ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಡುಗೆ ಅನಿಲ ಸಂಪರ್ಕ ಕೊಡಿಸುವಂತೆ ಪಾರ್ವತಮ್ಮ ಕೇಳಿದ್ದರು: ಬೊಮ್ಮಾಯಿ

Last Updated 16 ಆಗಸ್ಟ್ 2021, 21:48 IST
ಅಕ್ಷರ ಗಾತ್ರ

ಬೆಂಗಳೂರು: ‘ಡಾ.ರಾಜ್‌ಕುಮಾರ್‌ ಅವರ ಕುಟುಂಬದೊಂದಿಗೆ ಅವಿನಾಭಾವ ಸಂಬಂಧವಿದೆ. ಪಾರ್ವತಮ್ಮ ರಾಜ್‌ಕುಮಾರ್‌ ನನಗೆ ತಾಯಿ ಸಮಾನ. ಅವರಿಗೆ ನನ್ನ ಮೇಲೆ ಎಲ್ಲಿಲ್ಲದ ಅಕ್ಕರೆ. ಅದು ಬಹಳಷ್ಟು ಮಂದಿಗೆ ಗೊತ್ತಿಲ್ಲ. ಮನೆಗೆ ಮತ್ತೊಂದು ಅಡುಗೆ ಅನಿಲದ ಸಂಪರ್ಕ ಬೇಕು (ಗ್ಯಾಸ್‌ ಕನೆಕ್ಷನ್‌) ಹೇಗಾದರೂ ಮಾಡಿ ಹಾಕಿಸಿಕೊಡು ಎಂದು ಹಿಂದೊಮ್ಮೆ ನನ್ನ ಬಳಿ ಕೇಳಿದ್ದರು. ಆ ಸಮಯದಲ್ಲಿ ಸಂಸದರಿಗೆ ಅಡುಗೆ ಅನಿಲದ ಸಂಪರ್ಕ ಕೊಡಲಾಗುತ್ತಿತ್ತು. ನನ್ನ ತಂದೆಯವರ (ಎಸ್‌.ಆರ್‌.ಬೊಮ್ಮಾಯಿ) ಕೋಟಾದಲ್ಲಿ ಪಾರ್ವತಮ್ಮ ಅವರಿಗೆ ಗ್ಯಾಸ್‌ ಕನೆಕ್ಷನ್‌ ಹಾಕಿಸಿಕೊಟ್ಟಿದ್ದೆ’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸ್ಮರಿಸಿದರು.

ಡಾ.ರಾಜ್‌ಕುಮಾರ್‌ ಕಲಿಕಾ ಆ್ಯಪ್‌ ಬಿಡುಗಡೆ ಕಾರ್ಯಕ್ರಮದಲ್ಲಿ ಅವರು ರಾಜ್‌ ಕುಟುಂಬದ ಜೊತೆಗಿನ ಒಡನಾಟ ಮೆಲುಕು ಹಾಕಿದರು.

‘ಗ್ಯಾಸ್‌ ಕನೆಕ್ಷನ್‌ ಕೊಡಿಸಿದ ಎರಡು ದಿನಕ್ಕೆ ನನಗೆ ಕರೆ ಮಾಡಿದ್ದ ಅಮ್ಮ, ನೀನು ಕೊಡಿಸಿದ ಗ್ಯಾಸ್‌ ಸಿಲಿಂಡರ್‌ನಿಂದಲೇ ಅಡುಗೆ ಮಾಡಿದ್ದೀನಿ. ತಪ್ಪದೆ ಊಟಕ್ಕೆ ಬಾ ಎಂದು ಕರೆದಿದ್ದರು. ಅವರಿಗೆ ನನ್ನ ಮೇಲೆ ಅಷ್ಟೊಂದು ಪ್ರೀತಿ ಇತ್ತು. ರಾಘಣ್ಣ ಹುಬ್ಬಳ್ಳಿಗೆ ಬರ್ತಾನೆ. ಅಲ್ಲಿರುವ ನಮ್ಮ ಕಚೇರಿಯನ್ನು ಆತನೇ ನೋಡಿಕೊಳ್ಳುವುದು. ಆತನ ಬಗ್ಗೆ ಸ್ಪಲ್ಪ ಕಾಳಜಿ ವಹಿಸು ಎಂದು ಹೇಳುತ್ತಿದ್ದರು. ರಾಘಣ್ಣ ನನ್ನ ಅತ್ಯಂತ ಆತ್ಮೀಯ ಸ್ನೇಹಿತ. ಚಿಕ್ಕಂದಿನಿಂದಲೂ ನನಗೆ ಪರಿಚಿತರು. ಅಪ್ಪು (ಪುನೀತ್‌ ರಾಜ್‌ಕುಮಾರ್‌) ಹಾಗೂ ಶಿವಣ್ಣ ಅವರ ಜೊತೆಯೂ ಆತ್ಮೀಯ ಒಡನಾಟ ಹೊಂದಿದ್ದೇನೆ’ ಎಂದರು.

‘ಡಾ.ರಾಜ್‌ಕುಮಾರ್‌ ಮೇರು ಶಿಖರವಿದ್ದಂತೆ. ಅಷ್ಟಾದರೂ ಅವರಲ್ಲಿ ಕಿಂಚಿತ್ತೂ ಅಹಂ ಇರಲಿಲ್ಲ. ಎಳೆಯ ಮಗುವಿನ ಮುಗ್ಧತೆ ಅವರಲ್ಲಿತ್ತು. ಎಷ್ಟೇ ಎತ್ತರಕ್ಕೆ ಬೆಳೆದರೂ ಅವರಲ್ಲಿನ ವಿಧೇಯತೆ ಮರೆಯಾಗಿರಲಿಲ್ಲ. ಹೊಸತನ್ನು ಕಲಿಯಲು ಸದಾ ಹಂಬಲಿಸುತ್ತಿದ್ದರು. ಅವರು ಆದರ್ಶ ವ್ಯಕ್ತಿ. ಮೇರು ವ್ಯಕ್ತಿತ್ವ ಹೊಂದಿದ್ದವರು. ಹೀಗಾಗಿಯೇ ಅವರನ್ನು ಜನ ಆರಾಧಿಸುತ್ತಿದ್ದರು. ಸಾವಿನಲ್ಲೂ ಸಾರ್ಥಕತೆ ಕಂಡ ಏಕೈಕ ಮನುಷ್ಯ ಅವರು’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT