ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಲ್ಯಾಣ ಕರ್ನಾಟಕಕ್ಕೆ ಸದ್ಯವೇ ₹3 ಸಾವಿರ ಕೋಟಿ ಬಿಡುಗಡೆ: ಬಸವರಾಜ ಬೊಮ್ಮಾಯಿ

ತೆರಿಗೆ ಸಂಗ್ರಹ ಹೆಚ್ಚಳ
Last Updated 23 ಡಿಸೆಂಬರ್ 2021, 19:45 IST
ಅಕ್ಷರ ಗಾತ್ರ

ಬೆಳಗಾವಿ (ಸುವರ್ಣ ವಿಧಾನಸೌಧ): ‘ಕಳೆದ ನಾಲ್ಕೈದು ತಿಂಗಳಲ್ಲಿ ಸಂಪನ್ಮೂಲ ಕ್ರೋಡೀಕರಣ ಗಣನೀಯವಾಗಿ ಹೆಚ್ಚಳವಾಗಿದೆ. ತೆರಿಗೆ ಸಂಗ್ರಹ ಪ್ರಮಾಣ ನವೆಂಬರ್‌ ಅಂತ್ಯಕ್ಕೆ ಶೇ 67ಕ್ಕೆ ಆಗಿದೆ’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

ವಿಧಾನಸಭೆಯಲ್ಲಿ ಗುರುವಾರ ನಡೆದ 2021–22ನೇ ಸಾಲಿನ ₹3,577 ಕೋಟಿ ಮೊತ್ತದ ಪೂರಕ ಅಂದಾಜುಗಳ ಎರಡನೇ ಕಂತಿನ ಬೇಡಿಕೆಗಳ ಮೇಲಿನ ಚರ್ಚೆಗೆ ಅವರು ಉತ್ತರ ನೀಡಿದರು.

ಅನೇಕ ಕ್ಷೇತ್ರಗಳಲ್ಲಿ ತೆರಿಗೆ ಸಂಗ್ರಹ ಆಗುತ್ತಿರಲಿಲ್ಲ. ಅಲ್ಲೂ ಸಹ ತೆರಿಗೆ ಸಂಗ್ರಹಕ್ಕೆ ಒತ್ತು ನೀಡುವಂತೆ ಸೂಚಿಸಿದ್ದೇನೆ. ಆ ಸೂಚನೆ ನೀಡಿದ ಬಳಿಕ ಅಡಿಕೆಯಲ್ಲಿ ಜಿಎಸ್‌ಟಿ ರೂಪದಲ್ಲಿ ₹8 ಕೋಟಿ ಸಂಗ್ರಹ ಆಗಿದೆ ಎಂದು ಅವರು ಮಾಹಿತಿ ನೀಡಿದರು.

‘ಕಲ್ಯಾಣ ಕರ್ನಾಟಕ ಭಾಗಕ್ಕೆ ಈ ಸಾಲಿನಲ್ಲಿ ₹1,492 ಕೋಟಿ ಮೀಸಲಿಡಲಾಗಿದೆ. ಮಂಡಳಿಗೆ ₹882 ಕೋಟಿ ನೀಡಲಾಗಿದೆ. ಈ ಪೈಕಿ ₹707 ಕೋಟಿ ಖರ್ಚು ಆಗಿದೆ. ಕಲ್ಯಾಣ ಕರ್ನಾಟಕದ ಸಮಗ್ರ ಅಭಿವೃದ್ಧಿಗೆ ಹೆಚ್ಚುವರಿಯಾಗಿ ₹3 ಸಾವಿರ ಕೋಟಿ ನೀಡುವುದಾಗಿ ಘೋಷಣೆ ಮಾಡಿದ್ದೆ. ಅದರ ಕ್ರಿಯಾಯೋಜನೆ ಸಿದ್ಧವಾಗಿ ನನ್ನ ಬಳಿಗೆ ಬಂದಿದೆ. ಆ ಭಾಗದ ಶಾಸಕರ ಜತೆಗೆ ಸಮಾಲೋಚನೆ ನಡೆಸಿ ಕ್ರಿಯಾಯೋಜನೆಗೆ ಜನವರಿ 15ರೊಳಗೆ ಅನುಮೋದನೆ ನೀಡುತ್ತೇನೆ’ ಎಂದು ಅವರು ಹೇಳಿದರು.

ಎತ್ತಿನಹೊಳೆ ಯೋಜನೆಯ ಎರಡನೇ ಹಂತದಲ್ಲಿ ಅಣೆಕಟ್ಟೆ ನಿರ್ಮಾಣ ಮಾಡಬೇಕಿದೆ. ಭೂ ಸ್ವಾಧೀನದ ಪರಿಹಾರದ ವಿವಾದದಿಂದ ಸಮಸ್ಯೆ ಉಂಟಾಗಿದೆ. ಕ್ಷೇತ್ರಕ್ಕೆ ಒಂದೊಂದು ರೀತಿ ಪರಿಹಾರ ನೀಡಬೇಕು ಎಂಬ ಬೇಡಿಕೆ ಬಂದಿದೆ. ರಾಜಕೀಯ ಕಾರಣದಿಂದ ಈ ಬೇಡಿಕೆ ಬಂದಿದೆ. ಪರಿಹಾರ ಮೊತ್ತವನ್ನು ಹೆಚ್ಚಿಸಿ ಜನವರಿಯಲ್ಲಿ ಈ ಸಮಸ್ಯೆ ಬಗೆಹರಿಸುವೆ ಎಂದು ಅವರು ಭರವಸೆ ನೀಡಿದರು.

ಕಾಂಗ್ರೆಸ್‌ನ ಕೃಷ್ಣ ಬೈರೇಗೌಡ, ’ಮುಂದಿನ ದಿನಗಳಲ್ಲಿ ರಾಜ್ಯದ ಹಣಕಾಸಿನ ಪರಿಸ್ಥಿತಿಗೆ ಗಂಡಾಂತರ ಎದುರಾಗಲಿದೆ. ನಾನಾ ಮೂಲದ ಸಂಪನ್ಮೂಲ ಕ್ರೋಡೀಕರಣ ಕಡಿಮೆ ಆಗುತ್ತಿದೆ. ಖರ್ಚು ಜಾಸ್ತಿ ಆಗುತ್ತಿದೆ‘ ಎಂದರು.

’ಅಬಕಾರಿ ಆದಾಯ 2002–03ರಲ್ಲಿ ₹100–₹200 ಕೋಟಿ ಇತ್ತು. ಅಬಕಾರಿ ಕ್ಷೇತ್ರದ ಸುಧಾರಣೆಗೆ ಗಮನ ಹರಿಸಿದ ಬಳಿಕ ಅಬಕಾರಿ ಆದಾಯ ₹1 ಸಾವಿರ ಕೋಟಿಗೆ ಏರಿತು. ಈಗ ಅದು ₹22 ಸಾವಿರ ಕೋಟಿ ಆಗಿದೆ. ಇದರ ಮೇಲಿನ ಅವಲಂಬನೆ ಕ್ರಮೇಣ ಕಡಿಮೆ ಆಗಬೇಕು. ಗ್ರಾಮಗಳಲ್ಲಿ ಮದ್ಯಪಾನ ಹಾವಳಿ ಹೆಚ್ಚುತ್ತಿರುವ ಬಗ್ಗೆ ಅನೇಕ ಸದಸ್ಯರು ಈಗಾಗಲೇ ಕಳವಳ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಸರ್ಕಾರ ಗಮನ ಹರಿಸಬೇಕು‘ ಎಂದು ಸಲಹೆ ನೀಡಿದರು.

’ನಮ್ಮ ರಾಜ್ಯಕ್ಕೆ ಬರುವ ಜಿಎಸ್‌ಟಿ ಪರಿಹಾರ 2020ರ ಮಾರ್ಚ್‌ಗೆ ನಿಲ್ಲಲಿದೆ. ಇದರಿಂದ ಪ್ರತಿವರ್ಷ ₹20 ಸಾವಿರ ಕೋಟಿ ಖೋತಾ ಆಗಲಿದೆ. ಜಿಎಸ್‌ಟಿ ಪ‍ರಿಹಾರ ನೀಡುವುದನ್ನು 2025ರ ವರೆಗೆ ವಿಸ್ತರಿಸಬೇಕು ಎಂದು ಹಲವು ಸಲ ಮನವಿ ಸಲ್ಲಿಸಲಾಗಿದೆ. ಆದರೆ, ಕೇಂದ್ರ ಸರ್ಕಾರ ಗಮನ ಹರಿಸಿಲ್ಲ. ಈ ಸಂಬಂಧ ಕೇಂದ್ರ ಸರ್ಕಾದ ಮೇಲೆ ಒತ್ತಡ ಹೇರಬೇಕು‘ ಎಂದು ಅವರು ಆಗ್ರಹಿಸಿದರು.

ಹೆಚ್ಚುವರಿ ₹500 ಕೋಟಿ ಬಿಡುಗಡೆ
‘ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ನಿಗಮಗಳ ಅನುದಾನ ಕಡಿತ ಮಾಡಲಾಗಿದೆ ಎಂಬ ಅಭಿಪ್ರಾಯ ಇದೆ. ಆದರೆ, ಆ ನಿಗಮಗಳ ಬ್ಯಾಂಕ್‌ ಖಾತೆಗಳಲ್ಲಿ ₹950 ಕೋಟಿ ಇದೆ. ಅದನ್ನು ಬಳಸುವಂತೆ ತಿಳಿಸಲಾಗಿದೆ. ಜತೆಗೆ, ಹೆಚ್ಚುವರಿಯಾಗಿ ₹500 ಕೋಟಿ ಬಿಡುಗಡೆ ಮಾಡಿ ಕಾರ್ಯಾದೇಶ ನೀಡಲಾಗುತ್ತಿದೆ’ ಎಂದೂ ಬೊಮ್ಮಾಯಿ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT