ಸೋಮವಾರ, ಸೆಪ್ಟೆಂಬರ್ 20, 2021
29 °C

ಕಲಾಪಕ್ಕೆ ಅಡ್ಡಿಪಡಿಸಿದ ಕಾಂಗ್ರೆಸ್‌ ಅನ್ನು ದೇಶದ ಜನರು ಕ್ಷಮಿಸಲಾರರು: ಬಿಜೆಪಿ

ಪ್ರಜಾವಾಣಿ ವೆಬ್‌ ಡೆಸ್ಕ್‌ Updated:

ಅಕ್ಷರ ಗಾತ್ರ : | |

ಬೆಂಗಳೂರು: ಕಾಂಗ್ರೆಸ್‌ ಅಡ್ಡಿಯಿಂದಾಗಿ ಕೇವಲ 21 ಗಂಟೆ ಮಾತ್ರ ಸಂಸತ್ತಿನ ಮುಂಗಾರು ಕಲಾಪ‌ ನಡೆದಿದೆ. ದೇಶದ ಜನರು ಇವರನ್ನೆಂದೂ ಕ್ಷಮಿಸಲಾರರು ಎಂದು ಬಿಜೆಪಿ ವಾಗ್ದಾಳಿ ನಡೆಸಿದೆ.

ಈ ಕುರಿತು ಗುರುವಾರ ಟ್ವೀಟ್‌ ಮಾಡಿರುವ ರಾಜ್ಯ ಬಿಜೆಪಿ, 'ತನ್ನ ಸಂಸದೀಯ ನಡವಳಿಕೆ ಬಗ್ಗೆ ಕಾಂಗ್ರೆಸ್‌ ಪಕ್ಷವು ಆತ್ಮಾವಲೋಕನ ಮಾಡಿಕೊಳ್ಳುವುದೆಂದು? ಕಾಂಗ್ರೆಸ್‌ ಅಡ್ಡಿಯಿಂದಾಗಿ ಕೇವಲ 21 ಗಂಟೆ ಮಾತ್ರ ಸಂಸತ್ತಿನ ಮುಂಗಾರು ಕಲಾಪ‌ ನಡೆದಿದೆ. ದೇಶದ ಜನತೆ ಇವರನ್ನೆಂದೂ ಕ್ಷಮಿಸಲಾರರು. ಸಂವಿಧಾನವನ್ನೇ ಬುಡಮೇಲು ಮಾಡಿದ ಪಕ್ಷದಿಂದ ಇನ್ನೇನು‌ ನಿರೀಕ್ಷೆ ಮಾಡಲು ಸಾಧ್ಯ?' ಎಂದು ಪ್ರಶ್ನಿಸಿದೆ.

'ಸಂಸತ್ತಿನಲ್ಲಿ ಪ್ರತಿಪಕ್ಷಗಳ ಹಕ್ಕು‌‌ ಮೊಟಕು‌ಗೊಳಿಸಲಾಗುತ್ತಿದೆ ಎಂದು ಆರೋಪಿಸುವ ಕಾಂಗ್ರೆಸ್‌ನ ದ್ವಂದ್ವ ನೀತಿ ಅನಾವರಣಗೊಂಡಿದೆ. ಮುಂಗಾರು ಅಧಿವೇಶನ ನಿಗದಿತ ದಿನಕ್ಕಿಂತ‌ ಮುನ್ನವೇ ಮುಕ್ತಾಯಗೊಂಡಿದೆ. ಸಂವಿಧಾನ, ಸಂಸತ್ತಿನಲ್ಲಿ ನಂಬಿಕೆ ಇಲ್ಲದವರು ಅನಗತ್ಯ ವಿಚಾರಕ್ಕಾಗಿ ಸಮಯ ವ್ಯರ್ಥಗೊಳಿಸಿದ್ದು ಖಂಡನೀಯ' ಎಂದು ಬಿಜೆಪಿ ಟ್ವೀಟಿಸಿದೆ.

ಇದೇ ವೇಳೆ ಒಬಿಸಿ ಮಸೂದೆಗೆ ಸದನದಲ್ಲಿ ಅನುಮೋದನೆ ದೊರೆತಿರುವ ಬಗ್ಗೆ ಟ್ವೀಟ್‌ ಮಾಡಿರುವ ಬಿಜೆಪಿ, 'ಉದ್ಯೋಗ ಮತ್ತು ಶಿಕ್ಷಣದಲ್ಲಿ ಹಿಂದುಳಿದ ವರ್ಗಗಳ ಮೀಸಲಾತಿ ರಚಿಸುವ ಅಧಿಕಾರಗಳನ್ನು ಆಯಾ ರಾಜ್ಯಗಳಿಗೆ ನೀಡುವ ಮಹತ್ವದ ಸಂವಿಧಾನ ತಿದ್ದುಪಡಿ ವಿಧೇಯಕಕ್ಕೆ ಸಂಸತ್ತು ಒಪ್ಪಿಗೆ ನೀಡಿದೆ. ಹಿಂದುಳಿದ ವರ್ಗದ ಹಿತಾಸಕ್ತಿ ಕಾಪಾಡುವಲ್ಲಿ ಪ್ರಧಾನಿ ಮೋದಿ ನೇತೃತ್ವದ ಸರ್ಕಾರ ಬದ್ಧತೆ ತೋರ್ಪಡಿಸಿದೆ' ಎಂದು ತಿಳಿಸಿದೆ.

'ಉದ್ಯೋಗ ಮತ್ತು ಶಿಕ್ಷಣದಲ್ಲಿ ಒಬಿಸಿ ಪಟ್ಟಿ ಸಿದ್ದಗೊಳಿಸುವ ಅಧಿಕಾರವನ್ನು ಆಯಾ ರಾಜ್ಯಗಳಿಗೆ ನೀಡಬೇಕೆಂದು ದಶಕಗಳಿಂದ ಪ್ರಾದೇಶಿಕವಾರು ಕೂಗು ಕೇಳಿ ಬಂದಿತ್ತು. ಕಾಂಗ್ರೆಸ್ ಪಕ್ಷ ಇದನ್ನು ಜಾಣತನದಿಂದ ಹತ್ತಿಕ್ಕುತ್ತಾ ಬಂದಿತ್ತು. ಸಂವಿಧಾನ ತಿದ್ದುಪಡಿ ಮೂಲಕ ಮೋದಿ ಸರ್ಕಾರ ಹಿಂದುಳಿದ ವರ್ಗಗಳ ಹಿತಾಸಕ್ತಿ ರಕ್ಷಿಸಿದೆ' ಎಂದು ಬಿಜೆಪಿ ತಿಳಿಸಿದೆ.

'ಕೇಂದ್ರ ಸರ್ಕಾರ ವೈದ್ಯ ಶಿಕ್ಷಣದಲ್ಲಿ ಒಬಿಸಿ ವಿದ್ಯಾರ್ಥಿಗಳಿಗೆ ಶೇ. 27ರಷ್ಟು ಮೀಸಲು ಸೌಲಭ್ಯ ಹಾಗೂ ಒಬಿಸಿ ಪಟ್ಟಿ ಸಿದ್ದ ಪಡಿಸುವ ಅಧಿಕಾರವನ್ನು ಆಯಾ ರಾಜ್ಯಗಳಿಗೆ ನೀಡಿದೆ. ಆದರೆ, ಅಧಿಕಾರದಲ್ಲಿದ್ದಾಗ ಒಬಿಸಿ ವರ್ಗದ ಹಿತ ಕಾಯಲಾಗದ ಕಾಂಗ್ರೆಸ್‌ ನಾಯಕರು ಈಗ ಮತ್ತೆ ಜಾತಿಗಣತಿ ವಿಚಾರ ಪ್ರಸ್ತಾಪಿಸುತ್ತಿದ್ದಾರೆ' ಎಂದು ಬಿಜೆಪಿ ವಾಗ್ದಾಳಿ ನಡೆಸಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು