ಸೋಮವಾರ, ಆಗಸ್ಟ್ 15, 2022
28 °C

ಕನಕದಾಸರ ಚರಿತ್ರೆ ಹಿಂದೆ ಇದ್ದಂತೆಯೇ ಪ್ರಕಟಿಸಬೇಕು: ಸಿಎಂ ಬೊಮ್ಮಾಯಿ ಸೂಚನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ‘ಪಠ್ಯಪುಸ್ತಕದಲ್ಲಿ ದಾಸ ಶ್ರೇಷ್ಠ ಕನಕದಾಸರ ಜೀವನ ಚರಿತ್ರೆಯನ್ನು ಈ ಹಿಂದೆ ಇದ್ದಂತೆಯೇ ಮತ್ತೆ ಪ್ರಕಟಿಸಬೇಕು’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಲಿಖಿತ ಸೂಚನೆ ನೀಡಿದ್ದಾರೆ.

ಕಾಗಿನೆಲೆಯ ಕನಕ ಗುರುಪೀಠದ ನಿರಂಜನಾನಂದಪುರಿ ಸ್ವಾಮೀಜಿ ಅವರು  ಬೊಮ್ಮಾಯಿ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದರು. ಪಠ್ಯಪುಸ್ತಕ ಪರಿಷ್ಕರಣೆ ಸಮಿತಿಯು ಕನಕದಾಸರ ಜೀವನ ಚರಿತ್ರೆ ಮತ್ತು ವಿವರಗಳನ್ನು ಕಡೆಗಣಿಸಿದೆ ಎಂದು ಸ್ವಾಮೀಜಿ ಹೇಳಿದರು.

ಒಂಬತ್ತನೇ ತರಗತಿ ಸಮಾಜ ವಿಜ್ಞಾನದಲ್ಲಿ ಒಂದು ಪುಟದಷ್ಟಿದ್ದ ಕನಕದಾಸರ ಜೀವನ ವಿವರಗಳನ್ನೊಳಗೊಂಡ ಪಠ್ಯ ಭಾಗವನ್ನು ಒಂದೇ ಸಾಲಿಗೆ ತಂದು ಕಡಿತಗೊಳಿಸುವ ಮೂಲಕ ಕನಕದಾಸರ ಆದರ್ಶ ಮತ್ತು ದಾರ್ಶನಿಕ ಸತ್ಯಗಳನ್ನು ಮರೆಮಾಚುವ ದೊಡ್ಡ ಹುನ್ನಾರ ನಡೆದಿದೆ ಎಂದು ಅವರು ಆಕ್ಷೇಪಿಸಿದರು.

ಇದು ಹಿಂದುಳಿದ ಸಮುದಾಯಗಳನ್ನು ಒಳಗೊಂಡಂತೆ ಈ ನೆಲದ ನಾಡು– ನುಡಿಗೆ ಮಾಡಿದ ದ್ರೋಹವಾಗಿದೆ. ಚಾರಿತ್ರಿಕ ಮತ್ತು ಸಾಂಸ್ಕೃತಿಕ ದ್ರೋಹವಾಗಿದೆ. ತಾವು ಮಧ್ಯ ಪ್ರವೇಶಿಸಿ ಕನಕದಾಸರ ಜೀವನ ವಿವರಗಳನ್ನು ಹಿಂದಿನಂತೇ ಅಳವಡಿಸಬೇಕು ಎಂದು ಮನವಿ ಮಾಡಿದರು.

ಕೆಂಪೇಗೌಡರಿಗೆ ಒಂದೇ ಪುಟ!

‘ನಾಡಪ್ರಭು ಕೆಂಪೇಗೌಡರ ಬಗ್ಗೆ ಹಿಂದಿನ ಸಮಾಜ ವಿಜ್ಞಾನ ಪಠ್ಯದಲ್ಲಿ ಏನು ಇರಲಿಲ್ಲ ಎಂದು ಸಚಿವರು ಹೇಳಿದ್ದು ಸತ್ಯವಲ್ಲ. ಬರಗೂರರ ಪಠ್ಯದಲ್ಲಿ ಎರಡು ಪುಟಗಳಷ್ಟಿದ್ದ ಕೆಂಪೇಗೌಡರ ವಿಷಯವನ್ನು ಮರು ಪರಿಷ್ಕರಣೆಯಲ್ಲಿ ಒಂದು ಪುಟಕ್ಕೆ ಇಳಿಸಲಾಗಿದೆ. ದಾಸ ಕೂಟದವರು ಅದರಲ್ಲೂ ವಿಶೇಷವಾಗಿ ಕನಕದಾಸರಂಥಹವರು ಜಾತಿ ತಾರತಮ್ಯ ವಿರೋಧಿಸಿದ್ದನ್ನು ಪರಿಷ್ಕರಣೆಯಲ್ಲಿ ಬಿಡಲಾಗಿರುವುದು ಸರಿಯಾದ ಕ್ರಮವಲ್ಲ’ ಎಂದು ಮಠಾಧೀಶರ ಒಕ್ಕೂಟ ಹೇಳಿದೆ.

    ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

    ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

    ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

    ಈ ವಿಭಾಗದಿಂದ ಇನ್ನಷ್ಟು