣಪತಿ ಬಿ. ಭಟ್ (59) ಅವರನ್ನು ಸೋಮವಾರ ವಶಕ್ಕೆ ಪಡೆದಿದ್ದ ಸಿಐಡಿ ಪೊಲೀಸರು, ಬೆಂಗಳೂರಿಗೆ ಕರೆತಂದು ವಿಚಾರಣೆ ನಡೆಸಿ ಮಂಗಳವಾರ ಸಂಜೆ ಬಿಟ್ಟು ಕಳುಹಿಸಿದ್ದಾರೆ.

‘ಲಕ್ಷಾಂತರ ರೂಪಾಯಿ ನೀಡಿ ಅಕ್ರಮವಾಗಿ ಆಯ್ಕೆಯಾಗಿದ್ದ ಇಬ್ಬರು ಅಭ್ಯರ್ಥಿಗಳನ್ನು ಇತ್ತೀಚೆಗೆ ಬಂಧಿಸಲಾಗಿತ್ತು. ಅವರಿಬ್ಬರು ಗಣಪತಿ ಭಟ್ ಹೆಸರು ಪ್ರಸ್ತಾಪಿಸಿದ್ದರು. ಇದಕ್ಕೆ ಸಂಬಂಧಪಟ್ಟಂತೆ ವಿಚಾರಣೆ ನಡೆಸಲು ಗಣಪತಿ ಭಟ್‌ ಅವರನ್ನು ಕರೆತರಲಾಗಿತ್ತು’ ಎಂದು ಸಿಐಡಿ ಮೂಲಗಳು ಹೇಳಿವೆ.

‘ಸಿದ್ದಾಪುರದ ನೆಲೆಮಾಂವ ಸೇವಾ ಸಹಕಾರ ಸಂಸ್ಥೆಯ ಅಧ್ಯಕ್ಷರಾಗಿರುವ ಗಣಪತಿ, ರಾಜಕೀಯ ಮುಖಂಡರು ಹಾಗೂ ಪೊಲೀಸ್ ಇಲಾಖೆಯ ಹಿರಿಯ ಅಧಿಕಾರಿಗಳ ಜೊತೆ ಗುರುತಿಸಿಕೊಂಡಿದ್ದರು. ಕೆಲ ಪಿಎಸ್‌ಐ ಅಭ್ಯರ್ಥಿಗಳಿಗೆ ಮಧ್ಯವರ್ತಿಯಾಗಿ ಪೊಲೀಸ್ ಅಧಿಕಾರಿಗಳ ಜೊತೆ ಸಂಪರ್ಕವಿಟ್ಟುಕೊಂಡು ಹಣ ನೀಡಿದ್ದ ಮಾಹಿತಿಯೂ ಇತ್ತು. ಆದರೆ, ಪುರಾವೆಗಳು ಇರಲಿಲ್ಲ. ಇದೀಗ ಗಣಪತಿ ವಿಚಾರಣೆ ನಡೆಸಿ ಹೇಳಿಕೆ ಪಡೆದು ಕಳುಹಿಸಲಾಗಿದೆ. ಅಗತ್ಯವಿದ್ದರೆ, ಪುನಃ ವಿಚಾರಣೆಗೆ ಕರೆಸಲಾಗುವುದು’ ಎಂದೂ ತಿಳಿಸಿವೆ.

ಬಿಜೆಪಿ, ಕಾಂಗ್ರೆಸ್ ಮುಖಂಡರ ಆಪ್ತ: ಕೃಷಿಕರಾಗಿರುವ ಗಣಪತಿ ಅವರು ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷದ ಹಲವು ಮುಖಂಡರ ಆಪ್ತರಾಗಿ ಗುರುತಿಸಿಕೊಂಡಿರುವುದಾಗಿ ಹೇಳಲಾಗುತ್ತಿದೆ.

‘ಹಿರಿಯಪೊಲೀಸ್ ಅಧಿಕಾರಿಗಳ ಮೂಲಕ ಕೆಲ ಪೊಲೀಸರನ್ನೂ ಗಣಪತಿ ವರ್ಗಾವಣೆ ಮಾಡಿಸಿದ್ದರು. ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ಸೇರಿದಂತೆ ಕೆಲ ಠಾಣೆಗಳಿಗೆ ಇನ್‌ಸ್ಪೆಕ್ಟರ್, ಸಬ್ ಇನ್‌ಸ್ಪೆಕ್ಟರ್ ಹುದ್ದೆಗಳಿಗೆ ತಮ್ಮವರನ್ನೇ ನಿಯೋಜಿಸಲು ಲಾಬಿ ಮಾಡುತ್ತಿದ್ದರು’ ಎಂಬ ಆರೋಪವೂ ಅವರ ಮೇಲಿದೆ.

ಈ ಹಿಂದೆ, ಕಾಂಗ್ರೆಸ್‍ ಮುಖಂಡ, ಹಳಿಯಾಳ ಶಾಸಕ ಆರ್.ವಿ.ದೇಶಪಾಂಡೆ ಅವರ ಬೆಂಬಲಿಗರಾಗಿ ಗುರುತಿಸಿಕೊಂಡಿದ್ದ ಗಣಪತಿ ಭಟ್‌, ಅಣಲೆಬೈಲ್ ಗ್ರಾಮ ಪಂಚಾಯ್ತಿಯ ಹೇರೂರು ವಾರ್ಡ್‌ಗೆ ಕಾಂಗ್ರೆಸ್‌ ಬೆಂಬಲಿತ ಸದಸ್ಯರಾಗಿಯೂ ಹಿಂದೊಮ್ಮೆ ಆಯ್ಕೆಯಾಗಿದ್ದರು.

ಈಚೆಗೆ ವಿಧಾನಸಭಾಧ್ಯಕ್ಷ ಹಾಗೂ ಶಿರಸಿ–ಸಿದ್ದಾಪುರ ಕ್ಷೇತ್ರದ ಶಾಸಕ ವಿಶ್ವೇಶ್ವರ ಹೆಗಡೆ ಕಾಗೇರಿ ಹಾಗೂ ಕಾರ್ಮಿಕ ಸಚಿವರೂ ಆಗಿರುವ ಯಲ್ಲಾಪುರ ಶಾಸಕ ಶಿವರಾಮ ಹೆಬ್ಬಾರ ಅವರ ಆಪ್ತ ವಲಯದ ಲ್ಲಿಯೂ ಕಾಣಿಸಿಕೊಂಡಿದ್ದರು.

ಎಡಿಜಿಪಿ ಕಸ್ಟಡಿ ಮುಕ್ತಾಯ: ‘ಎಡಿಜಿಪಿ ಅಮ್ರಿತ್ ಪೌಲ್ ಅವರ ಕಸ್ಟಡಿ ಅವಧಿ ಬುಧವಾರ ಮುಗಿಯಲಿದ್ದು, ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು’ ಎಂದು ಸಿಐಡಿ ಮೂಲಗಳು ಹೇಳಿವೆ.

‘ಗೃಹ ಸಚಿವರ ಕಚೇರಿಗೆ ಬರುತ್ತಿದ್ದುದು ನಿಜವೆ?’

ಬೆಂಗಳೂರು: ‘ಪೊಲೀಸ್‌ ಸಬ್‌ ಇನ್‌ಸ್ಪೆಕ್ಟರ್‌ (ಪಿಎಸ್‌ಐ) ನೇಮಕಾತಿ ಪರೀಕ್ಷಾ ಅಕ್ರಮಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ಸಿಐಡಿ ಅಧಿಕಾರಿಗಳು ವಶಕ್ಕೆ ಪಡೆದಿರುವ ಗಣಪತಿ ಭಟ್‌ ಗೃಹ ಸಚಿವರ ಕಚೇರಿಗೆ ಬಂದು ಹೋಗುತ್ತಿದ್ದರು ಎಂಬುದು ನಿಜವೆ’ ಎಂದು ವಿಧಾನ ಪರಿಷತ್‌ ವಿರೋಧ ಪಕ್ಷದ ನಾಯಕ ಬಿ.ಕೆ. ಹರಿಪ್ರಸಾದ್‌ ಪ್ರಶ್ನಿಸಿದ್ದಾರೆ.

ಈ ಕುರಿತು ಮಂಗಳವಾರ ಟ್ವೀಟ್‌ ಮಾಡಿರುವ ಅವರು, ‘ಸಿಐಡಿ ವಶದಲ್ಲಿರುವ ಗಣಪತಿ ಭಟ್‌ಗೂ ಗೃಹ ಸಚಿವರ ಕಚೇರಿಗೂ ಏನು ಸಂಬಂಧ? ಪಿಎಸ್‌ಐ ನೇಮಕಾತಿ ಹಗರಣ ನಡೆಯುತ್ತಿದ್ದ ದಿನಗಳ ಅವಧಿಗೆ ಸಂಬಂಧಿಸಿದ ಗೃಹ ಸಚಿವರ ಕಚೇರಿ ಹಾಗೂ ಮನೆಯ ಸಿಸಿಟಿವಿ ಕ್ಯಾಮೆರಾ ದೃಶ್ಯಾವಳಿಗಳನ್ನು ಬಹಿರಂಗಪಡಿಸುತ್ತಾರೆಯೆ’ ಎಂದು ಕೇಳಿದ್ದಾರೆ.

‘ಈ ಪ್ರಕರಣದ ತನಿಖೆ ಸೂತ್ರಧಾರಿಗಳನ್ನು ಬಿಟ್ಟು ಪಾತ್ರಧಾರಿಗಳ ಸುತ್ತ ಗಿರಕಿ ಹೊಡೆಯುತ್ತಿದೆ ಎಂದು ನಾನು ಮೊದಲೇ ಹೇಳಿದ್ದೆ. ಜನರಿಗೆ ವದಂತಿಗಳಿಂದ ಮುಕ್ತಿ ಕೊಟ್ಟು ಪಾರದರ್ಶಕವಾಗಿರಬೇಕಾದುದು ಗೃಹ ಸಚಿವರ ಕರ್ತವ್ಯ. ನ್ಯಾಯಾಂಗ ತನಿಖೆಯಿಂದ ಮಾತ್ರ ಈ ಹಗರಣಕ್ಕೆ ಮುಕ್ತಿ ಸಿಗಲಿದೆ’ ಎಂದಿದ್ದಾರೆ.

‘ನನ್ನ ಕಚೇರಿಯ ಸಿಬ್ಬಂದಿಯಲ್ಲ’

ಬೆಂಗಳೂರು: ‘ಪಿಎಸ್‌ಐ ನೇಮಕಾತಿ ಪರೀಕ್ಷೆಯಲ್ಲಿನ ಅಕ್ರಮಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ಸಿಐಡಿ ಪೊಲೀಸರು ವಶಕ್ಕೆ ಪಡೆದಿರುವ ಶಿರಸಿಯ ಗಣಪತಿ ಭಟ್‌ ನನ್ನ ಕಚೇರಿಯ ಸಿಬ್ಬಂದಿಯಲ್ಲ’ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ತಿಳಿಸಿದ್ದಾರೆ.

‘ಪೊಲೀಸರ ವಶದಲ್ಲಿರುವ ವ್ಯಕ್ತಿ ಸಿದ್ದಾಪುರದವರು. ಆ ವ್ಯಕ್ತಿ ದಲ್ಲಾಳಿ ಕೆಲಸ ಮಾಡಿಕೊಂಡಿದ್ದರು. ಗಣಪತಿ ಹೆಗಡೆ ಎಂಬುವವರು ನನ್ನ ಆಪ್ತ ಕಾರ್ಯದರ್ಶಿಯಾಗಿದ್ದಾರೆ’ ಎಂದು ಪ್ರತಿಕ್ರಿಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT