ಸೋಮವಾರ, ಮೇ 23, 2022
30 °C

ವಂಶಪಾರಂಪರ್ಯ ರಾಜಕಾರಣ: ಕಾಂಗ್ರೆಸ್‌– ಬಿಜೆಪಿ ವಾಕ್ಸಮರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ರಾಜಸ್ಥಾನದ ಉದಯಪುರದಲ್ಲಿ ನಡೆಯುತ್ತಿರುವ ಕಾಂಗ್ರೆಸ್‌ ಚಿಂತನ ಶಿಬಿರದಲ್ಲಿ ‘ಒಂದು ಕುಟುಂಬಕ್ಕೆ ಒಂದೇ ಟಿಕೆಟ್‌’ ನೀತಿ ಕುರಿತು ಚರ್ಚೆ ನಡೆದ ಬೆನ್ನಲ್ಲೇ ಈ ಕುರಿತು ರಾಜ್ಯದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್‌ ನಡುವೆ ವಾಕ್ಸಮರವೂ ನಡೆದಿದೆ.

‘ಕಾಂಗ್ರೆಸ್‌ ಪಕ್ಷದ ನೀತಿ ಗಾಂಧಿ ಕುಟುಂಬಕ್ಕೂ ಅನ್ವಯವಾಗಬೇಕಲ್ಲವೆ’ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಪ್ರಶ್ನಿಸಿದ್ದಾರೆ. ಮಾಜಿ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರ ಮಗ ಬಿ.ವೈ. ವಿಜಯೇಂದ್ರ ಅವರ ಹೆಸರನ್ನು ವಿಧಾನ ಪರಿಷತ್‌ ಚುನಾವಣೆಯ ಸಂಭವನೀಯ ಅಭ್ಯರ್ಥಿಗಳ ಪಟ್ಟಿಯಲ್ಲಿ ಶಿಫಾರಸು ಮಾಡಿರುವುದನ್ನು ಮುಂದಿಟ್ಟುಕೊಂಡು ಕಾಂಗ್ರೆಸ್‌ ತಿರುಗೇಟು ನೀಡಿದೆ.

ಸುದ್ದಿಗಾರರ ಜತೆ ಮಾತನಾಡಿದ ರವಿ, ‘ಕಾಂಗ್ರೆಸ್‌ ಪಕ್ಷವನ್ನು ದೀರ್ಘ ಕಾಲದಿಂದ ಒಂದೇ ಕುಟುಂಬ ನಿಯಂತ್ರಿಸುತ್ತಿದೆ. ವಂಶಪಾರಂಪರ್ಯ ರಾಜಕೀಯ ಕೊನೆಗೊಳಿಸುವ ಕುರಿತು ಅವರು ಈಗ ಪಾಠ ಕಲಿಯುತ್ತಿದ್ದಾರೆ. ವಂಶಪಾರಂಪರ್ಯ ರಾಜಕಾರಣಕ್ಕೆ ಕೊನೆ ಹಾಡುವ ನಿರ್ಧಾರ ಗಾಂಧಿ ಕುಟುಂಬಕ್ಕೂ ಅನ್ವಯವಾಗಬೇಕು’ ಎಂದರು.

‘ಬಿಜೆಪಿಯ ನೀತಿಯನ್ನು ಈಗ ಕಾಂಗ್ರೆಸ್‌ ಕೂಡ ಪಾಲಿಸುತ್ತಿರುವುದು ಸಂತೋಷದ ವಿಚಾರ. ಅದು ಮೊದಲು ತುಷ್ಟೀಕರಣದ ರಾಜಕಾರಣ ಬಿಡಬೇಕು. ಎಲ್ಲ ಪಕ್ಷಗಳೂ ತುಷ್ಟೀಕರಣದ ರಾಜಕೀಯ ಬಿಟ್ಟರೆ ಅದರಿಂದ ದೇಶಕ್ಕೆ ಒಳಿತಾಗುತ್ತದೆ’ ಎಂದು ಹೇಳಿದರು.

ಕಾಂಗ್ರೆಸ್‌ ವಾಗ್ದಾಳಿ: ವಿಜಯೇಂದ್ರ ಅವರ ಹೆಸರನ್ನು ಸಂಭಾವ್ಯ ಅಭ್ಯರ್ಥಿಗಳ ಪಟ್ಟಿಯಲ್ಲಿ ಸೇರಿಸಿರುವ ಕುರಿತು ಕೆಪಿಸಿಸಿ ಅಧಿಕೃತ ಟ್ವಿಟರ್‌ ಖಾತೆಯಿಂದ ಪ್ರತಿಕ್ರಿಯಿಸಿರುವ ಕಾಂಗ್ರೆಸ್‌, ‘ವಂಶವಾದವನ್ನು ಪ್ರಬಲವಾಗಿ ಪ್ರತಿಪಾದಿಸುತ್ತಿರುವುದು ಬಿಜೆಪಿಯೇ ಅಲ್ಲವೆ’ ಎಂದು ಕೇಳಿದೆ.

‘ವಿಜಯೇಂದ್ರ ಅವರಿಗೆ ಪರಿಷತ್‌ ಸದಸ್ಯ ಸ್ಥಾನ ಮತ್ತು ಮಂತ್ರಿಗಿರಿ ನೀಡಲು ಮುಂದಾಗಿರುವುದು ಅವರು ಬಿ.ಎಸ್‌. ಯಡಿಯೂರಪ್ಪ ಪುತ್ರ ಎಂಬ ಕಾರಣಕ್ಕೆ ಅಲ್ಲವೆ? ಇದು ಕುಟುಂಬ ರಾಜಕಾರಣ ಅಲ್ಲವೆ?’ ಎಂದು ಪ್ರಶ್ನಿಸಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು