ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಏಪ್ರಿಲ್‌ನಿಂದ ಉಚಿತ ಬಸ್‌ಪಾಸ್‌ -ಸಿಎಂ ಬೊಮ್ಮಾಯಿ

ಶಾಲಾ ವಿದ್ಯಾರ್ಥಿನಿಯರು, ದುಡಿಯುವ ಮಹಿಳೆಯರಿಗೆ ಸೌಲಭ್ಯ
Last Updated 21 ಫೆಬ್ರುವರಿ 2023, 22:15 IST
ಅಕ್ಷರ ಗಾತ್ರ

ಬೆಂಗಳೂರು: ಶಾಲಾ ವಿದ್ಯಾರ್ಥಿನಿಯರು, ದುಡಿಯುವ ಮಹಿಳೆಯರಿಗೆ ಏಪ್ರಿಲ್ 1ರಿಂದ ಅನ್ವಯವಾಗುವಂತೆ ಉಚಿತ ಬಸ್‌ಪಾಸ್‌ ನೀಡಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ‘ಅಂಬಾರಿ ಉತ್ಸವ’ ವೋಲ್ವೊ ಬಸ್‌ಗಳ ಸಂಚಾರಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಬಾಲಕಿಯರ ಶಿಕ್ಷಣಕ್ಕೆ ಸರ್ಕಾರ ಹೆಚ್ಚಿನ ಆದ್ಯತೆ ನೀಡಿದೆ. ದೂರದ ಪ್ರದೇಶಗಳಿಂದ ಶಾಲೆಗೆ ಬರುವ ವಿದ್ಯಾರ್ಥಿನಿಯರಿಗೆ ಅನುಕೂಲ ಕಲ್ಪಿಸಲು ಉಚಿತ ಬಸ್‌ಪಾಸ್‌ ಸೌಲಭ್ಯ ನೀಡಲು ನಿರ್ಧರಿಸಲಾಗಿದೆ. ಶಾಲೆ ಆರಂಭವಾಗುವ ಸಮಯ, ಬಿಡುವ ಸಮಯಕ್ಕೆ ಬಸ್‌ಗಳು ಲಭ್ಯವಿರಬೇಕು. ಅದಕ್ಕಾಗಿ ಪ್ರಸ್ತುತ ಸಂಚರಿಸುತ್ತಿರುವ ಬಸ್‌ಗಳ ಜತೆಗೆ ಪ್ರತಿ ತಾಲ್ಲೂಕಿಗೆ ಕನಿಷ್ಠ ಮೂರರಿಂದ ಐದು ಬಸ್‌ಗಳ ವ್ಯವಸ್ಥೆ ಮಾಡಬೇಕು. ಸಂಸ್ಥೆಯ ಬಸ್‌ಗಳು ಲಭ್ಯವಿಲ್ಲದಿದ್ದ ಪ್ರದೇಶಗಳಲ್ಲಿ ಗುತ್ತಿಗೆ ಆಧಾರದಲ್ಲಿ ಬಸ್‌ಗಳನ್ನು ತೆಗೆದುಕೊಳ್ಳಬೇಕು. ಮಿನಿ ಬಸ್‌ಗಳ ಬಳಕೆ ಮಾಡಬೇಕು. ಅದಕ್ಕೆ ಅಗತ್ಯವಿರುವ ಅನುದಾನ ಒದಗಿಸಲಾಗುವುದು ಎಂದರು.

ಮಹಿಳೆಯರಿಗೆ ಗೌರವದ ಜತೆಗೆ ಆರ್ಥಿಕವಾಗಿ ಸ್ವಾವಲಂಬಿಯಾಗಲು ಹಲವು ಕ್ರಮಗಳನ್ನು ಕೈಗೊಳ್ಳಲಾಗಿದೆ. ದುಡಿಯುವ ಮಹಿಳೆಯರಿಗೆ ಉತ್ತೇಜನ ನೀಡಲು ಉಚಿತ ಬಸ್‌ಪಾಸ್‌ ನೀಡಲಾಗುತ್ತಿದೆ. ಬಜೆಟ್‌ನಲ್ಲೂ ಘೋಷಣೆ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.

ಲಾಭದತ್ತ ಸಾಗುವ ಆಶಯ: ಜನರ ಸೇವೆಯ ಜತೆಗೆ, ನಿಗಮವನ್ನು ಲಾಭದಾಯಕವಾಗಿ ಬೆಳೆಸುವತ್ತಲೂ ಗಮನ ಹರಿಸಬೇಕು. ಸೋರಿಕೆ ತಡೆಗಟ್ಟಿ, ಬಿಡಿಭಾಗಗಳ ಖರೀದಿಯಲ್ಲಿ ಪಾರದರ್ಶಕತೆ ತರಬೇಕು. ವೆಚ್ಚ ತಗ್ಗಿಸಬೇಕು. ಸಂಕಷ್ಟದಲ್ಲಿರುವ ನಿಗಮ ಗಳನ್ನು ಮೇಲೆತ್ತಲು ಸಿಬ್ಬಂದಿ ಸಹಕಾರ ನೀಡಬೇಕು. ಸಿಬ್ಬಂದಿಯ ವೇತನ ಹೆಚ್ಚಳ ಕುರಿತು ಸಂಘಟನೆಗಳ ಜತೆ ಚರ್ಚಿಸಿ, ನಿರ್ಧಾರ ತೆಗೆದುಕೊಳ್ಳಲಾಗುವುದು. ನಷ್ಟದಲ್ಲಿದ್ದ ಸಾರಿಗೆ ನಿಗಮಗಳಿಗೆ ಈಗಾಗಲೇ ₹ 4,600 ಕೋಟಿ ನೀಡಲಾಗಿದೆ. ಈಚೆಗೆ ₹ 1 ಸಾವಿರ ಕೋಟಿ ಬಿಡುಗಡೆ ಮಾಡಲಾಗಿದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT