ಸೋಮವಾರ, ಸೆಪ್ಟೆಂಬರ್ 26, 2022
24 °C

‘ಮನೆ ಮನೆಗಳಲ್ಲಿ ರಾಷ್ಟ್ರಧ್ವಜ’ ಅಭಿಯಾನಕ್ಕೆ ಸಿಎಂ ಬೊಮ್ಮಾಯಿ ಚಾಲನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ವಿಧಾನಸೌಧದ ಮುಂಭಾಗದ ಮೆಟ್ಟಿಲುಗಳಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆಯೋಜಿಸಿದ್ದ ‘ಮನೆ ಮನೆಗಳಲ್ಲಿ ರಾಷ್ಟ್ರಧ್ವಜ’ ಅಭಿಯಾನಕ್ಕೆ ತ್ರಿವರ್ಣ ಬಣ್ಣದ ಬಲೂನ್‌ ಆಕಾಶಕ್ಕೆ ಹಾರಿಸಿ ಬಿಡುವ ಮೂಲಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಶನಿವಾರ ಚಾಲನೆ ನೀಡಿದರು.

ವಿಧಾನಸೌಧದ ವಿಶಾಲವಾದ ಮೆಟ್ಟಿಲುಗಳ ಮೇಲೆ ತ್ರಿವರ್ಣ ಧ್ವಜ ಹಿಡಿದು ಸಾವಿರಾರು ವಿದ್ಯಾರ್ಥಿಗಳು ಈ ಅಭಿಯಾನದಲ್ಲಿ ಭಾಗವಹಿಸಿದರು.

ಈ ವೇಳೆ ಮಾತನಾಡಿದ ಮುಖ್ಯಮಂತ್ರಿ, ‘ಮನೆ ಮನೆಯ ಮೇಲೆ ರಾಷ್ಟ್ರಧ್ವಜ ಎನ್ನುವುದು ಪ್ರಧಾನಿ ನರೇಂದ್ರ ಮೋದಿಯವರ ಸಂದೇಶ. ಆ. 13ರಿಂದ 15ರವರೆಗೆ ಮೂರು ದಿನ ದೇಶದ 40 ಕೋಟಿ ಮನೆಗಳ ಮೇಲೆ ಇವತ್ತು ರಾಷ್ಟ್ರಧ್ವಜ ರಾರಾಜಿಸಲಿದೆ. ಈ ಕಾರ್ಯಕ್ರಮವನ್ನು ಐತಿಹಾಸಿಕ ಮೆಟ್ಟಿಲುಗಳ ಮೇಲೆ ಎಲ್ಲರೂ ಸೇರಿ ಮಾಡುತ್ತಿದ್ದೇವೆ’ ಎಂದರು.

‘ಭವ್ಯ ಭಾರತದ ನಿರ್ಮಾಣಕ್ಕೆ, ಸಮಪಾಲು, ಸಮಬಾಳಿನ ಸಮಾಜದ ನಿರ್ಮಾಣಕ್ಕೆ ಎಲ್ಲರೂ ಇಂದು ಸಂಕಲ್ಪ ಮಾಡಬೇಕಿದೆ’ ಎಂದು ಕರೆ ನೀಡಿದರು.

ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದ ಅವರು, ‘ಇಲ್ಲಿರುವ ಬಹಳ ಜನರಿಗೆ ಒಳಗೆ ಬಂದು (ವಿಧಾನಸೌಧದ) ಈ ರಾಜ್ಯವನ್ನು ಆಳುವ ಶಕ್ತಿ ಇದೆ. ಅಂಥ ಶಕ್ತಿಯನ್ನು ಭಗವಂತ ನಿಮಗೆ ಕೊಡಲಿ. ಈ ದೇಶವನ್ನು ಕಟ್ಟುವ ಶಕ್ತಿಯನ್ನು ಭಗವಂತ ಕೊಡಲಿ. ಎಲ್ಲರಿಗೂ 75ರ ಸ್ವಾತಂತ್ರೋತ್ಸವದ ಅಮೃತ ಮಹೋತ್ಸವದ ಶುಭಾಶಯ ಕೋರುತ್ತೇನೆ‘ ಎಂದರು.

ತೆರೆದ ವಾಹನದಲ್ಲಿ ವಿಧಾನಸೌಧಕ್ಕೆ ಮುಖ್ಯಮಂತ್ರಿ ಬಂದರು. ಆರೋಗ್ಯ ಸಚಿವ ಡಾ.ಕೆ. ಸುಧಾಕರ್‌ ಅವರು ಮುಖ್ಯಮಂತ್ರಿಯ ಜೊತೆ ಇದ್ದರು.

ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ, ವಿಧಾನ ಪರಿಷತ್‌ ಸಭಾಪತಿ ರಘುನಾಥ ಮಲ್ಕಾಪುರೆ, ನಗರಾಭಿವೃದ್ಧಿ ಸಚಿವ ಬೈರತಿ ಬಸವರಾಜ್, ಕನ್ನಡ ಮತ್ತು ಸಂಸ್ಕೃತಿ ಸಚಿವ ಸುನೀಲ್‌ಕುಮಾರ್‌, ಅಬಕಾರಿ ಸಚಿವ ಕೆ. ಗೋಪಾಲಯ್ಯ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು