ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಸಿಕೆಗೆ ‘ಕೈ’ ಶಾಸಕರ ನಿಧಿ; ಮುಖ್ಯಮಂತ್ರಿ ತಿರಸ್ಕಾರ

ಯಡಿಯೂರಪ್ಪ ಪರವಾಗಿ ಸಚಿವ ನಾರಾಯಣಗೌಡ ಪತ್ರ
Last Updated 10 ಜೂನ್ 2021, 19:30 IST
ಅಕ್ಷರ ಗಾತ್ರ

ಬೆಂಗಳೂರು: ಕೋವಿಡ್‌ ಲಸಿಕೆ ನೀಡಲು ಕಾಂಗ್ರೆಸ್‌ ಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿ ನಿಧಿ ಬಳಸಲು ಅವಕಾಶ ನೀಡುವಂತೆ ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಮಾಡಿದ್ದ ಮನವಿಯನ್ನು ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ತಿರಸ್ಕರಿಸಿದ್ದಾರೆ.

ಸಿದ್ದರಾಮಯ್ಯ ಅವರ ಪ್ರಸ್ತಾವಕ್ಕೆ ಸಂಬಂಧಿಸಿ ಯೋಜನಾ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗೆ ಕಡತದಲ್ಲಿ ಉತ್ತರಿಸಿರುವ ಮುಖ್ಯಮಂತ್ರಿ, ‘ನಿರ್ದಿಷ್ಟ ಯೋಜನೆಯ ಹಣವನ್ನು ಒಂದು ಪಕ್ಷದ ಹಣದೊಂದಿಗೆ ಹೊಂದಾಣಿಕೆ ಮಾಡಿಕೊಂಡು ಲಸಿಕೆ ಕಾರ್ಯಕ್ರಮಕ್ಕೆ ವಿನಿಯೋಗಿಸುವುದು ಸೂಕ್ತವಲ್ಲ. ಅದರ ಅಗತ್ಯವೂ ಇಲ್ಲ. ಸರ್ಕಾರದ ಹಣವನ್ನು ಪಕ್ಷದ ಹಣವೆಂದು ಬಿಂಬಿಸಿ ಜನರಲ್ಲಿ ಗೊಂದಲ ಮೂಡಿಸುವುದು ಸೂಕ್ತ ಅಲ್ಲ’ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

‘ಕಾಂಗ್ರೆಸ್‌ ಪಕ್ಷ ಮತ್ತು ಶಾಸಕರು ಕೋವಿಡ್‌ ಲಸಿಕೆ ಕಾರ್ಯಕ್ರಮಕ್ಕೆ ಸಹಾಯಧನ ನೀಡಲು ಬಯಸುವುದಾದರೆ ವೈಯಕ್ತಿಕ ಹಣವನ್ನು ಸರ್ಕಾರ ನಿಗದಿಪಡಿಸಿದ ನಿಧಿಗೆ ದೇಣಿಗೆ ನೀಡಬಹುದು ಅಥವಾ ಲಸಿಕೆ ಕಾರ್ಯಕ್ರಮದಲ್ಲಿ ತೊಡಗಿಸಿಕೊಂಡಿರುವ ಸಂಘಸಂಸ್ಥೆಗಳ ಮೂಲಕ ಸಹಾಯ ಮಾಡಬಹುದು’ ಎಂದೂ ಅಭಿಪ್ರಾಯಪಟ್ಟಿದ್ದಾರೆ.

‘ಲಸಿಕೆ ಕಾರ್ಯಕ್ರಮವೂ ಸೇರಿದಂತೆ ಸಾರ್ವಜನಿಕ ಆರೋಗ್ಯ ರಕ್ಷಣೆ ಕಾರ್ಯಕ್ರಮಕ್ಕೆ ಸರ್ಕಾರದಲ್ಲಿ ಸಂಪನ್ಮೂಲ ಕೊರತೆ ಇಲ್ಲ’ ಎಂದೂ ಮುಖ್ಯಮಂತ್ರಿ ಸ್ಪಷ್ಟಪಡಿಸಿದ್ದಾರೆ.

