ದೆಹಲಿ ಭೇಟಿ: ಗುಟ್ಟು ಬಿಟ್ಟುಕೊಡದ ಬಿ.ಎಸ್.ಯಡಿಯೂರಪ್ಪ

ನವದೆಹಲಿ: ‘ರಾಜ್ಯದ ಅಭಿವೃದ್ಧಿ, ಕೇಂದ್ರದ ಮುಂದೆ ಬಾಕಿ ಇರುವ ನೀರಾವರಿ ಯೋಜನೆಗಳ ಅನುಮತಿ ಪಡೆಯಲು ರಾಜಧಾನಿಗೆ ಬಂದಿದ್ದೇನೆ’ ಎಂದು ಹೇಳಿಕೊಂಡಿರುವ ಕರ್ನಾಟಕದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು, ಅಭಿವೃದ್ಧಿಯ ಬಗ್ಗೆ ಚರ್ಚಿಸುವಾಗ ಜತೆಗೆ ಇರಬೇಕಾದ ಅಧಿಕಾರಿಗಳನ್ನು ಕರೆ ತರದೇ, ಕುಟುಂಬದವರ ಜತೆಗಷ್ಟೇ ಬಂದಿರುವುದು ನಾನಾ ರೀತಿಯ ವಿಶ್ಲೇಷಣೆಗೆ ಕಾರಣವಾಗಿದೆ.
ಹಿರಿಯ ಸಚಿವರಾದ ಗೋವಿಂದ ಕಾರಜೋಳ, ಬಸವರಾಜ ಬೊಮ್ಮಾಯಿ, ಜಗದೀಶ ಶೆಟ್ಟರ್ ಮೊದಲಾದವರ ಜತೆ ದೆಹಲಿಗೆ ಬರುತ್ತಿದ್ದ ಯಡಿಯೂರಪ್ಪ, ಈ ಬಾರಿ, ತಮ್ಮ ಪುತ್ರ ಬಿ.ವೈ. ವಿಜಯೇಂದ್ರ ಹಾಗೂ ವಿಧಾನ ಪರಿಷತ್ತಿನ ಬಿಜೆಪಿ ಸದಸ್ಯ ಹಾಗೂ ತಮ್ಮ ಆಪ್ತ ಲಹರ್ ಸಿಂಗ್ ಅವರ ಜತೆ ಶುಕ್ರವಾರ ಇಲ್ಲಿಗೆ ಬಂದರು.
ಪ್ರಧಾನಿ ನರೇಂದ್ರ ಮೋದಿ ಅವರನ್ನು ಸಂಜೆ ಭೇಟಿಯಾಗಿ ಮಾತುಕತೆ ನಡೆಸಿದ ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಯಡಿಯೂರಪ್ಪ, ‘ರಾಜ್ಯದ ವಿವಿಧ ಅಭಿವೃದ್ಧಿ ಯೋಜನೆಗಳಿಗೆ ನೆರವು ನೀಡುವಂತೆ ಮೋದಿ ಅವರಿಗೆ ಮನವಿ ಮಾಡಿದ್ದೇನೆ. ಈಡೇರಿಸುವ ಭರವಸೆ ದೊರೆತಿದೆ’ ಎಂದರು.
ಈ ವೇಳೆ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು, ಭೇಟಿಯ ‘ಗುಟ್ಟು’ ಏನೆಂಬುದನ್ನು ಬಿಟ್ಟುಕೊಡಲಿಲ್ಲ.
‘ನಾಯಕತ್ವ ಬದಲಾವಣೆಯ ಬಗ್ಗೆ ವದಂತಿಗಳು ಹಬ್ಬಿವೆಯಲ್ಲ?’ ಎಂಬ ಪ್ರಶ್ನೆಗೆ ನಗುತ್ತಲೇ ಉತ್ತರಿಸಿದ ಅವರು, ‘ಈ ಬಗ್ಗೆ ನನಗೆ ಏನೂ ಗೊತ್ತಿಲ್ಲ. ನೀವೇ ಹೇಳಿ’ ಎಂದಷ್ಟೇ ಹೇಳಿ ಮುಗುಂ ಆದರು.
‘ಸಚಿವ ಸಂಪುಟ ಪುನರ್ ರಚನೆ ಅಥವಾ ವಿಸ್ತರಣೆಯ ಕುರಿತು ಚರ್ಚಿಸಿದಲ್ಲಿ ಖಂಡಿತ ನಿಮಗೆ ತಿಳಿಸುವೆ’ ಎಂದ ಅವರು, ರಾಜಕೀಯ ಬೆಳವಣಿಗೆಗಳ ಕುರಿತ ಚರ್ಚೆಯ ಸಾಧ್ಯತೆ ಬಗ್ಗೆ ವಿವರಿಸಲು ನಿರಾಕರಿಸಿದರು.
ಶನಿವಾರ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಹಾಗೂ ಕೇಂದ್ರದ ಸಚಿವರಾದ ಅಮಿತ್ ಶಾ ಹಾಗೂ ರಾಜನಾಥ ಸಿಂಗ್ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ ಬಳಿಕ ಬೆಂಗಳೂರಿಗೆ ಮರಳುವುದಾಗಿ ಅವರು ಹೇಳಿದರು.
ಚರ್ಚೆಗೆ ಸಿಗದ ಅವಕಾಶ: ‘ಪ್ರಧಾನಿಯೊಂದಿಗೆ 30 ನಿಮಿಷ ಮಾತುಕತೆ ನಡೆಸಿರುವ ಯಡಿಯೂರಪ್ಪ ರಾಜಕೀಯ ವಿಷಯಗಳ ಕುರಿತು ಚರ್ಚೆಗೆ ಮುಂದಾದರು. ಅದಕ್ಕೆ ಅವಕಾಶ ನೀಡದ ಮೋದಿ, ‘ಜೆ.ಪಿ. ನಡ್ಡಾ ಹಾಗೂ ಅಮಿತ್ ಶಾ ಅವರೊಂದಿಗೆ ಮಾತುಕತೆ ನಡೆಸುವಂತೆ ಸೂಚಿಸಿದರು’ ಎಂದು ಪಕ್ಷದ ಮೂಲಗಳು ‘ಪ್ರಜಾವಾಣಿ’ಗೆ ಖಚಿತಪಡಿಸಿವೆ.
ಸಚಿವ ಸಂಪುಟ ಪುನರ್ ರಚನೆ ಅಥವಾ ವಿಸ್ತರಣೆಗೆ ಅನುಮತಿ ಪಡೆಯುವ ನಿಟ್ಟಿನಲ್ಲಿ ವಿಷಯವನ್ನು ಯಡಿಯೂರಪ್ಪ ಪ್ರಸ್ತಾಪಿಸಿದರಾದರೂ ಈ ಬಗ್ಗೆ ಚರ್ಚಿಸಲು ಸಾಧ್ಯವಾಗಲಿಲ್ಲ ಎಂದೂ ಮೂಲಗಳು ಹೇಳಿವೆ.
ಮೇಕೆದಾಟು ಶತಸಿದ್ಧ: ‘ಮೇಕೆದಾಟು ಯೋಜನೆಯಿಂದ ತಮಿಳುನಾಡಿಗೆ ಯಾವುದೇ ರೀತಿಯ ತೊಂದರೆ ಇಲ್ಲ. ಈ ಕುರಿತು ಪತ್ರ ಬರೆದು ಮನವರಿಕೆ ಮಾಡಿದರೂ ಆ ರಾಜ್ಯದ ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಹಟ ಬಿಡುತ್ತಿಲ್ಲ. ಆದರೆ, ಕಾನೂನಿನಲ್ಲಿ ಅವಕಾಶ ಇರುವು
ದರಿಂದ ನಾವು ಮೇಕೆದಾಟುಯೋಜನೆಯನ್ನು ಕೈಗೆತ್ತಿಕೊಳ್ಳುವುದು ಶತಸಿದ್ಧ’ ಎಂದು ಈ ಯಡಿಯೂರಪ್ಪ ಹೇಳಿದರು.
ಮುಖ್ಯಮಂತ್ರಿಯವರು ರಾತ್ರಿ ಏರ್ಪಡಿಸಿದ್ದ ಭೋಜನ ಕೂಟದಲ್ಲಿ ಭಾಗವಹಿಸಿದ್ದ ರಾಜ್ಯದ ನೂತನ ಕೇಂದ್ರ ಸಚಿವರಾದ ಶೋಭಾ ಕರಂದ್ಲಾಜೆ, ಎ.ನಾರಾಯಣಸ್ವಾಮಿ, ಭಗವಂತ ಖೂಬಾ ಹಾಗೂ ರಾಜೀವ್ ಚಂದ್ರಶೇಖರ್ ಅವರು ಯಡಿಯೂರಪ್ಪ ಅವರಿಂದ ಅಭಿನಂದನೆ ಸ್ವೀಕರಿಸಿದರು.
ನಿಖರ ಮಾಹಿತಿ ಇಂದು ಗೊತ್ತಾಗಲಿದೆ
ಯಡಿಯೂರಪ್ಪ ಅವರು ರಾಜ್ಯದ ಅಭಿವೃದ್ಧಿ ಕುರಿತು ಕೇಂದ್ರದ ನಾಯಕರೊಂದಿಗೆ ಚರ್ಚಿಸಲು ಅಧಿಕಾರಿಗಳು ಮತ್ತು ಸಚಿವರೊಂದಿಗೆ ಬರದೇ, ಏಕಾಂಗಿಯಾಗಿ ರಾಷ್ಟ್ರ ರಾಜಧಾನಿಗೆ ಭೇಟಿ ನೀಡಿರುವುದು ತೀವ್ರ ಚರ್ಚೆಗೆ ಕಾರಣವಾಗಿದೆ.
‘ರಾಜ್ಯದ ರಾಜಕೀಯ ಬೆಳವಣಿಗೆಗೆ ಸಂಬಂಧಿಸಿದ ನಿಖರ ಮಾಹಿತಿ ಇಂದು ಗೊತ್ತಾಗಲಿದೆ’ ಎಂದು ಕರ್ನಾಟಕ ಪ್ರತಿನಿಧಿಸುವ ಕೇಂದ್ರ ಸಚಿವರೊಬ್ಬರು ಹೇಳುವ ಮೂಲಕ ಕುತೂಹಲವನ್ನು ಉಳಿಸಿದ್ದಾರೆ.
ದುಬಾರಿ ಕಾಣಿಕೆ: ಬೆಂಗಳೂರಿನಿಂದ ವಿಶೇಷ ವಿಮಾನದಲ್ಲಿ ಬಂದಿರುವ ಯಡಿಯೂರಪ್ಪ ಕೇಂದ್ರದ ನಾಯಕರಿಗೆ ನೀಡಲು ದುಬಾರಿ ಕಾಣಿಕೆಗಳನ್ನು ತಮ್ಮೊಂದಿಗೆ ತಂದಿದ್ದಾರೆ. ‘ಇಷ್ಟೊಂದು ದುಬಾರಿ ಹೂಗುಚ್ಛ ಮತ್ತು ಕಾಣಿಕೆಗಳನ್ನು ವಿಶೇಷ ಸಂದರ್ಭದಲ್ಲಿ ವಿತರಿಸಲು ಮಾತ್ರ ತರಲಾಗುತ್ತದೆ’ ಎಂಬ ಮಾತುಗಳು ಕರ್ನಾಟಕ ಭವನದಲ್ಲಿ ಹರಿದಾಡಿದವು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.