ಶನಿವಾರ, ಮೇ 21, 2022
23 °C

ಮೋದಿ ಭೇಟಿ ಮಾಡಿದ ಬೊಮ್ಮಾಯಿ: ಬಿಟ್ ಕಾಯಿನ್ ಆರೋಪ ನಿರ್ಲಕ್ಷಿಸಲು ಪ್ರಧಾನಿ ಸಲಹೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ: ಬಿಟ್ ಕಾಯಿನ್ ಹಗರಣದ ಕುರಿತ ಯಾವುದೇ ಆರೋಪಗಳ ಬಗ್ಗೆ ತಲೆ ಕೆಡಿಸಿಕೊಳ್ಳದೇ ನಿರ್ಲಕ್ಷಿಸುವಂತೆ  ಪ್ರಧಾನಿ ನರೇಂದ್ರ ಮೋದಿ ಸಲಹೆ ನೀಡಿದ್ದಾರೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

ಗುರುವಾರ ಬೆಳಿಗ್ಗೆ ಪ್ರಧಾನಿ ಅವರನ್ನು ಭೇಟಿ ಮಾಡಿದ  ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಟ್ ಕಾಯಿನ್ ಹಗರಣ‌ ಕುರಿತು ಮೋದಿ ಅವರು ಯಾವುದೇ ರೀತಿಯ ವಿವರಣೆ ಕೇಳಲಿಲ್ಲ ಎಂದರು.

'ಆದರೆ, ಸ್ವತಃ ನಾನೇ ಬಿಟ್ ಕಾಯಿನ್ ಬೆಳವಣಿಗೆ ಕುರಿತು ಪ್ರಸ್ತಾಪ ಮಾಡಿದಾಗ ಅದರ ಬಗ್ಗೆ ತಲೆ ಕೆಡಿಸಿಕೊಳ್ಳದೇ ನಿರ್ಲಕ್ಷಿಸುವಂತೆ ಕಿವಿಮಾತು ಹೇಳಿದರು' ಎಂದು ಅವರು ತಿಳಿಸಿದರು.

ಅರ್ಧ ಗಂಟೆಗೂ ಅಧಿಕ ಸಮಯದ‌ ಭೇಟಿಯ ಸಂದರ್ಭ ಆಡಳಿತಾತ್ಮಕ ಹಾಗೂ ಅಭಿವೃದ್ಧಿ ಕುರಿತ ವಿಷಯಗಳು ಚರ್ಚೆಗೆ ಒಳಗಾದವು. ನೂರು ದಿನಗಳ ಅಧಿಕಾರದ ಅವಧಿಯನ್ನು ಅಚ್ಚುಕಟ್ಟಾಗಿ ನಿರ್ವಹಿಸಲಾಗಿದೆ ಎಂದೂ ಪ್ರಧಾನಿ ಮೆಚ್ಚುಗೆ‌ ವ್ಯಕ್ತಪಡಿಸಿದ್ದಾಗಿ ಅವರು ವಿವರಿಸಿದರು.

 ರೈತರ ಮಕ್ಕಳಿಗೆ ವಿದ್ಯಾರ್ಥಿ ವೇತನ ಸೌಲಭ್ಯ ನೀಡುತ್ತಿರುವ ಕುರಿತು ವಿವರ ಪಡೆದ ಅವರು, ದೇಶದಾದ್ಯಂತ ಈ ಕಾರ್ಯಕ್ರಮ ವಿಸ್ತರಿಸುವ ಚಿಂತನೆ ಇದೆ‌ ಎಂದೂ ತಿಳಿಸಿದ್ದಾಗಿ ಹೇಳಿದರು.

ಹೊಸ ಶಿಕ್ಷಣ ನೀತಿಯ ಸಮರ್ಪಕ ಜಾರಿಯ ಬಗ್ಗೆ ಚರ್ಚೆ  ನಡೆಸಿದ ಅವರು, 'ಅಮೃತ'  ಯೋಜನೆಯನ್ನು ಮತ್ತಷ್ಟು ಸುಧಾರಣೆಯೊಂದಿಗೆ ಜಾರಿಗೊಳಿಸಲು ಸೂಚಿಸಿದರು.

ಮನೆ ಇಲ್ಲದ ಗ್ರಾಮೀಣ ಬಡವರಿಗೆ ಉಚಿತ ನಿವೇಶನ ಒದಗಿಸುವ ಮೂಲಕ ಗ್ರಾಮ ಪಂಚಾಯ್ತಿ ಮಟ್ಟದಲ್ಲಿ ಪ್ರಧಾನ ಮಂತ್ರಿ ಆವಾಸ್ ಯೋಜನೆಯ ಜಾರಿಗೆ ಕ್ರಮ ಕೈಗೊಳ್ಳಲೂ ಅವರು ಸಲಹೆ ನೀಡಿದರು. ಪರಿಶಿಷ್ಟ ಜಾತಿ, ಪಂಗಡ ಹಾಗೂ ಹಿಂದುಳಿದ ವರ್ಗಗಳ ಸಮುದಾಯದ ಹೆಣ್ಣು ಮಕ್ಕಳಿಗೆ ಸುಲಭವಾಗಿ ಬ್ಯಾಂಕ್ ಸಾಲದ ಸೌಲಭ್ಯ ದೊರೆಯುವಂತಾಗಲು ಕ್ರಮ ಕೈಗೊಳ್ಳುವ ಅಗತ್ಯವಿದೆ ಎಂದೂ ಮೋದಿ ತಿಳಿಸಿದ್ದಾಗಿ ಹೇಳಿದರು.

ಡಿಸೆಂಬರ್ ಅಂತ್ಯಕ್ಕೆ ಬೆಂಗಳೂರಿನಲ್ಲಿ ನಡೆಯಲಿರುವ ಸಮಾರಂಭಗಳಿಗೆ ಪ್ರಧಾನಿ ಅವರಿಗೆ ಆಹ್ವಾನ ನೀಡಲಾಗಿದ್ದು, ಭಾಗವಹಿಸುವುದಾಗಿ ಭರವಸೆ‌ ನೀಡಿದರು ಎಂದೂ ಬೊಮ್ಮಾಯಿ ತಿಳಿಸಿದರು.

ಬುಧವಾರ ರಾತ್ರಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಹಾಗೂ ಕೇಂದ್ರದ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿ ಮಾಡಿ ಚರ್ಚಿಸಲಾಗಿದೆ. ಬಿಟ್ ಕಾಯಿನ್ ಹಗರಣದ ಕುರಿತು ಪ್ರಸ್ತಾಪಿಸಲಾಗಿಲ್ಲ ಎಂದೂ ಅವರು ಸ್ಪಷ್ಟಪಡಿಸಿದರು.

ಇದನ್ನೂ ಓದಿ... ಬಿಟ್ ಕಾಯಿನ್‌: ‘ಅಮಿತ’ ತನಿಖೆ, ಕೇಂದ್ರ ಗೃಹ ಸಚಿವಾಲಯದಿಂದ ರಹಸ್ಯ ಕಾರ್ಯಾಚರಣೆ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು