ಗುರುವಾರ , ಅಕ್ಟೋಬರ್ 29, 2020
21 °C

ಬಿಜೆಪಿಯವರಿಂದ ಚುನಾವಣೆ ನೀತಿಸಂಹಿತೆ ಉಲ್ಲಂಘನೆ: ಆಯೋಗಕ್ಕೆ ದೂರು –ಸಿದ್ಧರಾಮಯ್ಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಬಿಜೆಪಿ ನಾಯಕರು ಚುನಾವಣಾ ನೀತಿಸಂಹಿತೆ ಮತ್ತು ಕೋವಿಡ್ ನಿರ್ಬಂಧಗಳನ್ನು ಉಲ್ಲಂಘಿಸಿದ್ದರೂ ಪೊಲೀಸರು ಸುಮ್ಮನಿದದ್ದು ಖಂಡನೀಯ ಎಂದು ವಿರೋಧ ಪಕ್ಷದ ನಾಯಕ ಸಿದ್ಧರಾಮಯ್ಯ ಹೇಳಿದ್ದಾರೆ.

ರಾಜರಾಜೇಶ್ವರಿ ನಗರದ ಬಿಜೆಪಿ ಅಭ್ಯರ್ಥಿ ನಾಮಪತ್ರ ಸಲ್ಲಿಸಿದ್ದ ಸಂದರ್ಭದಲ್ಲಿ ಬಿಜೆಪಿ ನಾಯಕರು ಚುನಾವಣಾ ನೀತಿಸಂಹಿತೆ ಮತ್ತು ಕೋವಿಡ್ ನಿರ್ಬಂಧಗಳನ್ನು ಉಲ್ಲಂಘಿಸಿದ್ದರೂ ಕಣ್ಣುಮುಚ್ಚಿಕೊಂಡಿದ್ದ ಪೊಲೀಸರ ನಡವಳಿಕೆ ಖಂಡನೀಯ. ಈ ಎಲ್ಲ ಅಂಶಗಳನ್ನು ಉಲ್ಲೇಖಿಸಿ ಚುನಾವಣಾ ಆಯೋಗಕ್ಕೆ ನಮ್ಮ ಪಕ್ಷ ದೂರು ನೀಡಲಿದೆ ಎಂದು ಸಿದ್ಧರಾಮಯ್ಯ ಟ್ವೀಟ್‌ ಮಾಡಿದ್ದಾರೆ.

ಚುನಾವಣೆಗಳು ಚುನಾವಣಾ ಆಯೋಗದ ಕಣ್ಗಾವಲಿನಲ್ಲಿ ನಡೆಯಬೇಕು ಮತ್ತು ಪೊಲೀಸರು ನಿಷ್ಪಕ್ಷಪಾತತನದಿಂದ ಕಾರ್ಯನಿರ್ವಹಿಸಬೇಕು. ಈ ಪ್ರಕರಣದಲ್ಲಿ ಚುನಾವಣಾ ಆಯೋಗವನ್ನು ಪಕ್ಕಕ್ಕೆ ಸರಿಸಿ ಪೊಲೀಸರೇ ಅತ್ಯುತ್ಸಾಹದಿಂದ ದೂರು ದಾಖಲಿಸಿರುವುದರಲ್ಲಿ ರಾಜ್ಯ ಸರ್ಕಾರದ ಕೈವಾಡ ಎದ್ದು ಕಾಣುತ್ತಿದೆ ಸಿದ್ದರಾಮಯ್ಯ ಹೇಳಿದ್ದಾರೆ.

ರಾಜರಾಜೇಶ್ವರಿ ನಗರ ಕಾಂಗ್ರೆಸ್ ಅಭ್ಯರ್ಥಿಯ ನಾಮಪತ್ರ ಸಲ್ಲಿಕೆಗೆ ಹೋಗುತ್ತಿದ್ದಾಗ ನಮ್ಮನ್ನು ಬಲಾತ್ಕಾರವಾಗಿ ತಡೆಯುವ ಪ್ರಯತ್ನ ಮಾಡಿದ್ದ ಪೊಲೀಸರು, ಅಭ್ಯರ್ಥಿ ಕುಸುಮ ಮತ್ತು ನನ್ನ ಬೆಂಗಾವಲು ಸಿಬ್ಬಂದಿ ವಿರುದ್ಧ ದೂರು ದಾಖಲಿಸಿದ್ದಾರೆ. ಇದು ರಾಜ್ಯ ಬಿಜೆಪಿ ಸರ್ಕಾರದ ಸರ್ವಾಧಿಕಾರ, ದುರಹಂಕಾರ ಮತ್ತು ಹತಾಶೆಯ ನಡವಳಿಕೆಯಾಗಿದೆ ಎಂದು ಸಿದ್ಧರಾಮಯ್ಯ ಬಿಜೆಪಿ ವಿರುದ್ಧ ಹರಿಹಾಯ್ದಿದ್ದಾರೆ.

ಕಾಂಗ್ರೆಸ್ ಪಕ್ಷವನ್ನು ರಾಜಕೀಯವಾಗಿ ಎದುರಿಸಲಾಗದ ಬಿಜೆಪಿ, ಮುಂದಿನ ದಿನಗಳಲ್ಲಿ ಈ ರೀತಿ ಅಧಿಕಾರ ದುರುಪಯೋಗದ ಮೂಲಕ ನಮ್ಮನ್ನು ನಿಯಂತ್ರಿಸುವ ಪ್ರಯತ್ನ ಮಾಡಲಿರುವುದು ಸ್ಪಷ್ಟ. ಇದಕ್ಕೆ ಉಪಚುನಾವಣೆ ನಡೆಯಲಿರುವ ಎರಡು ಕ್ಷೇತ್ರಗಳ ಮತದಾರರು ಸೂಕ್ತ ಉತ್ತರ ನೀಡಲಿದ್ದಾರೆ ಎಂದು ಸಿದ್ಧರಾಮಯ್ಯ ಟ್ವೀಟ್‌ ಮಾಡಿದ್ದಾರೆ.

 

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು