ಬುಧವಾರ, 31 ಮೇ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನವ ಕರ್ನಾಟಕ ಶೃಂಗ | ಸರ್ವರ ವಿಕಾಸಕ್ಕೆ ಸಮಗ್ರ ಪ್ರಗತಿ: ಸಿಎಂ ಬೊಮ್ಮಾಯಿ

ನವ ಭಾರತಕ್ಕಾಗಿ ನವ ಕರ್ನಾಟಕ ಸಮಗ್ರ ಅಭಿವೃದ್ಧಿಯ ಕನಸು
Last Updated 10 ಮಾರ್ಚ್ 2023, 19:32 IST
ಅಕ್ಷರ ಗಾತ್ರ

ಹುಬ್ಬಳ್ಳಿ: ‘ರಾಜ್ಯದ ಸಮಗ್ರ ಅಭಿ ವೃದ್ಧಿಯೇ ಸರ್ವರ ವಿಕಾಸದ ಮೂಲಮಂತ್ರವಾಗಿದೆ’ ಎಂದು ಮುಖ್ಯಮಂತ್ರಿ ಬೊಮ್ಮಾಯಿ ಅವರು ಹೇಳಿದರು.

ಇಲ್ಲಿನ ಡೆನಿಸನ್ಸ್ ಹೋಟೆಲ್‌ನಲ್ಲಿ ಶುಕ್ರವಾರ ಕರ್ನಾಟಕ ಸರ್ಕಾರದ ಸಹಯೋಗದಲ್ಲಿ ‘ಪ್ರಜಾವಾಣಿ ಮತ್ತು ಡೆಕ್ಕನ್‌ ಹೆರಾಲ್ಡ್‌ ಬ್ರ್ಯಾಂಡ್‌ ಸ್ಪಾಟ್’ ಪ್ರಸ್ತುತಪಡಿಸಿದ ನವ ಕರ್ನಾಟಕ ಶೃಂಗವನ್ನು ಉದ್ಘಾಟಿಸಿ ಮಾತನಾಡಿದ ಅವರು, ಕೃಷಿ, ಐಟಿ–ಬಿಟಿ ಹಾಗೂ ಸೌರ ಮತ್ತು ಪವನಶಕ್ತಿ ಕುರಿತು ತಮ್ಮ ವಿಚಾರಗಳನ್ನು ಪ್ರತಿಪಾದಿಸಿದರು.

‘ರಾಜ್ಯವು 10 ಕೃಷಿ ವಲಯಗಳನ್ನು ಹೊಂದಿದೆ. ಮಳೆ, ನೀರು, ಗಾಳಿ ಪ್ರಮಾಣ, ಮಣ್ಣಿನ ಸತ್ವ ಇವೆಲ್ಲವೂ ಕೃಷಿ ಪರಿಸರವನ್ನು ನಿರ್ಧರಿಸುತ್ತವೆ. ಈ ವಲಯಗಳು ವರ್ಷವಿಡೀ ಒಂದಲ್ಲ ಒಂದು ಬೆಳೆ ಬೆಳೆಯಲು ಪೂರಕವಾಗಿವೆ. ಇದು ರಾಜ್ಯದ ಸೌಭಾಗ್ಯ. ದೇಶದ ಬೇರೆಲ್ಲೂ ಇಂತಹ ಪರಿಸ್ಥಿತಿ ಇಲ್ಲ. ಮಣ್ಣಿನ ಈ ಗುಣ ಬಳಸಿ ಅಭಿವೃದ್ಧಿಯತ್ತ ಚಿತ್ತ ಹರಿಸಬೇಕು’ ಎಂದು ಸಲಹೆ ನೀಡಿದರು.

