ಗುರುವಾರ , ಜನವರಿ 28, 2021
27 °C
17 ಸುಸ್ಥಿರ ಅಭಿವೃದ್ಧಿ ಯೋಜನೆಗಳಿಗೆ ಸಿಎಂ ಒಪ್ಪಿಗೆ

ಯೋಜನಾ ಮಂಡಳಿ ಇನ್ನು ‘ಕರ್ನಾಟಕ ರಾಜ್ಯ ನೀತಿ ಮತ್ತು ಯೋಜನೆ ಆಯೋಗ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು:‘ಕರ್ನಾಟಕ ಯೋಜನಾ ಮಂಡಳಿ’ಗೆ ‘ಕರ್ನಾಟಕ ರಾಜ್ಯ ನೀತಿ ಮತ್ತು ಯೋಜನೆ ಆಯೋಗ’ ಎಂದು ಪುನರ್‌ ನಾಮಕರಣ ಮಾಡುವುದೂ ಸೇರಿ 17 ಸುಸ್ಥಿರ ಅಭಿವೃದ್ಧಿ ಕಾರ್ಯ ಯೋಜನೆಗಳಿಗೆ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅಧ್ಯಕ್ಷತೆಯ ಯೋಜನಾ ಮಂಡಳಿ ಸಭೆ ಒಪ್ಪಿಗೆ ನೀಡಿದೆ.

ಸಭೆಯ ಬಳಿಕ ಯೋಜನಾ ಆಯೋಗದ ಉಪಾಧ್ಯಕ್ಷ ಬಿ.ಜೆ.ಪುಟ್ಟಸ್ವಾಮಿ ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದರು. 2030 ರೊಳಗೆ ಈ ಗುರಿ ಸಾಧಿಸಲು ತೀರ್ಮಾನಿಸಲಾಗಿದೆ ಎಂದರು.

ಗುಜರಾತ್ ಮಾದರಿಯಲ್ಲಿ ರಾಜ್ಯದಲ್ಲೂ ಗ್ರಾಮ ಮಟ್ಟದಿಂದ ಹಿಡಿದು ರಾಜ್ಯ ಮಟ್ಟದವರೆಗೆ ಎಲ್ಲ ಯೋಜನೆಗಳ ಸಮಗ್ರ ಮಾಹಿತಿಯನ್ನು ಒಳಗೊಂಡ ‘ಸಿಎಂ ಡ್ಯಾಷ್‌ಬೋರ್ಡ್‌’ ಅಭಿವೃದ್ಧಿಪಡಿಸಲಾಗುವುದು. ಎಲ್ಲ ಯೋಜನೆಗಳ ಅನುಷ್ಠಾನದ ಮಾಹಿತಿಯೂ ಲಭ್ಯವಿರುತ್ತದೆ. ಇದರಿಂದ ಮುಖ್ಯಮಂತ್ರಿಯವರೇ ನೇರವಾಗಿ ಯೋಜನೆಗಳ ಅನುಷ್ಠಾನ ಪ್ರಗತಿ ಪರಿಶೀಲಿಸಬಹುದು ಎಂದು ಹೇಳಿದರು.

ಪ್ರಾದೇಶಿಕ ಸಮತೋಲನ ರಾಜ್ಯದ ಸರಾಸರಿಗಿಂತ ಕಡಿಮೆ ಇರುವ ತಾಲ್ಲೂಕುಗಳಿಗೆ ಹೆಚ್ಚಿನ ಅನುದಾನ ಒದಗಿಸಲು ಬಜೆಟ್‌ನಲ್ಲಿ ಒತ್ತು ನೀಡುವುದು. ಸುಮಾರು114 ತಾಲ್ಲೂಕುಗಳು ಸಮತೋಲನದಲ್ಲಿ ಹಿಂದುಳಿದಿವೆ. ಅವುಗಳಿಗೆ ಹೆಚ್ಚಿನ ಅನುದಾನ ನೀಡಿ ಸಮತೋಲನ ಕಾಯ್ದುಕೊಳ್ಳಲು ಒತ್ತು ನೀಡಲು ಬಜೆಟ್‌ ಪೂರ್ವಭಾವಿ ಸಭೆಯ ಸಂದರ್ಭದಲ್ಲಿ ಮನವಿ ಮಾಡಲಾಗುವುದು ಎಂದರು.

ಬಡವರಿಗೆ ಸರ್ಕಾರದ ಎಲ್ಲ ಸೌಲಭ್ಯಗಳನ್ನು ಒದಗಿಸಲು ಏಕಗವಾಕ್ಷಿ ವ್ಯವಸ್ಥೆ ರೂಪಿಸುವುದು. ಇದರ ಅಡಿ ಪಡಿತರ ಚೀಟಿ, 3 ರಿಂದ 6 ತಿಂಗಳ ಮಕ್ಕಳಿಗೆ ಅವರಿರುವ ಮನೆಗಳಿಗೇ ಆಹಾರ ಪದಾರ್ಥ ವಿತರಣೆ, ಮಾತೃಪೂರ್ಣ ಯೋಜನೆ,ಮಾತೃ ವಂದನಾ ಯೋಜನೆ, ಹಿರಿಯ ನಾಗರಿಕರಿಗೆ ಮಧ್ಯಾಹ್ನದ ಊಟ, ತಾಯಿ ಚೀಟಿ, ಆಯುಷ್‌ಮಾನ್‌ ಭಾರತ ಆರೋಗ್ಯ ಚೀಟಿ, ವೃದ್ಧಾಪ್ಯ ವೇತನ, ಕಾರ್ಮಿಕ ಚೀಟಿ, ಹಿರಿಯ ನಾಗರಿಕರ ಚೀಟಿ, ಮೈತ್ರಿ, ಮನಸ್ವಿನಿ, ವಸತಿ ಯೋಜನೆಗಳು ಮುಂತಾದ ಯೋಜನೆಗಳನ್ನು ಕೇಂದ್ರೀಕೃತಗೊಳಿಸಲಾಗುವುದು ಎಂದು ಹೇಳಿದರು.

17 ಸುಸ್ಥಿರ ಅಭಿವೃದ್ಧಿಯಲ್ಲಿ ಕರ್ನಾಟಕ 100 ಕ್ಕೆ 66 ಅಂಕಗಳೊಂದಿಗೆ ದೇಶದಲ್ಲಿ 6 ನೇ ಸ್ಥಾನದಲ್ಲಿದೆ. ಬಡತನ ಮುಕ್ತ, ಹಸಿವು ಮುಕ್ತ, ಲಿಂಗ ಸಮಾನತೆ, ಕೈಗಾರಿಕೆ, ನಾವೀನ್ಯತೆ ಮತ್ತು ಮೂಲಸೌಕರ್ಯ ಹಾಗೂ ಸುಸ್ಥಿರ ನಗರಗಳು ಮತ್ತು ಸಮುದಾಯಗಳ ಕ್ಷೇತ್ರದಲ್ಲಿ ನಿರೀಕ್ಷಿತ ಪ್ರಗತಿ ಸಾಧಿಸಬೇಕಿದೆ ಎಂದು ಪುಟ್ಟಸ್ವಾಮಿ ತಿಳಿಸಿದರು.

ಪ್ರಮುಖ ಕಾರ್ಯಕ್ರಮಗಳು

* ಆದಿವಾಸಿ ಬುಡಕಟ್ಟು ಜನಾಂಗದ ಅಭಿವೃದ್ಧಿ ಯೋಜನೆಗೆ ₹600 ಕೋಟಿ ಅನುದಾನ ಒದಗಿಸುವುದು.

*40 ಇಲಾಖೆಗಳಲ್ಲಿ ಒಟ್ಟು 1863 ಯೋಜನೆಗಳಿದ್ದು, ಶೇ 50 ರಷ್ಟು ಯೋಜನೆಗಳು ₹10 ಕೋಟಿಗಿಂತ ಕಡಿಮೆ ಮೊತ್ತದ್ದು. ಇವುಗಳಲ್ಲಿ ಒಂದೇ ರೀತಿಯ ಉದ್ದೇಶಗಳ ಯೋಜನೆಗಳು ಬೇರೆ ಬೇರೆ ಇಲಾಖೆ ಮಧ್ಯೆ ಹಂಚಿ ಹೋಗಿದ್ದರೆ, ಅವುಗಳನ್ನು ಸಮೀಕರಿಸುವುದು. ₹1 ಕೋಟಿಗಿಂತ ಕಡಿಮೆ ಇರುವ ಎಲ್ಲ ಯೋಜನೆಗಳನ್ನು ದೊಡ್ಡ ಯೋಜನೆಗಳೊಂದಿಗೆ ವಿಲೀನಗೊಳಿಸುವುದು. ₹100 ಕೋಟಿ ಮತ್ತು ಅದಕ್ಕಿಂತ ಹೆಚ್ಚು ಅನುದಾನ ಪಡೆದ ಎಲ್ಲ ಯೋಜನೆಗಳನ್ನು ಕಡ್ಡಾಯವಾಗಿ ಮೌಲ್ಯಮಾಪನಕ್ಕೆ ಒಳಪಡಿಸುವುದು.

*ರಾಜ್ಯದಲ್ಲಿರುವ 2.6 ಕೋಟಿ ಯುವ ಜನಸಂಖ್ಯೆಗಾಗಿ ಪ್ರತ್ಯೇಕ ಯುವ ಬಜೆಟ್‌ ಸಿದ್ಧಪಡಿಸಿ ಅವರಲ್ಲಿ ಆತ್ಮಸ್ಥೈರ್ಯ, ಉದ್ಯಮಶೀಲತೆ, ವಿಶೇಷ ಕೌಶಲತೆ ಅಭಿವೃದ್ಧಿಪಡಿಸಿ ನಿರುದ್ಯೋಗ ಮುಕ್ತ ಕರ್ನಾಟಕ ಗುರಿ ಸಾಧಿಸುವುದು.

*ಕೇಂದ್ರ ಸರ್ಕಾರದ ಕೌಶಲ್ಯ ಯೋಜನೆಯಡಿ₹6,090 ಕೋಟಿಗಳನ್ನು ಪಡೆದು 14 ಲಕ್ಷ ಯುವಕ ಯುವತಿಯರಿಗೆ ಕೈಗಾರಿಕಾ ಸಂಘಗಳ ಮೂಲಕ ಕೌಶಲ ತರಬೇತಿ ಮತ್ತು ನೇಮಕಾತಿ ವ್ಯವಸ್ಥೆ. ಇದರಡಿ ಪ್ರತಿ ಅಭ್ಯರ್ಥಿಗೂ ತರಬೇತಿಗೆ ₹7500 ಮತ್ತು ತಿಂಗಳಿಗೆ ₹1,500 ಶಿಷ್ಯವೇತನ ನೀಡುವುದು.

*ಗುಜರಾತ್‌ ಮಾದರಿಯಲ್ಲಿ ಬೆಂಗಳೂರಿನಲ್ಲೂ ಕರ್ನಾಟಕ ವಿಜ್ಞಾನ ನಗರದ ಸ್ಥಾಪನೆ

*ವನ ತೋಟಗಾರಿಕೆ ಯೋಜನೆಯಡಿ ಮೂಲಕ ಪರಿಸರ ರಕ್ಷಿಸುವುದರ ಜತೆಗೆ ತಮ್ಮ ಭೂಮಿ, ತೋಟಗಳಲ್ಲಿ ಹಣ್ಣುಗಳನ್ನು ಬೆಳೆಯಲು ಪ್ರೋತ್ಸಾಹ ನೀಡುವುದು. ಉರುವಲು, ಮೇವು ಮತ್ತು ಕರಕುಶಲತೆಗೆ ಸಂಬಂಧಿಸಿದ ಗಿಡಗಳನ್ನು ಬೆಳೆಸಲು ಉತ್ತೇಜನಾ ಪ್ಯಾಕೇಜ್‌

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು