ಶನಿವಾರ, 10 ಜೂನ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿದ್ದೇಶ್ವರ ಶ್ರೀಗಳ ಆರೋಗ್ಯ ವಿಚಾರಿಸಿದ ಪ್ರಧಾನಿ ಮೋದಿ: ಸಿ.ಎಂ ಬೊಮ್ಮಾಯಿ ಹೇಳಿಕೆ

Last Updated 31 ಡಿಸೆಂಬರ್ 2022, 19:32 IST
ಅಕ್ಷರ ಗಾತ್ರ

ವಿಜಯಪುರ: ಅನಾರೋಗ್ಯದಿಂದ ಬಳಲುತ್ತಿರುವ ವಿಜಯಪುರ ಜ್ಞಾನಯೋಗಾಶ್ರಮದ ಸಿದ್ದೇಶ್ವರ ಶ್ರೀಗಳ ಆರೋಗ್ಯವನ್ನು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಫೋನ್ ಕರೆ ಮಾಡಿ ವಿಚಾರಿಸಿದರು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ನಗರದಲ್ಲಿರುವ ಜ್ಞಾನ ಯೋಗಾಶ್ರಮಕ್ಕೆ ಶನಿವಾರ ರಾತ್ರಿ ಭೇಟಿ ನೀಡಿ ಶ್ರೀಗಳ ದರ್ಶನ ಪಡೆದು, ಆರೋಗ್ಯ ವಿಚಾರಿಸಿದ ಬಳಿಕ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು. ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರು ಪ್ರಧಾನಿ ಅವರಿಗೆ ಫೋನ್ ಕರೆ ಮಾಡಿ ಸ್ವಾಮೀಜಿಗಳೊಂದಿಗೆ ಮಾತನಾಡಿಸಿದರು. ಈ ಸಂದರ್ಭದಲ್ಲಿ ಪ್ರಧಾನಿ ಅವರು ಹೆಚ್ಚಿನ ಚಿಕಿತ್ಸೆ ಒದಗಿಸುವ ಬಗ್ಗೆ ತಿಳಿಸಿದಾಗ ಶ್ರೀಗಳು ಕೈಮುಗಿದು ಕೃತಜ್ಞತೆ ಸಲ್ಲಿಸಿದರು ಎಂದು ಹೇಳಿದರು.

ರಾಜ್ಯ ಸರ್ಕಾರ ಶ್ರೀಗಳಿಗೆ ಅಗತ್ಯ ಚಿಕಿತ್ಸೆ ಒದಗಿಸಲು ವ್ಯವಸ್ಥೆ ಮಾಡಲು ಸಿದ್ದವಿದೆ. ಆದರೆ, ಶ್ರೀಗಳು ಯಾವುದೇ ಚಿಕಿತ್ಸೆ ತೆಗೆದುಕೊಳ್ಳಲು ಒಪ್ಪುತ್ತಿಲ್ಲ ಎಂದು ತಿಳಿಸಿದರು. ಅವರ ಪ್ರತಿಯೊಂದು ಮಾತು, ಬೋಧನೆ ನಮ್ಮ ಬದುಕಿಗೆ ಮಾರ್ಗದರ್ಶಕವಾಗಿದೆ.
ವಿಜಯಪುರ ಪುಣ್ಯಭೂಮಿಯಲ್ಲಿರುವ ಜ್ಞಾನಯೋಗಾಶ್ರಮ ಈ ಭಾಗದ ಜನರ ಪುಣ್ಯ. ಅವರು ಎಲ್ಲಿಗೆ ಹೋದರೂ ಜನರ ಮನ ಪರಿವರ್ತನೆ ಮಾಡುವ ಸಾಮಾರ್ಥ್ಯ ಹೊಂದಿರುವ ಏಕೈಕ ಸ್ವಾಮೀಜಿ ಅವರಾಗಿದ್ದಾರೆ ಎಂದರು.

ನಿಜವಾಗಲು ಅವರೊಬ್ಬ ನಡೆದಾಡುವ ದೇವರು, ಪರಿಶುದ್ಧ ಆತ್ಮ, ಪರಿಶುದ್ಧವಾದ ಚಿಂತನೆ, ಪರಿಶುದ್ಧವಾದ ಆಚರಣೆ, ಎಲ್ಲ ತತ್ವಗಳನ್ನು ಅರಿತು ಅರಿವಿನೊಂದಿಗೆ ಪಾಲಿಸಿದ ಅಪರೂಪದ ತತ್ವಜ್ಞಾನಿ ಎಂದು ಶ್ಲಾಘಿಸಿದರು. ಪಾಶ್ಚಿಮಾತ್ಯ ಸೇರಿದಂತೆ ನಮ್ಮ ದೇಶ ಇರಬಹುದು, ಎಲ್ಲ ವಿಚಾರಗಳನ್ನು ಆಳವಾಗಿ, ನಿಖರವಾಗಿ ತಿಳಿದುಕೊಂಡವರು ಎಂದರು.

ಸಾಮಾನ್ಯ ಮನುಷ್ಯನ ಜಟಿಲ ಸಮಸ್ಯೆಗಳಿಗೆ ಅತ್ಯಂತ ಸರಳ ಪರಿಹಾರ ಕೊಟ್ಟವರು ಸಿದ್ದೇಶ್ವರ ಶ್ರೀಗಳು ಎಂದು ಹೇಳಿದರು.
ನಮ್ಮ ಬದುಕು ನೋಡುವ ಹೊಸ ಆಯಾಮ ಕೊಟ್ಟವರು ಎಂದರು. ನಾವೆಲ್ಲ ಅವರಿಂದ ಪ್ರಭಾವಿತರಾದವರು. ಅವರ ಮಾತಿಗೆ ನಾವೆಲ್ಲ ಬದಲಾವಣೆ ಆಗಿದ್ದೇವೆ ಎಂದರು.

ನನ್ನ ಬಳಿ ಹತ್ತಾರು ಬಾರಿ ರೈತಾಪಿ ವರ್ಗದ ಬಗ್ಗೆ ಚರ್ಚಿಸಿದ್ದಾರೆ. ನೀರಾವರಿ, ತತ್ವಜ್ಞಾನ, ಆಧ್ಯಾತ್ಮದ ಬಗ್ಗೆ ಚರ್ಚಿಸಿದ್ದಾರೆ. ನನ್ನೊಂದಿಗೆ ಸದಾ ಕಾಲ ಪ್ರೀತಿ, ವಿಶ್ವಾಸದಿಂದ ಮಾತನಾಡಿದ್ದಾರೆ ಎಂದರು.

ಶ್ರೀಗಳು ನಾಡಿನ ಶ್ರೇಷ್ಠ ಸಂತ. ಅವರು ಇನ್ನಷ್ಟು ಕಾಲ ನಮ್ಮೊಂದಿಗೆ ಇರಬೇಕು ಎಂಬುದು ನಮ್ಮ ಆಶಯವಾಗಿದೆ ಎಂದರು.
ಇಡೀ ಕನ್ನಡ ಕುಲ ಆತಂಕದಲ್ಲಿದೆ. ಇಷ್ಟು ಬೇಗ ಅವರ ಆರೋಗ್ಯ ಕ್ಷೀಣಿಸುತ್ತದೆ ಎಂದು ನಿರೀಕ್ಷಿಸಿರಲಿಲ್ಲ. ಆವರು ಬೇಗ ಗುಣಮುಖವಾಗಲಿ ಎಂದು ಆಶಿಸುತ್ತೇನೆ ಎಂದರು.

ಅವರ ಬಿಪಿ, ಕಿಡ್ನಿ, ಹೃದಯ ಎಲ್ಲವೂ ಚನ್ನಾಗಿ ಕಾರ್ಯ ನಿರ್ವಹಿಸುತ್ತಿವೆ ಎಂದು ಅವರಿಗೆ ಚಿಕಿತ್ಸೆ ನೀಡುತ್ತಿರುವ ವೈದ್ಯರು ತಿಳಿಸಿದ್ದಾರೆ ಎಂದರು.

ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಮಾತನಾಡಿ, ಗೃಹ ಸಚಿವ ಅಮಿತ್ ಶಾ ಅವರು ಕೇಂದ್ರ ಸರ್ಕಾರದ ಪರವಾಗಿ ನನ್ನನ್ನು ಹಾಗೂ ಮುಖ್ಯಮಂತ್ರಿ ಅವರನ್ನು ಆಶ್ರಮಕ್ಕೆ ಹೋಗಿ ಶ್ರೀಗಳ ಆರೋಗ್ಯ ವಿಚಾರಿಸಿ, ಅಗತ್ಯ ಚಿಕಿತ್ಸೆ ಒದಗಿಸುವಂತೆ ಸೂಚಿಸಿದ ಮೇರೆಗೆ ಬಂದಿದ್ದೇವೆ. ಆದರೆ, ಶ್ರೀಗಳು ಹೆಚ್ಚಿನ ಚಿಕಿತ್ಸೆಗೆ ಒಪ್ಪುತ್ತಿಲ್ಲ ಎಂದರು.

ಸಚಿವ ಗೋವಿಂದ ಕಾರಜೋಳ, ಶಾಸಕರಾದ ಅರವಿಂದ ಬೆಲ್ಲದ, ರಮೇಶ ಬೂಸನೂರು, ಸೋಮನಗೌಡ ಪಾಟೀಲ ಸಾಸನೂರ, ವಿಜುಗೌಡ ಪಾಟೀಲ, ಜಿಲ್ಲಾಧಿಕಾರಿ ವಿಜಯ ಮಹಾಂತೇಶ, ಎಸ್.ಪಿ.‌ಎಚ್.ಡಿ.ಆನಂದಕುಮಾರ್, ಜಿ.ಪಂ. ಸಿಇಒ ರಾಹುಲ್ ಶಿಂಧೆ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT