ಸೋಮವಾರ, ಸೆಪ್ಟೆಂಬರ್ 27, 2021
28 °C
ಖಾತೆ ಹಂಚಿಕೆ ಅಸಮಾಧಾನ ತಣಿಸಲು ವರಿಷ್ಠರ ನೆರವು ಪಡೆಯಲು ಯತ್ನ

ಬಿಕ್ಕಟ್ಟು ಶಮನಕ್ಕೆ ದೆಹಲಿ ಯಾತ್ರೆಗೆ ಬೊಮ್ಮಾಯಿ ಸಜ್ಜು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ರಾಜ್ಯ ಸರ್ಕಾರದ ಚುಕ್ಕಾಣಿ ಹಿಡಿದು, ಆಡಳಿತ ಯಂತ್ರವನ್ನು ಮುನ್ನಡೆಸುವ ತಯಾರಿಯ ಆರಂಭದ ದಿನಗಳಲ್ಲೇ ಉದ್ಭವಿಸಿರುವ ಖಾತೆ ಹಂಚಿಕೆಯ ಅಸಮಾಧಾನ ಶಮನಗೊಳಿಸಲು ವರಿಷ್ಠರ ನೆರವು ಪಡೆಯಲು ಮತ್ತೊಮ್ಮೆ ದೆಹಲಿ ಯಾತ್ರೆ ಕೈಗೊಳ್ಳಬೇಕಾದ ಇಕ್ಕಟ್ಟಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಿಲುಕಿದ್ದಾರೆ.

ಕೆಲವು ಸಚಿವರು ತಮಗೆ ಹಂಚಿಕೆ ಮಾಡಿರುವ ಖಾತೆಗಳನ್ನು ಬದಲಿಸುವಂತೆ ಪಟ್ಟು ಹಿಡಿದಿದ್ದಾರೆ. ಮಂತ್ರಿಮಂಡಲ ರಚನೆಯ ಬಗ್ಗೆಯೇ ತಕರಾರು ಎತ್ತಿರುವ ಹಲವು ಶಾಸಕರು, ತಮಗೆ ಅವಕಾಶ ಕೈತಪ್ಪಿರುವುದಕ್ಕೆ ಬಹಿರಂಗವಾಗಿಯೇ ಅಸಮಾಧಾನ ಹೊರಹಾಕುತ್ತಿದ್ದಾರೆ. ಈ ಎರಡೂ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಮುಂದಿನ ವಾರ ದೆಹಲಿಗೆ ತೆರಳಿ ವರಿಷ್ಠರ ಜತೆ ಚರ್ಚಿಸಿ, ನಿರ್ಧಾರಕ್ಕೆ ಬರಲು ಮುಖ್ಯಮಂತ್ರಿ ತೀರ್ಮಾನಿಸಿದ್ದಾರೆ ಎಂದು ಗೊತ್ತಾಗಿದೆ.

ಸಂಪುಟದಲ್ಲಿ ನಾಲ್ಕು ಸ್ಥಾನಗಳನ್ನು ಉಳಿಸಿಕೊಳ್ಳಲಾಗಿದೆ. ಅವುಗಳನ್ನು ಭರ್ತಿ ಮಾಡುವ ಮೂಲಕ ಶಾಸಕರ ಕೋಪ ತಣಿಸಲು ಬಿಜೆಪಿ ವರಿಷ್ಠರು ಯೋಚಿಸುತ್ತಿದ್ದಾರೆ. ಅದರ ಜತೆಯಲ್ಲೇ, ಕೆಲವು ಸಚಿವರ ಖಾತೆಗಳನ್ನು ಅದಲು–ಬದಲು ಮಾಡುವ ಮೂಲಕ ಸಂಪುಟ ಸದಸ್ಯರ ಅಸಮಾಧಾನಕ್ಕೂ ತೆರೆ ಎಳೆಯುವ ಸಾಧ್ಯತೆ ಇದೆ ಎಂದು ಬಿಜೆಪಿ ಮೂಲಗಳು ತಿಳಿಸಿವೆ.

ಕಾಂಗ್ರೆಸ್‌, ಜೆಡಿಎಸ್‌ ತೊರೆದು ಬಂದು ಸಚಿವರಾಗಿರುವವರು ಈಗ ಖಾತೆ ವಿಚಾರದಲ್ಲಿ ಪಕ್ಷದ ವರಿಷ್ಠರ ಮೇಲೆ ಒತ್ತಡ ತರುವ ಬದಲಿಗೆ ತಮ್ಮ ನಡುವೆಯೇ ಖಾತೆಗಳನ್ನು ಬದಲಾವಣೆ ಮಾಡಿಕೊಳ್ಳುವ ಮೂಲಕ ಸಮಸ್ಯೆ ಪರಿಹರಿಸಿಕೊಳ್ಳಬೇಕು ಎಂಬ ಸಲಹೆಯನ್ನು ಸಚಿವ ಮುನಿರತ್ನ ಮುಂದಿಟ್ಟಿದ್ದಾರೆ. ಈ ಅವಕಾಶವನ್ನೂ ಸಮಸ್ಯೆ ಪರಿಹಾರಕ್ಕೆ ಬಳಸಿಕೊಳ್ಳುವ ಸಾಧ್ಯತೆ ಇದೆ.

‘ವಲಸಿಗ’ರಿಗೆ ಉತ್ತಮ ಖಾತೆಗಳನ್ನು ನೀಡಿದ್ದು, ಪಕ್ಷದ ಮೂಲದವರನ್ನು ಕಡೆಗಣಿಸಲಾಗಿದೆ ಎಂಬ ಅಸಮಾಧಾನ ಬಿಜೆಪಿಯ ಒಂದು ಗುಂಪಿನಲ್ಲಿದೆ. ಕಾಂಗ್ರೆಸ್‌ ತೊರೆದು ಬಿಜೆಪಿ ಸೇರುವ ಸಂದರ್ಭದಲ್ಲಿ ಕೊಟ್ಟ ಭರವಸೆಯಂತೆ ತಮ್ಮನ್ನು ‘ಗೌರವ’ಯುತವಾಗಿ ನಡೆಸಿಕೊಳ್ಳುತ್ತಿಲ್ಲ ಎಂದು ಸಚಿವರಾದ ಆನಂದ್‌ ಸಿಂಗ್‌ ಮತ್ತು ಎಂ.ಟಿ.ಬಿ. ನಾಗರಾಜ್‌ ತಕರಾರು ಎತ್ತಿದ್ದಾರೆ. ಇಬ್ಬರ ಜತೆಗೂ ಬಸವರಾಜ ಬೊಮ್ಮಾಯಿ ಚರ್ಚೆ ನಡೆಸಿದ್ದಾರೆ. ತಮಗೆ ನೀಡಿರುವ ಖಾತೆಗಳ ಕುರಿತು ಸಮಾಧಾನ ಇಲ್ಲ ಎಂಬುದನ್ನು ಸಾರಿಗೆ ಮತ್ತು ಪರಿಶಿಷ್ಟ ಪಂಗಡಗಳ ಕಲ್ಯಾಣ ಸಚಿವ ಬಿ. ಶ್ರೀರಾಮುಲು ಕೂಡ ಹೊರಹಾಕಿದ್ದಾರೆ.

ಮುಗಿಯದ ಮುನಿಸು: ಸಂಪುಟದಲ್ಲಿ ಸ್ಥಾನ ದೊರಕದೇ ಇರುವುದಕ್ಕಾಗಿ ಮುನಿಸಿಕೊಂಡಿರುವ ಶಾಸಕರ ಸಂಖ್ಯೆಯೂ ಹೆಚ್ಚುತ್ತಲೇ ಇದೆ. ಶಾಸಕ ರಮೇಶ ಜಾರಕಿಹೊಳಿ ಅತ್ಯಾಚಾರ ಆರೋಪದ ಪ್ರಕರಣದಿಂದ ಸಂಪುಟ ಸೇರಲು ಆಗಿಲ್ಲ. ಅವರ ತಮ್ಮ ಬಾಲಚಂದ್ರ ಜಾರಕಿಹೊಳಿ ಅವರನ್ನು ಸಂಪುಟಕ್ಕೆ ಸೇರಿಸಲು ಇನ್ನಿಲ್ಲದ ಕಸರತ್ತು ನಡೆಸುತ್ತಿದ್ದಾರೆ.

ಮಡಿಕೇರಿ ಶಾಸಕ ಅಪ್ಪಚ್ಚು ರಂಜನ್‌ ಬೆಂಬಲಿಗರು ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನದಲ್ಲಿ ಪ್ರತಿಭಟನೆ ನಡೆಸಿದ್ದಾರೆ. ಬೊಮ್ಮನಹಳ್ಳಿಯ ಸತೀಶ್ ರೆಡ್ಡಿ ಸಂಪುಟ ಸೇರುವ ಆಸೆಯೊಂದಿಗೆ ವರಿಷ್ಠರ ಮನವೊಲಿಕೆಗೆ ಯತ್ನಿಸುತ್ತಿದ್ದಾರೆ.  ಸಿ.ಪಿ. ಯೋಗೇಶ್ವರ್‌ ದೆಹಲಿಯಲ್ಲಿ ಬೀಡು ಬಿಟ್ಟಿದ್ದಾರೆ. ಶ್ರೀಮಂತ ಪಾಟೀಲ, ಮಹೇಶ್ ಕುಮಟಳ್ಳಿ, ಆರ್‌. ಶಂಕರ್‌ ಕೂಡ ಸಚಿವ ಸ್ಥಾನಕ್ಕಾಗಿ ಒತ್ತಡ ಹೇರುತ್ತಿದ್ದಾರೆ.

ಮೇಕೆದಾಟು ನೆಪ: ಬಸವರಾಜ ಬೊಮ್ಮಾಯಿ ಮುಂದಿನ ವಾರ ದೆಹಲಿಗೆ ತೆರಳಿ ವರಿಷ್ಠರನ್ನು ಭೇಟಿ ಮಾಡಲಿದ್ದಾರೆ. ಸಂಪುಟ ರಚನೆ ಮತ್ತು ಖಾತೆ ಹಂಚಿಕೆಗೆ ಸಂಬಂಧಿಸಿದಂತೆ ಪಕ್ಷದಲ್ಲಿ ಎದ್ದಿರುವ ಅಸಮಾಧಾನದ ಅಲೆಯನ್ನು ತಗ್ಗಿಸಲು ನೆರವಾಗುವಂತೆ ಪಕ್ಷದ ವರಿಷ್ಠರಲ್ಲಿ ಮನವಿ ಮಾಡುವ ಸಾಧ್ಯತೆ ಇದೆ ಎಂದು ಮೂಲಗಳು ಹೇಳಿವೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.