‘ಸ್ಪಷ್ಟ ಕೃಷಿ ನೀತಿಯೊಂದಿಗೆ, ಸಂಪನ್ಮೂಲದ ಸದ್ಬಳಕೆಯಾದರೆ ಆಹಾರ ಉತ್ಪಾದನೆಯಲ್ಲಿ ಪಂಜಾಬ್ ರಾಜ್ಯವನ್ನು ಮೀರಿಸುತ್ತೇವೆ. ಉತ್ಪಾದನಾ– ಸೇವಾ ವಲಯದಲ್ಲಿ ಅಭಿವೃದ್ಧಿ ಸಾಧಿಸುತ್ತೇವೆ. ಆಹಾರ ಸಂಸ್ಕರಣೆ ಪ್ರಗತಿಯಿಂದ, ಆದಾಯ ವೃದ್ಧಿಯಾಗುತ್ತದೆ. ಉದ್ಯೋಗಾವಕಾಶಗಳು ಹೆಚ್ಚುತ್ತವೆ. ಐ.ಟಿ, ಬಿ.ಟಿಯಲ್ಲಿ ಮುಂಚೂಣಿಯಲ್ಲಿದ್ದೇವೆ. ಏರೋಸ್ಪೇಸ್‌ನಲ್ಲೂ ನಾವು ಮುಂದು. ವಿಮಾನ ತಯಾರಿಕೆಗೆ ಬೇಕಾದ ಬಹುತೇಕ ಉಪ ಕರಣಗಳು ನಮ್ಮಲ್ಲಿ ತಯಾ ರಾಗುತ್ತವೆ. ನಮ್ಮಲ್ಲೇ ವಿಮಾನ ತಯಾರಿಕಾ ಘಟಕ ಸ್ಥಾಪಿಸುವಂತೆ ಹೂಡಿಕೆದಾರರಿಗೆ ಹೇಳಿದ್ದೇನೆ’ ಎಂದರು. .

‘ಸೌರಶಕ್ತಿ ಮತ್ತು ಪವನ ಶಕ್ತಿ ನವೀಕೃತವಾಗುವ ಇಂಧನಶಕ್ತಿಯಾ ಗಿವೆ. ಹೈಡ್ರೊಶೆಲ್‌ ಮತ್ತು ಅಮೋನಿಯಾ ಹೊಸ ಶಕ್ತಿಯಾಗಿದೆ. ರಸಗೊಬ್ಬರ ಕೊರತೆಯಾದಾಗ ನಾವೇ ಯಾಕೆ ಅಮೋನಿಯಾ ಉತ್ಪಾದಿಸಬಾರದು ಎಂಬ ಆಲೋಚನೆ ಬಂತು. ಅದರ ಫಲವಾಗಿ, ಅಮೋನಿಯಾ ಉತ್ಪಾದನೆಗೆ ಹೂಡಿಕೆದಾರರು ಮುಂದೆ ಬಂದಿದ್ದು, ಸಹಿ ಕೂಡ ಮಾಡಿದ್ದೇನೆ. ಇದರಿಂದ, ಬರಡು ಭೂಮಿಯನ್ನು ಫಲವತ್ತಾಗಿ ಮಾಡಬಹುದು’ ಎಂದರು.

ನೀರಾವರಿ ದ್ವಿಗುಣ: ‘ಉತ್ತರ ಕರ್ನಾಟಕ ವಿವಿಧ ಯೋಜನೆಗಳಿಂದ 7 ಲಕ್ಷ ಎಕರೆ ನೀರಾವರಿಯಾಗುತ್ತದೆ. ಇದನ್ನು ನಾವು ಸೂಕ್ಷ್ಮ ನೀರಾವರಿಗೆ ಪರಿವರ್ತಿಸಿದರೆ, ನೀರಾವರಿ ಪ್ರದೇಶ ದ್ವಿಗುಣವಾಗುತ್ತದೆ. ಭತ್ತ, ಕಬ್ಬು ಸೇರಿದಂತೆ ಹಲವು ರೀತಿಯ ಬೆಳೆಗಳನ್ನು ಬೆಳೆಯಬಹುದು. 100ಕ್ಕೂ ಹೆಚ್ಚು ಆಹಾರ ಸಂಸ್ಕರಣ ಕೇಂದ್ರಗಳನ್ನು ತೆರೆಯಬಹುದು. ಇದರಿಂದ ರಾಜ್ಯದ ಒಟ್ಟಾರೆ ಆರ್ಥಿಕತೆಯೇ ಬದಲಾಗಲಿದೆ’ ಎಂದು ಹೇಳಿದರು.

‘ದೇಶದ ಹೆಚ್ಚಿನ ಸ್ಟಾರ್ಟ್‌ಅಪ್‌ಗಳು ಬೆಂಗಳೂರಿನಲ್ಲಿವೆ. ರಾಜಧಾನಿ ಹೊರತುಪಡಿಸಿ ಸ್ಟಾರ್ಟ್‌ಅಪ್‌ ಮಾಡುವವರಿಗೆ ₹50 ಲಕ್ಷ ಕೊಡುವುದಾಗಿ ಹೇಳಿದೆವು. ಇದೀಗ, ಅವು ಅಣಬೆಯಂತೆ ತಲೆ ಎತ್ತುತ್ತಿವೆ. 1 ಟ್ರಿಲಿಯನ್ ಡಾಲರ್ (₹ 82 ಲಕ್ಷ ಕೋಟಿ) ಮೌಲ್ಯದ ಕಂಪನಿಗಳು ದೇಶದಲ್ಲಿ 4 ಇದ್ದು, ಅದರಲ್ಲಿ 3 ಬೆಂಗಳೂರಿನಲ್ಲಿವೆ. ಅಭಿವೃದ್ಧಿಯ ಕಾಳಜಿ ಸರ್ಕಾರಕ್ಕೆ ಮಾತ್ರವಲ್ಲ, ಎಲ್ಲಾ ವಲಯಗಳಲ್ಲಿರುವ ಪ್ರಮುಖರಿಗೂ ಇರಬೇಕು’ ಎಂದರು.

‘ಫಾಕ್ಸ್‌ಕಾನ್ ಕಂಪನಿಯವರು ಇತ್ತೀಚೆಗೆ ರಾಜ್ಯ್ಕಕೆ ಭೇಟಿ ನೀಡಿ, ನಮ್ಮ ನೀತಿಗಳನ್ನು ನೋಡಿದರು. ಜಾಗವನ್ನು ಸಹ ಪರಿಶೀಲಿಸಿದರು. ಅವರು ರಾಜ್ಯದಲ್ಲಿ ಕಂಪನಿ ಸ್ಥಾಪಿಸುವ ಭರವಸೆ ಇದೆ. ಇದರಿಂದ 1 ಲಕ್ಷ ಉದ್ಯೋಗ ಸೃಷ್ಟಿಯಾಗಲಿದೆ. ಅದೇ ರೀತಿ ಧಾರವಾಡದಲ್ಲಿ ಎಫ್‌ಎಂಸಿಜಿ ಉದ್ಘಾಟಿಸಲಾಗಿದೆ. ವಿಶೇಷ ಹೂಡಿಕೆ ವಲಯ (ಎಸ್‌ಐಆರ್‌) ಮಾಡಿ, ಬೆಂಗಳೂರಿನಾಚೆಗೆ ಹೂಡಿಕೆ ತರು ತ್ತಿದ್ದೇವೆ. ಈ ವರ್ಷ 25 ಜವಳಿ ಪಾರ್ಕ್‌ ಗಳನ್ನು ರಾಜ್ಯದಾದ್ಯಂತ ಆರಂಭಿಸಲಿದ್ದೇವೆ. ಇದರಿಂದ ಉದ್ಯೋಗಾವಕಾಶ ಹೆಚ್ಚಲಿದೆ. ಆರ್ಥಿಕತೆ ವೃದ್ಧಿಯಾಗಲಿದೆ’ ಎಂದರು.

‘ನವ ಕರ್ನಾಟಕ ನಿರ್ಮಾಣಕ್ಕಾಗಿ ಹಲವು ನೀತಿಗಳನ್ನು ಜಾರಿಗೆ ತಂದಿದ್ದೇವೆ. ಆರ್ಥಿಕತೆಯನ್ನು ಉತ್ತಮ ಹಾದಿಗೆ ತಂದಿದ್ದೇವೆ. ಸೌಲಭ್ಯಗಳನ್ನು ನೋಡಿಕೊಂಡು ಹೂಡಿಕೆ ಬರುತ್ತದೆ. ಅದಕ್ಕಾಗಿ, ಎಲ್ಲಾ ಮೂಲಸೌಕರ್ಯದೊಂದಿಗೆ 6 ಹೂಡಿಕೆಯ ನಗರಗಳನ್ನು ನಿರ್ಮಾಣ ಮಾಡಿದ್ದೇವೆ. 7 ಸರ್ಕಾರಿ ಎಂಜಿನಿಯರಿಂಗ್ ಕಾಲೇಜುಗಳನ್ನು ಮುಂದಿನ ಐದು ವರ್ಷಗಳಲ್ಲಿ ಐಐಟಿ ಮಟ್ಟಕ್ಕೆ ಬದಲಾಯಿಸಲು ತೀರ್ಮಾನಿಸಿದ್ದೇವೆ. ಅದಕ್ಕಾಗಿ ಒಂದೊಂದು ಕಾಲೇಜಿಗೂ ತಜ್ಞರ ಸಮಿತಿ ರಚಿಸಿ, ಅಗತ್ಯ ಹಣ ಕೊಟ್ಟಿದ್ದೇವೆ’ ಎಂದರು.

ನದಿ ವಿವಾದದ ಒಳಹೊರಗೆ
ನದಿ ವಿವಾದಗಳು ತ್ವರಿತವಾಗಿ ಯಾಕೆ ಅಂತ್ಯ ಕಾಣುತ್ತಿಲ್ಲ ಎಂಬುದನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವಿವರಿಸಿದರು.

‘ರಾಜ್ಯದ ನೀರಾವರಿಯ ಮುಖ್ಯ ಸಮಸ್ಯೆಯೆಂದರೆ ನದಿ ವಿವಾದ. ಅಂತರ ರಾಜ್ಯ ನದಿ ನೀರು ವಿವಾದ ಕಾಯ್ದೆ ಇದೆ. ಅಂತರ ರಾಜ್ಯ ನದಿಗಳಿಗೆ ಯಾವುದಾದರೂ ರಾಜ್ಯ ಯೋಜನೆ ರೂಪಿಸಿದರೆ, ಅದರ ಪರಿಹಾರಕ್ಕೆ ನ್ಯಾಯಮಂಡಳಿ ರಚಿಸಬೇಕು. ಆ ವಿವಾದ ವರ್ಷಗಟ್ಟಲೆ ನಡೆಯುತ್ತಿದೆ. ಅಭಿವೃದ್ಧಿಗೆ ಅಡಚಣೆಯಾಗಿರುವ ಇದು ಬದಲಾಗಬೇಕು.ಕೃಷ್ಣಾ, ಮಹದಾಯಿ, ಕಾವೇರಿ, ತುಂಗಾ ಸೇರಿದಂತೆ ಹಲವು ನದಿಗಳ ನೀರು ವಿವಾದದಲ್ಲಿವೆ. ಇದರಿಂದ ನಾವು ಹೊರಬರಬೇಕಿದೆ. ಆಗ, ರಾಜ್ಯದ ಕೃಷಿ ವಲಯದ ತ್ವರಿತಗತಿಯ ಬೆಳವಣಿಗೆ ಸಾಧ್ಯ’ ಎಂದು ಅಭಿಪ್ರಾಯಪಟ್ಟರು.

‘ಯಾರು ಶ್ರೀಮಂತರಾಗಬೇಕು?’
‘ಯಾವುದೇ ರಾಜ್ಯದ ಸರ್ಕಾರ ಶ್ರೀಮಂತವಾಗಿರಬೇಕಾ ಅಥವಾ ರಾಜ್ಯದ ಜನ? ಇದಕ್ಕೆ ನನ್ನ ಉತ್ತರ, ಜನ ಶ್ರೀಮಂತರಾಗಿರಬೇಕು. ಜನರ ನೆಮ್ಮದಿಯಿಂದ ಕೆಲಸದ ಸಾಮರ್ಥ್ಯ, ಖರೀದಿ ಸಾಮರ್ಥ್ಯ ಹೆಚ್ಚಾಗುತ್ತದೆ. ಸರ್ಕಾರದ ಬೊಕ್ಕಸವೂ ತುಂಬುತ್ತದೆ. ಇದೊಂದು ವಿಕಾಸದ ಚಕ್ರ. ದುಡಿಯುವ ವರ್ಗದ ಮೇಲಿನ ಹೂಡಿಕೆಯನ್ನೇ ಸಾಮಾಜಿಕ ಮೂಲಸೌಕರ್ಯ ಎನ್ನುವುದು. ಬಡವರಿಗೆ ಸೂರು ಕೊಡುವ ಫಿಲಾಸಫಿಯಲ್ಲಿ, ಹಲವರಿಗೆ ಅನುಕೂಲವಾಗುವ ಅರ್ಥಶಾಸ್ತ್ರವೂ ಇದೆ’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

ಹುಬ್ಬಳ್ಳಿಯಲ್ಲಿ ಶುಕ್ರವಾರ ನಡೆದ ನವಕರ್ನಾಟಕ ಶೃಂಗದಲ್ಲಿ ಬೆಂಗಳೂರಿನ ಕಲಾವಿದರ ತಂಡ ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಟ್ಟಿತು.  -ಪ್ರಜಾವಾಣಿ ಚಿತ್ರ
ಹುಬ್ಬಳ್ಳಿಯಲ್ಲಿ ಶುಕ್ರವಾರ ನಡೆದ ನವಕರ್ನಾಟಕ ಶೃಂಗದಲ್ಲಿ ಬೆಂಗಳೂರಿನ ಕಲಾವಿದರ ತಂಡ ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಟ್ಟಿತು. -ಪ್ರಜಾವಾಣಿ ಚಿತ್ರ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT