ಶನಿವಾರ, ಮಾರ್ಚ್ 25, 2023
28 °C
ಕೆಲಸ ಮಾಡದಿದ್ದರೆ ಎತ್ತಂಗಡಿ – ಅಧಿಕಾರಿಗಳಿಗೆ ಎಚ್ಚರಿಕೆ

ಡಿ.ಸಿಗಳಿಗೆ ಬೊಮ್ಮಾಯಿ ‘ಬಿಸಿ’ | 9 ತಾಸು ನಿರಂತರ ಸಭೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ‘ತಾಲ್ಲೂಕು ಮತ್ತು ಜಿಲ್ಲಾ ಮಟ್ಟದಲ್ಲಿ ಅಧಿಕಾರಿಗಳು ನಿರೀಕ್ಷಿತ ಮಟ್ಟದಲ್ಲಿ ಕಾರ್ಯ ನಿರ್ವಹಿಸದೇ ಇರುವುದರಿಂದ ಸರ್ಕಾರದ ಕಾರ್ಯಕ್ರಮಗಳು ಜನರಿಗೆ ಸಕಾಲದಲ್ಲಿ ತಲುಪುತ್ತಿಲ್ಲ. ಈ ಲೋಪಗಳಿಗೆ ನೀವೇ ಹೊಣೆಗಾರರಾಗಬೇಕಾಗುತ್ತದೆ’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತುಸು ಗಡುಸಾಗಿಯೇ ಬಿಸಿ ಮುಟ್ಟಿಸಿದರು.

ವಿಧಾನಸಭೆ ಚುನಾವಣೆಗೆ ಪಕ್ಷವನ್ನು ಸಜ್ಜುಗೊಳಿಸಲು ನಡೆಸುತ್ತಿರುವ ‘ಜನಸಂಕಲ್ಪ ಯಾತ್ರೆ’ ಮಧ್ಯೆಯೇ, ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳ ಜತೆ ಸೋಮವಾರ ಸಭೆ ನಡೆಸಿದ ಅವರು, ಅಧಿಕಾರಿಗಳ ಕಾರ್ಯವೈಖರಿಯನ್ನು ಒರೆಗೆ ಹಚ್ಚಿದರು. ಅಧಿಕಾರಿಗಳು ಅಪೇಕ್ಷಿತ ಮಟ್ಟದಲ್ಲಿ ಕಾರ್ಯನಿರ್ವಹಿಸದೇ ಇರುವ ಬಗ್ಗೆ ತೀವ್ರ ಅತೃಪ್ತಿ ವ್ಯಕ್ತಪಡಿಸಿದ್ದೂ ಅಲ್ಲದೇ, ಕೆಲಸ ಮಾಡದಿದ್ದರೆ ಎತ್ತಂಗಡಿಯ ಎಚ್ಚರಿಕೆಯನ್ನೂ ನೀಡಿದರು.  

ಸುಮಾರು 9 ತಾಸು ನಿರಂತರ ಸಭೆ ನಡೆಸಿದ ಬೊಮ್ಮಾಯಿ, ಯಾವ ಯಾವ ಇಲಾಖೆಗಳಲ್ಲಿ ಯಾವ ಕಾರ್ಯಕ್ರಮಗಳನ್ನು ಜಾರಿ ಮಾಡುವಲ್ಲಿ ಹಿನ್ನಡೆಯಾಗಿದೆ ಎಂಬುದನ್ನು ಪಟ್ಟಿ ಮಾಡಿದ್ದೂ ಅಲ್ಲದೆ, ತ್ವರಿತಗತಿಯಲ್ಲಿ ಪೂರ್ಣಗೊಳಿಸಬೇಕೆಂದು ತಾಕೀತು ಮಾಡಿದರು.

‘ಕೆಲಸ ಮಾಡಿ, ಇಲ್ಲವಾದರೆ ನಿಮ್ಮ ಬದಲು ಬೇರೊಬ್ಬರನ್ನು ತಂದು ಕೂರಿಸುವುದೂ ನನಗೆ ಗೊತ್ತು. ಮಳೆ ಮತ್ತು ಪ್ರವಾಹದಿಂದ ರಾಜ್ಯದ ಹಲವು ಜಿಲ್ಲೆಗಳಲ್ಲಿ ಜನ ಸಂಕಷ್ಟದಲ್ಲಿದ್ದಾರೆ. ಆದರೆ, ಪರಿಹಾರ ವಿತರಣೆಯಲ್ಲಿ ತಡವಾಗಿದೆ. ಹಲವು ಕಡೆಗಳಲ್ಲಿ ಲೋಪಗಳು ಎದ್ದು ಕಾಣುತ್ತಿವೆ. ಈ ವಿಳಂಬಕ್ಕೆ ನೀವೇ ಕಾರಣರಾಗುತ್ತೀರಿ. ಡಿ.ಸಿ ಕಚೇರಿಯಲ್ಲಿ ಕುಳಿತು ಕೆಲಸ ಮಾಡಿದರೆ ಆಗುವುದಿಲ್ಲ. ತಾಲ್ಲೂಕು ಕೇಂದ್ರಕ್ಕೆ ಹೋಗಿ ಕೆಲಸ ಮಾಡಿ. ಬಹುತೇಕ ಜಿಲ್ಲಾಧಿಕಾರಿಗಳು ತಾಲ್ಲೂಕು ಕೇಂದ್ರಗಳಿಗೇ ಹೋಗುತ್ತಿಲ್ಲ’ ಎಂದೂ ಅವರು ಹರಿಹಾಯ್ದರು.

‘ಜಾನುವಾರುಗಳಿಗೆ ಚರ್ಮಗಂಟು ರೋಗ ಹಬ್ಬುತ್ತಿದೆ. ಅದನ್ನು ತಡೆಯಲು ಯಾವ ಕ್ರಮ ಕೈಗೊಂಡಿದ್ದೀರಿ? ಲಸಿಕೆ ಹಾಕುವುದು, ಪರಿಹಾರ ವಿತರಿಸುವ ಕೆಲಸಕ್ಕೆ ಚುರುಕು ಸಿಕ್ಕಿಲ್ಲ. ನಿಮ್ಮ ಅಧಿಕಾರ, ಜವಾಬ್ದಾರಿಯನ್ನು ಅರಿತುಕೊಂಡು ಕೆಲಸ ಮಾಡಬೇಕು. ಕಾರ್ಯಶೈಲಿಯನ್ನೂ ಬದಲಿಸಿಕೊಳ್ಳಬೇಕು. ಉದಾಸೀನತೆಯನ್ನು ಸಹಿಸಲು ಸಾಧ್ಯವಿಲ್ಲ’ ಎಂದೂ ಅವರು ತರಾಟೆಗೆ ತೆಗೆದುಕೊಂಡರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು