ಬುಧವಾರ, ಮೇ 18, 2022
27 °C

ಜಾನುವಾರು ಹತ್ಯೆ ನಿಷೇಧ ಮಸೂದೆ ತಡೆಯಲು ಕಾಂಗ್ರೆಸ್‌ನಿಂದ ರಾಜ್ಯಪಾಲರಿಗೆ ಮನವಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಕರ್ನಾಟಕ ಜಾನುವಾರು ಹತ್ಯೆ ಪ್ರತಿಬಂಧಕ ಮತ್ತು ಸಂರಕ್ಷಣಾ ಮಸೂದೆಗೆ ತಡೆ ನೀಡಬೇಕು ಎಂದು ವಿಧಾನಪರಿಷತ್ತಿನ ಕಾಂಗ್ರೆಸ್‌ ಸದಸ್ಯರು ರಾಜ್ಯಪಾಲ ವಜುಭಾಯಿ ವಾಲಾ ಅವರಿಗೆ ಮನವಿ ಮಾಡಿದ್ದಾರೆ.

ವಿಧಾನಪರಿಷತ್ತಿನಲ್ಲಿ ಸರ್ಕಾರ ಪೂರ್ಣ ಪ್ರಮಾಣದಲ್ಲಿ ಚರ್ಚೆಗೆ ಅವಕಾಶ ನೀಡದೇ ಮಸೂದೆಯನ್ನು ತರಾತುರಿಯಲ್ಲಿ ಅಂಗೀಕರಿಸಲಾಗಿದೆ. ಎಲ್ಲ ನಿಯಮಾವಳಿಗಳನ್ನು ಗಾಳಿಗೆ ತೂರಲಾಗಿದೆ. ಎಲ್ಲ ನಿಯಮಾವಳಿ ಬದಿಗೆ ಸರಿಸಿ, ಮಸೂದೆ ಅಂಗೀಕರಿಸಿರುವುದರಿಂದ ಅದಕ್ಕೆ ತಡೆ ನೀಡಬೇಕು ಎಂದು ಒತ್ತಾಯಿಸಿದ್ದಾರೆ.

‘ರಾಜ್ಯಪಾಲರ ಭಾಷಣದ ಮೇಲೆ ಚರ್ಚೆ ನಡುವೆಯೇ ಪಶುಸಂಗೋಪನಾ ಸಚಿವ ಪ್ರಭು ಚವ್ಹಾಣ್ ಅವರು ಮಸೂದೆ ಮಂಡಿಸಿದರು. ಇದನ್ನು ವಿರೋಧಿಸಿ ನಮ್ಮ ಜತೆ ಜೆಡಿಎಸ್ ಸದಸ್ಯರೂ ಧರಣಿ ನಡೆಸಿದರು. ಆಗ ಉಪಸಭಾಪತಿ ಮಸೂದೆ ಮೇಲೆ ಚರ್ಚಿಸಲು ಎಲ್ಲರಿಗೂ ಅವಕಾಶ ನೀಡುವ ಭರವಸೆ ನೀಡಿದ್ದರು. ಸಿ.ಎಂ.ಇಬ್ರಾಹಿಂ, ಬಿ.ಕೆ.ಹರಿಪ್ರಸಾದ್‌, ನಸೀರ್‌ ಅಹಮದ್‌, ತಿಪ್ಪೇಸ್ವಾಮಿ ಅವರು ಮಾತನಾಡಿದ್ದರು’.

‘ಜೆಡಿಎಸ್‌ನ ಶ್ರೀಕಂಠೇಗೌಡ ಅವರು ರಾತ್ರಿ 7.15 ಆಗಿರುವುದರಿಂದ ಮಾರನೇ ದಿನ ಮಸೂದೆಯ ಮೇಲಿನ ಚರ್ಚೆಯನ್ನು ತೆಗೆದುಕೊಳ್ಳಬಹುದು ಎಂದರು. ಆದರೆ ಕಾನೂನು ಮತ್ತು ಸಂಸದೀಯ ಸಚಿವ ಬಸವರಾಜ ಬೊಮ್ಮಾಯಿ ಮತ್ತು ಕಂದಾಯ ಸಚಿವ ಆರ್‌.ಅಶೋಕ ಅವರು ಮಸೂದೆ ಅಂಗೀಕಾರಕ್ಕೆ ಮಂಡಿಸಿದರು. ವಿರೋಧ ಪಕ್ಷಗಳ ಮಾತಿಗೂ ಬೆಲೆ ಕೊಡದೇ ಮಸೂದೆಯನ್ನು ಅಂಗೀಕರಿಸಲಾಯಿತು‘ ಎಂದು ತಿಳಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು