ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೈಯಕ್ತಿಕ ದ್ವೇಷದ ಜಗಳಕ್ಕೆ ಕೋಮು ಬಣ್ಣ: ಕಾಂಗ್ರೆಸ್‌ ಶಾಸಕ

ಆತ್ಮಸಾಕ್ಷಿ ಇದ್ದರೆ ಸಾಬೀತುಪಡಿಸಿ: ಬಿಜೆಪಿಗೆ ಭದ್ರಾವತಿ ಶಾಸಕ ಬಿ.ಕೆ.ಸಂಗಮೇಶ್ವರ್ ಸವಾಲು
Last Updated 17 ಆಗಸ್ಟ್ 2022, 18:40 IST
ಅಕ್ಷರ ಗಾತ್ರ

ಭದ್ರಾವತಿ: ‘ಮಂಗಳವಾರ ಇಲ್ಲಿ ನಡೆದಿರುವ ಹಲ್ಲೆ ಪ್ರಕರಣಕ್ಕೆ ವೈಯಕ್ತಿಕ ದ್ವೇಷ ಕಾರಣ. ಬಿಜೆಪಿಯವರು ಆತ್ಮಸಾಕ್ಷಿ ಇದ್ದರೆ ಅದನ್ನು ಕೋಮು ಗಲಭೆ ಎಂದು ಸಾಬೀತುಪಡಿಸಿದರೆ ನಾನು ರಾಜಕೀಯ ನಿವೃತ್ತಿ ತೆಗೆದುಕೊಳ್ಳುವೆ’ ಎಂದು ಕಾಂಗ್ರೆಸ್‌ ಶಾಸಕ ಬಿ.ಕೆ. ಸಂಗಮೇಶ್ವರ್ ಸವಾಲು ಹಾಕಿದರು.

ನಗರದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಹಲ್ಲೆ ನಡೆಸಿದ ಮುಬಾರಕ್ ಹಾಗೂ ಸುನಿಲ್ ಒಟ್ಟಿಗೆ ಕುಳಿತು ಜೂಜು ಆಡುತ್ತಿದ್ದವರು. ವೈಯಕ್ತಿಕ ದ್ವೇಷದಿಂದ ಬಡಿದಾಡಿಕೊಂಡಿದ್ದಾರೆ. ಇದು ಚುನಾವಣೆ ವರ್ಷ ಆಗಿರುವುದರಿಂದ ಬಿಜೆಪಿ ಇದಕ್ಕೆ ಕೋಮು ಬಣ್ಣ ತುಂಬುತ್ತಿದೆ’ ಎಂದು ಟೀಕಿಸಿದರು.

‘ಇದು ಕೋಮು ಗಲಭೆ ಅಲ್ಲ ಎಂದು ಯಾವ ದೇವಸ್ಥಾನಕ್ಕೆ ಬೇಕಾದರೂ ಬಂದು ನಾನು ನನ್ನ ಮಕ್ಕಳ ಮೇಲೆ ಆಣೆ ಮಾಡಿ ಹೇಳುವೆ. ಬಿಜೆಪಿ ನಾಯಕರು ಅವರ ಮಕ್ಕಳನ್ನು ದೇವಸ್ಥಾನಕ್ಕೆ ಕರೆದುಕೊಂಡು ಬಂದು ಆಣೆ ಮಾಡಲಿ’ ಎಂದು ಆಹ್ವಾನ ನೀಡಿದರು.

‘ವಿಐಎಸ್‌ಎಲ್, ಎಂಪಿಎಂ ನೌಕರರು ತಿಂಗಳಾನುಗಟ್ಟಲೇ ಪ್ರತಿಭಟನೆ ನಡೆಸಿದರೂ ಒಂದು ದಿನವೂ ಈಶ್ವರಪ್ಪ ಭದ್ರಾವತಿಗೆ ಬರಲಿಲ್ಲ. ವೈಯಕ್ತಿಕ ದ್ವೇಷದಿಂದ ಬಡಿದಾಡಿಕೊಂಡ ಸುನಿಲ್ ವಿಚಾರದಲ್ಲಿ ಆಸ್ಪತ್ರೆಗೆ ಭೇಟಿ ನೀಡಿರುವುದಕ್ಕೆ ರಾಜಕೀಯ ಹಿನ್ನೆಲೆ ಇದೆ. ಘಟನೆಗೆ ಕೋಮು ಬಣ್ಣ ಹಚ್ಚಲಾಗಿದೆ. ಭದ್ರಾವತಿ ಜನರು ಇಂಥವರನ್ನು ನಂಬಬಾರದು’ ಎಂದು ಮನವಿ ಮಾಡಿದರು.

‘ನಗರದಲ್ಲಿರುವ ಎರಡು ಕಾರ್ಖಾನೆಗಳನ್ನು ಅಭಿವೃದ್ಧಿಪಡಿಸಬೇಕಿದೆ. ಅದನ್ನು ಬಿಟ್ಟು ಬಿಜೆಪಿ ಕೋಮು ಗಲಭೆ ಸೃಷ್ಟಿಸುತ್ತಿರುವುದು ದುರದೃಷ್ಟಕರ. ಭದ್ರಾವತಿಯಲ್ಲಿ ಅಭಿವೃದ್ಧಿ ಮಾಡಲು ಸಾಕಷ್ಟು ವಿಷಯಗಳು ಇವೆ. ಬಿಜೆಪಿಯವರು ಅದನ್ನು ಮಾಡಲಿ. ಕ್ಷೇತ್ರದಲ್ಲಿ 500 ದೇವಸ್ಥಾನ ಅಭಿವೃದ್ಧಿಗೆ ಅನುದಾನ ಕೇಳಿದ್ದೇನೆ. ಕಾಂಗ್ರೆಸ್‌ ಶಾಸಕ ಎಂಬ ಕಾರಣಕ್ಕೆ ಅನುದಾನ ಬಿಡುಗಡೆ ಮಾಡಿಲ್ಲ. ಹಿಂದುತ್ವ ಎನ್ನುವ ಬಿಜೆಪಿ ದೇವಸ್ಥಾನಕ್ಕೆ ಅನುದಾನ ನೀಡಬಹುದಿತ್ತು. ರಾಜಕೀಯ ದ್ವೇಷದಿಂದ ಕೊಟ್ಟಿಲ್ಲ’ ಎಂದು ದೂರಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT