ಸರ್ಕಾರ ನಡೆಸುವುದು ನಮಗೆ ಗೊತ್ತಿದೆ, ನೀವು ತಲೆಕೆಡಿಸಿಕೊಳ್ಳಬೇಡಿ: ಯಡಿಯೂರಪ್ಪ

ಹುಬ್ಬಳ್ಳಿ: ಕೆಎಸ್ಆರ್‌ಟಿಸಿ ನೌಕರರು ನಡೆಸುತ್ತಿರುವ ಮುಷ್ಕರದ ಬಗ್ಗೆ ಬೆಂಗಳೂರಿಗೆ ಹೋಗಿ ಇಂದು (ಗುರುವಾರ) ಅಧಿಕಾರಿಗಳ ಜೊತೆ ಸಭೆ ನಡೆಸುತ್ತೇನೆ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹೇಳಿದರು.
ಬೆಳಗಾವಿಯ ಎರಡು ದಿನಗಳ ಪ್ರವಾಸ ಮುಗಿಸಿಕೊಂಡು ಬೆಂಗಳೂರಿಗೆ ಹೋಗುವ ಮುನ್ನ ಇಲ್ಲಿನ ವಿಮಾನ ನಿಲ್ದಾಣದಲ್ಲಿ ಮಾಧ್ಯಮದವರ ಜೊತೆ ಅವರು ಮಾತನಾಡಿದರು.
ಖಾಸಗಿ ವಾಹನಗಳು ದುಪ್ಪಟ್ಟು ಹಣ ವಸೂಲಿ ಮಾಡುತ್ತಿವೆಯಲ್ಲ ಎಂದು ಮಾಧ್ಯಮದವರು ಕೇಳಿದ ಪ್ರಶ್ನೆಗೆ 'ಖಾಸಗಿ ವಾಹನಗಳು ದುಪ್ಪಟ್ಟು ಹಣ ವಸೂಲಿ ಮಾಡುತ್ತಿಲ್ಲ, ನಾವು ನಿಗದಿ ಮಾಡಿದ ಹಣ ಮಾತ್ರ ವಸೂಲಿ ಮಾಡುತ್ತಿದ್ದಾರೆ.
ಒಂದು ವೇಳೆ ದುಪ್ಪಟ್ಟು ಹಣ ವಸೂಲಿ ಮಾಡಿದರೆ ಕ್ರಮ ಜರುಗಿಸುತ್ತೇವೆ' ಎಂದರು.
ವಿಮೆ ಅವಧಿ ಮುಗಿದ ಹಾಗೂ ಪರ್ಮಿಟ್ ಸಮಯ ಮುಗಿದ ಅಸುರಕ್ಷಿತ ಖಾಸಗಿ ವಾಹನಗಳನ್ನು ಕೂಡ ಓಡಿಸಲಾಗುತ್ತಿದೆಯಲ್ಲ ಎನ್ನುವ ಪ್ರಶ್ನೆಗೆ ಸಿಟ್ಟಾದ ಮುಖ್ಯಮಂತ್ರಿ ಸರ್ಕಾರ ನಡೆಸುವುದು ಹೇಗೆ ಎನ್ನುವುದು ನಮಗೆ ಗೊತ್ತಿದೆ. ನೀವು ಅದರ ಬಗ್ಗೆ ತಲೆ ಕೊಡಿಸಿಕೊಳ್ಳುವುದು ಬೇಡ ಎಂದರು.
ವಿಶೇಷ ಸಂದರ್ಭಗಳಲ್ಲಿ ಪ್ರಯಾಣಿಕರ ಜವಾಬ್ದಾರಿ ನಾವು ತೆಗೆದುಕೊಳ್ಳುತ್ತೇವೆ ಎಂದು ಗರಂ ಆದ ಮುಖ್ಯಮಂತ್ರಿ ಜನ ಯಾವುದೇ ಕಾರಣಕ್ಕೂ ಆತಂಕ ಪಡುವುದು ಬೇಡ ಎಂದರು.
ಎರಡು ದಿನ ಬೆಳಗಾವಿಯಲ್ಲಿದ್ದೆ, ಅಲ್ಲಿನ ವಾತಾವರಣ ನಮ್ಮ ಪರವಾಗಿದೆ. ಸುರೇಶ್ ಅಂಗಡಿ ಗೆದ್ದ ಅಂತರದಲ್ಲಿಯೇ ಅವರ ಶ್ರೀಮತಿಯವರು ಗೆಲ್ತಾರೆ ಎಂದು ಭರವಸೆ ವ್ಯಕ್ತಪಡಿಸಿದರು.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.