‘ಶಾಸಕರ ನಿಧಿಯ ಬಳಕೆಗೆ ಶಾಸಕರ ವಿವೇಚನೆಯಂತೆ ನಿಗದಿತ ಮಾರ್ಗಸೂಚಿಯ ಮಿತಿಯಲ್ಲಿ ಕಾರ್ಯಕ್ರಮ ರೂಪಿಸಲು ಅವಕಾಶವಿದೆ. ಈಗಾಗಲೇ ಈ ನಿಧಿಯ ಶೇ ಕನಿಷ್ಠ 25ರಷ್ಟು ಅನುದಾನ ಕೋವಿಡ್‌ ನಿಯಂತ್ರಣ ಕಾರ್ಯಕ್ಕೆ ಬಳಸಲು ಅವಕಾಶ ಕಲ್ಪಿಸಲಾಗಿದೆ. ಉಳಿದದ್ದನ್ನು ಬಳಸಲು ಆಯಾ ಕ್ಷೇತ್ರದ ಶಾಸಕರಿಗೆ ಅವಕಾಶವಿದೆ’ ಎಂದಿದ್ದಾರೆ.

ಕಾಂಗ್ರೆಸ್‌ ಶಾಸಕರ ನಿಧಿಯನ್ನು ಲಸಿಕೆಗೆ ಬಳಸುವ ಪ್ರಸ್ತಾವವನ್ನು ಮುಖ್ಯಮಂತ್ರಿ ತಿರಸ್ಕರಿಸಿರುವ ಬಗ್ಗೆ ಸಿದ್ದರಾಮಯ್ಯ ಅವರಿಗೆ ಯೋಜನೆ ಮತ್ತು ಸಾಂಖ್ಯಿಕ ಸಚಿವ ಕೆ.ಸಿ. ನಾರಾಯಣ ಗೌಡ ಪತ್ರ ಬರೆದಿದ್ದಾರೆ.

‘ನಾರಾಯಣಗೌಡ ಉಪದೇಶ ಬೇಡ’

‘ಲಸಿಕೆ ನೀಡಲು ರಾಜ್ಯ ಸರ್ಕಾರ ವಿಫಲ ಆಗಿರುವುದರಿಂದ ನಾವು (ಕಾಂಗ್ರೆಸ್‌) ಆ ಕೆಲಸಕ್ಕೆ ಮುಂದಾಗಿದ್ದೆವು. ಶಾಸಕರ ಕ್ಷೇತ್ರಗಳಿಗೆ ಬಿಡುಗಡೆ ಮಾಡುವ ಅನುದಾನದಲ್ಲಿ ಶೇ 50 ಕೊರೊನಾ ನಿಯಂತ್ರಣಕ್ಕೆ ಬಳಸುವಂತೆ ರಾಜ್ಯ ಸರ್ಕಾರವೇ ಹೇಳಿದೆ. ಶಾಸಕರ ಅನುದಾನದಲ್ಲಿ ಕೊರೊನಾ ಲಸಿಕೆ ಖರೀದಿ ಮಾಡಿ ಸಾರ್ವಜನಿಕರಿಗೆ ಉಚಿತವಾಗಿ ವಿತರಣೆ ಮಾಡಿದರೆ ಅದು ಪಕ್ಷದ ಕಾರ್ಯಕ್ರಮ ಹೇಗಾಗುತ್ತದೆ’ ಎಂದು ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.

‘ಶಾಸಕರು ತಮ್ಮ ಸ್ವಂತ ಹಣದಲ್ಲಿ ಲಸಿಕೆ ಖರೀದಿ ಮಾಡಲಿ ಎಂದು ಸಚಿವ ನಾರಾಯಣಗೌಡರು ಸಲಹೆ ನೀಡಿದ್ದಾರೆ. ನಮ್ಮ‌ ಪಕ್ಷದ ಶಾಸಕರು ಸ್ವಂತ ಖರ್ಚಿನಿಂದ ಆಂಬುಲೆನ್ಸ್, ವೈದ್ಯಕೀಯ ಕಿಟ್ ಮತ್ತಿತರ ಸಾಮಗ್ರಿಗಳನ್ನು ಜನರಿಗೆ ನೀಡುತ್ತಿದ್ದಾರೆ. ಈ ವಿಚಾರದಲ್ಲಿ ನಮಗೆ ಉಪದೇಶ ಕೊಡುವುದು ಬೇಡ’ ಎಂದು ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT